Mysuru Muda Scam: ನಿವೇಶನ ಕೊಟ್ಟಿರುವುದು ತಪ್ಪು ಎಂದರೆ ನಮಗೆ 62 ಕೋಟಿ ರೂ. ಪರಿಹಾರ ಕೊಡಲಿ; ಸಿಎಂ ಸಿದ್ದರಾಮಯ್ಯ
Jul 05, 2024 12:25 AM IST
ಮೈಸೂರು ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
- muda scam ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿನ ನಿವೇಶನ ಹಗರಣಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಬದಲಿ ನಿವೇಶನ ಪಡೆದಿರುವ ಪ್ರಕರಣದಲ್ಲಿ ಯಾವುದೇ ಪ್ರಭಾವ ಬೀರಿಲ್ಲ. ನನ್ನ ಪಾತ್ರವೇನೂ ಇಲ್ಲ. ಇದು ನನ್ನ ಪತ್ನಿಗೆ ಸೇರಿದ ಜಮೀನಿನ ಭೂ ಸ್ವಾಧೀನ ವಿಚಾರ. ಆದರೂ ಬಿಜೆಪಿಯವರು ಅನಗತ್ಯ ವಿವಾದ ಸೃಷ್ಟಿಸುತ್ತಿದ್ದಾರೆ. ಮುಡಾ ನಿವೇಶನ ಹಂಚಿಕೆ ಕುರಿತು ಬಿಜೆಪಿ ಮಾಡುತ್ತಿರುವ ಆರೋಪಗಳು ರಾಜಕೀಯ ಪ್ರೇರಿತ ಆರೋಪಗಳೇ ಹೊರತು ಅಂಕಿಅಂಶಗಳ ಮೇಲೆ ಮಾಡಿರುವ ಆರೋಪಗಳಲ್ಲ . ಒಂದು ಎಕರೆಗೆ 44 ಸಾವಿರ ಚದರ ಅಡಿಯಾದರೆ ನನಗೆ ಕೊಟ್ಟಿರುವುದು 38.264 ಚದರ ಅಡಿ. ಒಂದು ಎಕರೆಗಿಂತ ಕಡಿಮೆಯಾಗಿದೆ. ಪರಿಹಾರವಾಗಿ ಕೊಟ್ಟಿರುವ ಜಮೀನಿನ ಬೆಲೆ ಎಷ್ಟಿದೆ ಎಂದು ನನಗೆ ತಿಳಿದಿಲ್ಲ. ನಮಗೆ 62 ಕೋಟಿ ರೂ. ಹಣವನ್ನು ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ ಕೊಡಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಭೂ ಸ್ವಾಧೀನವಾದಲ್ಲಿಯೇ ಜಮೀನು ಕೊಡಬೇಕೆಂಬ ನಿಯಮವಿದೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ, ಸಿಎಂ ನಾವು ಇಂಥ ಕಡೆಯೇ ನಿವೇಶನ ಕೊಡಿ ಎಂದು ಕೇಳಿಲ್ಲ. ಜಾಗ ಕೊಟ್ಟಿರುವುದು ತಪ್ಪು ಎನ್ನುವುದಾದರೆ ನಮಗೆ ಪರಿಹಾರ ಕೊಡಲಿ. 2023 ರ ಅಕ್ಟೋಬರ್ ನಲ್ಲಿ ನಗರಾಭಿವೃದ್ದಿ ಸಚಿವ ಬೈರತಿ ಸುರೇಶ್ 50:50 ಅನುಪಾತದಲ್ಲಿ ಜಮೀನು ಕೊಡುವುದನ್ನು ರದ್ದು ಮಾಡಿ ಎಂದು ಬರೆದಿದ್ದಾರೆ. ಬರೆಯದೇ ಹೋದರೂ ಕೂಡ 62 ಕೋಟಿ ರೂ.ಗಳನ್ನು ಕಾನೂನಿನ ಪ್ರಕಾರ ಕೊಟ್ಟುಬಿಡಲಿ. ನಮಗೆ ಕೊಟ್ಟಿರುವ 14 ನಿವೇಶನಗಳ ಬೆಲೆ ಇದಕ್ಕಿಂತಲೂ ಕಡಿಮೆ ಇದೆ. ಒಂದು ಎಕರೆಗೆ 44 ಸಾವಿರ ಚದರ ಅಡಿಯಾದರೆ ನನಗೆ ಕೊಟ್ಟಿರುವುದು 38.264 ಚದರ ಅಡಿ. ಒಂದು ಎಕರೆಗಿಂತ ಕಡಿಮೆಯಾಗಿದೆ. ಪರಿಹಾರವಾಗಿ ಕೊಟ್ಟಿರುವ ಜಮೀನಿನ ಬೆಲೆ ಎಷ್ಟಿದೆ ಎಂದು ನನಗೆ ತಿಳಿದಿಲ್ಲ. ನನಗೆ 62 ಕೋಟಿ ಕೊಟ್ಟರೆ ಸ್ವೀಕರಿಸುತ್ತೇವೆ ಎಂದು ಸಿದ್ದರಾಮಯ್ಯ ಉತ್ತರಿಸಿದರು.
ನಮಗೆ ಮುಡಾ ನಿವೇಶನ ನೀಡಿದಾಗ 2021 ನೇ ಇಸವಿಯಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಅವರೇ ನಿವೇಶನಗಳನ್ನು ಹಂಚಿ ಈಗ ಕಾನೂನುಬಾಹಿರ ಎಂದರೆ ಹೇಗೆ? ಮೈಸೂರಿನ ವಿಜಯನಗರ 3 ನೇ ಅಥವಾ 4 ನೇ ಹಂತದಲ್ಲಿ ಕೊಡಿ ಎಂದು ನಾವೇನೂ ಕೇಳಲಿಲ್ಲ. ನಮಗೆ ಪರ್ಯಾಯವಾಗಿ 50:50 ಅನುಪಾತದಲ್ಲಿ ಕೊಡಲು ಒಪ್ಪಿದಂತೆ ಕೊಡಿ ಎಂದು ಹೇಳಿದ್ದೇವೆ. ಇದು ರಾಜಕೀಯ ಪ್ರೇರಿತ ಆಪಾದನೆ ಎಂದರು.
ನಗರಾಭಿವೃದ್ಧಿ ಸಚಿವರು ನಿವೇಶನ ಹಂಚಿಕೆಗೆ ಸಂಬಂಧಿಸಿದ ಕಡತವನ್ನು ತೆಗೆದುಕೊಂಡು ಬಂದಿದ್ದಾರೆ ಎಂಬ ಪರ್ತಕರ್ತರ ಪ್ರಶ್ನೆಗೆ ಉತ್ತರಿಸಿ ಕಡತ ತಂದಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಬಿಜೆಪಿಯವರಿಗೆ ಬೇರೇನೂ ವಿಷಯವಿಲ್ಲ. ಆರ್.ಎಸ್.ಎಸ್ ಹೇಳಿದಂತೆ ಮಾಡುತ್ತಾರೆ.. ಮುಡಾ ನಮ್ಮ 3.16 ಎಕರೆ ಜಮೀನಿನಲ್ಲಿ ನಿವೇಶನಗಳನ್ನು ಮಾಡಿ ಹಂಚಿದರೆ ನಾವು ಕೇಳಬಾರದೇ. ಹಾಗಿದ್ದಲ್ಲಿ ಜಮೀನಿನ ಮೌಲ್ಯದಂತೆಯೇ ಹಣವನ್ನು ಕೊಟ್ಟುಬಿಡಲಿ. ನಮ್ಮ ಜಮೀನು ಒತ್ತುವರಿ ಮಾಡಿಕೊಂಡಿರುವುದನ್ನು ಅವರೇ ಸಭೆಯಲ್ಲಿ ಒಪ್ಪಿಕೊಂಡಿದ್ದಾರೆ. ಅದಕ್ಕಾಗಿ ನಿವೇಶನಗಳನ್ನು 50:50 ಅನುಪಾತದಲ್ಲಿ ನೀಡಿದ್ದಾರೆ. ಅದಕ್ಕೆ ನಾವು ಒಪ್ಪಿದ್ದೇವೆ. ಇಂಥ ಕಡೆಯೇ ನಿವೇಶನ ಕೊಡಿ ಎಂದು ನಾವು ಕೇಳಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಇದೇ ವೇಳೆ ಗುರುವಾರ ನಡೆದ ಸಂಪುಟ ಸಭೆಯಲ್ಲೂ ಅನೌಪಚಾರಿಕವಾಗಿ ಸಿದ್ದರಾಮಯ್ಯ ಈ ವಿಷಯ ಪ್ರಸ್ತಾಪಿಸಿದರು. ಮುಡಾ ಬದಲಿ ನಿವೇಶನ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸಲಾಗುತ್ತಿದೆ. ಇದರಲ್ಲಿ ಯಾವುದೇ ಹುರುಳಿಲ್ಲ. ಎಲ್ಲವೂ ಕಾನೂನು ರೀತಿಯಲ್ಲಿಯೇ ಆಗಿದೆ ಎಂದು ಸ್ಪಷ್ಟಪಡಿಸಿದ್ದಾಗಿ ಗೊತ್ತಾಗಿದೆ.
ವಿಭಾಗ