ಬೆಂಗಳೂರು: ನಿಷೇಧಿತ ಡ್ರಗ್ಸ್ ಮಾರುತ್ತಿದ್ದ ನೈಜೀರಿಯಾ ಪ್ರಜೆ ಬಂಧನ; 2 ಕೋಟಿ ರೂ. ಮೌಲ್ಯದ ಎಂಡಿಎಂಎ ಜಪ್ತಿ
Oct 30, 2024 08:49 AM IST
ಬೆಂಗಳೂರಿನಲ್ಲಿ ನಿಷೇಧಿತ ಡ್ರಗ್ಸ್ ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆ ಅರೆಸ್ಟ್
Bengaluru: ನಿಷೇಧಿತ ಡ್ರಗ್ಸ್ ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆಯನ್ನು ಬಂಧಿಸಿರುವ ಪೊಲೀಸರು ಸುಮಾರು 2 ಕೋಟಿ ರೂ ಮೌಲ್ಯದ 1,577 ಕೆಜಿ ಎಂಡಿಎಂಎ ಕ್ರಿಸ್ಟಲನ್ನು ವಶಪಡಿಸಿಕೊಂಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ದ್ವಿಚಕ್ರ ವಾಹನಗಳನ್ನು ಕಳುವು ಮಾಡುತ್ತಿದ್ದ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ. (ವರದಿ: ಎಚ್ ಮಾರುತಿ)
ಬೆಂಗಳೂರು: ನಿಷೇಧಿತ ಮಾದಕ ವಸ್ತು ಎಂಡಿಎಂಎ ಕ್ರಿಸ್ಟಲ್ ಮಾರಾಟ ಮಾಡುತ್ತಿದ್ದ ನೈಜೀರಿಯಾ ದೇಶದ ಪ್ರಜೆ ಇನಿಯಾಂಗ್ ಉನ್ಯಮಿ ಬೋನಿಫೇಸ್ ಎಂಬಾತನನ್ನು ಸಿಸಿಬಿ ಮಾದಕ ವಸ್ತು ನಿಗ್ರಹ ದಳ ಬಂಧಿಸಿದೆ. 31 ವರ್ಷದ ಈ ಆರೋಪಿಯಿಂದ 1,577 ಕೆಜಿ ಎಂಡಿಎಂಎ ಕ್ರಿಸ್ಟಲ್, ಮೊಬೈಲ್ ಮತ್ತು ಎಲೆಕ್ಟ್ರಾನಿಕ್ ತೂಕದ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಮೌಲ್ಯ 2.36 ಕೋಟಿ ರೂ. ಎಂದು ಪೊಲೀಸರು ಅಂದಾಜು ಮಾಡಿದ್ದಾರೆ.
ಶ್ರೀನಿಧಿ ಲೇಔಟ್‌ನಲ್ಲಿ ವಾಸವಿದ್ದ ನೈಜೀರಿಯಾ ಪ್ರಜೆ
ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀನಿಧಿ ಲೇಔಟ್‌ನ ಮನೆಯೊಂದರಲ್ಲಿ ವಾಸವಾಗಿದ್ದ ಈತ ಡ್ರಗ್ಸ್ ಮಾರಾಟ ಮಾಡುತಿರುವ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಮಾಹಿತಿಯನ್ನಾಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. 2020ರಲ್ಲಿ ವೈದ್ಯಕೀಯ ವೀಸಾ ಪಡೆದು ಭಾರತಕ್ಕೆ ಅಗಮಿಸಿದ್ದ ಆರೋಪಿ ಮುಂಬೈನ ನೋಯ್ಡಾದಲ್ಲಿ ನೆಲೆಸಿ ಕ್ಷೌರಿಕ ಕೆಲಸ ಮಾಡುತ್ತಿದ್ದ. ಇದೇ ಸಂದರ್ಭದಲ್ಲಿ ಬೆಂಗಳೂರಿನ ಮಹಿಳಾ ಡ್ರಗ್ ಪೆಡ್ಲರ್ ಪರಿಚಯವಾಗಿತ್ತು. ನಂತರ ಈತ ಬೆಂಗಳೂರಿಗೆ ಆಗಮಿಸಿ ಆಕೆಯೊಂದಿಗೆ ಸೇರಿ ಡ್ರಗ್ ವ್ಯಾಪಾರ ಮಾಡುತ್ತಿದ್ದ. ಪರಿಚಯಸ್ಥ ಗ್ರಾಹಕರು ಮತ್ತು ವಿದ್ಯಾರ್ಥಿಗಳಿಗೆ ಡ್ರಗ್ ಮಾರಾಟ ಮಾಡುತ್ತಿದ್ದರು. ಈತನ ಜೊತೆಗಿದ್ದ ವಿದೇಶಿ ಮಹಿಳೆ ತಲೆ ಮರೆಸಿಕೊಂಡಿದ್ದು ಹುಡುಕಾಟ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂವರು ಕಳ್ಳರ ಬಂಧನ, 12 ಲಕ್ಷ ರೂ. ಮೌಲ್ಯದ 18 ದ್ವಿಚಕ್ರ ವಾಹನ ವಶ
ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಮೂವರು ಕಳ್ಳರನ್ನು ಬಂಧಿಸಿ 12 ಲಕ್ಷ ರೂ. ಮೌಲ್ಯದ 18 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯೊಬ್ಬರು ತಮ್ಮ ದ್ವಿಚಕ್ರ ವಾಹನ ಕಳುವಾಗಿದೆ ಎಂದು ದೂರು ನೀಡಿದ್ದರು. ಖಚಿತ ಮಾಹಿತಿಯನ್ನು ಆಧರಿಸಿ ಕೆಆರ್ ಪುರಂ ರೈಲ್ವೆ ನಿಲ್ದಾಣದ ಬಳಿ ಕಳುವು ಮಾಡಿದ್ದ ದ್ವಿಚಕ್ರ ವಾಹನದ ಸಹಿತ ಆರೋಪಿಯನ್ನು ಬಂಧಿಸಲಾಗಿದೆ. ಈತನನ್ನು ವಿಚಾರಣೆಗೆ ಒಳಪಡಿಸಿದಾಗ ವಿವಿಧ ಪ್ರದೇಶಗಳಲ್ಲಿ 7 ದ್ವಿಚಕ್ರ ವಾಹನಗಳನ್ನು
ಕಳುವು ಮಾಡಿದ್ದನ್ನು ಒಪ್ಪಿಕೊಂಡಿರುತ್ತಾನೆ. ಈ ವಾಹನಗಳನ್ನು ರೈಲ್ವೆ ನಿಲ್ದಾಣದ ಸಮೀಪ ಇರುವ ಖಾಲಿ ಜಾಗದಲ್ಲಿ ಬಚ್ಚಿಟ್ಟಿರುತ್ತಾನೆ. ಈ ವಾಹನಗಳ ಬೆಲೆ 8 ಲಕ್ಷ ರೂ ಎಂದು ಪೊಲೀಸರು ತಿಳಿಸಿದ್ದಾರೆ. ಈತ ವೈಟ್ ಫೀಲ್ಡ್, ಮಹದೇವಪುರ, ಬೈಯಪ್ಪನಹಳ್ಳಿ, ಸೂರ್ಯ ಸಿಟಿ ಮತ್ತು ತಮಿಳುನಾಡಿನಲ್ಲೂ ಬೈಕ್‌ಗಳನ್ನು ಕಳವು ಮಾಡಿ ಬಂದಿರುತ್ತಾನೆ.
ದ್ವಿಚಕ್ರ ವಾಹನ ಕಳುವು ಮಾಡುತ್ತಿದ್ದವರ ಬಂಧನ
ಮತ್ತೊಂದು ಪ್ರಕರಣದಲ್ಲಿ ದ್ವಿಚಕ್ರ ವಾಹನಗಳನ್ನು ಕಳುವು ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ 4 ಲಕ್ಷ ರೂ. ಮೌಲ್ಯದ 7 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ತಮ್ಮ ವಾಹನ ಕಳುವಾಗಿದೆ ಎಂದು ಸಾರ್ವಜನಿಕರೊಬ್ಬರು ಕೊಡಿಗೆಹಳ್ಳಿ ಪೊಲೀಸ್ ಠಾಣೆಗೆ
ದೂರು ನೀಡಿದ್ದರು. ತಮಗೆ ದೊರೆತ ಮಾಹಿತಿಯನ್ನಾಧರಿಸಿ ಹೆಬ್ಬಾಳ ಜಂಕ್ಷನ್ ಬಳಿ ನಿಂತಿದ್ದ ಇಬ್ಬರು ಕಳ್ಳರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇವರು ವಿವಿಧ ಭಾಗಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳುವು ಮಾಡುತ್ತಿದ್ದರು. ಇವರ ಬಂಧನದಿಂದ 3 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ದ್ವಿಚಕ್ರ ವಾಹನಗಳ ಪ್ರಕರಣ ಪತ್ತೆಯಾಗಿವೆ. ಎಲ್ಲಾ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.
ವರದಿ: ಎಚ್ ಮಾರುತಿ