logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಕೃಷಿ ಮೇಳದಲ್ಲಿ ಪ್ರಾಣಿಪ್ರಪಂಚದ ಅನಾವರಣ; ಗಮನ ಸೆಳೆದ ವೈವಿಧ್ಯಮಯ ತಳಿಯ ಕುರಿ ಹಸು ಕೋಳಿ, ಬೆಲೆ ಮಾತ್ರ ಅಬ್ಬಬ್ಬಾ!

ಬೆಂಗಳೂರು ಕೃಷಿ ಮೇಳದಲ್ಲಿ ಪ್ರಾಣಿಪ್ರಪಂಚದ ಅನಾವರಣ; ಗಮನ ಸೆಳೆದ ವೈವಿಧ್ಯಮಯ ತಳಿಯ ಕುರಿ ಹಸು ಕೋಳಿ, ಬೆಲೆ ಮಾತ್ರ ಅಬ್ಬಬ್ಬಾ!

Jayaraj HT Kannada

Nov 18, 2024 06:05 AM IST

google News

ಬೆಂಗಳೂರು ಕೃಷಿ ಮೇಳದಲ್ಲಿ ಪ್ರಾಣಿಪ್ರಪಂಚದ ಅನಾವರಣ; ಬೆಲೆ ಮಾತ್ರ ಅಬ್ಬಬ್ಬಾ

    • ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನಡೆದ ಕೃಷಿ ಮೇಳದಲ್ಲಿ ಪ್ರಾಣಿ ಪ್ರಪಂಚವೇ ಅನಾವರಣಗೊಂಡಿತು. ವೈವಿಧ್ಯಮಯ ತಳಿಗಳ ಪ್ರಾಣಿಗಳು ಜನರ ಗಮನ ಸೆಳೆದವು. ಕುರಿ, ಮೇಕೆ, ಹಸು, ಕೋಳಿ, ಮೀನುಗಳು ನೋಡಲು ಖುಷಿ ಕೊಟ್ಟಿದ್ದು ಒಂದೆಡೆಯಾದರೆ, ಬೆಲೆ ಮಾತ್ರ ಅಬ್ಬಬ್ಬಾ ಎನ್ನುವಂತಿತ್ತು. (ವರದಿ: ಎಚ್ ಮಾರುತಿ, ಬೆಂಗಳೂರು)
ಬೆಂಗಳೂರು ಕೃಷಿ ಮೇಳದಲ್ಲಿ ಪ್ರಾಣಿಪ್ರಪಂಚದ ಅನಾವರಣ; ಬೆಲೆ ಮಾತ್ರ ಅಬ್ಬಬ್ಬಾ
ಬೆಂಗಳೂರು ಕೃಷಿ ಮೇಳದಲ್ಲಿ ಪ್ರಾಣಿಪ್ರಪಂಚದ ಅನಾವರಣ; ಬೆಲೆ ಮಾತ್ರ ಅಬ್ಬಬ್ಬಾ

ಬೆಂಗಳೂರು: ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಜಿಕೆವಿಕೆ ಆವರಣದಲ್ಲಿ ನಾಲ್ಕು ದಿನಗಳ ಕಾಲ ನಡೆದ ಈ ವರ್ಷದ ಕೃಷಿ ಮೇಳದಲ್ಲಿ ಕೃಷಿ, ತೋಟಗಾರಿಕೆಯಂತೆ ಸಾಕು ಪ್ರಾಣಿಗಳು ವಿಶೇಷ ಆಕರ್ಷಣೆಯಾಗಿದ್ದವು. ಇಲ್ಲಿ ಪ್ರಾಣಿ ಪ್ರಪಂಚವೇ ಅನಾವರಣಗೊಂಡಿತ್ತು. ವೈವಿಧ್ಯಮಯ ತಳಿಗಳ ಕುರಿ, ಮೇಕೆ, ಹಸು, ಕೋಳಿ, ಮೀನು ಕುತೂಹಲ ಮೂಡಿಸಿತು. ಆದರೆ, ಕೆಲವು ಸಾಕುಪ್ರಾಣಿಗಳ ಬೆಲೆ ಕೇಳಿ ಜನರಿಗೆ ಅಚ್ಚರಿಯಾಗಿದ್ದಂತೂ ಸುಳ್ಳಲ್ಲ.

ಪುಂಗನೂರು ಹಸು

ಕೃಷಿ ಮೇಳದಲ್ಲಿ ಕುಬ್ಜ ಹಸುಗಳೇ ಪ್ರಮುಖ ಆಕರ್ಷಣೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪುಂಗನೂರು ಕುಬ್ಜ ಹಸುಗಳು ಇಡೀ ಪ್ರಪಂಚದ ಅತ್ಯಂತ ಗಿಡ್ಡ ಹಸುಗಳು ಎಂದು ಖ್ಯಾತಿಗೊಳಗಾಗಿವೆ. ತಮ್ಮ ಆಕಾರ ಮತ್ತು ಸೌಂದರ್ಯದಿಂದ ಈ ಹಸುಗಳು ವೀಕ್ಷಕರ ಗಮನ ಸೆಳೆಯುತ್ತಿದ್ದವು. ಸಾಮಾನ್ಯ ಹಸುಗಳ ಹಾಲಿನಲ್ಲಿ ಕೊಬ್ಬಿನ ಅಂಶ ಶೇ. 3ರಿಂದ 3.5 ರಷ್ಟಿದ್ದರೆ ಪುಂಗನೂರು ಕುಬ್ಜ ಹಸುಗಳ ಹಾಲಿನಲ್ಲಿ ಕೊಬ್ಬಿನ ಅಂಶ ಶೇ. 7ರಿಂದ 8 ರಷ್ಟಿರುತ್ತದೆ. ಈ ಹಸುಗಳ ಬೆಲೆಯು 4ರಿಂದ 5 ಲಕ್ಷ ರೂಪಾಯಿಗಳಾದರೆ, ಲೀಟರ್ ಹಾಲು 250ರಿಂದ 300 ರೂಪಾಯಿಗೆ ಮಾರಾಟವಾಗುತ್ತದೆ.

ದೇಶದ ಹಸುಗಳ ತಳಿಗಳ ಪೈಕಿ ಪುಂಗನೂರು ಗಿಡ್ಡ ಹಸುಗಳು ಅಳಿವಿನಂಚಿಗೆ ಸಾಗುತ್ತಿರುವುದು ವಿಪರ್ಯಾಸ. ದೇಶದಲ್ಲಿ ಈ ತಳಿಯ ಹಸುಗಳು ಒಂದು ಸಾವಿರ ಮಾತ್ರ ಇವೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಪುಂಗನೂರು ಗಿಡ್ಡ ಹಸುಗಳಲ್ಲೇ ಸ್ವರ್ಣ ಕಪಿಲ ಎಂಬ ಹಸು ಕೇವಲ ಐದು ಮಾತ್ರ ಉಳಿದಿವೆ. ಇದರ ಕಣ್ಣಿನ ರೆಪ್ಪೆ ಗೊರಸು ಎಲ್ಲವೂ ಚಿನ್ನದ ಬಣ್ಣವನ್ನೇ ಹೊಂದಿರುವುದರಿಂದ ಸ್ವರ್ಣ ಕಪಿಲ ಎಂದು ಕರೆಯಲಾಗುತ್ತದೆ.

ಕತ್ತೆ ಹಾಲು

ಇನ್ನು ಕತ್ತೆ ಹಾಲು ಜಗತ್ಪ್ರಸಿದ್ಧ. ಕತ್ತೆ ಹಾಲಿನ ಉತ್ಪನ್ನಗಳು ಕೂಡಾ ಗಮನ ಸೆಳೆದವು. ವಿಶೇಷವಾಗಿ ಸ್ತ್ರೀಯರು ಹೆಚ್ಚಿನ ಸಂಖ್ಯೆಯಲ್ಲಿ ಮಾಹಿತಿ ಪಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕತ್ತೆ ಹಾಲಿನ ಸೋಪು ಮತ್ತು ಕ್ರೀಂಗಳ ಮಾರಾಟ ಜೋರಾಗಿತ್ತು. ಮಾರಾಟಗಾರರು ಕತ್ತೆ ಹಾಲು ಆರೋಗ್ಯಕ್ಕೆ ಒಳ್ಳೆಯದು. ಮಕ್ಕಳು ಮತ್ತು ಅನಾರೋಗ್ಯ ಪೀಡಿತರಿಗೆ ಕತ್ತೆ ಹಾಲು ಕುಡಿಸುತ್ತಾರೆ. ಇದರಿಂದ ಚರ್ಮದ ಆರೋಗ್ಯ ಮತ್ತು ಹೊಳಪು ಹೆಚ್ಚುತ್ತದೆ. ಚರ್ಮ ಸುಕ್ಕುಗಟ್ಟದಂತೆ ತಡೆಯುತ್ತದೆ ಎಂದು ಕತ್ತೆ ಫಾರಂ ಮಾಲೀಕರೊಬ್ಬರು ವಿವರ ನೀಡಿದರು. ಡಾಂಕಿ ಮಿಲ್ಕ್ ನೈಟ್ ಕ್ರೀಂ ಮುಖಕ್ಕೆ ಹಚ್ಚುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ. ಇಷ್ಟೇ ಅಲ್ಲದೆ ಕತ್ತೆಯ ಸೆಗಣಿಯಿಂದ ತಯಾರಿಸಿದ ಗೊಬ್ಬರ, ಕತ್ತೆಮೂತ್ರವೂ ಪ್ರದರ್ಶನದಲ್ಲಿತ್ತು.

ಕೋಳಿ - ಮೀನು

ದೂರದ ಪಂಜಾಬ್‌ನಿಂದ ಆಗಮಿಸಿದ್ದ ಕೋಳಿಗಳು ಗಮನ ಸೆಳೆದವು. ಕೋಳಿ ಸಾಕಣೆದಾರರು ವಿವರ ಪಡೆಯುತ್ತಿದ್ದರು. ಪಂಜಾಬ್‌ನಿಂದ ತಂದು ಸಾಕಿದ್ದೇವೆ. ಈ ಕೋಳಿಗಳು ಮೊಟ್ಟೆಯನ್ನು ಕಡಿಮೆ ಇಡುತ್ತವೆ. ಆದರೂ ಎಂಟೇ ತಿಂಗಳಲ್ಲಿ ಮೂರೂವರೆ ಕೆಜಿ ತೂಗುತ್ತವೆ. ಹೀಗಾಗಿ ಇದನ್ನು ಮಾಂಸಕ್ಕೆ ಬಳಸಲಾಗುತ್ತದೆ ಎಂದರು. ಮನೆಯ ಫಿಶ್ ಟ್ಯಾಂಕ್‌ಗಳಿಗೆ ಗೋಲ್ಡ್ ಫಿಶ್ ಸೇರಿದಂತೆ ಆಲಂಕಾರಿಕ ಮೀನುಗಳ ಖರೀದಿ ಜೋರಾಗಿತ್ತು.

ಕುರಿ, ಮೇಕೆ

ರೈತರ ಪಾಲಿಗೆ ಆಪತ್ಭಾಂದವ ಎಂದರೆ ಕುರಿಗಳು. ಹೆಚ್ಚೆಂದರೆ ಒಂದೆರಡು ತಳಿಯ ಕುರಿಗಳನ್ನು ನಾವು ನೋಡಿರಬಹುದು. ಆದರೆ ಇಲ್ಲಿ ವಿವಿಧ ಬಗೆಯ ಕುರಿಗಳು ಗಮನ ಸೆಳೆದವು. ನಾರಿಸ್ವರ್ಣ ಎಂಬ ತಳಿಯ ಕುರಿ ಕುರಿತು ಪ್ರಬಂಧವನ್ನೇ ಬರೆಯಬಹುದು. ದೊಡ್ಡ ತಲೆ, ಉದ್ದನೆಯ ಶರೀರ, ಎತ್ತರದ ಕಾಲುಗಳು ಮತ್ತು ಕೊಬ್ಬಿದ ದೇಹದ ಕುರಿಗಳ ಬಣ್ಣ ಬಿಳಿ. ನೋಡಲೂ ಚೆಂದ. ಹಾಗೆಯೇ ಬೆಲೆಯೂ ದುಬಾರಿ. 100 ಕೆಜಿ ತೂಗುವ ಒಂದೊಂದು ಕುರಿಯ ಬೆಲೆ 1.40 ಲಕ್ಷ ರೂಪಾಯಿ. ಮಾಂಸದ ಬೆಲೆ ಕೇಳಿದರೆ ಬಿರಿಯಾನಿ ಬೆಲೆಯನ್ನು ಊಹಿಸಿ ಕೊಳ್ಳುವುದೂ ಕಷ್ಟ. ಒಂದು ಕೆಜಿ ಮಾಂಸಕ್ಕೆ 2000 ರೂಪಾಯಿ.

ಹೋತ ಅಥವಾ ಮೇಕೆಯ ಬೆಲೆ ಕಡಿಮೆಯೇನಿಲ್ಲ. 20 ಇಂಚು ಉದ್ದ ಹಾಗೂ 9 ಇಂಚು ಅಗಲದ ಕಿವಿ ಹೊಂದಿರುವ ಗಂಡು ಹೋತದ ಬೆಲೆ 2 ಲಕ್ಷ ರೂ. ಬೆಲೆಯನ್ನು ಕಿವಿಗಳ ಉದ್ದ ಮತ್ತು ಅಗಲದ ಆಧಾರದ ಮೇಲೆ ನಿಗದಿಪಡಿಸಲಾಗುತ್ತದೆ ಎಂದು ಮಾಲೀಕರು ಹೇಳುತ್ತಾರೆ. ಒಂದು ಹೋತ 60 ಕೆಜಿಯಿಂದ 80 ಕೆಜಿಯವರೆಗೆ ತೂಗುತ್ತದೆ. ಹೆಣ್ಣು ಮೇಕೆ 55 ಕೆಜಿಯಿಂದ 75 ಕೆಜಿಯವರೆಗೂ ತೂಗುತ್ತದೆ. ಮೂರು ತಿಂಗಳ ಮರಿಗೆ 30 ಸಾವಿರ ರೂ. ಗಳಂತೆ ಮಾರಾಟವಾಗುತ್ತಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ