ಮುಡಾ ಮಾಜಿ ಆಯುಕ್ತರ ಆಪ್ತ ಜಯರಾಮ್ ಕಚೇರಿ-ನಿವಾಸದ ಮೇಲೆ ಇಡಿ ದಾಳಿ; ಹಗರಣದ ಬಿಸಿ ನಡುವೆ ಮುಡಾ ಸಾಮಾನ್ಯ ಸಭೆ ದಿನಾಂಕ ನಿಗದಿ
ಮುಡಾದಲ್ಲಿ ನಡೆದಿರುವ ಹಗರಣದ ತನಿಖೆ ಒಂದೆಡೆ ನಡೆಯುತ್ತಿದ್ದರೆ, ಇದರ ನಡುವೆ ಮುಡಾದ ಸಾಮಾನ್ಯ ಸಭೆಗೆ ದಿನಾಂಕ ನಿಗದಿಯಾಗಿದೆ. ನವೆಂಬರ್ 7ರಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ 20 ಸದಸ್ಯರಿಗೆ ಮುಡಾದ ಸಾಮಾನ್ಯ ಸಭೆಯ ಬಗ್ಗೆ ಮಾಹಿತಿ ನೀಡಲಾಗಿದೆ.
ಮೈಸೂರಿನಲ್ಲಿ ಇಡಿ ಅಧಿಕಾರಿಗಳ ಕಾರ್ಯಾಚರಣೆ ಮುಂದುವರೆದಿದೆ. ಮುಡಾದ ಈ ಹಿಂದಿನ ಆಯುಕ್ತ ಜಿಟಿ ದಿನೇಶ್ ಕುಮಾರ್ ಪರಮಾಪ್ತ ಎಂಎಂಜಿ ಕನ್‌ಸ್ಟ್ರಕ್ಷನ್‌ನ ಜಯರಾಮ್ ಕಚೇರಿ ಹಾಗೂ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮೈಸೂರಿನ ಕುವೆಂಪುನಗರದಲ್ಲಿ ಜಯರಾಮ್ ಅವರ ಕಚೇರಿ ಹಾಗೂ ನಿವಾಸವಿದೆ. ಮುಡಾದಲ್ಲಿ 50-50 ಅನುಪಾತದಡಿ ನಿವೇಶನಗಳನ್ನು ಮಂಜೂರು ಮಾಡಿಸುತ್ತಿದ್ದ ಮೀಡಿಯೇಟರ್ ಈ ಜಯರಾಮ್. ದಿನೇಶ್ ಕುಮಾರ್ ಅವರ ಎಲ್ಲ ವ್ಯವಹಾರಗಳನ್ನು ಇವರೇ ನೋಡಿಕೊಳ್ಳುತ್ತಿದ್ದರು. 50-50 ಅನುಪಾತದ ಹೆಸರಲ್ಲಿ ನೂರಾರು ಕೋಟಿ ಆಸ್ತಿ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ.
ಇಂದು (ಅಕ್ಟೋಬರ್ 29, ಮಂಗಳವಾರ) ಬೆಳಗ್ಗೆಯಿಂದಲೇ ಕಚೇರಿ ಹಾಗೂ ನಿವಾಸದಲ್ಲಿರುವ ದಾಖಲೆಗಳನ್ನು ಇಡಿ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಅತ್ತ ಸಿಎಂ ಆಪ್ತ ರಾಕೇಶ್ ಪಾಪಣ್ಣ ಮನೆ ಮೇಲೂ ಇಡಿ ದಾಳಿ ನಡೆದಿದೆ. ಸುಮಾರು 20 ಗಂಟೆಗೂ ಹೆಚ್ಚು ಕಾಲ ದಾಖಲೆ ಪರಿಶೀಲನೆ ಮಾಡಿದ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಇಂದು ಮುಂಜಾನೆ ಮನೆಯಿಂದ ತೆರಳಿದ್ದಾರೆ. ನಿನ್ನೆ ಬೆಳಿಗ್ಗೆಯಿಂದ ಇಂದು ಮುಂಜಾನೆವರೆಗೂ ದಾಖಲೆ ಪರಿಶೀಲನೆ ನಡೆದಿದೆ.
ಅತ್ತ ಮುಡಾದಲ್ಲಿ ನಡೆದಿರುವ ಹಗರಣದ ತನಿಖೆ ಒಂದೆಡೆಯಾದರೆ, ಈ ಬಿಸಿಯ ನಡುವೆ ಮುಡಾದ ಸಾಮಾನ್ಯ ಸಭೆಗೆ ದಿನಾಂಕ ನಿಗದಿಯಾಗಿದೆ. ನವೆಂಬರ್ 7ರಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆ ನಡೆಯಲಿದೆ. ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಲಕ್ಷ್ಮೀಕಾಂತವರೆಡ್ಡಿ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಲಿದ್ದು, ಸಿಎಂ ಸಿದ್ದರಾಮಯ್ಯ ಸೇರಿದಂತೆ 20 ಸದಸ್ಯರಿಗೆ ಮುಡಾದ ಸಾಮಾನ್ಯ ಸಭೆಯ ಬಗ್ಗೆ ಮಾಹಿತಿ ನೀಡಲಾಗಿದೆ. ಅಕ್ರಮ ಆರೋಪಗಳ ನಡುವೆ ಈ ಬಾರಿಯ ಮುಡಾದ ಸಾಮಾನ್ಯ ಸಭೆ ತೀವ್ರ ಕುತೂಹಲ ಮೂಡಿಸಿದೆ.
ಜಯರಾಮ್ ಹಿನ್ನೆಲೆ
ಹತ್ತು ವರ್ಷದ ಹಿಂದೆ ಗಾರೆ ಕೆಲಸ ಮಾಡುತ್ತಿದ್ದ ಜಯರಾಮ್, ಇದೀಗ ಹತ್ತಾರು ಕೋಟಿ ರೂಪಾಯಿ ಒಡೆಯ. ಹಲವು ವರ್ಷಗಳ ಹಿಂದೆ ಮೈಸೂರಿನಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ಜಯರಾಮ್, ಹೆಚ್ ಡಿ ಕೋಟೆ ತಾಲೂಕು ಮೂಲದವರು. ಗಾರೆ ಕೆಲಸ ಮಾಡುತ್ತಲೇ ಕಂಟ್ರಾಕ್ಟರ್ ಗಳ ಪರಿಚಯವಾಗಿ ಬಳಿಕ ಮುಡಾದ ಅಧಿಕಾರಿಗಳ ಜೊತೆ ಒಡನಾಟ ಬೆಳೆದಿದೆ. ದಿನ ಕಳೆದಂತೆ ಮುಡಾದ ಮಾಜಿ ಆಯುಕ್ತರಗಳ ಜೊತೆ ಸಂಪರ್ಕ ಸಾಧಿಸಿದ್ದಾರೆ. ಮುಡಾದ ಮಾಜಿ ಆಯುಕ್ತರಾದ ನಟೇಶ್, ದಿನೇಶ್ ಕುಮಾರ್ ಅವರೊಂದಿಗೆ ನಿಕಟ ಸಂಪರ್ಕ ಬೆಳೆದಿದೆ. ಬಳಿಕ ಲೇಔಟ್ ನಿರ್ಮಾಣದ ಜವಾಬ್ದಾರಿ ಸಿಕ್ಕಿದೆ. ಬೇನಾಮಿಯಾಗಿ ಮುಡಾದಲ್ಲಿ ಲೇ ಔಟ್ ಕಾರ್ಯ ಆರಂಭವಾಗಿದೆ. ಅಧಿಕಾರಿಗಳಿಂದಲೇ ಹಣ ಹೂಡಿಕೆ ಮಾಡಿಸಿ ರಿಯಲ್ ಎಸ್ಟೇಟ್ ದಂಧೆ ಆರಂಭಿಸಿರುವ ಆರೋಪ ಜಯರಾಮ್ ಮೇಲಿದೆ.
ನಿನ್ನೆ ಕೂಡಾ ಇಡಿ ಅಧಿಕಾರಿಗಳ ದಾಳಿ ನಡೆದಿತ್ತು. ಮುಡಾದಲ್ಲಿ 50:50 ಅನುಪಾತಡಿ ನಿವೇಶನ ಹಂಚಿಕೆಯಲ್ಲಿ ಬಹುಕೋಟಿ ಹಗರಣ ವಿಚಾರವಾಗಿ ಸಿಂಎ ಸಿದ್ದರಾಮಯ್ಯ ಆಪ್ತರಿಗೂ ಇಡಿ ದಾಳಿಯ ಬಿಸಿ ತಟ್ಟಿದೆ. ಸತತ 12 ತಾಸು ವಿಚಾರಣೆ ನಡೆಸಿದರೂ ಇಡಿ ತನಿಖೆ ಮುಗಿದಿರಲಿಲ್ಲ. ಸಿಎಂ ಸಿದ್ದರಾಮಯ್ಯ ಪರಮಾಪ್ತ ರಾಕೇಶ್ ಪಾಪಣ್ಣ ಮನೆ ಮೇಲೆ ದಾಳಿ ನಡೆದಿದೆ. ಸೋಮವಾರ ಬೆಳಗ್ಗೆಯಿಂದಲೂ ಇಡಿ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿದ್ದಾರೆ.ಮುಡಾದಲ್ಲಿ 20ಕ್ಕೂ ಹೆಚ್ಚು ಸೈಟು ಪಡೆದಿರುವ ರಾಕೇಶ್ ಪಾಪಣ್ಣ ಮನೆಯಲ್ಲಿ ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ಕಲೆ ಹಾಕಿದ್ದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯನಾಗಿರುವ ರಾಕೇಶ್ ಪಾಪಣ್ಣ ಅವರನ್ನು ಮೈಸೂರಿನ ಹಿನ್‌ಕಲ್ ಗ್ರಾಮದಲ್ಲಿರುವ ಮನೆಯಲ್ಲೇ ಇರಿಸಿಕೊಂಡು ತೀವ್ರ ವಿಚಾರಣೆ ನಡೆಸಿದ್ದಾರೆ. 5ಕ್ಕೂ ಹೆಚ್ಚು ಇಡಿ ಅಧಿಕಾರಿಗಳಿಂದ ಶೋಧ ಕಾರ್ಯ ಹಾಗೂ ವಿಚಾರಣೆ ನಡೆದಿದೆ.