logo
ಕನ್ನಡ ಸುದ್ದಿ  /  ಕರ್ನಾಟಕ  /  ಬರಹಗಾರ ಶಿವಕುಮಾರ ಹುರುಕಡ್ಲಿ ಆಯ್ಕೆ, ಮೈಸೂರು ದಸರಾ ಕವಿಗೋಷ್ಠಿ ಘನತೆಯ ಕಾಪಾಡುವ ಒಂದು ಮಾದರಿ: ಲೇಖಕ ಅರುಣ್‌ ಜೋಳದ ಕೂಡ್ಲಿಗಿ ಬರಹ

ಬರಹಗಾರ ಶಿವಕುಮಾರ ಹುರುಕಡ್ಲಿ ಆಯ್ಕೆ, ಮೈಸೂರು ದಸರಾ ಕವಿಗೋಷ್ಠಿ ಘನತೆಯ ಕಾಪಾಡುವ ಒಂದು ಮಾದರಿ: ಲೇಖಕ ಅರುಣ್‌ ಜೋಳದ ಕೂಡ್ಲಿಗಿ ಬರಹ

Umesha Bhatta P H HT Kannada

Oct 08, 2024 05:23 PM IST

google News

ಬಳ್ಳಾರಿಯ ಶಿವಕುಮಾರ ಹುರುಕಡ್ಲಿ ಮೈಸೂರು ಕವಿಗೋಷ್ಠಿಗೆ ಆಯ್ಕೆಯಾಗಿದ್ದು ಊರವರು ಗೌರವಿಸಿ ಅವರನ್ನು ಬಿಳ್ಕೊಟ್ಟರು.

    • ಮೈಸೂರು ದಸರಾದ ಕವಿಗೋಷ್ಠಿ ಅವ್ಯವಸ್ಥೆ ಆಗಿರುವ ನಡುವೆಯೇ ಕೆಲವರ ಆಯ್ಕೆ ಸಂಭ್ರಮಕ್ಕೆ ಕಾರಣವಾಗುತ್ತದೆ. ಅದು ಹೇಗೆ. ಇದನ್ನು ತಮ್ಮ ಬರಹದಲ್ಲಿ ವಿವರಿಸಿದ್ದಾರೆ ಲೇಖಕ ಅರುಣ್‌ ಜೋಳದ ಕೂಡ್ಲಿಗಿ.
ಬಳ್ಳಾರಿಯ ಶಿವಕುಮಾರ ಹುರುಕಡ್ಲಿ ಮೈಸೂರು ಕವಿಗೋಷ್ಠಿಗೆ ಆಯ್ಕೆಯಾಗಿದ್ದು ಊರವರು ಗೌರವಿಸಿ ಅವರನ್ನು ಬಿಳ್ಕೊಟ್ಟರು.
ಬಳ್ಳಾರಿಯ ಶಿವಕುಮಾರ ಹುರುಕಡ್ಲಿ ಮೈಸೂರು ಕವಿಗೋಷ್ಠಿಗೆ ಆಯ್ಕೆಯಾಗಿದ್ದು ಊರವರು ಗೌರವಿಸಿ ಅವರನ್ನು ಬಿಳ್ಕೊಟ್ಟರು.

ಒಂದು ಕಡೆ ಒಟ್ಟಾರೆ ಆಯ್ಕೆಯಲ್ಲಿ ಪುನರಾವರ್ತನೆ ಮತ್ತು ಹೆಸರೇ ಗೊತ್ತಿಲ್ಲದವರ ಆಯ್ಕೆ..ಆಯ್ಕೆಯ ಲಾಬಿ ಇತ್ಯಾದಿ ಚರ್ಚೆಗಳು ನಡೆಯುತ್ತಿವೆ. ಈ ಚರ್ಚೆಯ ಕಾರಣಕ್ಕೆ ಗೆಳೆಯ ಆರಿಫ್ ರಾಜಾ, ಹಿರಿಯ ಕವಯಿತ್ರಿ ಭಾನು ಮುಷ್ತಾಕ್ ಅವರು ಕವಿಗೋಷ್ಠಿಗೆ ಹಾಜರಾಗುವುದಿಲ್ಲ ಎಂದು ತಮ್ಮ ನಿರ್ಧಾರವನ್ನೂ ಈ ನಿರ್ಧಾರಕ್ಕೆ ಕಾರಣಗಳನ್ನು ಕೊಟ್ಟಿದ್ದಾರೆ. ಇದರಲ್ಲಿ ತನ್ನ ಆಯ್ಕೆ ಇಲ್ಲ, ತನ್ನ ಆಯ್ಕೆ ಆಗಿದ್ದರೆ ಸರಿ ಇರುತ್ತಿತ್ತು ಎನ್ನುವ ವಯಕ್ತಿಕ ನೆಲೆಯಲ್ಲಿ ಪ್ರಶ್ನೆ ಎತ್ತಿದವರು ಇರುವಂತೆ, ಒಟ್ಟಾರೆ ಆಯ್ಕೆ ಪ್ರಕ್ರಿಯೆಯ ಬಗ್ಗೆಯೂ ಟೀಕೆಗಳು ಬಂದಿವೆ.

ಇನ್ನೊಂದೆಡೆ ಅಷ್ಟೇನೂ ಪ್ರಚಾರಕ್ಕೆ ಬರದೆ, ತಮ್ಮದೇ ಮಿತಿಯಲ್ಲಿ ಸ್ಥಳೀಯವಾಗಿ ಸಾಹಿತ್ಯದ ಅಭಿರುಚಿ ಮೂಡಿಸುವ ಕವಿಗಳೂ ಆಯ್ಕೆಯಾಗಿದ್ದಾರೆ. ಇಂತಹ ಕವಿ ಲೇಖಕರೂ ಎಲ್ಲಾ ಭಾಗದಲ್ಲೂ ಇರುತ್ತಾರೆ. ಅಂತವರು ಮುಖ್ಯ ಧಾರೆಯ ಗದ್ದಲಗಳಿಂದ ಚೂರು ಅಂತರ ಕಾಯ್ದುಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಂಡಿರುತ್ತಾರೆ. ಅಂತವರಲ್ಲಿ ಒಬ್ಬರು ಹಗರಿಬೊಮ್ಮನಹಳ್ಳಿ ತಾಲೂಕಿನ ಬಾಚಿಗೊಂಡನಹಳ್ಳಿಯ ಹುರಿಕಡ್ಲಿ ಶಿವಕುಮಾರ್ ಅವರು.

ಸದಾ ವಾಚಕರ ವಾಣಿಗೆ ಸಾಮಾಜಿಕ ವಿದ್ಯಮಾನಗಳ ಬಗ್ಗೆ ಬರೆಯುತ್ತಿರುತ್ತಾರೆ. ಕವಿತೆ ಬರೆದಿದ್ದಾರೆ. ಸ್ಥಳೀಯ ಚರಿತ್ರೆಗೆ ಸಂಬಂಧಿಸಿದ ಪುಟ್ಟ ಪುಟ್ಟ ಚರಿತ್ರೆಯ ಪುಸ್ತಕಗಳನ್ನು ಬರೆದಿದ್ದಾರೆ. ಬಾಚಿಗೊಂಡನಹಳ್ಳಿ ಶಾಲೆಗೆ 13 ಎಕರೆ ಎರೆಹೊಲವನ್ನು ದಾನವಾಗಿ ಕೊಟ್ಟ ದೇವದಾಸಿ ಹುಲಿಗೆಮ್ಮನ ಬಗ್ಗೆ ಮೊದಲು ನಾನು ತಿಳಿದದ್ದು ಹುರಿಕಡ್ಲಿ ಶಿವಕುಮಾರ ಅವರ ಪುಟ್ಟ ಪುಸ್ತಕದಿಂದ. ಅದೇಗೋ ಮೈಸೂರು ಪ್ರಧಾನ ಕವಿಗೋಷ್ಠಿಗೆ ಹುರಿಕಡ್ಲಿ ಶಿವಕುಮಾರ ಅವರು ಆಯ್ಕೆಯಾಗಿದ್ದಾರೆ.

ಇದನ್ನು ಇಡೀ ಬಾಚಿಗೊಂಡನಹಳ್ಳಿ ಸಂಭ್ರಮಿಸಿದ ಬಗೆ ಅಚ್ಚರಿ ಹುಟ್ಟಿಸುವಂತದ್ದು. Facebook ನಲ್ಲಿ ಇದಕ್ಕಾಗಿ ಅಭಿನಂದಿಸಿ ಪೋಷ್ಟರ್ ಹಾಕಿದ್ದರು. ನಾಳೆ ನಡೆಯಲಿರುವ ಕವಿಗೋಷ್ಠಿಗೆ ಇಂದು ಪ್ರಯಾಣಿಸುತ್ತಿರುವ ಶಿವಕುಮಾರ್ ಅವರನ್ನು ಮೈಸೂರಿಗೆ ಕಳಿಸಿಕೊಡುವ ಮೊದಲು ಇಡೀ ಊರಿನ ಹಿರಿಯರು ಹರಸಿ ಬೀಳ್ಕೊಟ್ಟಿದ್ದಾರೆ. ಇದು ದಸರಾ ಕವಿಗೋಷ್ಠಿಗೆ ಸಿಕ್ಕ ಅತ್ಯುತ್ತಮ ಗೌರವವಾಗಿದೆ.

ನಾನೂ ಈಗಾಗಲೆ 2 ಬಾರಿ ದಸರಾ ಕವಿಗೋಷ್ಠಿಗೆ ಆಯ್ಕೆಯಾಗಿದ್ದೆ. ಹೋಗಿ ಕವಿತೆ ಓದಿ ಬಂದಿರುವೆ ಕೂಡ. ಮುಂದೆ ನನ್ನನ್ನು ದಸರಾ ಕವಿಗೋಷ್ಠಿಗೆ ಮತ್ತೆ ಕರೆಯಬೇಡಿ. ಹುರಿಕಡ್ಲಿ ಶಿವಕುಮಾರ್ ಅವರಂತಹ ಎಲ್ಲಾ ಭಾಗಗಳಲ್ಲಿರುವ ಎಲೆಮರೆ ಮರದಂತಹ ಸಾಹಿತ್ಯದ ವಾತಾವರಣವನ್ನು ಜೀವಂತವಾಗಿಟ್ಟವರನ್ನು ಕರೆಯಿರಿ. ಆಗ ದಸರಾ ಕವಿಗೋಷ್ಠಿಯ ಘನತೆ ಹೆಚ್ಚುತ್ತದೆ.

-ಅರುಣ್‌ ಜೋಳದ ಕೂಡ್ಲಿಗಿ, ಲೇಖಕ

ಮೆಚ್ಚುಗೆಯ ಮಹಾಪೂರ

ಶಿವಕುಮಾರ ಹುರುಕಡ್ಲಿ ಅವರನ್ನು ಮೈಸೂರು ದಸರಾ ಕವಿಗೋಷ್ಠಿಗೆ ಆಯ್ಕೆ ಮಾಡಿರುವುದು, ಊರವರು ಅಭಿನಂದಿಸಿ ಬೀಳ್ಕೊಟ್ಟಿರುವುದಕ್ಕೆ ಭಾರೀ ಮೆಚ್ಚುಗೆಯೇ ವ್ಯಕ್ತವಾಗಿದೆ.

ಪ್ರಜಾವಾಣಿ ವಾಚಕರ ವಾಣಿಯಲ್ಲಿ ಸದಾ ದ್ವನಿ ಎತ್ತುವ ಹುರಿಕಡ್ಲಿ ಶಿವಕುಮಾರ ಅವರು ದಸರಾ ಕವಿಗೋಷ್ಠಿಗೆ ಆಯ್ಕೆ ಆಗಿದ್ದು ಖುಷಿ ಸಂಗತಿ. ಅವರಿಗೆ ಅಭಿನಂದನೆಗಳು ಎಂದು ಮಂಜಯ್ಯ ದೇವರಮನಿ ಅಭಿನಂದಿಸಿದ್ದಾರೆ.

ನ್ಯವಾದಗಳು...ವಾಚಕರ ವಾಣಿಯಲ್ಲಿ ಅವರ ಪತ್ರಗಳನ್ನಷ್ಟೇ ಓದುತ್ತಿದ್ದೆವು...ಈಗ ಅವರ ಪರಿಚಯ ಮಾಡಿಸಿದ್ದೀರಿ...ಇಂತಹ ಜನಪರ ವ್ಯಕ್ತಿಗಳಿಗೆ ವೇದಿಕೆ ಸಿಗಬೇಕು ಎಂದು ಮಾಲತಿ ಭಟ್‌ ಪ್ರತಿಕ್ರಿಯಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ