ಬೆಂಗಳೂರು ರಸ್ತೆ ಧೂಳು ನಿವಾರಿಸಲು 86 ಪುಟ್ಟ ಇವಿ ಸ್ವೀಪರ್‌ ವಾಹನ ಖರೀದಿಸಲು ಬಿಬಿಎಂಪಿ ಚಿಂತನೆ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ರಸ್ತೆ ಧೂಳು ನಿವಾರಿಸಲು 86 ಪುಟ್ಟ ಇವಿ ಸ್ವೀಪರ್‌ ವಾಹನ ಖರೀದಿಸಲು ಬಿಬಿಎಂಪಿ ಚಿಂತನೆ

ಬೆಂಗಳೂರು ರಸ್ತೆ ಧೂಳು ನಿವಾರಿಸಲು 86 ಪುಟ್ಟ ಇವಿ ಸ್ವೀಪರ್‌ ವಾಹನ ಖರೀದಿಸಲು ಬಿಬಿಎಂಪಿ ಚಿಂತನೆ

ಬೆಂಗಳೂರು ಮಹಾನಗರದಲ್ಲಿ ರಸ್ತೆ ಧೂಳು ನಿವಾರಿಸುವುದು ದೊಡ್ಡ ಸವಾಲಿನ ಕೆಲಸ. ಇದಕ್ಕಾಗಿ ಬಿಬಿಎಂಪಿ 86 ಪುಟ್ಟ ಇವಿ ಸ್ವೀಪರ್ ವಾಹನಗಳನ್ನು ಖರೀದಿಸಲು ಮುಂದಾಗಿದೆ. ಈಗಾಗಲೇ ಟೆಂಡರ್ ಕರೆದಿರುವ ಪಾಲಿಕೆ ಅದನ್ನು ಅಂತಿಮಗೊಳಿಸಿದ ಬಳಿಕ ನಾಲ್ಕು ತಿಂಗಳಲ್ಲಿ ಅವುಗಳನ್ನು ಒದಿಸಬೇಕು ಎಂಬ ಷರತ್ತು ವಿಧಿಸಿದೆ. ಇದರ ವಿವರ ಇಲ್ಲಿದೆ.

ಬೆಂಗಳೂರು ರಸ್ತೆ ಧೂಳು ನಿವಾರಿಸಲು 86 ಪುಟ್ಟ ಇವಿ ಸ್ವೀಪರ್‌ ವಾಹನ ಖರೀದಿಸಲು ಬಿಬಿಎಂಪಿ ಚಿಂತನೆ ನಡೆಸಿದೆ. (ಬಲ ಚಿತ್ರದಲ್ಲಿರುವ ಇವಿ ಸ್ವೀಪರ್ ವಾಹನಗಳು ಮೆಟಾ ಎಐ ರಚಿಸಿದ ಚಿತ್ರವಾಗಿದ್ದು ಸಾಂಕೇತಿಕವಾಗಿ ಬಳಸಲಾಗಿದೆ)
ಬೆಂಗಳೂರು ರಸ್ತೆ ಧೂಳು ನಿವಾರಿಸಲು 86 ಪುಟ್ಟ ಇವಿ ಸ್ವೀಪರ್‌ ವಾಹನ ಖರೀದಿಸಲು ಬಿಬಿಎಂಪಿ ಚಿಂತನೆ ನಡೆಸಿದೆ. (ಬಲ ಚಿತ್ರದಲ್ಲಿರುವ ಇವಿ ಸ್ವೀಪರ್ ವಾಹನಗಳು ಮೆಟಾ ಎಐ ರಚಿಸಿದ ಚಿತ್ರವಾಗಿದ್ದು ಸಾಂಕೇತಿಕವಾಗಿ ಬಳಸಲಾಗಿದೆ)

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತನ್ನ ವ್ಯಾಪ್ತಿಯ ಜನನಿಬಿಡ ಮಾರುಕಟ್ಟೆ ಕೇಂದ್ರ ಮತ್ತು ವಾಣಿಜ್ಯ ಬೀದಿಗಳಲ್ಲಿರುವ ಧೂಳು ಕಡಿಮೆ ಮಾಡುವುದಕ್ಕೆ ಆಟೋ ರಿಕ್ಷಾಕಕ್ಕಿಂತ ಚಿಕ್ಕದಾದ 86 ಬ್ಯಾಟರಿ ಚಾಲಿತ ಮೆಕ್ಯಾನಿಕಲ್ ಸ್ವೀಪರ್ ವಾಹನವನ್ನು ಖರೀದಿಸಲು ಚಿಂತನೆ ನಡೆಸಿದೆ. ಈ ಸಂಬಂಧ ಟೆಂಡರ್ ಅನ್ನು ಕರೆಯಲಾಗಿದೆ ಎಂದು ದ ಹಿಂದೂ ವರದಿ ಮಾಡಿದೆ. ಬೆಂಗಳೂರಿನ ತ್ಯಾಜ್ಯ ವಿಲೇವಾರಿ ಸಮಸ್ಯೆಯಂತೆಯೇ ರಸ್ತೆಗಳಲ್ಲಿ ಧೂಳಿನ ಸಮಸ್ಯೆಯೂ ಬಹುದೊಡ್ಡ ಸವಾಲಿನ ವಿಚಾರ. ಇದರ ನಿರ್ವಹಣೆಗಾಗಿ ಸದ್ಯ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಳಿ 25 ಮೆಕ್ಯಾನಿಕಲ್ ಸ್ವೀಪರ್‌ ಯಂತ್ರಗಳಿವೆ. ಆದರೆ ಅವೆಲ್ಲವೂ ಗಾತ್ರದಲ್ಲಿ ಟ್ರಕ್‌ನಷ್ಟು ದೊಡ್ಡವು. ಹೀಗಾಗಿ ಇವುಗಳನ್ನು ಕೆಲಸಕ್ಕೆ ನಿಯೋಜಿಸಬೇಕಾದರೆ ರಾತ್ರಿ ವೇಳೆ ಮಾತ್ರ ಸಾಧ್ಯ. ಹಗಲು ಇವು ರಸ್ತೆಗಿಳಿದರೆ ಸಂಚಾರ ದಟ್ಟಣೆ ಇನ್ನಷ್ಟು ಹೆಚ್ಚಾಗುತ್ತದೆ ಎಂಬ ಆತಂಕವೂ ಇದೆ.

ರಸ್ತೆ ಧೂಳು ನಿರ್ವಹಣೆ ಸವಾಲು ಎದುರಿಸುತ್ತಿದೆ ಬಿಬಿಎಂಪಿ

ಪಾಲಿಕೆ ಬಳಿ 25 ಮೆಕ್ಯಾನಿಕಲ್ ಸ್ವೀಪರ್‌ ವಾಹನಗಳಿದ್ದು, ಅವು ಟ್ರಕ್ ಗಾತ್ರದ್ದಾದ ಕಾರಣ ಕಿರಿದಾದ ರಸ್ತೆಗಳ ಧೂಳು ನಿವಾರಿಸಲು ಸಾಧ್ಯವಾಗುತ್ತಿಲ್ಲ. ವಿಶೇಷವಾಗಿ ಹಳೆ ಪೇಟೆ ಪ್ರದೇಶಗಳಲ್ಲಿ ಕೆಲಸ ಮಾಡದು. ಹೀಗಾಗಿ, ಎರಡು ಕ್ಯೂಬಿಕ್ ಮೀಟರ್‌ಗಿಂತ ಕಡಿಮೆ ಸಾಮರ್ಥ್ಯದ ಬ್ಯಾಟರಿ ಚಾಲಿತ ಇವಿ ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರಗಳನ್ನು ಖರೀದಿಸಲು ರಾಜ್ಯ ಸರ್ಕಾರವು 15 ನೇ ಹಣಕಾಸು ಆಯೋಗದ ಅನುದಾನದ ಅಡಿಯಲ್ಲಿ ಹಣವನ್ನು ಮಂಜೂರು ಮಾಡಿದೆ. ಬಿಬಿಎಂಪಿ ಪ್ರಕಟಿಸಿರುವ ಟೆಂಡರ್ ಪ್ರಕಾರ 86 ಸಣ್ಣ ಇವಿ ಮೆಕ್ಯಾನಿಕಲ್ ಸ್ವೀಪರ್‌ಗಳನ್ನು ಅಂದಾಜು 5.8 ಕೋಟಿ ರೂಪಾಯಿ ಮೌಲ್ಯದಲ್ಲಿ ಖರೀದಿಸಲು ಬಿಬಿಎಂಪಿ ಸಿದ್ಧತೆ ನಡೆಸಿದೆ. ಟೆಂಡರ್‌ ಅಂತಿಮವಾದ ನಂತರ ಈ ವಾಹನಗಳನ್ನು ವಿತರಿಸಲು ಪೂರೈಕೆದಾರರಿಗೆ ನಾಲ್ಕು ತಿಂಗಳ ಕಾಲಾವಕಾಶವಿರುತ್ತದೆ.

"ಬೇಸಿಗೆಯಲ್ಲಿ ಅಥವಾ ಕೆಲವು ನಾಗರಿಕ ಕೆಲಸಗಳು ನಡೆಯುತ್ತಿರುವಾಗ ಧೂಳಿನ ಸಮಸ್ಯೆ ತೀವ್ರವಾಗಿರುತ್ತದೆ. ಅಂತಹ ಸ್ಥಳಗಳಲ್ಲಿ ಈ ವಾಹನಗಳನ್ನು ನಿಯೋಜಿಸಲಾಗುವುದು. ಈ ವಾಹನಗಳು ತುಂಬಾ ಸಾಂದ್ರವಾಗಿರುವುದರಿಂದ, ಅವು ಕಿರಿದಾದ ಬೈಲೇನ್‌ಗಳನ್ನು ಸಹ ಗುಡಿಸಬಲ್ಲವು”ಎಂದು ಬಿಬಿಎಂಪಿ ಅಧಿಕಾರಿ ಹೇಳಿದ್ದಾಗಿ ವರದಿ ವಿವರಿಸಿದೆ.

ಮನೆಯಿಂದ ಕಸ ಸಂಗ್ರಹಕ್ಕೆ ಶುಲ್ಕ

ಬಿಬಿಎಂಪಿ ವ್ಯಾಪ್ತಿಯಲ್ಲಿ ಮನೆಯಿಂದ ಕಸ ಸಂಗ್ರಹ ಮಾಡಲು ಶುಲ್ಕವನ್ನು ಸಂಗ್ರಹ ಮಾಡುವ ಪ್ರಸ್ತಾವನೆ ಸಿದ್ಧಗೊಳಿಸಿದ ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಲಿಮಿಟೆಡ್‌ ಅದನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ. ಜನರು ಆಸ್ತಿ ತೆರಿಗೆ ಪಾವತಿ ಮಾಡುವಾಗಲೇ ಕಸ ನಿರ್ವಹಣಾ ಶುಲ್ಕವನ್ನು ಸೇರಿಸಿ ಸಂಗ್ರಹ ಮಾಡುವ ಪ್ರಸ್ತಾವನೆ ಇದಾಗಿದ್ದು, ಸರ್ಕಾರ ಇನ್ನೂ ಅಂತಿಮ ಒಪ್ಪಿಗೆ ನೀಡಿಲ್ಲ.

ಕಸ ಸಂಗ್ರಹ ಶುಲ್ಕ ನಿಗದಿಗೆ ಒಟ್ಟು 6 ವಿಭಾಗ ಮಾಡಲಾಗಿದೆ. ಪ್ರತಿ ತಿಂಗಳು 200 ರೂಪಾಯಿಯಿಂದ 400 ರೂಪಾಯಿ ತನಕ ಶುಲ್ಕವನ್ನು ಸಂಗ್ರಹ ಮಾಡುವ ಪ್ರಸ್ತಾವನೆ ಇದಾಗಿದೆ. ಆದರೆ ಹೋಟೆಲ್, ವಾಣಿಜ್ಯ ಸಂಕೀರ್ಣ ಇವುಗಳಿಗೆ ಯಾವ ಮಾದರಿಯಲ್ಲಿ ಶುಲ್ಕ ಸಂಗ್ರಹ ಮಾಡಲಾಗುತ್ತದೆ ಎಂಬ ಬಗ್ಗೆ ಇನ್ನೂ ಖಚಿತವಾದ ಮಾಹಿತಿ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದು, ವಿವರ ಮಾಹಿತಿ ಇನ್ನಷ್ಟೆ ತಿಳಿಯಬೇಕಿದೆ.

ಬೆಂಗಳೂರು ನಗರದ ಶಾಸಕರು ಪ್ರತಿ ಮನೆಗೆ 200 ರೂ. ಶುಲ್ಕವನ್ನು ಸಂಗ್ರಹ ಮಾಡಬಹುದು ಎಂದು ಕಳೆದ ವರ್ಷ ಸಲಹೆಗಳನ್ನು ನೀಡಿದ್ದರು. ಇವನ್ನೆಲ್ಲ ಪರಿಗಣಿಸಿ ಪ್ರಸ್ತಾವನೆ ಸಿದ್ಧಪಡಿಸಲಾಗಿದ್ದು, ಇದಕ್ಕೆ ಅಂತಿಮ ಒಪ್ಪಿಗೆ ಸಿಗಲಿದೆ ಎಂಬ ನಿರೀಕ್ಷೆಯಲ್ಲಿ ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಲಿಮಿಟೆಡ್‌ ಕಂಪನಿ ಇದೆ. ಎಂದು ವರದಿ ಹೆಳಿದೆ.

Whats_app_banner