ಜೀವಂತವಾಗಿ ಹೂತುಹಾಕಿದ್ದ ನವಜಾತ ಶಿಶುವಿನ ರಕ್ಷಣೆ, ಕುಡಿದ ಮತ್ತಿನಲ್ಲಿ ನೆರೆಮನೆಯಾತನ ಕೊಲೆ; ಬೆಂಗಳೂರು ಅಪರಾಧ ಸುದ್ದಿ
Oct 02, 2024 06:15 AM IST
ಜೀವಂತವಾಗಿ ಹೂತುಹಾಕಿದ್ದ ನವಜಾತ ಶಿಶುವಿನ ರಕ್ಷಣೆ (HT File Photo)
- ನವಜಾತ ಶಿಶುವನ್ನು ಹೂತುಹಾಕಿ ಜೀವಂತ ಸಮಾಧಿ ಮಾಡಲು ಯತ್ನಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸದ್ಯ ಹಸುಗೂಸನ್ನು ರಕ್ಷಿಸಲಾಗಿದೆ. ಮತ್ತೊಂದೆಡೆ ಕಾಲಿಗೆ ತುಳಿದ ಎಂಬ ಕಾರಣಕ್ಕೆ, ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯು ನೆರಮನೆಯ ವ್ಯಕ್ತಿಯನ್ನೇ ಕೊಂದಿರುವ ಘಟನೆ ನಡೆದಿದೆ.
ಬೆಂಗಳೂರು: ಅಪರಿಚಿತ ವ್ಯಕ್ತಿಯೊಬ್ಬ ಜೀವಂತವಾಗಿ ಹೂತಿದ್ದ ನವಜಾತ ಗಂಡು ಮಗುವನ್ನು ಗ್ರಾಮಸ್ಥರು ರಕ್ಷಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕತ್ರಿಗುಪ್ಪೆ ದಿಣ್ಣೆಯಲ್ಲಿ ವ್ಯಕ್ತಿಯೊಬ್ಬರು ಶೌಚಕ್ಕೆ ಹೋಗಿದ್ದಾಗ ಅರ್ಧ ಹೂತುಹಾಕಿದ್ದ ಮಗುವನ್ನು ನೋಡಿದ್ದಾರೆ. ಮಗು ವ್ಯಕ್ತಿಯ ಕಣ್ಣಿಗೆ ಬೀಳುವುದಕ್ಕೆ ಎರಡರಿಂದ ಮೂರು ಗಂಟೆಗಳಿಗೂ ಮುಂಚೆಯೇ ಜೀವಂತವಾಗಿ ಸಮಾಧಿ ಮಾಡಲಾಗಿದೆ ಎಂದು ಹೇಳಲಾಗಿದೆ. ಘಟನೆ ಸಂಬಂಧ ಅಧಿಕಾರಿಗಳು ಮಗುವಿನ ಪೋಷಕರು ಅಥವಾ ತಪ್ಪಿತಸ್ಥರ ಹುಡುಕಾಟಕ್ಕೆ ಬಲೆ ಬೀಸಿದ್ದಾರೆ ಎಂದು ತಿಳಿದುಬಂದಿದೆ.
ನವಜಾತ ಶಿಶು ಭಾನುವಾರ ಅಥವಾ ಸೋಮವಾರ ಜನಿಸಿರಬಹುದು ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ತಿಳಿಸಿದೆ. ಸೋಮವಾರ ಬೆಳಿಗ್ಗೆ 9.00 ಗಂಟೆ ವೇಳೆಗೆ ಗ್ರಾಮಸ್ಥರೊಬ್ಬರು ಗಂಡು ಮಗುವನ್ನು ಪತ್ತೆಹಚ್ಚಿದ್ದಾರೆ. ತಕ್ಷಣವೇ ಸುತ್ತಮುತ್ತಲಿನ ಇತರರಿಗೆ ವಿಷಯ ತಿಳಿಸಿದ್ದಾರೆ. ಆ ಬಳಿಕ ಎಲ್ಲರೂ ಸರ್ಜಾಪುರ ಪೊಲೀಸರಿಗೆ ದೂರು ನೀಡಿದ್ದಾರೆ. ಆ ಬಳಿಕ ಮಗುವನ್ನು ತಕ್ಷಣ ಬೊಮ್ಮಸಂದ್ರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ.
ವರದಿಯ ಪ್ರಕಾರ, ಅಪರಿಚಿತ ವ್ಯಕ್ತಿಗಳು ಮಗುವನ್ನು ಹೂತು ಹಾಕಿದ ನಂತರ ಭಯದಿಂದ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸದ್ಯ ಮಗುವನ್ನು ವಶಕ್ಕೆ ತೆಗೆದುಕೊಳ್ಳಲು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಸೂಚನೆ ನೀಡಲಾಗಿದ್ದು, ಸರ್ಜಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಆಸ್ಪತ್ರೆಗಳಿಂದ ನವಜಾತ ಶಿಶುಗಳು ಕಾಣೆಯಾದ ವರದಿಗಳ ಬಗ್ಗೆಯೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಕಾಲಿಗೆ ತುಳಿದಿದ್ದಕ್ಕೆ ಬಿತ್ತು ಹೆಣ
ಮತ್ತೊಂದೆಡೆ ಕ್ಷುಲ್ಲಕ ಕಾರಣಕ್ಕೆ 52 ವರ್ಷದ ವ್ಯಕ್ತಿಯೊಬ್ಬರನ್ನು ನೆರೆಮನೆಯವನೇ ಕೊಂದಿರುವ ದುರ್ಘಟನೆ ಬೆಂಗಳೂರು ನಗರದ ಸೊಣ್ಣೇನಹಳ್ಳಿ ಪ್ರದೇಶದಲ್ಲಿ ನಡೆದಿದೆ. ಈ ಕುರಿತು ಸುದ್ದಿಸಂಸ್ಥೆ 'ಡೆಕ್ಕನ್ ಹೆರಾಲ್ಡ್' ವರದಿ ಮಾಡಿದೆ. ವರದಿ ಪ್ರಕಾರ, ವಯಸ್ಕ ವ್ಯಕ್ತಿಯನ್ನು ಕೊಂದ ಆರೋಪಿ ಕೀರ್ತಿ (27) ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿದ್ದಾರೆ
ಮೂರ್ತಿ ಹತ್ಯೆಗೆ ಕಾರಣವೇನು?
ಪೊಲೀಸರ ಪ್ರಕಾರ, ಮೂರ್ತಿ ಮತ್ತು ಅವರ ಸಂಬಂಧಿಕರು ಸಹೋದರನ ಮನೆಯಲ್ಲಿ ಮದ್ಯಪಾನ ಮಾಡುತ್ತಿದ್ದರು. ಅವರೊಂದಿಗೆ ಕೀರ್ತಿ ಸೇರಿದಂತೆ ನೆರೆಹೊರೆಯವರು ಕೂಡಾ ಇದ್ದರು. ಸಂಜೆ ವೇಳೆ ಮೂರ್ತಿ ಆಕಸ್ಮಿಕವಾಗಿ ಕೀರ್ತಿಯ ಕಾಲಿಗೆ ತುಳಿದಿದ್ದಾರೆ. ಇದು ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ಮಾತಿನ ಚಕಮಕಿ ನಡುವೆ ಕೋಪಗೊಂಡ ಕೀರ್ತಿ, ಚಾಕುವಿನಿಂದ ಮೂರ್ತಿಗೆ ಇರಿದಿದ್ದಾನೆ ಎಂದು ವರದಿಯಾಗಿದೆ.
ಚಾಕುವನ್ನು ಆನ್‌ಲೈಮ್‌ನಲ್ಲಿ ಖರೀದಿಸಿದ್ದಾಗಿ ವಿಚಾರಣೆಯ ಸಮಯದಲ್ಲಿ ಕೀರ್ತಿ ಒಪ್ಪಿಕೊಂಡಿದ್ದಾನೆ. ಮೂರ್ತಿಯನ್ನು ಬೆದರಿಸುವ ಉದ್ದೇಶದಿಂದ ಮಾತ್ರವೇ ಚಾಕು ಹಿಡಿದಿದ್ದಾಗಿ ಆತ ಹೇಳಿದ್ದಾನೆ. ಆದರೆ, ಇಬ್ಬರೂ ಮದ್ಯದ ಅಮಲಿನಲ್ಲಿದ್ದ ಕಾರಣ ಪರಿಸ್ಥಿತಿ ಉಲ್ಬಣಗೊಂಡು ಹತ್ಯೆಯವರೆಗೆ ಹೋಗಿದೆ.
ಬೆಂಗಳೂರು ನಗರದಲ್ಲಿ 2023 ರಲ್ಲಿ ಒಟ್ಟು 12,627 ಕ್ರಿಮಿನಲ್ ಅಪರಾಧ ಪ್ರಕರಣಗಳು ದಾಖಲಾಗಿವೆ. ವಾಹನಗಳ ಕಳ್ಳತನವು ಪಟ್ಟಿಯಲ್ಲಿ ಅತಿ ಹೆಚ್ಚು, ಅಂದರೆ 5,909 ಪ್ರಕರಣಗಳು ದಾಖಲಾಗಿವೆ. 2023 ರಲ್ಲಿ ನಗರದಲ್ಲಿ ಸಂಭವಿಸಿದ ಒಟ್ಟು 207 ಕೊಲೆಗಳಲ್ಲಿ 202 ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
ಇನ್ನಷ್ಟು ಅಪರಾಧ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ ಸ್ನೇಹಮಯಿ ಕೃಷ್ಣಗೆ ಸಂಕಷ್ಟ; ಕೋರ್ಟ್ನಿಂದ ಅರೆಸ್ಟ್ ವಾರೆಂಟ್ ಜಾರಿ