ಸಾಕು ಪ್ರಾಣಿಗಳನ್ನು ಕರೆದೊಯ್ಯುವ ಸಮಸ್ಯೆಗೆ ಕೊನೆಗೂ ಪರಿಹಾರ; ಬೆಂಗಳೂರಿನಲ್ಲಿ ಉಬರ್ ಒದಗಿಸಲಿದೆ ಪೆಟ್ ಕ್ಯಾಬ್ ಸೇವೆ
Oct 09, 2024 04:44 PM IST
ಬೆಂಗಳೂರಿನಲ್ಲಿ ಉಬರ್ ಸಾಕು ಪ್ರಾಣಿಯೊಂದಿಗೆ ತೆರಳಬಹುದಾದ ಪೆಟ್ ಸೇವೆ ಒದಗಿಸಲಿದೆ.
- Uber Pet Service in Bangalore: ಬೆಂಗಳೂರಿನಲ್ಲಿ ಉಬರ್ ಪೆಟ್ ಸೇವೆಯನ್ನು ಪ್ರಾರಂಭಿಸಿದೆ. ಸಾಕು ಪ್ರಾಣಿಗಳೊಂದಿಗೆ ಕ್ಯಾಬ್‌ನಲ್ಲಿ ಹೋಗಲು ಇದ್ದ ಅಡತಡೆಗಳು ಬಗೆಹರಿದಿವೆ.
ಬೆಂಗಳೂರು: ಮನೆಯಿಂದ ಹೊರಗೆ ಹೊರಡುವಾಗ ಇಲ್ಲವೇ ಪರಿಚಯಸ್ಥರು, ಸಂಬಂಧಿಕರ ಮನೆಗೆ ಹೋಗುವ ಅಥವಾ ಬೇರೆ ಊರಿಗೆ ಹೊರಡುವಾಗ ಸಾಕು ಪ್ರಾಣಿಗಳನ್ನು ಕರೆದೊಯ್ಯುವುದು ಹೇಗೆ ಎನ್ನುವ ಗೊಂದಲ ಇದ್ದೇ ಇರುತ್ತದೆ. ಸ್ವಂತ ವಾಹನ ಇದ್ದವರು ಸುಲಭವಾಗಿ ಕರೆದುಕೊಂಡು ಹೋಗಬಹುದು. ಟ್ಯಾಕ್ಸಿ ತೆಗೆದುಕೊಂಡು ಹೋಗುವಾ ಗ ಕೆಲವೊಮ್ಮೆ ಅನುಮತಿ ಇಲ್ಲದೇ ಕಿರಿಕಿರಿ ಅನುಭವಿಸಿದ ಅನುಭವವೂ ಹಲವರಿಗೆ ಆಗಿರುತ್ತದೆ. ಇಂತಹ ಕಿರಿಕಿರಿ ಇನ್ನು ಮುಂದೆ ಬೆಂಗಳೂರಿನಲ್ಲಿ ಇರದು. ಸಾಕುಪ್ರಾಣಿಗಳನ್ನು ಟ್ಯಾಕ್ಸಿಗಳಲ್ಲಿ ಕರೆದೊಯ್ಯಲು ಉಬರ್ ಇಂಡಿಯಾ ಬೆಂಗಳೂರಿನಲ್ಲಿ ಸಾಕುಪ್ರಾಣಿ ಸ್ನೇಹಿ ಕ್ಯಾಬ್ ಸೇವೆಗಳನ್ನು ಪ್ರಾರಂಭಿಸಿದೆ ಈ ಸೌಲಭ್ಯವನ್ನು ಈಗಾಗಲೇ ಬೆಂಗಳೂರಿನ ಕ್ಯಾಬ್ ಬಳಕೆದಾರರಿಗೆ ಲಭ್ಯವಾಗುವಂತೆ ಮಾಡಲಾಗಿದೆ ಮತ್ತು ಚಾಲಕರು ಸಾಕುಪ್ರಾಣಿಗಳನ್ನು ತಮ್ಮ ಕ್ಯಾಬ್ ಗಳಿಗೆ ಸ್ವಾಗತಿಸಲಿದ್ಧಾರೆ.
ಉಬರ್ ಇಂಡಿಯಾ ಬೆಂಗಳೂರಿನಲ್ಲಿ ಉಬರ್ ಪೇಟ್ ಅನ್ನು ಪ್ರಾರಂಭಿಸಿದೆ, ಅಲ್ಲಿ ಬಳಕೆದಾರರು ಈಗ ತಮ್ಮ ಸಾಕುಪ್ರಾಣಿಗಳೊಂದಿಗೆ ಕ್ಯಾಬ್ ಗಳಲ್ಲಿ ಪ್ರಯಾಣಿಸಬಹುದು. ಈ ಸೌಲಭ್ಯವನ್ನು ಈಗಾಗಲೇ ಬೆಂಗಳೂರಿನ ಕ್ಯಾಬ್ ಬಳಕೆದಾರರಿಗೆ ಲಭ್ಯವಾಗುವಂತೆ ಮಾಡಲಾಗಿದೆ. ಕ್ಯಾಬ್ ಚಾಲಕರೇ ಸಾಕುಪ್ರಾಣಿಗಳನ್ನು ತಮ್ಮ ಕ್ಯಾಬ್ ಗಳಿಗೆ ಬರ ಮಾಡಿಕೊಂಡು ನಿಗದಿತ ಸ್ಥಳಕ್ಕೆ ಕರೆದೊಯ್ಯವರು.
ಇದನ್ನೂ ಓದಿರಿ: ಮೈಸೂರು ದಸರಾದಲ್ಲಿ ಮುದ್ದಿನ ಗೋಪಿಗೆ ಸುಧಾಮೂರ್ತಿ ಮುತ್ತಿನ ಕ್ಷಣ
ಕ್ಯಾಬ್ ಗಳನ್ನು ಸಾಕುಪ್ರಾಣಿಗಳಿಗೆ ಸ್ನೇಹಪರ ಸ್ಥಳವನ್ನಾಗಿ ಮಾಡಲು ದೇಶಾದ್ಯಂತ ಸಾಕುಪ್ರಾಣಿಗಳು ಮತ್ತು ಪ್ರಾಣಿ ಪ್ರಿಯರಿಂದ ಬಹುಕಾಲದಿಂದ ಬೇಡಿಕೆ ಇದ್ದೇ ಇತ್ತು. ಅನೇಕ ಜನರು ತಮ್ಮ ಸಾಕುಪ್ರಾಣಿಗಳನ್ನು ಮನೆಯಲ್ಲಿ ಬಿಟ್ಟು ಹೋಗುವಂತಹ ಸನ್ನಿವೇಶಗಳೂ ಎದುರಾದವು. ನಿರಂತರ ಬೇಡಿಕೆ ಬಳಿಕ ಈಗ ಉಬರ್ ಈ ಸೇವೆಯನ್ನು ಬೆಂಗಳೂರಿನಲ್ಲಿ ಆರಂಭಿಸಿದೆ. ಈ ಹೊಸ ಸೌಲಭ್ಯವು ಮಾಲೀಕರು ತಮ್ಮ ಯೋಗಕ್ಷೇಮದ ಬಗ್ಗೆ ಚಿಂತಿಸದೆ ಹೊರಗೆ ಹೋಗುವಾಗ ಪ್ರಾಣಿಗಳು / ಪಕ್ಷಿಗಳನ್ನು ತಮ್ಮೊಂದಿಗೆ ಕರೆದೊಯ್ಯಲು ಅನುವು ಮಾಡಿಕೊಡಲಿದೆ.
ಉಬರ್ ಇಂಡಿಯಾದ ರೈಡರ್ ವರ್ಟಿಕಲ್ಸ್ ಮುಖ್ಯಸ್ಥೆ ಶ್ವೇತಾ ಮಂತ್ರಿ ಹೇಳುವಂತೆ, "ಸಾಕುಪ್ರಾಣಿಗಳು ತಮ್ಮ ಕುಟುಂಬಗಳಿಗೆ ಎಷ್ಟು ಮುಖ್ಯ ಎಂಬುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಅವುಗಳನ್ನು ನಮ್ಮ ವಿಹಾರಗಳಲ್ಲಿ ಸೇರಿಸುವುದು ಅತ್ಯಗತ್ಯ. ಸಾಕುಪ್ರಾಣಿ ಮಾಲೀಕರು ಮತ್ತು ಅವರ ಸಹಚರರಿಗೆ ಪ್ರಯಾಣವನ್ನು ಹೆಚ್ಚು ಪ್ರವೇಶಿಸಲು ಮತ್ತು ಅನುಕೂಲಕರವಾಗಿಸಲು ಉಬರ್ ಪೇಟ್ ಪ್ರಯತ್ನಿಸಲಿದ್ದು. ಈಗಾಗಲೇ ಸೇವೆಯನ್ನು ಶುರು ಮಾಡಲಾಗಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆಯೂ ಬಂದಿದೆ ಎನ್ನುತ್ತಾರೆ.
ಸಾಕು ಪೋಷಕರನ್ನು ಗಮನದಲ್ಲಿಟ್ಟುಕೊಂಡು ಹೊಸ ಸೇವೆಯನ್ನು ವಿನ್ಯಾಸಗೊಳಿಸಲಾಗಿದೆ. ಸಾಕುಪ್ರಾಣಿ ಪೋಷಕರಿಗೆ ತಡೆರಹಿತ ಅನುಭವವನ್ನು ಒದಗಿಸುವುದು ನಮ್ಮ ಗುರಿಯಾಗಿದೆ. ಆದರೆ ಚಾಲಕರಿಗೆ ಹೆಚ್ಚುವರಿ ಗಳಿಕೆಯ ಅವಕಾಶಗಳನ್ನು ಇದು ಸೃಷ್ಟಿಸಲಿದೆ, ಪ್ರತಿಯೊಬ್ಬರೂ ತಮ್ಮ ಪ್ರೀತಿಯ ಸಾಕುಪ್ರಾಣಿಗಳನ್ನು ತಮ್ಮ ಪ್ರಯಾಣದಲ್ಲಿ ಕರೆದೊಯ್ಯಲು ಹೆಚ್ಚುವರಿಯಾಗಿ ದರ ನೀಡಬೇಕಾಗುತ್ತದೆ. ಅದು ಅವರು ನಿಗದಿಪಡಿಸುವ ಸ್ಥಳ ಹಾಗೂ ಕಾರಿನ ಮೇಲೆ ಅವಲಂಬನೆಯಾಗಿರಲಿದೆ.
ಈ ಸೇವೆಯು ಬೆಂಗಳೂರಿನ ಪ್ರಯಾಣಿಕರಿಗೆ ಉಬರ್ ಅಪ್ಲಿಕೇಶನ್ನಲ್ಲಿ ಮೀಸಲು-ಮಾತ್ರ ಆಯ್ಕೆಯಾಗಿ ಪ್ರತ್ಯೇಕವಾಗಿ ಲಭ್ಯವಿರುತ್ತದೆ. ಸವಾರರು ತಮ್ಮ ಪ್ರಯಾಣವನ್ನು 60 ನಿಮಿಷಗಳಿಂದ 90 ದಿನಗಳವರೆಗೆ ಮುಂಚಿತವಾಗಿ ಕಾಯ್ದಿರಿಸಬಹುದು ಎಂದು ಕಂಪನಿ ತಿಳಿಸಿದೆ.
ಸಾಕುಪ್ರಾಣಿ ಪೋಷಕರಿಗಾಗಿ ಕ್ಯಾಬ್ ಅಗ್ರಿಗೇಟರ್ ಇಂತಹ ಸೇವೆಗಳನ್ನು ಪ್ರಾರಂಭಿಸಿರುವುದು ಬೆಂಗಳೂರಿನಲ್ಲಿ ಇದೇ ಮೊದಲು. ಮಾಲೀಕರು ತಮ್ಮ ಸಾಕುಪ್ರಾಣಿಗಳನ್ನು ಕಾರಿನೊಳಗೆ ಅನುಮತಿಸುವಂತೆ ಚಾಲಕರನ್ನು ಕೋರಬೇಕಾಗಿತ್ತು. ಹೆಚ್ಚಿನವರು ನಮ್ಮ ಕೋರಿಕೆಗಳನ್ನು ನಿರಾಕರಿಸುತ್ತಿದ್ದರು. ಇದರಿಂದಾಗಿ ಸಾಕು ಪ್ರಾಣಿಗಳ ಮಾಲೀಕರಿಗೆ ಕಷ್ಟವಾಗುತ್ತಿತ್ತು. ಇಂತಹ ಹಲವು ಅನುಭವಗಳೂ ಆಗಿವೆ. ಈಗ ಹೊಸ ಸೇವೆಗಳಿಂದ ಕೊಂಚ ತಲೆನೋವು ಸಾಕುಪ್ರಾಣಿ ಪ್ರಿಯರಿಗೆ ಕಡಿಮೆಯಾಗಲಿದೆ.