ಇನ್ಮುಂದೆ ನಿಮ್ಮ ಶ್ವಾನಕ್ಕೂ ಆನ್‌ಲೈನ್‌ನಲ್ಲಿ ರೈಲು ಟಿಕೆಟ್ ಬುಕ್ ಮಾಡಬಹುದು; ಅದು ಹೇಗೆ ಅಂತೀರಾ
ಕನ್ನಡ ಸುದ್ದಿ  /  ಜೀವನಶೈಲಿ  /  ಇನ್ಮುಂದೆ ನಿಮ್ಮ ಶ್ವಾನಕ್ಕೂ ಆನ್‌ಲೈನ್‌ನಲ್ಲಿ ರೈಲು ಟಿಕೆಟ್ ಬುಕ್ ಮಾಡಬಹುದು; ಅದು ಹೇಗೆ ಅಂತೀರಾ

ಇನ್ಮುಂದೆ ನಿಮ್ಮ ಶ್ವಾನಕ್ಕೂ ಆನ್‌ಲೈನ್‌ನಲ್ಲಿ ರೈಲು ಟಿಕೆಟ್ ಬುಕ್ ಮಾಡಬಹುದು; ಅದು ಹೇಗೆ ಅಂತೀರಾ

ರೈಲ್ವೆ ಇಲಾಖೆ ಎಸಿ-1 ವಿಭಾಗದ ರೈಲುಗಳಲ್ಲಿ ಸಾಕುಪ್ರಾಣಿಗಳಿಗೆ ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಸೌಲಭ್ಯವನ್ನು ಪ್ರಸ್ತಾಪಿಸಿದೆ. ಟಿಟಿಐ ಸ್ಥಳದಲ್ಲೇ ಟಿಕೆಟ್ ನೀಡುವಂತ ಅಧಿಕಾರವೂ ಈ ಪ್ರಸ್ತಾಪದಲ್ಲಿದೆ.

ಸಾಕುಪ್ರಾಣಿಗಳನ್ನು ರೈಲಿನಲ್ಲಿ ಕರೆದೊಯ್ಯಲು ಆನ್‌ಲೈನ್ ಮೂಲಕ ಟಿಕೆಟ್ ಬುಕಿಂಗ್ ಮಾಡುವಂತ ಹೊಸ ಯೋಜನೆಯನ್ನು ರೈಲ್ವೆ ಇಲಾಖೆ ಪ್ರಸ್ತಾಪಿಸಿದೆ.
ಸಾಕುಪ್ರಾಣಿಗಳನ್ನು ರೈಲಿನಲ್ಲಿ ಕರೆದೊಯ್ಯಲು ಆನ್‌ಲೈನ್ ಮೂಲಕ ಟಿಕೆಟ್ ಬುಕಿಂಗ್ ಮಾಡುವಂತ ಹೊಸ ಯೋಜನೆಯನ್ನು ರೈಲ್ವೆ ಇಲಾಖೆ ಪ್ರಸ್ತಾಪಿಸಿದೆ.

ನೀವೇನಾದರೂ ಸಾಕುಪ್ರಾಣಿಗಳನ್ನು ರೈಲಿನಲ್ಲಿ ನಿಮ್ಮೊಂದಿಗೆ ಕರೆದೊಯ್ಯಲು ಪ್ಲಾನ್ ಮಾಡಿದ್ದರೆ ಭಾರತೀಯ ರೈಲ್ವೆ ಸಚಿವಾಲಯ ಸಿಹಿ ಸುದ್ದಿ ನೀಡಿದೆ. ಈವರೆಗೆ ಸಾಕುಪ್ರಾಣಿಗಳಿಗೆ ರೈಲು ಟಿಕೆಟ್ ಬುಕ್ ಮಾಡಲು ಸಾಕಷ್ಟು ಸರ್ಕಸ್ ಮಾಡಿರುತ್ತೀರಿ. ಆದರೆ ಇನ್ಮುಂದೆ ಅಂತಹ ಸಮಸ್ಯೆಗಳಿಗೆ ಬ್ರೇಕ್ ಹಾಕಲು ರೈಲ್ವೆ ಮುಂದಾಗಿದೆ. ಅದೇನೆಂದರೆ ಸಾಕುಪ್ರಾಣಿಗಳನ್ನು ರೈಲ್ವೆನಲ್ಲಿ ಕರೆದೊಯ್ಯಲು ಆನ್‌ಲೈನ್ ಮೂಲಕ ಟಿಕೆಟ್ ಬುಕ್ ಮಾಡಿಕೊಳ್ಳುವಂತ ಯೋಜನೆಯನ್ನು ಜಾರಿಗೆ ತರಲು ರೈಲ್ವೆ ಸಚಿವಾಲಯ ಮುಂದಾಗಿದೆ. ಈ ಹೊಸ ಪ್ರಸ್ತಾಪ ಜಾರಿಯಾದರೆ ನಿಮ್ಮ ನೆಚ್ಚಿನ ಬೆಕ್ಕು, ಶ್ವಾನಗಳನ್ನು ನಿಮ್ಮೊಂದಿಗೆ ರೈಲಿನಲ್ಲಿ ಕರೆದೊಯ್ಯಬಹುದು. ಇದಕ್ಕಾಗಿ ನೀವು ಆನ್‌ಲೈನ್ ಮೂಲಕ ಟಿಕೆಟ್ ಬುಕ್ ಮಾಡಿಕೊಳ್ಳಲು ಅನುಮತಿ ನೀಡಲಾಗುತ್ತದೆ.

ಎಸಿ-1 ಕ್ಲಾಸ್ ರೈಲುಗಳಲ್ಲಿ ಸಾಕುಪ್ರಾಣಿಕಗಳಿಗೆ ಟಿಕೆಟ್, ಕ್ಯಾಬಿನ್‌ ಆನ್‌ಲೈನ್‌ನಲ್ಲಿ ಬುಕ್ ಮಾಡಲು ಅವಕಾಶ ನೀಡಬೇಕೆಂದು ಪ್ರಾಣಿಪ್ರಿಯರು ಒತ್ತಾಯಿಸಿದ್ದರು. ಈ ಮೊದಲು ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿರುವ ಪಾರ್ಸೆಲ್ ಬುಕಿಂಗ್ ಕೌಂಟರ್‌ಗಳಿಗೆ ತೆರಳಿ ಬೆಕ್ಕು ಅಥವಾ ಶ್ವಾನಗಳಿಗೆ ಟಿಕೆಟ್ ಬುಕ್ ಮಾಡಬೇಕಾಗಿತ್ತು. ಎರಡನೇ ದರ್ಜೆಯ ಲಗೇಜ್, ಬ್ರೇಕ್ ವ್ಯಾನ್ ಪೆಟ್ಟಿಗೆಯಲ್ಲಿ ಸಾಗಿಸಲು ಅನುಮತಿ ಇರಲಿಲ್ಲ. ಸದ್ಯ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಹಾಗೂ ಸಾಕುಪ್ರಾಣಿ ಪ್ರಿಯರ ಮನವಿಗೆ ಸ್ಪಂದಿಸಿರುವ ರೈಲ್ವೆ ಸಚಿವಾಲಯ ಸಾಕು ಪ್ರಾಣಿಗಳಿಗೆ ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡುವ ಯೋಜನೆಯನ್ನು ಪ್ರಾರಂಭಿಸಲು ಚಿಂತನೆ ನಡೆಸಿದೆ. ಪ್ರಯಾಣಿಕರು ಸಾಕು ಪ್ರಾಣಿಗಳೊಂದಿಗೆ ಪ್ರಯಾಣಿಸಲು ಹೆಚ್ಚು ಅನುಕೂಲಕರ ಮತ್ತು ಆರಾಮದಾಯಕವಾಗಿಸುತ್ತದೆ ಎಂದು ಸಚಿವಾಲಯ ಹೇಳಿದೆ.

ರೈಲಿನ ಮೊದಲ ಚಾರ್ಟ್ ಸಿದ್ಧಪಡಿಸಿದ ನಂತರ ಪ್ರಯಾಣಿಕರು ತಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಸಾಕುಪ್ರಾಣಿಗಳಿಗಾಗಿ ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲೊಂದು ನಿಮಯವಿದೆ. ಅದೇನೆಂದರೆ ಪ್ರಯಾಣಿಕರ ಟಿಕೆಟ್ ಕನ್ಫರ್ಮ್ ಆದರೆ ಮಾತ್ರ ಅವರ ಸಾಕುಪ್ರಾಣಿಯ ಟಿಕೆಟ್ ಬುಕ್ ಆಗಲಿದೆ.

ಸೆಕ್ಯುರಿಟಿಗಳಿಗೆ ಮೀಸಲಾದ ಎಸ್‌ಎಲ್‌ಆರ್ ಕೋಚ್‌ನಲ್ಲಿ ಪ್ರಾಣಿಗಳನ್ನು ಇರಿಸಲಾಗುತ್ತದೆ. ರೈಲು ನಿಲುಗಡೆಯ ಸಮಯದಲ್ಲಿ ಪ್ರಯಾಣಿಕ ಕಂ ಮಾಲಿಕ ತಮ್ಮ ಶ್ವಾನ ಅಥವಾ ಬೆಕ್ಕಿಗೆ ಆಹಾರವನ್ನು ಒದಗಿಸಬಹುದು. ಪ್ರಾಣಿಗಳಿಗೆ ಆನ್‌ಲೈನ್ ಟಿಕೆಟ್ ಬುಕ್ ಮಾಡಲು ರೈಲ್ವೆ ಸಚಿವಾಲಯ ಕೆಲವು ಷರತ್ತುಗಳನ್ನು ವಿಧಿಸಿದೆ. ಪ್ರಯಾಣಿಕರ ಟಿಕೆಟ್ ದೃಢಪಟ್ಟರೆ ಮಾತ್ರ ಅವರ ಸಾಕುಪ್ರಾಣಿಯ ಟಿಕೆಟ್ ಕನ್ಫರ್ಮ್ ಆಗುತ್ತದೆ. ಒಂದು ವೇಳೆ ಮಾಲಿಕನ ಟಿಕೆಟ್ ದೃಢಪಡಿದ್ದರೆ ಶ್ವಾನಕ್ಕೆ ಬುಕ್ ಮಾಡಿದ್ದ ಟಿಕೆಟ್ ರದ್ದಾಗಲಿದೆ. ಜೊತೆಗೆ ಟಿಕೆಟ್‌ನ ಹಣವನ್ನು ಹಿಂತಿರುಗಿಸಲಾಗುವುದಿಲ್ಲ. ರೈಲು ಸೇವೆ ರದ್ದಾದರೆ ಇಲ್ಲವೇ ಮೂರು ಗಂಟೆಗಳಿಗಿಂತ ತಡವಾದಾಗಲೂ ಪ್ರಾಣಿಗಳಿಗೆ ಬುಕ್ ಮಾಡಲಾದ ಟಿಕೆಟ್ ಹಣವನ್ನು ಮರುಪಾವತಿ ಮಾಡುವುದಿಲ್ಲ. ಆದರೆ ಪ್ರಯಾಣಿಕರ ಟಿಕೆಟ್ ಮೊತ್ತವನ್ನು ಹಿಂತಿರುಗಿಸಲಾಗುತ್ತದೆ.

ಸಾಕುಪ್ರಾಣಿಗಳಿಗೆ ಆನ್‌ಲೈನ್ ಟಿಕೆಟ್ ಬುಕ್ ಮಾಡುವ ಮುನ್ನ ಈ ಅಂಶಗಳನ್ನ ಗಮನಿಸಿ

ಸಾಕು ಪ್ರಾಣಿಯೊಂದಿಗೆ ರೈಲಿನಲ್ಲಿ ಪ್ರಯಾಣಿಸುವವರು ನೀವಾಗಿದ್ದರೆ ಪ್ರಮುಖವಾಗಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯವೆಂದರೆ ಐಆರ್‌ಸಿಟಿಸಿಯಿಂದ ಆನ್‌ಲೈನ್ ಟಿಕೆಟ್ ಹೊಂದಿದ್ದರೂ ಬುಕಿಂಗ್‌ಗಾಗಿ ರೈಲು ಹೊರಡುವ ಕನಿಷ್ಠ 3 ಗಂಟೆಗಳಿಗೂ ಮೊದಲು ತಮ್ಮ ನಾಯಿಯನ್ನು ಲಗೇಜ್ ಕಚೇರಿಗೆ ತರಬೇಕು.

ಎಸಿ ಫಸ್ಟ್ ಕ್ಲಾಸ್ ಅಥವಾ ಫಸ್ಟ್ ಕ್ಲಾಸ್‌ನಲ್ಲಿ ನಾಯಿಯನ್ನು ತಮ್ಮೊಂದಿಗೆ ಕರೆದೊಯ್ದರೆ ಬ್ಯಾಗೇಜ್ ಶುಲ್ಕವನ್ನು ಪಾವತಿಸಬೇಕು. ಎಸಿ 2 ಟೈರ್, ಎಸಿ 3 ಟೈರ್, ಎಸಿ ಚೇರ್ ಕಾರ್, ಸ್ಲೀಪರ್ ಕ್ಲಾಸ್ ಅಥವಾ ಸೆಕೆಂಡ್ ಕ್ಲಾಸ್ ಕಂಪಾರ್ಪ್‌ಮೆಂಟ್‌ಗಳಲ್ಲಿ ಒಬ್ಬರು ತಮ್ಮ ನಾಯಿಯನ್ನು ಒಯ್ಯುವಂತಿಲ್ಲ. ಇತರೆ ಪ್ರಯಾಣಿಕರು ದೂರು ನೀಡಿದರೆ ನಾಯಿಯನ್ನು ಹಿಂತಿರುಗಿಸದೆ ಸಿಬ್ಬಂದಿ ವ್ಯಾನ್‌ಗೆ ಸ್ಥಳಾಂತರಿಸುತ್ತಾರೆ. ಆನ್‌ಲೈನ್ ಬುಕಿಂಗ್ ಸಮಯದಲ್ಲಿ ನಿಮ್ಮ ನಾಯಿಯ ತಳಿ, ಬಣ್ಣ, ಲಿಂಗವನ್ನು ನಿರ್ದಿಷ್ಟಪಡಿಸುವ ಪಶುವೈದ್ಯರ ಪ್ರಮಾಣವನ್ನು ಹೊಂದಿರಬೇಕಾಗುತ್ತದೆ.

Whats_app_banner