ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ ಸ್ನೇಹಮಯಿ ಕೃಷ್ಣಗೆ ಸಂಕಷ್ಟ; ಕೋರ್ಟ್‌ನಿಂದ ಅರೆಸ್ಟ್ ವಾರೆಂಟ್ ಜಾರಿ
Snehamayi Krishna: ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ದೂರುದಾರ ಹಾಗೂ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಈಗ ಸಂಕಷ್ಟ ಎದುರಿಸಿದ್ದಾರೆ. ಅವರ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗಿದೆ. 9 ವರ್ಷ ಹಳೆ ಪ್ರಕರಣದ ವಿಚಾರಣೆಗೆ ಹಾಜರಾಗದ ಕಾರಣಕ್ಕೆ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಲಾಗಿದೆ.
ಮೈಸೂರು: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ದೂರುದಾರರಾಗಿರುವ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಜಾರಿಯಾಗಿದೆ. ಆದರೆ ಇದು ಮುಡಾ ಪ್ರಕರಣ ಸಂಬಂಧ ಅಲ್ಲ. ಚೆಕ್ ಬೌನ್ಸ್ ಪ್ರಕರಣ ಸಂಬಂಧ ಸ್ನೇಹಮಯಿ ಕೃಷ್ಣ ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರೆಂಟ್ ಜಾರಿಯಾಗಿದೆ. ಮೈಸೂರಿನ ಮೂರನೇ ಹೆಚ್ಚುವರಿ ಸಿವಿಲ್ ಜಡ್ಸ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ವಾರೆಂಟ್ ಜಾರಿಗೊಳಿಸಿ ಆದೇಶ ಹೊರಡಿಸಿದೆ. ಇಂದು ನಡೆದ ವಿಚಾರಣೆಗೆ ಸ್ನೇಹಮಯಿ ಕೃಷ್ಣ ಗೈರಾಗಿದ್ದರು. ಹೀಗಾಗಿ ನ್ಯಾಯಾಲಯದಿಂದ ಜಾಮೀನು ರಹಿತ ಬಂಧನಕ್ಕೆ ಆದೇಶ ಬಂದಿದೆ.
ಸ್ನೇಹಮಯಿ ಕೃಷ್ಣ ವಿರುದ್ಧ 9 ವರ್ಷಗಳ ಹಿಂದೆ, ಅಂದರೆ 2015ರ ಜೂನ್ 30ರಂದು ಚೆಕ್ ಬೌನ್ಸ್ ಪ್ರಕರಣ ದಾಖಲಾಗಿತ್ತು. ಕುಮಾರ್ ಎಂಬವರು ದೂರು ನೀಡಿದ್ದರು. ಪ್ರಕರಣದ ವಿಚಾರಣೆಗೆ ಸ್ನೇಹಮಯಿ ಕೃಷ್ಣ ಗೈರು ಹಾಜರಾಗದ ಕಾರಣ ನ್ಯಾಯಾಲಯವು ವಾರೆಂಟ್ ಜಾರಿಗೊಳಿಸಿದೆ.
ನನ್ನ ಆರೋಪ ನಿಜ ಎಂದು ಸಾಬೀತಾಗಿದೆ
ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ಎಫ್ಐಆರ್ ದಾಖಲು ಹಿನ್ನೆಲೆಯಲ್ಲಿ ಇಂದು ಅಧಿಕಾರಿಗಳು ಸ್ಥಳ ಮಹಜರು ನಡೆಸಿದರು. ಆ ಬಳಿಕ ಮಾತನಾಡಿದ ದೂರುದಾರ ಸ್ನೇಹಮಯಿ ಕೃಷ್ಣ, ಲೋಕಾಯುಕ್ತ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಲಾಗಿತ್ತು. ಭೂಮಾಪನ ಇಲಾಖಾ ಅಧಿಕಾರಿಗಳು, ಮುಡಾ ಅಧಿಕಾರಿಗಳ ಸಮ್ಮುಖದಲ್ಲಿ ಸ್ಥಳ ಮಹಜರು ಆಗಿದೆ. ಜಮೀನು ಅಳತೆ ಮಾಡಿ ಪರಿಶೀಲನೆ ನಡೆಸಲಾಗಿದೆ. ಸಿಎಂ ಪತ್ನಿ ಖರೀದಿಸಿರುವ ಜಮೀನಿನಲ್ಲಿ ನಿವೇಶನ ರಚನೆ ಕುರುಹು ಸಿಕ್ಕಿದೆ. ಮುಡಾ ಆಸ್ತಿಯನ್ನು ಕೃಷಿ ಭೂಮಿ ಮಾಡಿಕೊಂಡಿರುವುದು ನನ್ನ ಆರೋಪ. ಆ ಆರೋಪ ನಿಜ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಹೇಳಿದರು.
ಭೂಮಾಪಕರು ಹಾಗೂ ಮುಡಾ ಅಧಿಕಾರಿಗಳಿಂದಲೂ ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ. ಇವತ್ತಿನ ಸ್ಥಳ ಮಹಜರು ಪ್ರಕ್ರಿಯೆ ತೃಪ್ತಿ ನೀಡಿದೆ. ಸಿಎಂ ಪತ್ನಿಗೆ ಸೇರಿದೆ ಎನ್ನುತ್ತಿರುವ ಆಸ್ತಿ ಮುಡಾಕ್ಕೆ ಸೇರಿದ್ದು. ಆ ಆಸ್ತಿಯನ್ನು ದೇವರಾಜು ಸುಳ್ಳು ದಾಖಲೆ ಸೃಷ್ಟಿಸಿ ಮಾರಾಟ ಮಾಡಿದ್ದಾನೆ. ಸಿಎಂ ಸಿದ್ದರಾಮಯ್ಯ ಬಾಮೈದ ಮಲ್ಲಿಕಾರ್ಜುನ ಸ್ವಾಮಿಗೆ ಮಾರಾಟ ಮಾಡಲಾಗಿದೆ. ಅದನ್ನು ಸಿಎಂ ಪತ್ನಿಗೆ ಬರೆದಿರುವ ದಾಖಲಾತಿ ನನ್ನ ಬಳಿ ಇದೆ ಎಂದು ಸ್ಪಷ್ಟನೆ ನೀಡಿದರು.
ಒಟ್ಟು 3.16 ಗುಂಟೆ ಜಾಗ ಮುಡಾಕ್ಕೆ ಸೇರಿದ್ದಾಗಿದೆ. ಮತ್ತೆ ಮುಡಾಗೆ ಕೊಟ್ಟಿದ್ದೇವೆಂದು, ಮುಡಾದಿಂದ ಬದಲಿ ಸೈಟ್ ಪಡೆಯಲಾಗಿದೆ. ಮುಂದೆ ಅಕ್ಟೋಬರ್ 3ರಂದು 14 ನಿವೇಶನದಲ್ಲಿ ಮಹಜರು ನಡೆಯಲಿದೆ. ನನ್ನನ್ನು ಮಹಜರಿಗೆ ಬರುವಂತೆ ಲೋಕಾಯುಕ್ತ ಅಧಿಕಾರಿಗಳು ಹೇಳಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳಿಂದ ಮೈಸೂರು ತಾಲೂಕು ಕಚೇರಿಯಲ್ಲಿ ತನಿಖೆ
ಮುಡಾ ಪ್ರಕರಣ ಸಂಬಂದ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ಎಫ್ಐಆರ್ ದಾಖಲಾಗಿದೆ. ಪ್ರಕರಣ ಸಂಬಂಧ ಲೋಕಾಯುಕ್ತ ಅಧಿಕಾರಿಗಳಿಂದ ತನಿಖಾ ಕಾರ್ಯ ಮುಂದುವರೆದಿದೆ. ಮೈಸೂರು ತಾಲೂಕು ಕಚೇರಿಗೆ ಲೋಕಾಯುಕ್ತ ಎಸ್‌ಪಿ ಟಿಜೆ ಉದೇಶ್ ನೇತೃತ್ವದ ಲೋಕಾ ಅಧಿಕಾರಿಗಳ ತಂಡ ಭೇಟಿ ನೀಡಿದ್ದು, ಅಭಿಲೇಖನ ಶಾಖೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಕೆಸರೆ ಗ್ರಾಮದ ಸರ್ವೇ ನಂಬರ್ 464ರ ಮಾಹಿತಿ ಕಲೆ ಹಾಕಿದ ಲೋಕಾಯುಕ್ತ ಅಧಿಕಾರಿಗಳು ಮಹತ್ವದ ದಾಖಲೆ ಪರಿಶೀಲನೆ ನಡೆಸಿದ್ದಾರೆ.