ರೇಣುಕಾಸ್ವಾಮಿ ಕೊಲೆ ಪ್ರಕರಣ; ದರ್ಶನ್-ಪವಿತ್ರಾ ಗೌಡಗೆ ಗಗನ ಕುಸುಮವಾದ ಜಾಮೀನು; ಅಕ್ಟೋಬರ್ 4ಕ್ಕಾದರೂ ಸಿಗುತ್ತಾ ಬೇಲ್?-bengaluru news darshan thoogudeepa and pavitra gowda bail plea hearing adjourned on renukaswamy murder case jra ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ರೇಣುಕಾಸ್ವಾಮಿ ಕೊಲೆ ಪ್ರಕರಣ; ದರ್ಶನ್-ಪವಿತ್ರಾ ಗೌಡಗೆ ಗಗನ ಕುಸುಮವಾದ ಜಾಮೀನು; ಅಕ್ಟೋಬರ್ 4ಕ್ಕಾದರೂ ಸಿಗುತ್ತಾ ಬೇಲ್?

ರೇಣುಕಾಸ್ವಾಮಿ ಕೊಲೆ ಪ್ರಕರಣ; ದರ್ಶನ್-ಪವಿತ್ರಾ ಗೌಡಗೆ ಗಗನ ಕುಸುಮವಾದ ಜಾಮೀನು; ಅಕ್ಟೋಬರ್ 4ಕ್ಕಾದರೂ ಸಿಗುತ್ತಾ ಬೇಲ್?

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ದರ್ಶನ್ ತೂಗುದೀಪ ಹಾಗೂ ಪವಿತ್ರಾ ಗೌಡಗೆ ಇನ್ನೂ ಜಾಮೀನು ಸಿಕ್ಕಿಲ್ಲ. ಸದ್ಯ ನ್ಯಾಯಾಲಯವು ಪ್ರಕರಣದ ತನಿಖೆಯನ್ನು ಅಕ್ಟೋಬರ್ 4ಕ್ಕೆ ಮುಂದೂಡಿದೆ. ಬೇಲ್‌ ಸಿಗುವ ಭರವಸೆಯಲ್ಲಿ ಆರೋಪಿಗಳಿದ್ದಾರೆ. (ವರದಿ-ಎಚ್.ಮಾರುತಿ)

ದರ್ಶನ್-ಪವಿತ್ರಾ ಗೌಡಗೆ ಗಗನ ಕುಸುಮವಾದ ಜಾಮೀನು; ಅಕ್ಟೋಬರ್ 4ಕ್ಕಾದರೂ ಸಿಗುತ್ತಾ ಬೇಲ್?
ದರ್ಶನ್-ಪವಿತ್ರಾ ಗೌಡಗೆ ಗಗನ ಕುಸುಮವಾದ ಜಾಮೀನು; ಅಕ್ಟೋಬರ್ 4ಕ್ಕಾದರೂ ಸಿಗುತ್ತಾ ಬೇಲ್?

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ ನ್ಯಾಯಾಂಗ ಬಂಧನದಲ್ಲಿ ಶತದಿನೋತ್ಸವ ಆಚರಿಸಿದ್ದರೂ, ಬಿಡುಗಡೆಯ ಭಾಗ್ಯ ಪಡೆಯುವಲ್ಲಿ ವಿಫಲರಾಗಿದ್ದಾರೆ. ಸಪ್ಟೆಂಬರ್‌ 30ರ ಸೋಮವಾರ ನಡೆದ ವಿಚಾರಣೆಯಲ್ಲೂ ದರ್ಶನ್ ಮತ್ತು ಅವರ ಆಪ್ತ ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ಜಾಮೀನು ಸಿಕ್ಕಿಲ್ಲ. ಇವರ ಜಾಮೀನು ಅರ್ಜಿಯ ವಿಚಾರಣೆ ಅಕ್ಟೋಬರ್ 4ಕ್ಕೆ ಮುಂದೂಡಲಾಗಿದೆ. ಹಾಗಾಗಿ ಇನ್ನೂ 5 ದಿನ ಇವರಿಗೆ ಸೆರೆವಾಸ ಖಾತ್ರಿಯಾಗಿದೆ. ದರ್ಶನ್, ಪವಿತ್ರಗೌಡ ಸೇರಿದಂತೆ ಇತರೆ ಆರೋಪಿಗಳು ಸಲ್ಲಿಸಿದ್ದ ಅರ್ಜಿಗಳನ್ನು ಬೆಂಗಳೂರಿನ 57ನೇ ಸಿಟಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು ವಿಚಾರಣೆ ನಡೆಸಿದರು.

ಸೋಮವಾರ ನಡೆದ ವಿಚಾರಣೆಯಲ್ಲಿ ದರ್ಶನ್ ಪರ ವಕೀಲ ಸುನೀಲ್ ಕುಮಾರ್ ವಾದ ಮಂಡಿಸಿ ವಿಶೇಷ ಅಭಿಯೋಜಕರು ಆಕ್ಷೇಪಣೆ ಸಲ್ಲಿಸಿದ್ದಾರೆ. ತಮಗೆ ವಾದ ಮಂಡಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದರು. ತಮ್ಮ ಹಿರಿಯ ವಕೀಲರು ಅನಿವಾರ್ಯ ಕಾರಣಗಳಿಂದ ಇಂದು ಹಾಜರಾಗಲು ಸಾಧ್ಯವಾಗಿಲ್ಲ. ಆದ್ದರಿಂದ ವಾದ ಮಂಡನೆಗೆ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು.

ಪವಿತ್ರಾ ಗೌಡ ಮತ್ತು ರವಿಶಂಕರ್ ಜಾಮೀನು ಅರ್ಜಿ ವಿಚಾರಣೆಗಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನಕುಮಾರ್‌ ಅವರನ್ನು ಕರೆಸುವಂತೆ ನ್ಯಾಯಾಧೀಶರು ಸೂಚನೆ ನೀಡಿ ಕೆಲ ಸಮಯ ವಿಚಾರಣೆಯನ್ನು ಮುಂದೂಡಿದರು. ನಂತರ ವಿಚಾರಣೆ ಆರಂಭವಾದಾಗ ಎಸ್‌ಪಿಪಿ ಪರ ವಕೀಲರು 15 ದಿನಗಳ ಕಾಲಾವಕಾಶ ಕೇಳಿದರು. ನ್ಯಾಯಾಧೀಶ ಶ್ರೀ ಜೈಶಂಕರ್ ನಂತರ ಜಾಮೀನು ಅರ್ಜಿಯನ್ನು ಅಕ್ಟೋಬರ್‌ 4ಕ್ಕೆ ಮುಂದೂಡಿದರು.

ದರ್ಶನ್ ಭೇಟಿಯಾದ ಪತ್ನಿ

ಈ ಮಧ್ಯೆ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮೀ ಮತ್ತಿತರರು ಸೋಮವಾರ ಭೇಟಿಯಾದರು. ದರ್ಶನ್ ಅವರೊಂದಿಗೆ ಅರ್ಧ ಗಂಟೆ ಕಾಲ ಸಮಾಲೋಚನೆ ನಡೆಸಿದರು. ವಿಜಯಲಕ್ಷ್ಮೀ ಜೊತೆ ದರ್ಶನ್ ಸಹೋದರ ದಿನಕರ್ ತೂಗುದೀಪ, ನಟ ಧನ್ವೀರ್, ಸುಶಂತ್ ನಾಯ್ಡು ಆಗಮಿಸಿದ್ದರು. ಎರಡು ಬ್ಯಾಗ್‌ಗಳಲ್ಲಿ ತೆಗೆದುಕೊಂಡು ಬಂದಿದ್ದ ಉಡುಪುಗಳು, ಡ್ರೈ ಫ್ರೂಟ್ಸ್ ಗಳನ್ನು ದರ್ಶನ್‌ಗೆ ನೀಡಿದರು.

ಕಳೆದ ಶುಕ್ರವಾರ ನಡೆದ ವಿಚಾರಣೆಯಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್, ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ತಕರಾರು ಅರ್ಜಿ ಸಲ್ಲಿಸಿದ್ದರು. ದರ್ಶನ್ ಪರ ವಾದಿಸಿದ ವಕೀಲ ಸುನೀಲ್ ಕುಮಾರ್, ಜಾಮೀನು ಅರ್ಜಿಯ ವಿಚಾರಣೆ ಸಂಬಂಧ ಎಸ್‌ಪಿಪಿ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದಾರೆ. ದರ್ಶನ್ ಪರ ಹಿರಿಯ ವಕೀಲರು ಬೆಂಗಳೂರಿನಲ್ಲಿ ಇಲ್ಲವಾದ್ದರಿಂದ ವಿಚಾರಣೆಯನ್ನು ಮುಂದೂಡಬೇಕು ಎಂದು ಮನವಿ ಮಾಡಿದ್ದರು. ಇವರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಧೀಶರು, ವಿಚಾರಣೆಯನ್ನು ಇಂದು, ಸೋಮವಾರಕ್ಕೆ ಮುಂದೂಡಿದ್ದರು.

ಕೊಲೆ ಮಾಡಿದ್ದಾರೆ ಎಂದು ಎಲ್ಲಿಯೂ ಹೇಳಿಲ್ಲ

ಈ ಕೊಲೆ ಪ್ರಕರಣದ ಮೊದಲ ಆರೋಪಿಯಾಗಿರುವ ಪವಿತ್ರಾ ಗೌಡ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನನ್ನ ಕಕ್ಷಿದಾರರ ಪಾತ್ರವಿಲ್ಲ. ಪವಿತ್ರಾಗೌಡ ಶೆಡ್‌ಗೆ ಹೋಗಿದ್ದಾರೆ ಎಂದು ಸಾಕ್ಷಿದಾರರು ಹೇಳಿಕೆ ನೀಡಿದ್ದಾರೆಯೇ ಹೊರತು ಕೊಲೆ ಮಾಡಿದ್ದಾರೆ ಎಂದು ಎಲ್ಲಿಯೂ ಹೇಳಿಲ್ಲ. ಆರೋಪ ಪಟ್ಟಿಯಲ್ಲೂ ಪೊಲೀಸರು ಪವಿತ್ರಾಗೌಡ ಕೊಲೆ ಮಾಡಿದ್ದಾರೆ ಎಂದು ಉಲ್ಲೇಖಿಸಿಲ್ಲ ಎಂದು ವಾದಿಸಿದ್ದರು.

ಪವಿತ್ರಾ ಗೌಡ ಅವರು ರೇಣುಕಾಸ್ವಾಮಿಗೆ ಚಪ್ಪಲಿಯಿಂದ ಕಪಾಳಕ್ಕೆ ಹೊಡೆದರು ಎಂದು ಪಟ್ಟಣಗೆರೆ ಶೆಡ್‌ನಲ್ಲಿ ಕೆಲಸ ಮಾಡುತ್ತಿದ್ದ ಪ್ರತ್ಯಕ್ಷ ಸಾಕ್ಷಿ ಕಿರಣ್ ಹೇಳಿಕೆ ನೀಡಿದ್ದಾರೆ. ಹೊಡೆದ ಮಾತ್ರಕ್ಕೆ ಕೊಲೆ ಮಾಡಿದ್ದಾರೆ ಎಂದು ಹೇಳಲಾಗದು. ಆದ್ದರಿಂದ ನನ್ನ ಕಕ್ಷಿದಾರರರಿಗೆ ಜಾಮೀನು ನೀಡಬೇಕು ಎಂದು ಮನವಿ ಮಾಡಿದ್ದರು.

ಈಗಾಗಲೇ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಬಂಧಿತರಾಗಿದ್ದ 17 ಆರೋಪಿಗಳ ಪೈಕಿ 15, 16 ಮತ್ತು 17ನೇ ಆರೋಪಿಗಳಿಗೆ ಜಾಮೀನು ಸಿಕ್ಕಿದೆ.

ಇನ್ನಷ್ಟು ಅಪರಾಧ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

mysore-dasara_Entry_Point