Mandya Sahitya Sammelana: ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ,30 ಕೋಟಿ ರೂ. ಖರ್ಚು ಮೀರದಂತೆ ಪಾರದರ್ಶಕ ವ್ಯವಸ್ಥೆಗೆ ಸೂಚನೆ
Jul 25, 2024 05:12 PM IST
ಬೆಂಗಳೂರಿನಲ್ಲಿ ಗುರುವಾರ ಕನ್ನಡ ಸಾಹಿತ್ಯ ಸಮ್ಮೇಳನದ ಸಭೆ ಸಚಿವರಾದ ಚಲುವರಾಯಸ್ವಾಮಿ, ಶಿವರಾಜ ತಂಗಡಗಿ ಉಪಸ್ಥಿತಿಯಲ್ಲಿ ನಡೆಯಿತು.
- kannada Sahitya Sammelana ಮಂಡ್ಯದಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಖರ್ಚು ವೆಚ್ಚದ ಮೇಲೆ ಮಿತಿ ಹೇರುವಂತೆ ಸೂಚನೆ ನೀಡಲಾಗಿದೆ.
ಬೆಂಗಳೂರು: 2024 ರ ಡಿಸೆಂಬರ್ ನಲ್ಲಿ ಮಂಡ್ಯದಲ್ಲಿ ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲು 30 ಕೋಟಿ ರೂಗಳನ್ನು ಒದಗಿಸುವ ಭರವಸೆ ದೊರತಿದೆ ಅದರ ಮಿತಿಯೊಳಗೆ ಸಂಪೂರ್ಣ ಕಾರ್ಯಕ್ರಮಗಳು ನಡೆಯಬೇಕು ಯಾವುದೇ ಕಾರಣಕ್ಕೂ ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಸಲ್ಲಿಸುವಂತಿಲ್ಲ.ಈಗಾಗಲೇ ಬಜೆಟ್ ನಲ್ಲಿ ಘೋಷಿಸಿರುವ ಅನುದಾನಲ್ಲೇ ವ್ಯವಸ್ಥಿತವಾಗಿ ಸಮ್ಮೇಳನ ನಡೆಸಬೇಕು, ಹೆಚ್ಚು ಆರ್ಥಿಕ ಹೊರೆ ಬಿಳದಂತೆ ನಿಗದಿತ ಅನುದಾನದಲ್ಲೆ ಸಮ್ಮೇಳನ ಯಶ್ವಸಿಯಾಗಿ ನಡೆಸಬೇಕು. ಸಾಹಿತ್ಯ,ಸಾಂಸ್ಕೃತಿಕ ಶ್ರೀಮಂತಿಕೆಯ ಜೊತೆಗೆ ಕನ್ನಡ ಹಬ್ಬವು ಆರ್ಥಿಕ ವಿಷಯದಲ್ಲಿ ಸಂಪೂರ್ಣ ಪಾರದರ್ಶಕವಾಗಿರಲಿ.
ಇದು ಕೃಷಿ ಸಚಿವರು ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚಲುವರಾಯಸ್ವಾಮಿ ಅಧಿಕಾರಿಗಳು ಹಾಗೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಯೋಜಕರಿಗೆ ನೀಡಿದ ಸೂಚನೆ.
ಮಂಡ್ಯದಲ್ಲಿ ಡಿಸೆಂಬರ್ ತಿಂಗಳಿನಲ್ಲಿ ನಡೆಯುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಿದ್ದತೆ ಕುರಿತು ವಿಕಾಸ ಸೌಧದ ಸಭಾಂಗಣದಲ್ಲಿ ಗುರುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ತಂಗಡಗಿ ಅವರ ಉಪಸ್ಥಿತಿಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಕೃಷಿ ಸಚಿವರು ಕಾರ್ಯಕ್ರಮದ ಸಂಘಟನೆ ಮತ್ತು ಅನುಷ್ಠಾನಕ್ಕೆ ಸಂಬಂಧಿಸಿದಂತೆ ಹಲವು ಸಲಹೆ ಸೂಚನೆಗಳನ್ನು ನೀಡಿದರು
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅತ್ಯಂತ ದೊಡ್ಡ ಐತಿಹಾಸಿಕ ಹಿನ್ನಲೆ ಇದೆ. ಇದರ ಚರಿತ್ರೆ ಹಾಗೂ ಮಹತ್ವಕ್ಕೆ ಯಾವುದೇ ಕುಂದು ಉಂಟಾಗದಂತೆ ಸಂಭ್ರಮ, ಸಾಹಿತ್ಯಿಕ ಮೌಲ್ಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕೊರತೆಯಾಗದಂತೆ ಸಂಘಟನೆಯನ್ನು ಮಾಡುವಂತೆ ಚಲುವರಾಯಸ್ವಾಮಿ ಸಲಹೆ ನೀಡಿದರು.
ಕಾರ್ಯಕ್ರಮದ ಸಂಘಟನೆಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವುದು ಹಾಗೂ ಆರ್ಥಿಕ ಹೊಣೆಗಾರಿಕೆಯನ್ನು ಸಂಪೂರ್ಣ ಜಿಲ್ಲಾಡಳಿತಕ್ಕೆ ಸೇರಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಸಹಕಾರ ಮತ್ತು ಸಹಯೋಗದೊಂದಿಗೆ ಹಿಂದೆಂದಿಗಿಂತ ವಿಜೃಂಭಣೆಯಿಂದ ಆಯೋಜಿಸುವಂತೆ ತಿಳಿಸಿದರು.
ಈಗಾಗಲೇ 26 ಉಪಸಮಿತಿಗಳನ್ನು ರಚಿಸಲಾಗಿದೆ. ಎಲ್ಲಾ ಸಮಿತಿಗಳಿಗೂ ಸ್ಥಳೀಯ ಶಾಸಕರುಗಳು ನೇತೃತ್ವ ವಹಿಸಿದ್ದು, ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು, ಸಾರ್ವಜನಿಕರು ಕನ್ನಡದ ಅಭಿಮಾನಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಕ್ರಮ ನಡೆಸಬೇಕಾಗಿದೆ ಎಂದರು.
ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಈಗಾಗಲೇ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ದೂರದ ಜಿಲ್ಲೆಗಳಿಂದ ಆಗಮಿಸುವ ಹಾಗು ಮಂಡ್ಯ ಜಿಲ್ಲೆಯ ಜನತೆಗೆ ಅನುಕೂಲವಾದ ಸ್ಥಳವನ್ನು ಅಂತಿಮಗೊಳಿಸಿ ಸಮ್ಮೇಳನದ ಸಿದ್ದತೆ ಮಾಡಿಕೊಳ್ಳುವಂತೆ ಸಭೆಯಲ್ಲಿ ಭಾಗವಹಿಸಿದ ಅಧಿಕಾರಿಗಳಿಗೆ ಕೃಷಿ ಸಚಿವರು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿರವರು ಮಾತನಾಡಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಾಡಿನ ಅತಿ ದೊಡ್ಡ ಸಾಂಸ್ಕೃತಿಕ ನುಡಿ ಹಬ್ಬ ಇದನ್ನು ಅತ್ಯಂತ ಜವಾಬ್ದಾರಿಯಿಂದ ಎಚ್ಚರಿಕೆಯಿಂದ ನಡೆಸಬೇಕಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ 50ನೇ ವರ್ಷದ ಸುವರ್ಣ ಸಂಭ್ರಮದ ಅಂಗವಾಗಿ ಬಿಡುಗಡೆ ಮಾಡಿರುವ ಲಾಂಛನ ಎಲ್ಲಾ ಕಾರ್ಯಕ್ರಮದಲ್ಲಿ ವಿಶೇಷವಾಗಿ ಬಿಂಬಿತವಾಗಬೇಕು. ಖರ್ಚು-ವೆಚ್ಚಗಳಿಗೆ ಹೊಣೆಗಾರಿಕೆ ಇರಬೇಕು ಹಾಗಾಗಿ ಎಲ್ಲರೂ ಹೊಂದಾಗಿ ಕಾರ್ಯಕ್ರಮವನ್ನು ಆಯೋಜಿಸೋಣ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಹೇಶ್ ಜೋಶಿರವರು ಸಮ್ಮೇಳನಾಧ್ಯಕ್ಷರ ಆಯ್ಕೆ, ಕನ್ನಡ ಸಾಹಿತ್ಯ ಸಮ್ಮೇಳನದ ಸ್ವರೂಪ ಗೋಷ್ಠಿಗಳು, ಪುಸ್ತಕ ಮಳಿಗೆ, ಊಟೋಪಚಾರ ಮತ್ತಿತತೆ ವಿಷಯಗಳ ಬಗ್ಗೆ ಮಾಹಿತಿ ನೀಡಿ ಅನುದಾನವು ಜಿಲ್ಲಾಧಿಕಾರಿಗಳಿಗೆ ಬಿಡುಗಡೆಯಾಗಲಿದ್ದು, ಹಣಕಾಸಿನ ಸಂಪೂರ್ಣ ಜವಾಬ್ದಾರಿ ಜಿಲ್ಲಾಡಳಿತದ ಮೇಲಿರುತ್ತದೆ. ಸಾಹಿತ್ಯ ಪರಿಷತ್ತು ಸಂಪೂರ್ಣ ಸಹಕಾರ ನೀಡಿ ಸಮ್ಮೇಳನದ ಯಶಸ್ಸಿಗೆ ಶ್ರಮಿಸಲಿದೆ ಎಂದರು.
ಶಾಸಕರಾದ ನರೇಂದ್ರ ಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ರವಿಕುಮಾರ್ ಗಣಿಗ, ಉದಯ್ ಗೌಡ, ವಿಧಾನಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಧು ಮಾದೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಡಾ.ಅಜಯ್ ನಾಗಭೂಷಣ್, ನಿರ್ದೇಶಕಿ ಧರಣಿದೇವಿ ಮಾಲಗತ್ತಿಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್, ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯತಿ ಸಿಇಒ ಶೇಖ್ ತನ್ವೀರ್ ಆಸಿಫ್, ಕನ್ನಡ ಸಾಹಿತ್ಯ ಪರಿಷತ್ತಿನ ವಿವಿಧ ಪದಾಧಿಕಾರಿಗಳು ಹಾಗೂ ಹಲವು ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.