ಬೆಂಗಳೂರಿಗರಿಗೆ ನೀರು ದರ ಹೊರೆ ಖಚಿತ, ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವ ಜಲ ಮಂಡಳಿ, ವಿಶ್ವಬ್ಯಾಂಕ್ ಸಾಲ ನೀಡಲು ದರ ಏರಿಕೆ ಷರತ್ತು
Nov 28, 2024 12:04 AM IST
ಬೆಂಗಳೂರು ಜಲ ಮಂಡಳಿಯು ಸದ್ಯದಲ್ಲೇ ನೀರಿನ ದರವನ್ನು ಏರಿಸುವುದು ಖಚಿತವಾಗಿದೆ.
- Bangalore Water Tarif Hike: ಬೆಂಗಳೂರು ಜಲಮಂಡಳಿ ನೀರಿನ ದರ ಏರಿಸುವ ಸಂಬಂಧ ಚರ್ಚಿಸುತ್ತಲೇ ಬಂದಿದೆ. ಈವರೆಗೂ ಅಂತಿಮ ತೀರ್ಮಾನವಾಗಿಲ್ಲ. ಕಾವೇರಿ ಯೋಜನೆಗಾಗಿ ವಿಶ್ವ ಬ್ಯಾಂಕ್ ಸಾಲ ಪಡೆಯಲು ದರ ಏರಿಕೆಯೂ ಒಂದು ಷರತ್ತು ಎನ್ನುವ ಕಾರಣದಿಂದ ಸದ್ಯದಲ್ಲೇ ನಿರ್ಧಾರ ಪ್ರಕಟಿಸುವ ಸಾಧ್ಯತೆ ಹೆಚ್ಚಿದೆ.
- ವರದಿ: ಎಚ್.ಮಾರುತಿ. ಬೆಂಗಳೂರು
Bangalore Water Tarif Hike:ಬೆಂಗಳೂರಿನ ಮೂಲಭೂತ ಸೌಕರ್ಯಗಳಿಗೆ ವಿಶ್ವ ಬ್ಯಾಂಕ್ 3,500 ಕೋಟಿ ರೂ.ಗಳ ಸಾಲವನ್ನು ನೀಡುವ ಮುನ್ಸೂಚನೆ ನೀಡಿದ್ದು, ಬೆಂಗಳೂರಿನಲ್ಲಿ ನೀರಿನ ದರ ಹೆಚ್ಚಳ ಮಾಡುವುದು ಅನಿವಾರ್ಯ ಎಂದು ಹೇಳಲಾಗುತ್ತಿದೆ. ಪ್ರವಾಹ, ರಾಜಕಾಲುವೆ ಮತ್ತು ಚರಂಡಿ ನಿರ್ಮಾಣ, ನೀರು ಸರಬರಾಜು ವ್ಯವಸ್ಥೆ ಸುಧಾರಣೆ ಮತ್ತಿತರ ಮೂಲಭೂತ ಸೌಕರ್ಯಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರ ವಿಶ್ವಬ್ಯಾಂಕ್ ನಿಂದ 426 ಮಿಲಿಯನ್ ಡಾಲರ್ (ರೂ.3,500 ಕೋಟಿ ರೂ.) ಸಾಲವನ್ನು ಕೇಳಿತ್ತು. ವಿಶ್ವಬ್ಯಾಂಕ್ ಈ ಸಾಲವನ್ನು ನೀಡಬೇಕಾದರೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೀರಿನ ದರ ಹೆಚ್ಚಿಸಬೇಕೆಂಬ ಷರತ್ತು ವಿಧಿಸಿದೆ. ಈ ಕಾರಣದಿಂದಲೇ ಜಲ ಮಂಡಳಿ ದರ ಏರಿಕೆ ಸದ್ಯವೇ ಕೈಗೊಳ್ಳಲಿದ್ದು. ಎಷ್ಟು ಎನ್ನುವ ತೀರ್ಮಾನವನ್ನು ಸರ್ಕಾರದ ಹಂತದಲ್ಲಿ ಪ್ರಕಟಿಸಬಹುದು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಹಾಗೂ ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ (ಬಿಡಬ್ಲ್ಯುಎಸ್ ಎಸ್ ಬಿ) ವತಿಯಿಂದ ಕರ್ನಾಟಕ ನೀರು ಭದ್ರತೆ ಮತ್ತು ಸ್ಥಿತಿಸ್ಥಾಪಕತ್ವ ಕಾರ್ಯಕ್ರಮವನ್ನು ಜಾರಿಗೊಳಿಸುತ್ತಿದೆ. ಇದಕ್ಕಾಗಿ ಸರ್ಕಾರ ವಿಶ್ವಬ್ಯಾಂಕ್ ನಲ್ಲಿ ಸಾಲವನ್ನು ಕೇಳಿತ್ತು.
ವಿಶ್ವ ಬ್ಯಾಂಕ್ ಸೂಚನೆ ಏನು
ಕಳೆದ 10 ವರ್ಷಗಳಿಂದ ನೀರಿನ ದರ ಪರಿಷ್ಕರಣೆಯಾಗಿಲ್ಲ. ನೀರಿನ ಬಿಲ್ ನ ಶೇ.70ರಷ್ಟು ಹಣವನ್ನು ನೀರು ಸರಬರಾಜಿನ ಬಿಲ್ ಗೆ ಪಾವತಿ ಮಾಡಲಾಗುತ್ತಿದೆ. ಸಾಲ ಮಾಡುವಷ್ಟು ಅರ್ಹತೆಗಾದರೂ ಆದಾಯ ಇರಬೇಕು ಎಂದು ವಿಶ್ವಬ್ಯಾಂಕ್ ಅಭಿಪ್ರಾಯಪಟ್ಟಿದೆ.
ನೀರಿನ ದರ ಹೆಚ್ಚಳ ಹಣದುಬ್ಬರ ಅಥವಾ ದಶಕದ ಅವಧಿಗೆ ವಿದ್ಯುತ್ ಬಿಲ್ ಗೆ ಹೊಂದಾಣಿಕೆ ಮಾಡುವ ಅವಶ್ಯಕತೆ ಇಲ್ಲ ಎಂದು ವಿಶ್ವಬ್ಯಾಂಕ್ ಸರ್ಕಾರಕ್ಕೆ ಸಲಹೆ ನೀಡಿದೆ. ಜಲ ಮಂಡಳಿ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವುದರಿಂದ ನೀರಿನ ದರ ಹೆಚ್ಚಳ ಅನಿವಾರ್ಯ ಎಂದು ಎರಡು ಮೂರು ಬಾರಿ ಬೆಂಗಳೂರಿನ ಉಸ್ತುವಾರಿ ವಹಿಸಿಕೊಂಡಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಸ್ತಾಪಿಸಿದ್ದರು. ಬೆಂಗಳೂರಿನಲ್ಲಿ ಶೇ.27 ರಷ್ಟು ನೀರು ಸರಬರಾಜು ಲೆಕ್ಕಕ್ಕೆ ಸಿಗದೆ ಪೋಲಾಗುತ್ತಿದೆ. ಈ ನೀರು ಕಳವಾಗುತ್ತಿರಬಹುದು ಅಥವಾ ಪೋಲಾಗುತ್ತಿರಬಹುದು ಎಂದು ವಿಶ್ವಬ್ಯಾಂಕ್ ಅಭಿಪ್ರಾಯಪಟ್ಟಿದೆ. ಜೊತೆಗೆ ಈ ನೀರನ್ನು ಆದಾಯರಹಿತ ನೀರು ಎಂದು ಕರೆದಿದೆ.
ಸಾಲದ ಬೇಡಿಕೆ ಎಷ್ಟಿದೆ
ಈ ಯೋಜನೆಯ ಅವಧಿ ಐದು ವರ್ಷಗಳಾಗಿದ್ದು(2026-31) ಅಂದಾಜು ವೆಚ್ಚ 606 ಮಿಲಿಯನ್ ಡಾಲರ್ (5000 ಕೋಟಿ ರೂ.) ಗಳಾಗಿದ್ದು, ರಾಜ್ಯ ಸರ್ಕಾರ 180 ಮಿಲಿಯನ್ ಡಾಲರ್ ಎಂದು ಪಾಲು ನೀಡಲಿದೆ. ವಿಶ್ವಬ್ಯಾಂಕ್ 426 ಮಿಲಿಯನ್ ಡಾಲರ್ ಅನ್ನು ಸಾಲದ ರೂಪದಲ್ಲಿ ನೀಡಲಿದೆ.
ಈ ಉದ್ದೇಶಿತ ಯೋಜನೆಯ ಮೂಲಕ ಜಲ ಮಂಡಳಿ 600 ಕೋಟಿ ರೂ. ವೆಚ್ಚದಲ್ಲಿ 9 ಕೊಳಚೆ ನೀರು ಶುದ್ದೀಕರಣ ಘಟಕಗಳ ಸ್ಥಾಪನೆ; 400 ಕೋಟಿ ರೂ.ಗಳ ವೆಚ್ಚದಲ್ಲಿ ಸರ್ವರ್ ನೆಟ್ ವರ್ಕ್ ಲೈನ್ ನಿರ್ಮಿಸಲಿದೆ. ಬಿಬಿಎಂಪಿ 1,600 ಕೋಟಿ ರೂ. ವೆಚ್ಚದಲ್ಲಿ ರಾಜಕಾಲುವೆಗೆ ತಡೆಗೋಡೆ ನಿರ್ಮಾಣ ಹಾಗೂ 400 ಕೋಟಿ ರೂ ವೆಚ್ಚದಲ್ಲಿ ರಾಜಕಾಲುವೆ ನಿರ್ಮಾಣ ಗೋಡೆ ನಿರ್ಮಾಣ ಮಾಡಲಿದೆ.
ಉಳಿದ ಅನುದಾನವನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ ಮತ್ತು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಹಂಚಿಕೆಯಾಗಲಿದೆ. ಕಂದಾಯ ಇಲಾಖೆ ಈ ಯೋಜನೆಯ ನೋಡಲ್ ಏಜೆನ್ಸಿಯಾಗಿ ಕರ್ತವ್ಯ ನಿರ್ವಹಿಸಲಿದೆ.
ಬಿಬಿಎಂಪಿ ಮೇಲೆ ಆರೋಪ
ನಗರದಲ್ಲಿ 5000 ಕಿಮೀ ಉದ್ದದ ಹಳೆಯದಾದ ಪೈಪ್ ಗಳನ್ನು ಬದಲಾಯಿಸಬೇಕಿದೆಯಾದರೂ ಇದಕ್ಕೆ ಹಣಕಾಸು ನೆರವು ಇರುವುದಿಲ್ಲ ಎಂದೂ ತಿಳಿಸಿದೆ. ಆದರೆ ವಿಶ್ವಬ್ಯಾಂಕ್ ನಿಂದ ಸಾಲ ಪಡೆಯುವುದನ್ನು ಅನೇಕ ಮಾಹಿತಿ ಹಕ್ಕು ಕಾರ್ಯಕರ್ತರು ವಿರೋಧಿಸಿದ್ದಾರೆ. ಕಳಪೆ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ವ್ಯಾಪಕ ಭ್ರಷ್ಟಾಚಾರದಲ್ಲಿ ನಿರತವಾಗಿರುವ ಬಿಬಿಎಂಪಿಯಲ್ಲಿ 1,500 ಕೋಟಿ ರೂ.ಗಳ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ.
ವಿಶ್ವಬ್ಯಾಂಕ್ ನ ಪ್ರಾಂತೀಯ ನಿರ್ದೇಶಕರು ಮತ್ತು ಆರ್ಥಿಕ ವ್ಯವಹಾರಗಳ ಹೆಚ್ಚುವರಿ ಕಾರ್ಯದರ್ಶಿ ಮನಿಶಾ ಸಿನ್ಹಾ ಅವರು ಬಿಬಿಎಂಪಿ ಮತ್ತು ಜಲಮಂಡಳಿ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದು, ಸಾಲ ನೀಡುವ ಪ್ರಸ್ತಾವನೆಯನ್ನು ಕೈಬಿಡಬೇಕು ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಅವರಿಗೆ ಪತ್ರ ಬರೆದಿದ್ದಾರೆ. ವಿಶ್ವಬ್ಯಾಂಕ್ ಸಾಲ ನೀಡುವುದು ತೀರ್ಮಾನವಾಗಿಲ್ಲವಾದರೂ ಬೆಂಗಳೂರಿನ ನಾಗರೀಕರು ನೀರಿನ ದರ ಹೆಚ್ಚಳದ ಹೊರೆಯನ್ನು ಹೊರಲು ಸಿದ್ದರಾಗಿರಬೇಕು ಎನ್ನುವುದಂತೂ ಖಚಿತವಾಗಿದೆ.
(ವರದಿ: ಎಚ್.ಮಾರುತಿ. ಬೆಂಗಳೂರು)