logo
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಬಿಎಂಟಿಸಿ ಬಸ್ ಗಳಲ್ಲಿ ನಿಮ್ಮ ಮೊಬೈಲ್‌ ಕಳ್ಳತನವಾಗಿತ್ತಾ, ಸಿಕ್ಕಿಬಿದ್ದಿದ್ದಾರೆ ಮೂವರು ಕಳ್ಳರು, ಸಿಕ್ಕಿವೆ 176 ಮೊಬೈಲ್‌

Bangalore News: ಬಿಎಂಟಿಸಿ ಬಸ್ ಗಳಲ್ಲಿ ನಿಮ್ಮ ಮೊಬೈಲ್‌ ಕಳ್ಳತನವಾಗಿತ್ತಾ, ಸಿಕ್ಕಿಬಿದ್ದಿದ್ದಾರೆ ಮೂವರು ಕಳ್ಳರು, ಸಿಕ್ಕಿವೆ 176 ಮೊಬೈಲ್‌

Umesha Bhatta P H HT Kannada

May 22, 2024 03:37 PM IST

google News

ಬಿಎಂಟಿಸಿ ಬಸ್‌ಗಳಲ್ಲಿ ಮೊಬೈಲ್‌ ಕದ್ದು ಸಿಕ್ಕಿಬಿದ್ದ ನಾಗನೂರಿ ಕುಮಾರ್‌

    • ಬೆಂಗಳೂರಿನ ಪ್ರತ್ಯೇಕ ಪ್ರಕರಣದಲ್ಲಿ( Bangalore Crime News) ಐವರನ್ನು ಪೊಲೀಸರು ಬಂಧಿಸಿದ್ದಾರೆ. 
      ವರದಿ: ಎಚ್‌.ಮಾರುತಿ. ಬೆಂಗಳೂರು
ಬಿಎಂಟಿಸಿ ಬಸ್‌ಗಳಲ್ಲಿ ಮೊಬೈಲ್‌ ಕದ್ದು ಸಿಕ್ಕಿಬಿದ್ದ ನಾಗನೂರಿ ಕುಮಾರ್‌
ಬಿಎಂಟಿಸಿ ಬಸ್‌ಗಳಲ್ಲಿ ಮೊಬೈಲ್‌ ಕದ್ದು ಸಿಕ್ಕಿಬಿದ್ದ ನಾಗನೂರಿ ಕುಮಾರ್‌

ಬೆಂಗಳೂರು: ನೀವು ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ನಲ್ಲಿ ಸಂಚರಿಸುವಾಗ ಮೊಬೈಲ್‌ ಕಳೆದುಕೊಂಡಿದ್ದೀರಾ, ನಿಮ್ಮ ಮೊಬೈಲ್‌ ಅನ್ನು ಕದ್ದಿರಬಹುದಾದ ಮೂವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾಎ. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಪ್ರಯಾಣಿಕರ ಗಮನವನ್ನು ಬೇರೆಡೆಗೆ ಸೆಳೆದು ಮೊಬೈಲ್ ಕಳವು ಮಾಡುತ್ತಿದ್ದ ಆಂಧ್ರಪ್ರದೇಶದ ಮೂವರು ಆರೋಪಿಗಳನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ನಾಗನೂರಿ ಕುಮಾರ್ ಮತ್ತು ಅನಂತಪುರ ಜಿಲ್ಲೆಯ ಪರಶುರಾಮ್ ಅಲಿಯಾಸ್ ಅಭಿ ಬಂಧಿತ ಆರೋಪಿಗಳು. ಇವರ ಜೊತೆ ಕಳ್ಳತನಕ್ಕೆ ಸೇರಿಕೊಂಡಿದ್ದ ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಬಾಲಕನನ್ನು ಬಾಲಮಂದಿರಕ್ಕೆ ಕಳುಹಿಸಲಾಗಿದೆ.

ಆರೋಪಿಗಳಿಂದ ಸುಮಾರು 22.40 ಲಕ್ಷದ 176 ಮೊಬೈಲ್‌ ಗಳು ಮತ್ತು ಒಂದು ಕಾರನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಂಧ್ರಪ್ರದೇಶದಿಂದ ಕಾರಿನಲ್ಲಿ ಬೆಂಗಳೂರಿಗೆ ಆಗಮಿಸಿ ಹೊರವಲಯಗಳಲ್ಲಿ ಉಳಿದುಕೊಳ್ಳುತ್ತಿದ್ಧರು. ಆರೋಪಿಗಳು ಹೊರವಲಯಗಳಲ್ಲಿ ಬಿಎಂಟಿಸಿ ಬಸ್‌ ಹತ್ತಿ ಪ್ರಯಾಣಿಕರಂತೆ ಪ್ರಯಾಣಿಸುತ್ತಿದ್ದರು. ಮೆಜೆಸ್ಟಿಕ್ ಮತ್ತಿತರ ಜನನಿಬಿಡ ನಿಲ್ದಾಣಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಅಲ್ಲಿ ಪ್ರಯಾಣಿಕರ ಗಮನವನ್ನು ಬೇರೆಡೆಗೆ ಸೆಳೆದು ಪ್ರಯಾಣಿಕರ ಜೇಬಿನಲ್ಲಿದ್ದ ಮೊಬೈಲ್ ಕದ್ದು ಪರಾರಿಯಾಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ರೀತಿ ಕದ್ದ ಮೊಬೈಲ್‌ಗಳನ್ನು ಆಂಧ್ರಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಫ್ಲ್ಯಾಶ್ ಮಾಡಿಸಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಇತ್ತೀಚೆಗೆ ಶಿವಮೊಗ್ಗದಿಂದ ಬೆಂಗಳೂರಿಗೆ ಆಗಮಿಸಿದ್ದ ವ್ಯಕ್ತಿಯೊಬ್ಬರು ಮೆಜೆಸ್ಟಿಕ್‌ಗೆ ಆಗಮಿಸಿ ಅಲ್ಲಿಂದ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಆಗ ಅವರ ಮೊಬೈಲ್ ಕಳ್ಳತನವಾಗಿತ್ತು. ಅವರು ನೀಡಿದ ದೂರು ಆಧರಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಪಿಜಿಗಳಲ್ಲಿ ಲ್ಯಾಪ್‌ಟಾಪ್ ಗಳನ್ನು ಕಳವು ಮಾಡುತ್ತಿದ್ದ ಆರೋಪಿ ಬಂಧನ

ವಿದ್ಯಾರ್ಥಿಗಳು ವಾಸವಾಗಿರುವ ಪಿಜಿಗಳಿಗೆ ನುಗ್ಗಿ ಲ್ಯಾಪ್‌ಟಾಪ್ ಗಳನ್ನು ಕಳವು ಮಾಡುತ್ತಿದ್ದ ಆಂಧ್ರಪ್ರದೇಶದ ಆರೋಪಿಯನ್ನು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ 29 ವರ್ಷದ ಕುಮಾರ್ ಲ್ಯಾಪ್‌ಟಾಪ್ ಕಳವು ಮಾಡುತ್ತಿದ್ದ ಆರೋಪಿ. ಈತನಿಂದ 25 ಲ್ಯಾಪ್‌ಟಾಪ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ದಯಾನಂದ ಸಾಗರ್ ಕಾಲೇಜು ರಸ್ತೆಯಲ್ಲಿರುವ ಮನೆಯೊಂದರಲ್ಲಿ ಆರೋಪಿ ಕುಮಾರ್ ಲ್ಯಾಪ್‌ಟಾಪ್ ಕಳವು ಮಾಡಿದ್ದ. ಈ ಸಂಬಂಧ ಮನೆ ಮಾಲೀಕರು ದೂರು ನೀಡಿದ್ದರು. ಈ ದೂರಿನನ್ವಯ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈತನ ಬಂಧನದಿಂದ ಬೆಂಗಳೂರಿನ ವಿವಿಧ ಐದು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 17 ಲ್ಯಾಪ್‌ ಟಾಪ್ ಕಳವು ಪ್ರಕರಣಗಳು ಪತ್ತೆಯಾಗಿವೆ. ಜೊತೆಗೆ ಈತನ ವಿರುದ್ಧ 2021ರಲ್ಲಿ ಎಚ್‌ ಎಸ್ ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಡಕಾಯಿತಿ ಪ್ರಕರಣ ದಾಖಲಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯು ಬೆಂಗಳೂರಿನಲ್ಲಿ ಕಳವು ಮಾಡಿದ ಲ್ಯಾಪ್‌ಟಾಪ್‌ಗಳನ್ನು ಚೆನ್ನೈನ ವ್ಯಕ್ತಿಯೊಬ್ಬನಿಗೆ ಮಾರಾಟ ಮಾಡುತ್ತಿದ್ದ. ಆತನನ್ನೂ ಬಂಧಿಸಿ ಅವನಿಂದ 25 ಲ್ಯಾಪ್‌ಟಾಪ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಸ್ಪಾ ಮೇಲೆ ದಾಳಿ, ವಿದೇಶಿಗ ಸೆರೆ

ಬೆಂಗಳೂರಿನ ಇಂದಿರಾನಗರದ ಸ್ಪಾ ವೊಂದರ ಮೇಲೆ ದಾಳಿ ನಡೆಸಿ ಓರ್ವ ವಿದೇಶಿ ಹಾಗೂ ಹೊರ ರಾಜ್ಯದ ಏಳು ಯುವತಿಯರನ್ನು ರಕ್ಷಿಸುವಲ್ಲಿ ಇಂದಿರಾನಗರ ಪೊಲೀಸ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಇಂದಿರಾನಗರದ 12ನೇ ಮುಖ್ಯರಸ್ತೆಯಲ್ಲಿರುವ ಬೆರ್‌ರಿ ಸ್ಪಾದ ಮೇಲೆ ದಾಳಿ ನಡೆಸಿ ಒಬ್ಬ ಆರೋಪಿಯನ್ನೂ ಬಂಧಿಸಿದ್ದಾರೆ. ಅಸ್ಸಾಂ ಮೂಲದ ಸಂತನುಧಾರ್ ಬಂಧಿತ ಆರೋಪಿಯಾಗಿದ್ದಾನೆ. ಸ್ಪಾ ಮಾಲೀಕ ಸುರೇಶ್ ಎಂಬಾತ ಪರಾರಿಯಾಗಿದ್ದು, ಆತನ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಡಿ ಟು ಬಾಡಿ ಮಸಾಜ್, ಕ್ರಾಸ್ ಮಸಾಜ್ ಮತ್ತು ಹ್ಯಾಪಿ ಎಂಡಿಂಗ್ ಮೊದಲಾದ ಹೆಸರಿನಲ್ಲಿ ಮಸಾಜ್ ಮಾಡುವುದಾಗಿ ಗ್ರಾಹಕರನ್ನು ಆಕರ್ಷಿಸುತ್ತಿದ್ದರು. ವಿವಿಧ ಮೂಲಗಳ ಮೂಲಕ ಹೊರ ರಾಜ್ಯದಿಂದ ಯುವತಿಯರನ್ನು ಕರೆತಂದು ಅವರನ್ನು ವೇಶ್ಯಾವಾಟಿಕೆಗೆ ಬಲವಂತವಾಗಿ ದೂಡುತ್ತಿದ್ದರು. ಇದೀಗ ಅವರನ್ನು ಪೊಲೀಸರು ರಕ್ಷಿಸಿದ್ದಾರೆ. ಈ ರಕ್ಷಿಸಿದ ಯುವತಿಯರನ್ನು ಅವರ ಕುಟುಂಬದವರೊಂದಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ವರದಿ: ಎಚ್. ಮಾರುತಿ, ಬೆಂಗಳೂರು

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ