ಕರ್ನಾಟಕದಲ್ಲಿ ಡ್ರಗ್ಸ್ ದಂಧೆ ಹತೋಟಿಗೆ; ಪೇನ್ ಕಿಲ್ಲರ್ ಮಾತ್ರೆಗಳಿಂದ ಆತಂಕ, ನಿಯಂತ್ರಣಕ್ಕೆ ಕ್ರಮ
Sep 18, 2024 02:17 PM IST
ಕರ್ನಾಟಕದಲ್ಲಿ ಡ್ರಗ್ಸ್ ದಂಧೆ ಹತೋಟಿಗೆ ಬಂದಿದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ ಹೇಳಿದ್ದಾರೆ
- ಕರ್ನಾಟಕದಲ್ಲಿ ಡ್ರಗ್ಸ್, ಗಾಂಜಾ ಸೇರಿದಂತೆ ಇನ್ನಿತರ ಮಾದಕ ದ್ರವ್ಯಗಳನ್ನು ನಿಯಂತ್ರಿಸಿದ್ದೇವೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ ಹೇಳಿದ್ದಾರೆ. ಇದೇ ವೇಳೆ ಪೇನ್ ಕಿಲ್ಲರ್ ಮಾತ್ರೆಗಳನ್ನು ಮೆಡಿಸಿನ್ ಎಂದು ಮಾರಾಟ ಮಾಡುತ್ತಿರುವ ಕುರಿತು ಡ್ರಗ್ ಕಂಟ್ರೋಲರ್‌ಗಳಿಗೆ ತಿಳಿಸಲಾಗುತ್ತದೆ. ಆ ಬಗ್ಗೆ ಸಿಎಂ ಜೊತೆಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಕಳೆದ ಒಂದೂವರೆ ವರ್ಷದಲ್ಲಿ ಡ್ರಗ್ಸ್ ದಂಧೆಯನ್ನು ತೀವ್ರ ಹತೋಟಿಕೆ ತಂದಿದ್ದೇವೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿವೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ ಹೇಳಿದ್ದಾರೆ. ಡ್ರಗ್ಸ್ ದಂಧೆ ಹತ್ತಿಕ್ಕಲು ಸಾಕಷ್ಟು ಪ್ರಯತ್ನ ಮಾಡಿದ್ದೇವೆ. ಈಗ ಮೆಡಿಕಲ್ ಶಾಪ್‌ಗಳಲ್ಲಿ ಸಿಗುತ್ತಿರುವ ಪೇನ್ ಕಿಲ್ಲರ್ ಮಾತ್ರೆಗಳಿಂದ ನಮಗೆ ಆತಂಕವಿದೆ. ಪೇನ್ ಕಿಲ್ಲರ್ ಮಾತ್ರೆಗಳನ್ನು ಬೇರೆಬೇರೆ ಕಂಪನಿಗಳು ತಯಾರಿಸುತ್ತಿವೆ. ಅದು ಈಗ ಸುಲಭವಾಗಿ ಕೈಗೆ ಸಿಗುತ್ತಿವೆ. ಯಾವ ರೀತಿ ನಿಯಂತ್ರಿಸಬೇಕು ಎಂಬುದರ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಭೆ ಕರೆದಿದ್ದಾರೆ ಎಂದು ಹೇಳಿದರು.
ಪೇನ್ ಕಿಲ್ಲರ್ ಮಾತ್ರೆಗಳನ್ನು ಮೆಡಿಸಿನ್ ಅಂತ ಮಾರಾಟ ಮಾಡಲಾಗುತ್ತಿದೆ. ವೈದ್ಯರು ಪ್ರಿಸ್‌ಕ್ರೈಬ್ ಮಾಡಿರುವುನ್ನು ಸುಲಭವಾಗಿ ಪಡೆಯಲಾಗುತ್ತಿದೆ. ಇದಕ್ಕೆ ಕಾನೂನು ಬೇರೆ ಇದೆ. ಈ ಕುರಿತು ಡ್ರಗ್ ಕಂಟ್ರೋಲರ್‌ಗಳಿಗೆ ಯಾವ ರೀತಿ ಹೇಳಬೇಕಾಗುತ್ತದೆ ಎಂಬುದರ ಕುರಿತು ಚರ್ಚಿಸಲಾಗುವುದು ಎಂದರು.
ರಾಜ್ಯದಲ್ಲಿ ಗಾಂಜಾ ಸೇರಿದಂತೆ ಇನ್ನಿತರ ಮಾದಕ ದ್ರವ್ಯಗಳನ್ನು ನಿಯಂತ್ರಿಸಿದ್ದೇವೆ. ಪ್ರಕರಣಗಳ ಅಂಕಿ-ಅಂಶಗಳನ್ನು ಗಮನಿಸಿದಾಗ ಬಹಳಷ್ಟು ಕಡಿಮೆಯಾಗಿದೆ. ಎಲ್ಲ ರೀತಿಯ ನಿಯಂತ್ರಣಕ್ಕೆ ಅಗತ್ಯ ಕ್ರಮ ತೆಗೆದುಕೊಂಡಿದ್ದೇವೆ. ಸುಮಾರು ಪ್ರಕರಣಗಳಲ್ಲಿ ಯಶಸ್ವಿಯಾಗಿದ್ದೇವೆ ಎಂದು ತಿಳಿಸಿದರು. ಪಿಎಸ್ಐ ಪರೀಕ್ಷೆಯನ್ನು ಸೆಪ್ಟೆಂಬರ್ 22ರಿಂದ ಸೆಪ್ಟೆಂಬರ್ 28ಕ್ಕೆ ಮುಂದೂಡಲಾಗಿತ್ತು. ಸೆಪ್ಟೆಂಬರ್ 28ರಂದು ಸಹ ಯುಪಿಎಸ್‌ಸಿ ಇಂಗ್ಲೀಷ್ ಪರೀಕ್ಷೆ ಇದೆ ಎಂಬ ಮಾಹಿತಿ ಗೊತ್ತಾದ ಕೂಡಲೇ, ಆ ದಿನವನ್ನು ಅಕ್ಟೋಬರ್ 3ಕ್ಕೆ ಮುಂದೂಡಲಾಗಿತ್ತು. ಕರ್ನಾಟಕ ಪ್ರರೀಕ್ಷಾ ಪ್ರಾಧಿಕಾರವು ಅಕ್ಟೋಬರ್ 3ರಂದು ಪರೀಕ್ಷೆ ನಿಗದಿ ಪಡಿಸಿ ಅಧಿಕೃತವಾಗಿ ಪ್ರಕಟಣೆ ಮಾಡಿದೆ ಎಂದರು.
ಪ್ಯಾಲೆಸ್ತೀನ್ ಧ್ವಜ ಹಾರಿಸಿದ ಪ್ರಕರಣ
ಮೂರು ಜಿಲ್ಲೆಗಳಲ್ಲಿ ಪ್ಯಾಲೆಸ್ತೀನ್ ಧ್ವಜ ಹಾರಿಸಿರುವುದು ಕಂಡು ಬಂದಿದೆ. ಈ ಪ್ರಕರಣಗಳಲ್ಲಿ ಎಲ್ಲರನ್ನು ಬಂಧಿಸಲಾಗಿದೆ. 'ಕೇಂದ್ರ ಸರ್ಕಾರ ಪ್ಯಾಲೆಸ್ತೀನ್‌ಗೆ ಬೆಂಬಲಿಸುತ್ತೇವೆ ಎಂದು ಹೇಳಿಕೆ ಕೊಟ್ಟಿದೆ. ಹೀಗಾಗಿ ಇದರಲ್ಲಿ ನಮ್ಮ ತಪ್ಪೇನಿದೆ ಎಂದು ವಾದಿಸಿದ್ದಾರೆ.' ಆದಾಗ್ಯೂ ಸಹ ಅವರನ್ನು ಬಂಧಿಸಿದ್ದೇವೆ. ಯಾರು ಈ ಸಂದರ್ಭದಲ್ಲಿ ನಿಮಗೆ ಪ್ರಚೋದನೆ ಮಾಡಿ, ಬಾವುಟ ಹಾರಿಸಲು ಹೇಳಿದರು ಎಂಬ ಕುರಿತು ಬಂಧಿತರ ವಿಚಾರಣೆ ನಡೆಯುತ್ತಿದೆ. 17ರಿಂದ 21 ವರ್ಷ ವಯಸ್ಸಿನ ಹುಡುಗರು ಇದನ್ನು ಮಾಡಿದ್ದಾರೆ ಎಂದು ಹೇಳಿದರು.
ನಾಗಮಂಗಲ ಪ್ರಕರಣ
ಪ್ರಕರಣವನ್ನು ದೊಡ್ಡ ಸಮಸ್ಯೆ ಮಾಡುವ ನಿಟ್ಟಿನಲ್ಲಿ ಬಿಜೆಪಿಯವರು ಹೇಳಿಕೆ ನೀಡುತ್ತಿದ್ದಾರೆ. ನಾವು ಕಾನೂನು ಪ್ರಕಾರ ಏನೆಲ್ಲ ಕ್ರಮ ತೆಗೆದುಕೊಳ್ಳಬೇಕು, ಅದೆಲ್ಲವನ್ನು ಕೂಡ ಮುಲಾಜಿಲ್ಲದೆ ಮಾಡಿದ್ದೇವೆ. ಮುಂದಿನ ತನಿಖೆಯಲ್ಲಿ ಏನೆಲ್ಲ ವಿಚಾರಗಳು ಹೊರ ಬರುತ್ತವೆ, ಅದರ ಆಧಾರದ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಯಾವುದೇ ರೀತಿಯ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ನೂರು ಸಲ ಹೇಳುತ್ತೇನೆ. ದಿನಕ್ಕೆ ಒಬ್ಬೊಬ್ಬರಂತೆ ಬಿಜೆಪಿ ಮುಖಂಡರು ನಾಗಮಂಗಲ ವಿಚಾರದಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಇದರಲ್ಲಿ ಬಿಜೆಪಿಯವರು ತಮ್ಮದೇ ಆದ ಒಂದು ಡಿಸೈನ್ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ನಾಗಮಂಗಲ ಗಲಾಟೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಈ ಬಗ್ಗೆ ಕೆಲವರು ತಪ್ಪು ಹೇಳಿಕೆ ನೀಡಿದ್ದಾರೆ ಎಂದು ನಮ್ಮ ಅಧಿಕಾರಿಗಳು ಹೇಳುತ್ತಿದ್ದಾರೆ. ಇದನ್ನು ಪುನರ್ ಪರಿಶೀಲಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಸಾಕ್ಷಿ ಆಧಾರ್ ಮೇಲೆ ಶಾಸಕ ಮುನಿರತ್ನ ಬಂಧನ
ಶಾಸಕ ಮುನಿರತ್ನನನ್ನು ಏಕಾಏಕಿ ಬಂಧಿಸಿಲ್ಲ. ಆತನ ವಿರುದ್ಧ ದೂರು ಕೊಟ್ಟಿದ್ದರು. ಇದಕ್ಕೆ ಪೂರಕವಾದ ವಿಡಿಯೋ ನೀಡಿದ್ದರು. ಅದನ್ನು ಆಧರಿಸಿ ಬಂಧಿಸಲಾಗಿದೆ. ಈಗಾಗಲೇ ಧ್ವನಿ ಮಾದರಿಯನ್ನು ಸಂಗ್ರಹಿಸಿ ಎಫ್‌ಎಸ್ಎಲ್ ಪರೀಕ್ಷೆಗೆ ಕಳುಹಿಸಿದ್ದಾರೆ. ವರದಿ ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.
ಕಳೆದ ವರ್ಷ ಗಣೇಶ ಆಚರಣೆ ವೇಳೆ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಕೋಮು ಸಂಘರ್ಷಗಳಂತಹ ಘಟನೆಗಳು ಸಂಭವಿಸಿಲ್ಲ. ಈ ವರ್ಷವೂ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದೇವೆ. ಅಹಿತಕರ ಘಟನೆ ಆಗಲು ಬಿಡುವುದಿಲ್ಲ ಎಂದು ಈ ಮೊದಲೇ ಹೇಳಿದ್ದೇವೆ. ಬಿಜೆಪಿಯವರು ಎಲ್ಲವನ್ನು ತಿರುಚುತ್ತಿದ್ದಾರೆ. ಇದೆಲ್ಲವನ್ನು ರಾಜ್ಯದ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದರು.