Video: ಬೆಂಗಳೂರಿನಲ್ಲಿ ಮಕ್ಕಳಿದ್ದ ಶಾಲಾ ಬಸ್ ಮೇಲೆ ದುಷ್ಕರ್ಮಿಗಳ ದಾಳಿ; ವ್ಯಾಪಕ ಆಕ್ರೋಶ ಬೆನ್ನಲ್ಲೇ FIR ದಾಖಲು
ಕನ್ನಡ ಸುದ್ದಿ  /  ಕರ್ನಾಟಕ  /  Video: ಬೆಂಗಳೂರಿನಲ್ಲಿ ಮಕ್ಕಳಿದ್ದ ಶಾಲಾ ಬಸ್ ಮೇಲೆ ದುಷ್ಕರ್ಮಿಗಳ ದಾಳಿ; ವ್ಯಾಪಕ ಆಕ್ರೋಶ ಬೆನ್ನಲ್ಲೇ Fir ದಾಖಲು

Video: ಬೆಂಗಳೂರಿನಲ್ಲಿ ಮಕ್ಕಳಿದ್ದ ಶಾಲಾ ಬಸ್ ಮೇಲೆ ದುಷ್ಕರ್ಮಿಗಳ ದಾಳಿ; ವ್ಯಾಪಕ ಆಕ್ರೋಶ ಬೆನ್ನಲ್ಲೇ FIR ದಾಖಲು

ಎಲೆಕ್ಟ್ರಾನಿಕ್ ಸಿಟಿಯಲ್ಲಿ ಶಾಲಾ ಬಸ್‌ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ ಪ್ರಕರಣ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಘಟನೆ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಕ್ಕಳಿದ್ದ ಶಾಲಾ ಬಸ್ ಮೇಲೆ ದುಷ್ಕರ್ಮಿಗಳ ದಾಳಿ
ಬೆಂಗಳೂರಿನಲ್ಲಿ ಮಕ್ಕಳಿದ್ದ ಶಾಲಾ ಬಸ್ ಮೇಲೆ ದುಷ್ಕರ್ಮಿಗಳ ದಾಳಿ

ಬೆಂಗಳೂರು: ಕಾರನ್ನು ಓವರ್‌ಟೇಕ್ ಮಾಡಿದ ಕಾರಣಕ್ಕೆ ಶಾಲಾ ವಾಹನದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ ಘಟನೆ ಕಳೆದ ವಾರ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದೆ. ಬಸ್ಸನ್ನು ಬೆನ್ನತ್ತಿ ಬಂದ ದುಷ್ಕರ್ಮಿಗಳು ರಸ್ತೆಯಲ್ಲೇ ಬಸ್‌ ತಡೆದು ನಿಲ್ಲಿಸಿ, ಡ್ರೈವರ್‌ ಮೇಲೆ ದಾಳಿ ನಡೆಸಲು ಮುಂದಾಗಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈ ಘಟನೆಯು ಶಾಲಾ ವಾಹನದಲ್ಲಿ ಹೋಗುವ ಮಕ್ಕಳ ಸುರಕ್ಷತೆಯ ಬಗ್ಗೆ ಗಂಭೀರ ಕಳವಳಕ್ಕೆ ಕಾರಣವಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ಘಟನೆಯ ವಿಡಿಯೋ ವೈರಲ್ ಆಗಿದೆ. ವಿಡಿಯೊದಲ್ಲಿ ದುಷ್ಕರ್ಮಿಗಳ ಗುಂಪೊಂದು ಚಾಲಕನನ್ನು ಬಸ್ಸಿನಿಂದ ಹೊರಗೆಳೆಯಲು ಯತ್ನಿಸಿ ಹಲ್ಲೆಗೆ ಯತ್ನಿಸುತ್ತಿರುವುದು ಕಾಣಿಸುತ್ತಿದೆ. ಘಟನೆ ನಡೆದಾಗ ಬಸ್‌ನಲ್ಲಿ ಶಾಲಾ ಮಕ್ಕಳು ಕೂಡಾ ಇದ್ದರು. ಅಲ್ಲದೆ, ರಸ್ತೆಯಲ್ಲಿ ಶಾಲಾ ಬಸ್‌ ನಿಲ್ಲಿಸಿದ್ದರಿಂದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದೆ. ಈ ವೇಳೆ ಬಸ್ಸಿನ ಹಿಂಬದಿಯಲ್ಲಿದ್ದ ವಾಹನದವರು ಘಟನೆಯನ್ನು ಚಿತ್ರೀಕರಿಸಿದ್ದಾರೆ.

ಕರ್ನಾಟಕ ಪೋರ್ಟ್‌ಫೋಲಿಯೊ ಎಂಬ ಎಕ್ಸ್ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. “ಸಂಜೆ ಸುಮಾರು 4 ಗಂಟೆ ವೇಳೆ ಎಲೆಕ್ಟ್ರಾನಿಕ್ ಸಿಟಿಯ ಟ್ರೆಮಿಸ್ ಶಾಲೆ ನಿರ್ವಹಿಸುತ್ತಿದ್ದ ರಸ್ತೆ 35ರ ಶಾಲಾ ಬಸ್ ಮೇಲೆ ಗೂಂಡಾಗಳ ಗುಂಪು ಕ್ರೂರವಾಗಿ ದಾಳಿ ನಡೆಸಿದೆ. ಗುಂಪಿನಲ್ಲಿ 6ರಿಂದ 8 ಜನರಿದ್ದರು. ನಾವು ಈ ವೇಳೆ ಸ್ಕಾರ್ಪಿಯೋದಲ್ಲಿ ಪ್ರಯಾಣಿಸುತ್ತಿದ್ದೆವು” ಎಂದು ಟ್ವೀಟ್‌ ಮಾಡಿದ್ದಾರೆ.

ದುಷ್ಕರ್ಮಿಗಳ ಗುಂಪು ಬಸ್ ಮೇಲೆ ರಾಡ್‌ನಿಂದ ದಾಳಿ ನಡೆಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. “ಆ ಗುಂಪು ಶಾಲಾ ಬಸ್ ಅನ್ನು ಹಿಂಬಾಲಿಸಿ ಕ್ರೂರವಾಗಿ ದಾಳಿ ನಡೆಸಿದರು. ಲೋಹದ ವಸ್ತುವನ್ನು ಬಳಸಿ ಬಸ್ಸಿನ ಕಿಟಕಿಯನ್ನು ಒಡೆದು, ಡ್ರೈವರ್‌ ಮೇಲೆ ಹಲ್ಲೆಗೆ ಮುಂದಾದರು. ಈ ವೇಳೆ ಬಸ್‌ ಒಳಗಿದ್ದ ಮಕ್ಕಳಿಗೆ ಭಯಾನಕ ಮತ್ತು ಅಪಾಯಕಾರಿ ಪರಿಸ್ಥಿತಿಯನ್ನು ಸೃಷ್ಟಿಸಿದರು” ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ. ಇಂಥಾ ಸನ್ನಿವೇಶದಿಂದ ಮಕ್ಕಳಲ್ಲಿ ಭಯದ ವಾತಾವರಣ ಸೃಷ್ಟಿಯಾಗುತ್ತದೆ. ನಿತ್ಯ ಶಾಲೆಗೆ ಪ್ರಯಾಣಿಸುವಾಗ ಆತಂಕ ನಿರ್ಮಾಣವಾಗುತ್ತದೆ ಎಂದು ಬಳಕೆದಾರರು ಹೇಳಿದ್ದಾರೆ.

ಎಫ್‌ಐಆರ್‌ ದಾಖಲು

ಆರೋಪಿಗಳ ವಿರುದ್ಧ ಈಗಾಗಲೇ ಎಫ್ಐಆರ್ ದಾಖಲಿಸಲಾಗಿದೆ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಘಟನೆ ನಂತರ ಇದೇ ಶಾಲೆಯಲ್ಲಿ ಓದುತ್ತಿರುವ ಮಗುವಿನ ಪೋಷಕರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. “ಇದು ನನ್ನ ಮಗ ಓದುವ ಶಾಲೆ. ಘಟನೆ ತುಂಬಾ ಭಯಾನಕವಾಗಿದೆ. ದುಷ್ಕರ್ಮಿಗಳ ವಾಹನವನ್ನು ನೋಡಿದರೆ ಅದು ಕಪ್ಪು ಬಣ್ಣದ ಗಾಜನ್ನು ಹೊಂದಿದೆ. ಅವರು ಇಷ್ಟು ದಿನ ಹೇಗೆ ತಪ್ಪಿಸಿಕೊಂಡಿದ್ದಾರೆ ಎಂದು ತಿಳಿಯುತ್ತಿಲ್ಲ. ಶೀಘ್ರದಲ್ಲೇ ಕಠಿಣ ಕ್ರಮದ ನಿರೀಕ್ಷೆಯಲ್ಲಿದ್ದೇನೆ,” ಎಂದು ಹೇಳಿದ್ದಾರೆ.

Whats_app_banner