ಅನ್ನಭಾಗ್ಯ ಪಡಿತರ ವಿತರಣೆಗೆ ಸರ್ವರ್ ಸಮಸ್ಯೆ ಕಾಟ, ಬಿಪಿಎಲ್ ಕಾರ್ಡುದಾರರಿಗೆ ನಗದು ಪ್ರಯೋಜನಕ್ಕೂ ಅಡ್ಡಿ, ಪಡಿತರ ವಿತರಣೆಯೂ ವಿಳಂಬ
Oct 21, 2024 03:21 PM IST
ಅನ್ನಭಾಗ್ಯ ಪಡಿತರ ವಿತರಣೆಗೆ ಸರ್ವರ್ ಸಮಸ್ಯೆ ಕಾಟ ಶುರುವಾಗಿದೆ (ಸಾಂಕೇತಿಕ ಚಿತ್ರ)
ಅನ್ನಭಾಗ್ಯ ಪಡಿತರ ವಿತರಣೆಗೆ ಒಂದಿಲ್ಲೊಂದು ಅಡ್ಡಿ ಕಾಡುತ್ತಲೇ ಇದೆ. ಅನ್ನಭಾಗ್ಯದ ಫಲಾನುಭವಿಗಳಿಗೆ ನೇರನಗದು ಪ್ರಯೋಜನ ವಿಳಂಬವಾಗುತ್ತಿತ್ತು. ಈ ಬಾರಿ ಪಡಿತರ ವಿತರಣೆಯೇ ವಿಳಂಬವಾಗತೊಡಗಿದ್ದು, ಇದಕ್ಕೆ ಸರ್ವರ್ ಸಮಸ್ಯೆ ಕಾರಣ ಎಂದು ಹೇಳಲಾಗುತ್ತಿದೆ. ಇದರ ವಿವರ ಇಲ್ಲಿದೆ.
ಬೆಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಅಂದರೆ ಬಡತನ ರೇಖೆಗಿಂತ ಕೆಳಗಿನವರಿಗೆ (ಬಿಪಿಎಲ್ ಕಾರ್ಡುದಾರರು) ಈ ಸಲ ಸಮಯಕ್ಕೆ ಪಡಿತರ ದೊರೆಯುವುದೂ ಸಂದೇಹ. ಇದುವರೆಗೆ ಅಕ್ಕಿ ಬದಲು ನೇರ ನಗದು ಯೋಜನೆ ಪ್ರಕಾರ, ಖಾತೆ ನೇರ ಹಣ ಜಮೆ ಮಾಡುತ್ತಿರುವಾಗಲೂ ಸಮಯಕ್ಕೆ ಅದನ್ನು ಜಮೆ ಮಾಡದೆ ಅಧ್ವಾನ ಮಾಡಿದ್ದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಈಗ ಪಡಿತರ ವಿತರಣೆಯಲ್ಲೂ ಅಸಡ್ಡೆ ತೋರಿದಂತೆ ಕಾಣತೊಡಗಿದೆ. ಉದಯವಾಣಿ ಪತ್ರಿಕೆ ಇಂದು (ಅಕ್ಟೋಬರ್ 21) ಪ್ರಕಟಿಸಿದ ವರದಿ ಪ್ರಕಾರ, ಅನ್ನಭಾಗ್ಯದ ಫಲಾನುಭವಿಗಳಿಗೆ ಈ ಬಾರಿ ಪಡಿತರ ವಿತರಣೆ ತಡವಾಗಲಿದೆ. ಬಿಪಿಎಲ್ ಕಾರ್ಡುದಾರರಿಗೆ ಅನ್ನಭಾಗ್ಯ ಯೋಜನೆ ಪ್ರಕಾರ ಪ್ರತಿಯೊಬ್ಬರಿಗೆ ಹೆಚ್ಚುವರಿ 5 ಕಿಲೋ ಅಕ್ಕಿ ನೀಡುವ ಬದಲು ನಗದು ಹಣ ಒದಗಿಸುವ ಪ್ರಕ್ರಿಯೆ ವಿಳಂಬವಾಗಿತ್ತು. ಆದರೆ ಈ ತಿಂಗಳು ಎಲ್ಲ ಕಾರ್ಡುದಾರರಿಗೂ ನಿಗದಿತ ಪಡಿತರ ವಿತರಣೆಯೇ ವಿಳಂಬವಾಗುವ ಸಾಧ್ಯತೆ ಇದೆ. ಸರ್ವರ್ ಸಮಸ್ಯೆ ಇದಕ್ಕೆ ಕಾರಣ.
ಆದ್ದರಿಂದ, ಪಡಿತರ ಅಂಗಡಿಗಳಲ್ಲಿ ಬೆಳಗ್ಗೆ 7 ರಿಂದ ರಾತ್ರಿ 10 ಗಂಟೆ ತನಕ ಪಡಿತರ ವಿತರಣೆ ಮಾಡಲು ಆಹಾರ ಇಲಾಖೆ ಪಡಿತರ ವಿತರಕರಿಗೆ ಸೂಚನೆ ನೀಡಿದೆ. ರಜಾ ದಿನಗಳಲ್ಲೂ ಪಡಿತರ ವಿತಗರಣೆ ಇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾಗಿ ವರದಿ ಹೇಳಿದೆ.
ಸರ್ವರ್ ನಿರ್ವಹಣೆ ಕೆಲಸಕ್ಕಿಳಿದ ಆಹಾರ ಇಲಾಖೆ
ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ತನ್ನ ಗಣಕಯಂತ್ರ ವ್ಯವಸ್ಥೆಯ ಸರ್ವರ್ ನಿರ್ವಹಣಾ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಈ ಪ್ರಕ್ರಿಯೆ ಮಂದಗತಿಯಲ್ಲಿರುವ ಕಾರಣ ಈ ತಿಂಗಳು ರಾಜ್ಯದಲ್ಲಿ ಪಡಿತರ ವಿತರಣೆ ವಿಳಂಬವಾಗಲಿದೆ. ಈಗಾಗಲೇ ತಿಂಗಳ ಕೊನೆಗೆ ಬಂದಿದ್ದು, ಇನ್ನೂ ಶೇಕಡ 5 ಕಾರ್ಡುದಾರರಿಗೂ ಪಡಿತರ ವಿತರಣೆಯಾಗಿಲ್ಲ. ಅಕ್ಟೋಬರ್ 31ರೊಳಗೆ ಪಡಿತರವನ್ನು ಎಲ್ಲ ಕಾರ್ಡುದಾರರಿಗೆ ಹಂಚಿಕೆ ಮಾಡುವ ದೊಡ್ಡ ಸವಾಲಿನ ಕೆಲಸ ಬಾಕಿ ಇದೆ ಎಂದು ವರದಿ ವಿವರಿಸಿದೆ.
ಪಡಿತರ ವಿತರಣೆ ಹೇಗೆ - ಪ್ರಕ್ರಿಯೆ ಮತ್ತು ಸಮಸ್ಯೆ ಏನು
ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ಮಾಡುವಾಗ ಅವರು ಪ್ರತಿಕಾರ್ಡುದಾರರ ಹೆಬ್ಬೆಟ್ಟಿನ ಗುರುತು ಪಡೆದು ಅದು ದೃಢೀಕರಣವಾದ ಬಳಿಕ ಪಡಿತರ ವಿತರಣೆ ಮಾಡುವುದು ವಾಡಿಕೆ. ಇದು ಒಂದು ನಿಮಿಷದಲ್ಲಿ ಮುಗಿಯುವ ಪ್ರಕ್ರಿಯೆ. ಈಗ ಇದೇ ಪ್ರಕ್ರಿಯೆಗೆ 20 ನಿಮಿಷ ಬೇಕಾಗಿದೆ. ಸರ್ವರ್ ನಿರ್ವಹಣಾ ಕಾಮಗಾರಿ ನಡೆಯುತ್ತಿರುವುದೇ ಇದಕ್ಕೆ ಕಾರಣ. ಹೀಗಾಗಿ ಪಡಿತರ ಪಡೆಯಲು ಸರದಿ ನಿಲ್ಲುವ ಕಾರ್ಡುದಾರರ ಸಂಖ್ಯೆ ಹೆಚ್ಚಾಗಿದೆ. ಕರ್ನಾಟಕದಲ್ಲಿ 1.15 ಕೋಟಿ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡುಗಳಿವೆ. 22 ಸಾವಿರ ಪಡಿತರ ಅಂಗಡಿಗಳಲ್ಲಿ ಈ ಕಾರ್ಡುದಾರರಿಗೆ ಪಡಿತರ ವಿತರಿಸಲಾಗುತ್ತದೆ. ಪ್ರತಿ ನಿತ್ಯ ಕನಿಷ್ಠ 100 ಕಾರ್ಡುದಾರರಿಗೆ ಪಡಿತರ ವಿತರಣೆಯಾಗುತ್ತದೆ. ಈ ಲೆಕ್ಕ ಪ್ರಕಾರ ಈಗಾಗಲೇ ಶೇಕಡ 60 ರಿಂದ 70 ಕುಟುಂಬಗಳಿಗೆ ಪಡಿತರ ವಿತರಣೆಯಾಗುತ್ತಿತ್ತು. ಪ್ರಸ್ತುತ ಮಾಹಿತಿ ಪ್ರಕಾರ ಅಕ್ಟೋಬರ್ 19ರ ಪ್ರಕಾರ, 5.6 ಲಕ್ಷ ಕಾರ್ಡುದಾರರಿಗಷ್ಟ ಪಡಿತರ ವಿತರಣೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾಗಿ ವರದಿ ವಿವರಿಸಿದೆ.
ಆಹಾರ ಇಲಾಖೆಯ ಸಿಸ್ಟಮ್‌ಗಳ ನಿರ್ವಹಣಾ ವ್ಯವಸ್ಥೆಯನ್ನು ರಾಷ್ಟ್ರೀಯ ದತ್ತಾಂಶ ಕೇಂದ್ರ ನೋಡುತ್ತಿತ್ತು. ಅದನ್ನು ಈಗ ರಾಜ್ಯ ದತ್ತಾಂಶ ಕೇಂದ್ರಕ್ಕೆ ವರ್ಗಾವಣೆ ಮಾಡುತ್ತಿದ್ದು, ಇದಕ್ಕೆ ಸಮಯ ಹಿಡಿಯುತ್ತದೆ. ಹೀಗಾಗಿ ವಿಳಂಬವಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಅಧಿಕಾರಿ ತಿಳಿಸಿದ್ದಾಗಿ ವರದಿ ವಿವರಿಸಿದೆ.