ಡೊನಾಲ್ಡ್‌ ಟ್ರಂಪ್ ಹತ್ಯೆ ಯತ್ನ, ಕೂದಲೆಳೆ ಅಂತರದಲ್ಲಿ ಬಚಾವ್, ಅಮೆರಿಕ ಅಧ್ಯಕ್ಷೀಯ ಚುನಾವಣಾ ಪ್ರಚಾರದ ವೇಳೆ ನಡೆದ ಘಟನೆ- 10 ಅಂಶಗಳು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಡೊನಾಲ್ಡ್‌ ಟ್ರಂಪ್ ಹತ್ಯೆ ಯತ್ನ, ಕೂದಲೆಳೆ ಅಂತರದಲ್ಲಿ ಬಚಾವ್, ಅಮೆರಿಕ ಅಧ್ಯಕ್ಷೀಯ ಚುನಾವಣಾ ಪ್ರಚಾರದ ವೇಳೆ ನಡೆದ ಘಟನೆ- 10 ಅಂಶಗಳು

ಡೊನಾಲ್ಡ್‌ ಟ್ರಂಪ್ ಹತ್ಯೆ ಯತ್ನ, ಕೂದಲೆಳೆ ಅಂತರದಲ್ಲಿ ಬಚಾವ್, ಅಮೆರಿಕ ಅಧ್ಯಕ್ಷೀಯ ಚುನಾವಣಾ ಪ್ರಚಾರದ ವೇಳೆ ನಡೆದ ಘಟನೆ- 10 ಅಂಶಗಳು

ಪೆನ್ಸಿಲ್ವೇನಿಯಾದಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹತ್ಯಾ ಯತ್ನ ನಡೆದಿದೆ. ಪ್ರೇಕ್ಷಕರ ನಡುವೆ ಇದ್ದ ಆಗಂತುಕರು ಗುಂಡಿನ ದಾಳಿ ನಡೆಸಿದ್ದು, ಟ್ರಂಪ್ ಕೂದಲೆಳೆ ಅಂತರದಲ್ಲಿ ಬಚಾವ್ ಅಗಿದ್ದಾರೆ. ಈ ವಿದ್ಯಮಾನದ 10 ಮುಖ್ಯ ಅಂಶಗಳು ಇಲ್ಲಿವೆ.

ಅಮೆರಿಕ ಚುನಾವಣಾ ಪ್ರಚಾರದ ವೇಳೆ ಡೊನಾಲ್ಡ್‌ ಟ್ರಂಪ್ ಹತ್ಯೆ ಯತ್ನ, ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾರೆ. ದಾಳಿ ಬಳಿಕ ಅವರನ್ನು ಭದ್ರತಾ ಸಿಬ್ಬಂದಿ ಕೂಡಲೇ ಆಸ್ಪತ್ರೆಗೆ ಕರೆದೊಯ್ದರು.
ಅಮೆರಿಕ ಚುನಾವಣಾ ಪ್ರಚಾರದ ವೇಳೆ ಡೊನಾಲ್ಡ್‌ ಟ್ರಂಪ್ ಹತ್ಯೆ ಯತ್ನ, ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾರೆ. ದಾಳಿ ಬಳಿಕ ಅವರನ್ನು ಭದ್ರತಾ ಸಿಬ್ಬಂದಿ ಕೂಡಲೇ ಆಸ್ಪತ್ರೆಗೆ ಕರೆದೊಯ್ದರು. (AP)

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಚುನಾವಣಾ ಪ್ರಚಾರದ ವೇಳೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹತ್ಯಾ ಯತ್ನ ನಡೆದಿದ್ದು, ಕೂದಲೆಳೆ ಅಂತರದಲ್ಲಿ ಅವರು ಬಚಾವ್ ಆಗಿದ್ದಾರೆ. ಶನಿವಾರ ಪೆನ್ಸಿಲ್ವೇನಿಯಾದ ಬಟ್ಲರ್‌ ಎಂಬಲ್ಲಿ ಡೊನಾಲ್ಡ್‌ ಟ್ರಂಪ್ ಅವರ ಚುನಾವಣಾ ರ‍್ಯಾಲಿ ನಡೆಯುತ್ತಿದ್ದಾಗ ಈ ದಾಳಿ ನಡೆದಿದೆ.

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಗುಂಡಿನ ದಾಳಿ ನಡೆಯಿತು. ಈ ದಾಳಿಯಲ್ಲಿ ಬಂದೂಕುಧಾರಿ ಮತ್ತು ಪ್ರೇಕ್ಷಕರೊಬ್ಬರು ಮೃತಪಟ್ಟಿದ್ದಾರೆ. ಮತ್ತೊಬ್ಬ ಪ್ರೇಕ್ಷಕನ ಸ್ಥಿತಿ ಗಂಭೀರವಾಗಿದೆ. ಟ್ರಂಪ್ ಕೂಡ ಗಾಯಗೊಂಡಿದ್ದಾರೆ. ಈ ಗುಂಡಿನ ದಾಳಿಯನ್ನು ಹತ್ಯೆ ಯತ್ನ ಎಂದು ಹೇಳಿರುವ ಅಲ್ಲಿನ ಕಾನೂನು ಜಾರಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಬಹಿರಂಗವಾಗಿರುವ ವಿಡಿಯೋ ದೃಶ್ಯದಲ್ಲಿ ಡೊನಾಲ್ಡ್ ಟ್ರಂಪ್ ನೆಲಕ್ಕೆ ಬೀಳುವುದು ಕಂಡುಬಂದಿದೆ. ಗುಂಡಿನ ಸದ್ದು ಕೇಳಿದ ಕೂಡಲೇ ಭದ್ರತಾ ಅಧಿಕಾರಿಗಳು ಟ್ರಂಪ್ ಅವರನ್ನು ಸುತ್ತುವರಿದಿದ್ದರು. ಆದರೂ ಗುಂಡು ಟ್ರಂಪ್ ಅವರ ಮುಖ ಸವರಿಕೊಂಡು ಹೋಗಿದೆ. ಕಿವಿಯ ಬಳಿ ರಕ್ತ ಸೋರುತ್ತಿರುವುದು ಕಂಡುಬಂದಿದೆ. ಅಮೆರಿಕ ಅಧ್ಯಕ್ಷ ಜೋ ಬಿಡನ್ ಈ ದಾಳಿಯನ್ನು ಖಂಡಿಸಿದ್ದಾರೆ.

ಡೊನಾಲ್ಡ್ ಟ್ರಂಪ್ ಹತ್ಯಾ ಯತ್ನ; ಈವರೆಗಿನ 10 ಮುಖ್ಯ ಅಂಶಗಳು

1) ಡೊನಾಲ್ಡ್ ಟ್ರಂಪ್ “ಸುರಕ್ಷಿತ” ಮತ್ತು ಅವರ ಆರೋಗ್ಯ ಸ್ಥಿರವಾಗಿದೆ ಎಂದು ಯುಎಸ್ ರಹಸ್ಯ ಸೇವೆ ಹೇಳಿದೆ. ಕಾನೂನು ಜಾರಿ ಅಧಿಕಾರಿಗಳು ದಾಳಿಕೋರನನ್ನು ಹೊಡೆದುರುಳಿಸಿದರು. 1981 ರಲ್ಲಿ ರೊನಾಲ್ಡ್ ರೇಗನ್ ಅವರ ಮೇಲೆ ಗುಂಡು ಹಾರಿಸಿದ ನಂತರ ಅಧ್ಯಕ್ಷ ಅಥವಾ ಅಧ್ಯಕ್ಷೀಯ ಅಭ್ಯರ್ಥಿಯನ್ನು ಹತ್ಯೆಗೆ ಯತ್ನಿಸಿದ ಮೊದಲ ಪ್ರಯತ್ನ ಇದು ಎಂದು ಮಾಧ್ಯಮಗಳು ವರದಿ ಮಾಡಿವೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಕೇವಲ ನಾಲ್ಕು ತಿಂಗಳ ಮುಂಚಿತವಾಗಿ ಈ ದಾಳಿ ನಡೆದಿದೆ.

2) ವರದಿಗಳ ಪ್ರಕಾರ, ಶೂಟರ್ ರ‍್ಯಾಲಿಯ ಭಾಗವಾಗಿರಲಿಲ್ಲ. ಆತ ರಿಪಬ್ಲಿಕನ್ನರೊಂದಿಗೆ ನುಸುಳಿದ್ದ. ಯುಎಸ್ ಸೀಕ್ರೆಟ್ ಸರ್ವಿಸ್ ಏಜೆಂಟ್ಸ್ ಆತನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಭಾರಿ ಶಸ್ತ್ರಸಜ್ಜಿತ ಯುದ್ಧತಂತ್ರದ ತಂಡವು ಅಮೆರಿಕದ ಅಧ್ಯಕ್ಷರು ಮತ್ತು ಪ್ರಮುಖ ಪಕ್ಷದ ನಾಮನಿರ್ದೇಶಿತರೊಂದಿಗೆ ಎಲ್ಲೆಡೆ ಪ್ರಯಾಣಿಸುತ್ತದೆ ಮತ್ತು ಯಾವುದೇ ಸಕ್ರಿಯ ಬೆದರಿಕೆಗಳನ್ನು ಎದುರಿಸುವುದು ಇದರ ಉದ್ದೇಶ.

3) ಭಾಷಣದ ಮಧ್ಯದಲ್ಲಿ ಮೊದಲ ಗುಂಡು ಬಡಿದಾಗ ಟ್ರಂಪ್ "ಓಹ್" ಎಂದು ಹೇಳುವುದು ಕೇಳಿಸಿತು. ಅಲ್ಲದೆ, ಕೂಡಲೇ ಅವರು ತಮ್ಮ ಬಲಗೈಯನ್ನು ಬಲಕಿವಿಯ ಮೇಲೆ ಇಟ್ಟರು. ಇದಾದ ಬಳಿಕ ಎರಡು ಗುಂಡು ಹಾರಿದ್ದು, ಅದರಿಂದ ಟ್ರಂಪ್ ಬಚಾವ್ ಆಗಿದ್ದಾರೆ. ಮೊದಲ ಗುಂಡು ಹಾರಿದ ಕೂಡಲೇ ಭದ್ರತಾ ಸಿಬ್ಬಂದಿ ಅಲರ್ಟ್ ಅಗಿದ್ದು, ಟ್ರಂಪ್ ಅವರನ್ನು ರಕ್ಷಿಸಿ ಎರಡು ನಿಮಿಷದಲ್ಲಿ ಅಲ್ಲಿಂದ ಬೇರೆಡೆಗೆ ಸ್ಥಳಾಂತರಿಸಿದರು. ಟ್ರಂಪ್ ಅವರ ಗಾಯದ ಸ್ವರೂಪ ಇನ್ನೂ ತಿಳಿದಿಲ್ಲ.

4) ಟ್ರಂಪ್ ಅವರು ತಮ್ಮ ವಾಹನವೇರುವ ಮೊದಲು ಜನಸಂದಣಿಯತ್ತ ತಿರುಗಿ ಮುಷ್ಟಿ ಹಿಡಿದು ಸುರಕ್ಷಿತವಾಗಿರುವ ಸಂದೇಶ ರವಾನಿಸಿದರು. ಅವರು ಈ ದಾಳಿಯಿಂದ ವಿಚಲಿತರಾಗಲಿಲ್ಲ ಎಂಬುದನ್ನು ಸೂಚಿಸಿದರು. ಬಳಿಕ ಶೀಘ್ರ ಕ್ರಮಕೈಗೊಂಡ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು. "ಟ್ರಂಪ್ ಅವರ ಮೇಲಿನ ಈ ಹೇಯ ದಾಳಿ ಕೃತ್ಯದ ಸಂದರ್ಭದಲ್ಲಿ ತ್ವರಿತ ಕ್ರಮ ಜರುಗಿಸಿದ ಕಾನೂನು ಜಾರಿ ಮತ್ತು ಮೊದಲ ಪ್ರತಿಸ್ಪಂದಕರಿಗೆ ಧನ್ಯವಾದಗಳು. ಅವರು ಚೆನ್ನಾಗಿದ್ದಾರೆ ಮತ್ತು ಸ್ಥಳೀಯ ಆಸ್ಪತ್ರೆಯಲ್ಲಿ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಹೆಚ್ಚಿನ ಮಾಹಿತಿ ಸಿಕ್ಕ ಬಳಿಕ ತಿಳಿಸುತ್ತೇವೆ" ಎಂದು ವಕ್ತಾರ ಸ್ಟೀವನ್ ಚೆಯುಂಗ್ ಹೇಳಿದ್ದಾರೆ.

5) “ಪೆನ್ಸಿಲ್ವೇನಿಯಾದಲ್ಲಿ ಡೊನಾಲ್ಡ್ ಟ್ರಂಪ್ ಅವರ ರ‍್ಯಾಲಿಯಲ್ಲಿ ನಡೆದ ಗುಂಡಿನ ದಾಳಿಯ ಬಗ್ಗೆ ಮಾಹಿತಿ ಸಿಕ್ಕಿದೆ. ಅವರು ಸುರಕ್ಷಿತವಾಗಿದ್ದಾರೆ. ಅವರು ಆರೋಗ್ಯವಾಗಿದ್ದಾರೆ ಎಂದು ಕೇಳಲು ನಾನು ಕೃತಜ್ಞನಾಗಿದ್ದೇನೆ. ಜಿಲ್ ಮತ್ತು ನಾನು, ಅವರನ್ನು ಸುರಕ್ಷಿತವಾಗಿ ಸ್ಥಳದಿಂದ ರಕ್ಷಿಸಲು ನೆರವಾದ ರಹಸ್ಯ ಸೇವೆಗೆ ಕೃತಜ್ಞರಾಗಿರುತ್ತೇವೆ, ಅದನ್ನು ಖಂಡಿಸಲು ನಾವು ಒಂದು ರಾಷ್ಟ್ರವಾಗಿ ಒಂದಾಗಬೇಕು” ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೇಳಿದ್ಧಾರೆ.

6) ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಕೂಡ ಗುಂಡಿನ ದಾಳಿಯನ್ನು ಖಂಡಿಸಿದ್ದು, “ನಮ್ಮ ಪ್ರಜಾಪ್ರಭುತ್ವದಲ್ಲಿ ರಾಜಕೀಯ ಹಿಂಸಾಚಾರಕ್ಕೆ ಸಂಪೂರ್ಣವಾಗಿ ಸ್ಥಳವಿಲ್ಲ. ಇದು ಏನಾಯಿತು ಎಂದು ನಮಗೆ ಇನ್ನೂ ನಿಖರವಾಗಿ ತಿಳಿದಿಲ್ಲವಾದರೂ, ಮಾಜಿ ಅಧ್ಯಕ್ಷ ಟ್ರಂಪ್ ಸೇಫ್ ಆಗಿದ್ದಾರೆ ಎಂಬುದು ಸಮಾಧಾನದ ವಿಚಾರ. ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ನಾಗರಿಕತೆ ಮತ್ತು ಗೌರವಕ್ಕೆ ನಮ್ಮನ್ನು ಮರುಹೊಂದಿಸಲು ಈ ಕ್ಷಣವನ್ನು ಬಳಸಿಕೊಳ್ಳಬೇಕು. ಟ್ರಂಪ್‌ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಮತ್ತು ಮಿಚೆಲ್‌ ಹಾರೈಸುತ್ತೇವೆ” ಎಂದಿದ್ದಾರೆ.

7) ಯುನೈಟೆಡ್ ಸ್ಟೇಟ್ಸ್ ರಹಸ್ಯ ಸೇವೆಯ ಸಂವಹನಗಳ ಮುಖ್ಯಸ್ಥ ಆಂಥೋನಿ ಗುಗ್ಲಿಲ್ಮಿ ಅವರು, “ಜುಲೈ 13 ರ ಸಂಜೆ ಪೆನ್ಸಿಲ್ವೇನಿಯಾದಲ್ಲಿ ಟ್ರಂಪ್ ರ‍್ಯಾಲಿಯಲ್ಲಿ ಒಂದು ದಾಳಿ ನಡೆಯಿತು. ರಹಸ್ಯ ಸೇವೆಯು ರಕ್ಷಣಾತ್ಮಕ ಕ್ರಮಗಳನ್ನು ಜಾರಿಗೊಳಿಸಿದ್ದು, ಮಾಜಿ ಅಧ್ಯಕ್ಷರು ಸುರಕ್ಷಿತವಾಗಿದ್ದಾರೆ. ಇದು ಈಗ ಸಕ್ರಿಯ ರಹಸ್ಯ ಸೇವೆಯ ತನಿಖೆಯಾಗಿದೆ. ಹೆಚ್ಚಿನ ಮಾಹಿತಿಯನ್ನು ಲಭ್ಯವಾದಾಗ ಬಿಡುಗಡೆ ಮಾಡಲಾಗುತ್ತದೆ" ಎಂದು ಎಕ್ಸ್‌ ಖಾತೆಯಲ್ಲಿ ಅಪ್ಡೇಟ್ ಮಾಡಿದ್ದಾರೆ.

8) ಟ್ರಂಪ್ ಅವರ ಹಿರಿಯ ಮಗ, ಡೊನಾಲ್ಡ್ ಟ್ರಂಪ್ ಜೂನಿಯರ್, ಅಮೆರಿಕದ ಧ್ವಜದ ಮುಂದೆ ತನ್ನ ಮುಷ್ಟಿಯನ್ನು ಎತ್ತಿ ತೋರಿಸುತ್ತಿರುವ ಟ್ರಂಪ್ ಅವರ ಫೋಟೋವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, "ಅವರು ಅಮೆರಿಕವನ್ನು ಉಳಿಸುವುದಕ್ಕಾಗಿರುವ ತಮ್ಮ ಹೋರಾಟವನ್ನು ಎಂದಿಗೂ ನಿಲ್ಲಿಸುವುದಿಲ್ಲ" ಎಂದು ಬರೆದಿದ್ದಾರೆ.

9) ಗುಂಡಿನ ದಾಳಿಯ ಬಗ್ಗೆ ತನಿಖೆ ನಡೆಸಲು ಎಫ್‌ಬಿಐ ಮತ್ತು ಇತರ ಗುಪ್ತಚರ ಸಂಸ್ಥೆಗಳು ಸ್ಥಳದಲ್ಲಿದ್ದವು. ಏತನ್ಮಧ್ಯೆ, ಬೈಡೆನ್‌ ಪ್ರಚಾರ ಅಭಿಯಾನ ತಾತ್ಕಾಲಿಕವಾಗಿ ಸ್ಥಗಿತವಾಗಿದ್ದು, ವಿರಾಮ ಸಂದೇಶ ರವಾನೆಯಾಗಿದೆ.

10) ಅಮೆರಿಕ ಹಲವಾರು ದಶಕಗಳಿಂದ ಬಂದೂಕು ಹಿಂಸಾಚಾರದ ವಿರುದ್ಧ ಹೋರಾಡುತ್ತಿದೆ. ಅಮೆರಿಕ ಅಧ್ಯಕ್ಷ ಜಾನ್ ಎಫ್ ಕೆನಡಿಯನ್ನು 1963 ರಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. 1968 ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ರಾಬರ್ಟ್ ಎಫ್. ಕೆನಡಿ ಸೇರಿದಂತೆ ಹಲವಾರು ಚುನಾವಣಾ ಅಭ್ಯರ್ಥಿಗಳನ್ನು ಪ್ರಚಾರದ ಸಮಯದಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. 1972 ರಲ್ಲಿ, ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದ ಜಾರ್ಜ್ ವ್ಯಾಲೇಸ್ ಅವರನ್ನು ಪ್ರಚಾರ ವೇದಿಕೆಯ ಮೇಲೆ ಗುಂಡಿಕ್ಕಿ ಕೊಲ್ಲಲಾಗಿತ್ತು.

ದಾಳಿಯ ಬಳಿಕ ಡೊನಾಲ್ಡ್ ಟ್ರಂಪ್ ಅವರ ಮೊದಲ ಪ್ರತಿಕ್ರಿಯೆ

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಪೆನ್ಸಿಲ್ವೇನಿಯಾದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಗುಂಡಿನ ದಾಳಿಯಿಂದ ಗಾಯಗೊಂಡು ಚಿಕಿತ್ಸೆ ಪಡೆದ ಬಳಿಕ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಟ್ರೂತ್‌ ಸೋಷಿಯಲ್ ಆಪ್‌ನಲ್ಲಿ ಈ ಪ್ರತಿಕ್ರಿಯೆ ನೀಡಿರುವ ಟ್ರಂಪ್‌, ನನ್ನ ಬಲ ಕಿವಿಗೆ ಗುಂಡು ತಾಗಿತ್ತು. ಬಲಕಿವಿಯ ಮೇಲ್ಭಾಗ ಹರಿದಿದೆ. ವೇಗದ ಸದ್ದು ಕಿವಿಯ ಭಾಗದಲ್ಲಿ ಕೇಳಿದಾಗ ಏನೋ ಎಡವಟ್ಟಾಗಿದೆ ಎಂಬುದನ್ನು ಅರಿತುಕೊಂಡೆ. ಅಷ್ಟರಲ್ಲಾಗಲೇ ಬುಲೆಟ್ ನನ್ನ ಕಿವಿಯನ್ನು ಸೀಳಿ ಸಾಗಿತ್ತು. ನಮ್ಮ ದೇಶದಲ್ಲಿ ಈ ರೀತಿ ಕೃತ್ಯ ನಡೆಯುತ್ತಿದೆ ಎಂಬುದನ್ನೇ ನಂಬಲಾಗುತ್ತಿಲ್ಲ" ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.

(ಎಪಿ, ಎಎಫ್‌ಪಿ, ರಾಯ್ಟರ್ಸ್‌ ಮಾಹಿತಿ)

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.