logo
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಈಜಲು ಹೋಗಿದ್ದ ಇಬ್ಬರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಕೆರೆಯಲ್ಲಿ ಮುಳುಗಿ ಸಾವು; ಕಗ್ಗಲೀಪುರದ ಅಗರ ಕೆರೆಯಲ್ಲಿ ದುರಂತ

Bangalore News: ಈಜಲು ಹೋಗಿದ್ದ ಇಬ್ಬರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಕೆರೆಯಲ್ಲಿ ಮುಳುಗಿ ಸಾವು; ಕಗ್ಗಲೀಪುರದ ಅಗರ ಕೆರೆಯಲ್ಲಿ ದುರಂತ

Raghavendra M Y HT Kannada

Mar 14, 2024 04:48 PM IST

google News

ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬೆಂಗಳೂರು ಸಮೀಪದ ಕಗ್ಗಲೀಪುರದ ಅಗರ ಕೆರೆಯಲ್ಲಿ ನಡೆದಿದೆ.

    • Bangalore Crime News: ಮಧ್ಯಾಹ್ನದ ಸಮಯದಲ್ಲಿ ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಕಗ್ಗಲೀಪುರ ಸಮೀಪ ನಡೆದಿದೆ. ಇತರೆ ಅಪರಾಧ ಪ್ರಕರಣಗಳ ಸುದ್ದಿಯನ್ನೂ ಓದಿ.
ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬೆಂಗಳೂರು ಸಮೀಪದ ಕಗ್ಗಲೀಪುರದ ಅಗರ ಕೆರೆಯಲ್ಲಿ ನಡೆದಿದೆ.
ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬೆಂಗಳೂರು ಸಮೀಪದ ಕಗ್ಗಲೀಪುರದ ಅಗರ ಕೆರೆಯಲ್ಲಿ ನಡೆದಿದೆ.

ಬೆಂಗಳೂರು: ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದುರ್ಘಟನೆ (Bangalore Crime News) ಸಂಭವಿಸಿದೆ. ದಕ್ಷಿಣ ಬೆಂಗಳೂರಿನ ಕಗ್ಗಲೀಪುರ ಬಳಿಯ ಅಗರ ಕೆರೆಯಲ್ಲಿ ಬುಧವಾರ (ಮಾರ್ಚ್ 13) ಈ ಘಟನೆ ನಡೆದಿದೆ ಎಂದು ಪೊಲೀಸ್ ವರದಿಗಳು ತಿಳಿಸಿವೆ. ನವೀನ್ ಮತ್ತು ಪೃಥ್ವಿರಾಜ್ (16) ಮೃತಪಟ್ಟ ವಿದ್ಯಾರ್ಥಿಗಳು. ಒಂಭತ್ತು ಮಂದಿ ಸ್ನೇಹಿತರೊಂದಿಗೆ ಈ ಇಬ್ಬರೂ ಕೆರೆಗೆ ಈಜಲು ತೆರಳಿದ್ದರು. ಮಧ್ಯಾಹ್ನದ ಸುಮಾರಿಗೆ ಈಜಲು ಮುಂದಾದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸ್ನೇಹಿತರು ಇವರನ್ನು ರಕ್ಷಿಸಲು ಪ್ರಯತ್ನಿಸಿದರೂ, ಸಾಧ್ಯವಾಗಲಿಲ್ಲ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರು ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಸುದ್ದಿ ತಿಳಿದು ಕೂಡಲೇ ಸ್ಥಳಕ್ಕೆ ಧಾವಿಸಿದ ತುರ್ತು ಸೇವಾ ಸಿಬ್ಬಂದಿ ಮತ್ತು ಪೊಲೀಸ್ ಅಧಿಕಾರಿಗಳು, ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ನಂತರ ಮೃತದೇಹಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಯಿತು. ಈ ದುರ್ಘಟನೆಯ ನಂತರ ಕಗ್ಗಲಿಪುರ ಪೊಲೀಸರು ಅಸ್ವಾಭಾವಿಕ ಮರಣ ವರದಿ (ಯುಡಿಆರ್) ಪ್ರಕರಣ ದಾಖಲಿಸಿದ್ದಾರೆ. ಎಲ್ಲಾ ಬಾಲಕರು ಕೆಂಗೇರಿ ಸರ್ಕಾರಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾಭ್ಯಾಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಅಪಹರಣಕಾರರಿಂದ ಚಿಂದಿ ಆಯುವ ವ್ಯಕ್ತಿ ರಕ್ಷಿಸಿದ ಪೊಲೀಸರು

ಪೊಲೀಸರಂತೆ ಬಿಂಬಿಸಿ 50ರ ಹರೆಯದ ಚಿಂದಿ ಆಯುವ ವ್ಯಕ್ತಿಯನ್ನು ಅಪಹರಣ ಮಾಡಿದ್ದಲ್ಲದೆ, ಬಿಡುಗಡೆಗೆ 5 ಲಕ್ಷ ರೂಪಾಯಿ ಬೇಡಿಕೆ ಇಟ್ಟ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ನಗರದಲ್ಲಿ ನಡೆದಿದೆ. ಕೃತ್ಯ ನಡೆಸಿದ್ದ ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳಲ್ಲಿ ಒಬ್ಬಾತ 33 ವರ್ಷದ ಮುಝಮ್ಮಿಲ್ ಪಾಷಾ ಎಂದು ಗುರುತಿಸಲಾಗಿದ್ದು, ಈತನ ವಿರುದ್ಧ ಈಗಾಗಲೇ ಯಲಹಂಕ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಪಟ್ಟಿ ತೆರೆಯಲಾಗಿದೆ. ಮತ್ತಿಬ್ಬರು ಆರೋಪಿಗಳಾದ ಸೈಯದ್ ಶಿಫು (32) ಮತ್ತು ಸೈಯದ್ ಯೂಸುಫ್ (35) ಯಲಹಂಕ ಸಮೀಪದ ಕೋಗಿಲು ನಿವಾಸಿಗಳು.

ಮಾರ್ಚ್ 6 ರಂದು ಮಧ್ಯರಾತ್ರಿ ಈ ಗ್ಯಾಂಗ್ ಅಮೃತಹಳ್ಳಿ ಠಾಣೆಯ ಪೊಲೀಸರಂತೆ ನಟಿಸಿ, ಚಿಂದಿ ಆಯುವ ಮಾಸೂಮ್ ಅವರ ಮನೆಗೆ ಪ್ರವೇಶಿಸಿದೆ. ಮಾಸೂಮ್ ಕ್ರಿಮಿನಲ್ ಮೊಕದ್ದಮೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ, ಬಂಧಿಸುವ ನಾಟಕವಾಡಿದ್ದಾರೆ. ಆ ಬಳಿಕ ಮಾಸೂಮ್ ಅವರನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ಯಲಾಗಿದೆ.

ಅಪಹರಣದ ಬಳಿಕ ಆರೋಪಿಗಳು ತನಗೆ ಬಾಟಲಿ ಮತ್ತು ಮಚ್ಚಿನಿಂದ ಥಳಿಸಿದ್ದಾರೆ. ಗ್ಯಾಂಗ್ ತನಗೆ ಬೆದರಿಕೆ ಹಾಕಿದ್ದು, ಬಿಡುಗಡೆಗೆ 5 ಲಕ್ಷ ರೂಪಾಯಿ ನೀಡುವಂತೆ ಒತ್ತಾಯಿಸಿದ್ದರು ಎಂದು ಮಾಸೂಮ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಶಂಕಿತರನ್ನು ಐಪಿಸಿ ಸೆಕ್ಷನ್ 324 (ಅಪಾಯಕಾರಿ ಶಸ್ತ್ರಾಸ್ತ್ರಗಳಿಂದ ಗಾಯಗೊಳಿಸುವುದು), 364 ಎ (ಸುಲಿಗೆಗಾಗಿ ಅಪಹರಣ), ಮತ್ತು 506 (ಅಪರಾಧ ಬೆದರಿಕೆ) ಅಡಿಯಲ್ಲಿ ಬಂಧಿಸಲಾಗಿದೆ.

ಹಾಸ್ಟೆಲ್ ಕಟ್ಟಡದ ಆರನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿ ಸಾವು

ಮತ್ತೊಂದು ಪ್ರಕರಣಗಳು ಹಾಸ್ಟೆಲ್ ಕಟ್ಟಡದ ಆರನೇ ಮಹಡಿಯಿಂದ ಬಿದ್ದು 19 ವರ್ಷದ ಕಾಲೇಜು ವಿದ್ಯಾರ್ಥಿ ಮೃತಪಟ್ಟಿರುವ ಆಘಾತಕಾರಿ ಘಟನೆ ದೊಡ್ಡಬಳ್ಳಾಪುರದ ಖಾಸಗಿ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆದಿದೆ.

ಮೃತಪಟ್ಟ ವಿದ್ಯಾರ್ಥಿಯನ್ನು ದಾಸರಿ ಬ್ರಹ್ಮಸಾಯಿ ರೆಡ್ಡಿ ಎಂದು ಗುರುತಿಸಲಾಗಿದೆ. ಮೂಲತಃ ಆಂಧ್ರಪ್ರದೇಶ ಮೂಲದವರು. ಇಲ್ಲಿನ ವಿಶ್ವವಿದ್ಯಾನಿಲಯದಲ್ಲಿ ರೆಡ್ಡಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಟೆಕ್ ಓದುತ್ತಿದ್ದರು. ಮಂಗಳವಾರ ಸಂಜೆ 7.30ರ ಸುಮಾರಿಗೆ ಈ ಘಟನೆ ನಡೆದಿದೆ. ನಿರ್ಮಾಣ ಹಂತದಲ್ಲಿರುವ ಕಟ್ಟಡದ ಆರನೇ ಮಹಡಿಯಿಂದ ಜಾರಿ ಬಿದ್ದಿದ್ದಾರೆ ಎನ್ನಲಾಗಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ರೆಡ್ಡಿ ಅವರ ಕೊಠಡಿ ಐದನೇ ಮಹಡಿಯಲ್ಲಿದ್ದು, ಅವರು ಆರನೇ ಮಹಡಿಗೆ ಹತ್ತುವಾಗ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಇನ್ನು ಮೃತ ವಿದ್ಯಾರ್ಥಿಯ ಪೋಷಕರು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ. ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ನಕಲಿ ಟಿಕೆಟ್, ಪಾಸ್‌ಪೋರ್ಟ್‌ನೊಂದಿಗೆ ವಿಮಾನ ನಿಲ್ದಾಣ ಪ್ರವೇಶಿಸಿದ್ದ ಇಬ್ಬರ ಬಂಧನ

ಸಿಲಿಕಾನ್ ಸಿಟಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ ನಕಲಿ ದಾಖಲೆಗಳನ್ನು ಬಳಸಿ ಟರ್ಮಿನಲ್ ಪ್ರವೇಶಿಸಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಜನವರಿ 8 ರಂದು, ಬೆಂಗಳೂರಿನಲ್ಲಿ ನೆಲೆಸಿರುವ ಜಾರ್ಖಂಡ್‌ನ 24 ವರ್ಷದ ಪ್ರಖರ್ ಶ್ರೀವಾಸ್ತವ, ಗೇಟ್ ಸಂಖ್ಯೆ 7 ಮೂಲಕ ಟರ್ಮಿನಲ್ 1 (ಟಿ 1) ಗೆ ಪ್ರವೇಶಿಸಲು ನಕಲಿ ಏರ್‌ಲೈನ್ ಟಿಕೆಟ್ ಬಳಸಿ ಸಿಕ್ಕಿಬಿದ್ದಿದ್ದರು. 3 ಗಂಟೆಯವರೆಗೆ ಟರ್ಮಿನಲ್ ಒಳಗೆ ಇದ್ದು, ಗೇಟ್ ಒಂಬತ್ತರ ಮೂಲಕ ನಿರ್ಗಮಿಸಲು ಪ್ರಯತ್ನಿಸಿದ್ದರು.

ಶ್ರೀವಾಸ್ತವನನ್ನು ತಡೆದ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (ಸಿಐಎಸ್‌ಎಫ್), ಏರ್‌ಲೈನ್‌ನ ಪ್ರೋಟೋಕಾಲ್ ಮೂಲಕ ಹೊರಹೋಗುವಂತೆ ಸೂಚಿಸಿತು. ಆದರೆ, ಆಕಾಸ ಏರ್‌ಲೈನ್ ಸಿಬ್ಬಂದಿ ಆತನ ಟಿಕೆಟ್ ಅನ್ನು ಪರಿಶೀಲಿಸಿದಾಗ ಅದು ನಕಲಿ ಎಂದು ತಿಳಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಇನ್ನು ಘಟನೆಯ ಕುರಿತು ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಯೊಬ್ಬರು, ಶ್ರೀವಾಸ್ತವ ದೆಹಲಿಗೆ ತೆರಳುತ್ತಿದ್ದ ಮಹಿಳಾ ಸ್ನೇಹಿತೆಯೊಬ್ಬರಿಗೆ ಸಹಾಯ ಮಾಡುವ ಉದ್ದೇಶದಿಂದ ವಿಮಾನ ನಿಲ್ದಾಣವನ್ನು ಪ್ರವೇಶಿಸಿದ್ದರು ಎಂದು ಹೇಳಿದ್ದಾರೆ. ಹೀಗಾಗಿ ಈತನ ವಿರುದ್ಧ ಐಪಿಸಿ ಸೆಕ್ಷನ್ 448 (ಅತಿಕ್ರಮಣ), 465 (ನಕಲಿ), ಮತ್ತು 471 (ನಕಲಿ ದಾಖಲೆ ಬಳಸಿ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಪಾಸ್ ಪೋರ್ಟ್ ದುರ್ಬಳಕೆ; ವ್ಯಕ್ತಿ ಬಂಧನ

ಮತ್ತೊಂದು ಘಟನೆಯಲ್ಲಿ ಪಾಸ್‌ಪೋರ್ಟ್ ಬಳಸಿ ಪ್ರಯಾಣಿಸಲು ಯತ್ನಿಸಿದ ಶ್ರೇಯಸ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಬೆಂಗಳೂರಿನಿಂದ ದೆಹಲಿಗೆ ತೆರಳಲು ರಮಾನಂದ ಮತ್ತಿಗೋಡು ಸತ್ಯನಾರಾಯಣ ಎಂಬುವರ ಪಾಸ್‌ಪೋರ್ಟ್ ಬಳಸಲು ಆರೋಪಿ ಶ್ರೇಯಸ್ ಯತ್ನಿಸಿದ್ದರು. ಇಂಡಿಗೋ ಏರ್‌ಲೈನ್ ಸಿಬ್ಬಂದಿ ಶ್ರೇಯಸ್ ಮತ್ತು ಪಾಸ್‌ಪೋರ್ಟ್‌ನಲ್ಲಿರುವ ಫೋಟೋ ನಡುವಿನ ವ್ಯತ್ಯಾಸವನ್ನು ಗಮನಿಸಿದ್ದಾರೆ. ಎರಡೆರಡು ಬಾರಿ ಪರಿಶೀಲನೆ ನಡೆಸಿದ ಬಳಿಕ ಸಿಬ್ಬಂದಿ ಶ್ರೇಯಸ್‌ನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಏರ್‌ಪೋರ್ಟ್ ಅಧಿಕಾರಿಗಳು ಶ್ರೇಯಸ್‌ನನ್ನು ಐಪಿಸಿ ಸೆಕ್ಷನ್ 419 (ವ್ಯಕ್ತಿಯಿಂದ ವಂಚನೆ) ಮತ್ತು ಪಾಸ್‌ಪೋರ್ಟ್ ಕಾಯಿದೆ ಅಡಿಯಲ್ಲಿ ಬಂಧಿಸಿದ್ದಾರೆ.

(This copy first appeared in Hindustan Times Kannada website. To read more like this please logon to kannada.hindustantimes.com )

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ