ಬೆಂಗಳೂರಲ್ಲಿ 4284 ಕೋಟಿ ರೂ ಆಸ್ತಿ ತೆರಿಗೆ ಸಂಗ್ರಹಿಸಿದ ಬಿಬಿಎಂಪಿ, ಮಾರ್ಚ್ ಅಂತ್ಯಕ್ಕೆ 5200 ಕೋಟಿ ರೂಪಾಯಿ ಸಂಗ್ರಹದ ಗುರಿ
Dec 02, 2024 11:34 AM IST
ಬೆಂಗಳೂರಲ್ಲಿ 4284 ಕೋಟಿ ರೂ ಆಸ್ತಿ ತೆರಿಗೆ ಸಂಗ್ರಹಿಸಿದ ಬಿಬಿಎಂಪಿ, ಮಾರ್ಚ್ ಅಂತ್ಯಕ್ಕೆ 5200 ಕೋಟಿ ರೂಪಾಯಿ ಸಂಗ್ರಹದ ಗುರಿ ಇಟ್ಟುಕೊಂಡಿದೆ. (ಸಾಂಕೇತಿಕ ಚಿತ್ರ)
BBMP Property Tax: ಬೆಂಗಳೂರಿನಲ್ಲಿ ಒನ್ ಟೈಮ್ ಸೆಟಲ್‌ಮೆಂಟ್ ಉಪಕ್ರಮದ ಮೂಲಕ ನವೆಂಬರ್ 30ರ ಹೊತ್ತಿಗೆ 4284 ಕೋಟಿ ರೂಪಾಯಿ ಆಸ್ತಿ ತೆರಿಗೆಯನ್ನು ಬಿಬಿಎಂಪಿ ಸಂಗ್ರಹಿಸಿದೆ. ದಂಡ ಮತ್ತು ಬಡ್ಡಿ ಸಹಿತ ಆಸ್ತಿ ತೆರಿಗೆ ವಸೂಲಿ ಶುರುವಾಗಿದ್ದು, ಮಾರ್ಚ್ ಅಂತ್ಯಕ್ಕೆ 5200 ಕೋಟಿ ರೂಪಾಯಿ ಸಂಗ್ರಹದ ಗುರಿ ಇಟ್ಟುಕೊಂಡಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)
BBMP Property Tax: ಒಂದು ಬಾರಿ ಪರಿಹಾರ ಯೋಜನೆ (ಒಟಿಎಸ್) ನವಂಬರ್ 30ಕ್ಕೆ ಅಂತ್ಯಗೊಂಡಿದೆ. ಸುಮಾರು 4,284 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ತಿಳಿಸಿದ್ದಾರೆ. ಇದು ಪಾಲಿಕೆಯ ಈವರೆಗಿನ ಅತ್ಯಧಿಕ ಸಂಗ್ರಹವಾಗಿದೆ. ಮಹದೇವಪುರ ವಲಯದಲ್ಲಿ ಅತಿ ಹೆಚ್ಚು ಅಂದರೆ 1148.35 ಕೋಟಿ ರೂ ತೆರಿಗೆ ಸಂಗ್ರಹವಾಗಿದೆ. ಪೂರ್ವ ವಲಯದಲ್ಲಿ 710 ಕೋಟಿ ರೂ. ಮತ್ತು ಕೇಂದ್ರ ಕಚೇರಿಯಲ್ಲಿ 36 ಕೋಟಿ ರೂ. ಸಂಗ್ರಹವಾಗಿದೆ.
ಆಸ್ತಿ ತೆರಿಗೆ ಸಂಗ್ರಹಕ್ಕೆ ವರದಾನವಾಯಿತು ಬಿಬಿಎಂಪಿಯ ಒಟಿಎಸ್ ಉಪಕ್ರಮ
ಸುಸ್ತಿದಾರರ ಅನುಕೂಲಕ್ಕಾಗಿ ಒಟಿಎಸ್ (ಒನ್ ಟೈಮ್ ಸೆಟ್ಲ್ ಮೆಂಟ್) ಯೋಜನೆಯನ್ನು 2024ರ ಫೆಬ್ರವರಿಯಲ್ಲಿ ಜಾರಿಗೊಳಿಸಲಾಗಿತ್ತು. ಈ ಮೂಲಕ ತೆರಿಗೆದಾರರಿಗೆ ಬಾಕಿ ಮೇಲಿನ ಬಡ್ಡಿ ಚಕ್ರಬಡ್ಡಿ ಮತ್ತು ದಂಡದಲ್ಲಿ ಶೇ.50ರಷ್ಟು ರಿಯಾಯಿತಿ ನೀಡುವ ಯೋಜನೆ ಇದಾಗಿತ್ತು. ಜುಲೈ 31ರವರೆಗೆ ಕಾಲಾವಕಾಶ ನೀಡಲಾಗಿತ್ತು. ಮತ್ತಷ್ಟು ಕಾಲಾವಕಾಶ ಬೇಕು ಎಂದು ಸಾರ್ವಜನಿಕರು ಸಂಘ ಸಂಸ್ಥೆಗಳು ಮನವಿ ಸಲ್ಲಿಸಿದ್ದವು. ಈ ಮನವಿಯನ್ನು ಪುರಸ್ಕರಿಸಿದ ಬಿಬಿಎಮಪಿ ಸೆಪ್ಟಂಬರ್ 31ರವರೆಗೆ ಕಾಲಾವಕಾಶ ವಿಸ್ತರಿಸಿತ್ತು. ಮತ್ತೂ ಬೇಡಿಕೆ ಬಂದ ನಂತರ ನವಂಬರ್ ಅಂತ್ಯದವರೆಗೆ ಗಡುವು ನೀಡಲಾಗಿತ್ತು. ಈ ಯೋಜನೆಯ ಅಡಿಯಲ್ಲಿ ತೆರಿಗೆ ಪಾವತಿಸದ ಸುಸ್ತಿದಾರರು ಯಾವುದೇ ದಂಡ ಅಥವಾ ಬಡ್ಡಿ ಇಲ್ಲದೆ ತೆರಿಗೆ ಪಾವತಿಸುವ ಅವಕಾಶ ನೀಡಲಾಗಿತ್ತು. ಅನೇಕ ಪ್ರಕರಣಗಳಲ್ಲಿ ತೆರಿಗೆ, ಬಡ್ಡಿ ಮತ್ತು ದಂಡ ಸೇರಿ ಕೋಟಿ ರೂ.ಗಳಿಗೂ ಮೀರಿದ ಪ್ರಕರಣಗಳೂ ಇದ್ದವು ಎಂದು ಪಾಲಿಕೆ ತಿಳಿಸಿದೆ.
ಡಿ.1ರಿಂದ ತೆರಿಗೆ, ಬಡ್ಡಿ, ದಂಡ ಎಲ್ಲವನ್ನೂ ಪಾವತಿಸಬೇಕಾಗುತ್ತದೆ. ಬಾಕಿ ತೆರಿಗೆ ದಂಡ ಬಡ್ಡಿ ಸೇರಿ ಮೂಲ ತೆರಿಗೆಯ ದುಪ್ಪಟ್ಟು ಹಣವನ್ನು ಪಾವತಿಸಬೇಕಾಗುತ್ತದೆ. ಪಾಲಿಕೆ ವ್ಯಾಪ್ತಿಯ ಎಲ್ಲ 8 ವಲಯಗಳಲ್ಲೂ ಬಾಕಿ ಉಳಿಸಿಕೊಂಡವರಿದ್ದಾರೆ. ಅತಿ ಹೆಚ್ಚು ತೆರಿಗೆ ಸಂಗ್ರಹವಾಗಿದ್ದರೂ ಮಹದೇವಪುರ ವಲಯದಲ್ಲಿ ಇನ್ನೂ ಹೆಚ್ಚು ಬಾಕಿ ಸಂಗ್ರಹವಾಗಬೇಕಿದೆ. ದಾಸರಹಳ್ಳಿ ವಲಯದಲ್ಲಿ ಕಡಿಮೆ ಬಾಕಿ ಇದೆ. ದೀರ್ಘ ಅವಧಿಯ ವರೆಗೆ ಬಾಕಿ ಉಳಿಸಿಕೊಂಡವರ ಆಸ್ತಿಗಳನ್ನು ಹರಾಜು ಹಾಕಲೂ ಪಾಲಿಕೆ ಚಿಂತನೆ ನಡೆಸಿದೆ. ಬಿಬಿಎಂಪಿ ಕಾಯಿದೆ-2020 ಮತ್ತು ಬಿಬಿಎಂಪಿ ನಿಯಮ(ಸ್ತಿ ತೆರಿಗೆ ಅಂದಾಜು, ವಸೂಲಿಮತ್ತು ನಿರ್ವಹಣೆ) 2024ರ ಪ್ರಕಾರ ಬಾಕಿ ತೆರಿಗೆ ಶುಲ್ಕ ಪಾವತಿಸದ ಆಸ್ತಿಯನ್ನು ಹರಾಜು ಹಾಕಲು ಅವಕಾಶವಿದೆ. ಇಂದಿನಿಂದಲೇ ಪಾಲಿಕೆ ನೋಟಿಸ್ ನೀಡಲು ನಿರ್ಧರಿಸಿದೆ. ಡಿಸೆಂಬರ್ 1ರಿಂದ ಬಾಕಿ ವಸೂಲಿಗೆ ಪಾಲಿಕೆ ಕಠಿಣ ಕ್ರಮಗಳನ್ನು ಅನುಸರಿಸಲಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಆನ್‌ಲೈನ್ ತೆರಿಗೆ ಪಾವತಿಗೆ ಒಲವು ತೋರದ ತೆರಿಗೆದಾರರು, ಮಾರ್ಚ್ ಅಂತ್ಯಕ್ಕೆ 5200 ಕೋಟಿ ರೂ ತೆರಿಗೆ ಸಂಗ್ರಹದ ಗುರಿ
ತೆರಿಗೆಯನ್ನು ಲೆಕ್ಕ ಹಾಕುವಾಗ ಕೆಲವೊಂದು ತೊಂದರೆಗಳಾಗುತ್ತಿವೆ. ಇದಕ್ಕೆ ಪಾಲಿಕೆ ಅಧಿಕಾರಿಗಳೇ ಹೊಣೆಯಾಗಿದ್ದು, ಗಡುವನ್ನು ಇನ್ನೂ 15 ದಿನಗಳ ಕಾಲ ಮುಂದುವರೆಸಬೇಕು ಎಂದು ಇನ್ನೂ ತೆರಿಗೆ ಪಾವತಿಸದ ಅನೇಕ ಗ್ರಾಹಕರು ಒತ್ತಾಯಿಸುತ್ತಿದ್ದಾರೆ. ಆನ್ ಲೈನ್ ಮೂಲಕ ದಂಡ ಪಾವತಿಸುವುದು ತುಂಬಾ ಸರಳೀಕರಣವಾಗಿದ್ದರೂ ಗ್ರಾಹಕರು ಈ ಸೌಲಭ್ಯವನ್ನು ಪಡೆಯದಿರುವುದು ಅಚ್ಚರಿ ಮೂಡಿಸಿದೆ.
ಬೆಂಗಳೂರು ನಗರದಲ್ಲಿ ಪಾಲಿಕೆಯ ವ್ಯಾಪ್ತಿಯೊಳಗೆ ಪಾಲಿಕೆಯು 2025 ಮಾರ್ಚ್ ಅಂತ್ಯದ ವೇಳೆಗೆ 5,200 ಕೋಟಿ ರೂ ಸಂಗ್ರಹಿಸುವ ಗುರಿ ಹೊಂದಿದೆ. ಪಾಲಿಕೆ ಇಷ್ಟೆಲ್ಲಾ ಅನುಕೂಲ ಅವಕಾಶಗಳನ್ನು ಕಲ್ಪಿಸಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗಿಲ್ಲ ಎಂದು ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ. ತೆರಿಗೆ ಪಾವತಿಸದ 3.9 ಲಕ್ಷ ಸುಸ್ತಿದಾರರಲ್ಲಿ 2 ಲಕ್ಷ ತೆರಿಗೆದಾರರು ಈ ಯೋಜನೆಯ ಪ್ರಯೋಜನ ಪಡೆದಿದ್ದಾರೆ ಎಂದು ಬಿಬಿಎಂಪಿ ತಿಳಿಸಿದೆ.
(ವರದಿ- ಎಚ್.ಮಾರುತಿ, ಬೆಂಗಳೂರು)