ಹೋಟೆಲ್ ಕನ್ಸಲ್ಟೆನ್ಸಿ ನಡೆಸುತ್ತಿದ್ದ ವ್ಯಕ್ತಿಯ ನಿಗೂಢ ಸಾವು; ಹೊತ್ತಿ ಉರಿದ ಕಾರಿನೊಳಗಿದ್ದ ಯುವಕ; ಆತ್ಮಹತ್ಯೆ ಶಂಕೆ
Nov 17, 2024 11:22 AM IST
ಹೋಟೆಲ್ ಕನ್ಸಲ್ಟೆನ್ಸಿ ನಡೆಸುತ್ತಿದ್ದ ವ್ಯಕ್ತಿಯ ನಿಗೂಢ ಸಾವು ಸಂಭವಿಸಿದೆ. ಹೊತ್ತಿ ಉರಿದ ಕಾರಿನೊಳಗಿದ್ದ ಯುವಕನ ಮೃತದೇಹ ಪತ್ತೆಯಾಗಿದೆ. ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಮೃತನನ್ನು ಪ್ರದೀಪ್ ಎಂದು ಗುರುತಿಸಲಾಗಿದೆ. ಸಾಂಕೇತಿಕವಾಗಿ ಆತ್ಮಹತ್ಯೆ ತಡೆಯ ಚಿತ್ರವನ್ನೂ ಬಳಸಲಾಗಿದೆ.
ಬೆಂಗಳೂರಿನಲ್ಲಿ ಶನಿವಾರ ಅಪರಾಹ್ನ ಕಳವಳಕಾರಿ ಘಟನೆಯೊಂದು ನಡೆದಿದ್ದು, ಹೋಟೆಲ್ ಕನ್ಸಲ್ಟೆನ್ಸಿ ನಡೆಸುತ್ತಿದ್ದ ವ್ಯಕ್ತಿಯ ನಿಗೂಢ ಸಾವು ಸಂಭವಿಸಿದೆ. ಹೊತ್ತಿ ಉರಿದ ಕಾರಿನೊಳಗಿದ್ದ ಯುವಕನ ಮೃತದೇಹ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ.
ಬೆಂಗಳೂರು: ಹೋಟೆಲ್ ಕನ್ಸಲ್ಟೆನ್ಸಿ ನಡೆಸುತ್ತಿದ್ದ ವ್ಯಕ್ತಿಯ ನಿಗೂಢ ಸಾವು ಗಮನಸೆಳೆದಿದೆ. ಬೆಂಗಳೂರಿನಲ್ಲಿ ರಸ್ತೆ ಬದಿಯಲ್ಲಿ ಹೊತ್ತಿ ಉರಿದ ಕಾರಿನೊಳಗಿದ್ದ ಯುವಕ ಸುಟ್ಟುಕರಕಲಾಗಿದ್ದ. ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕಳವಳಕಾರಿ ಘಟನೆ ನಡೆದಿದೆ. ನಾಗರಬಾವಿ ಎರಡನೇ ಹಂತದ ನಿವಾಸಿ ಪ್ರದೀಪ್ (42) ಮೃತ ವ್ಯಕ್ತಿ ಎಂದು ಪೊಲೀಸ್ ಮೂಲಗಳು ತಿಳಿಸಿದ್ದಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಮಾಡಿದೆ. ಮೃತ ಪ್ರದೀಪ್ ಹೋಟೆಲ್ ಕನ್ಸಲ್ವೆನ್ಸಿ ಸರ್ವಿಸ್ ನಡೆಸುತ್ತಿದ್ದರು. ಶನಿವಾರ (ನವೆಂಬರ್ 16) ಮಧ್ಯಾಹ್ನ ಸುಮಾರು 3.10ಕ್ಕೆ ಮುದ್ದಿನಪಾಳ್ಯದ ವಿಶ್ವೇಶ್ವರಯ್ಯ ಲೇಔಟ್ ರಸ್ತೆ ಬದಿ ದೆಹಲಿ ನೋಂದಣಿಯ ಸ್ಕೋಡಾ ಕಾರಿನಲ್ಲಿ ಕುಳಿತು ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿದ್ದಾಗಿ ವರದಿ ಹೇಳಿದೆ.
ವಿಶ್ವೇಶ್ವರಯ್ಯ ಲೇಔಟ್ ರಸ್ತೆಯಲ್ಲಿ ಕಳವಳಕಾರಿ ಕೃತ್ಯ
ಮುದ್ದಿನಪಾಳ್ಯದ ವಿಶ್ವೇಶ್ವರಯ್ಯ ಲೇಔಟ್ ರಸ್ತೆಗೆ ಶನಿವಾರ ಮಧ್ಯಾಹ್ನ ವ್ಯಕ್ತಿಯೊಬ್ಬರು ಸ್ಕೋಡಾ ಕಾರಿನಲ್ಲಿ ಬಂದಿದ್ದರು. ಕೆಲವೇ ನಿಮಿಷಗಳಲ್ಲಿ ಕಾರಿನೊಳಗೆ ದಟ್ಟ ಹೊಗೆ ಕಾಣಿ ಸಿಕೊಂಡಿದ್ದು, ದಿಢೀರ್ ಬೆಂಕಿ ಹೊತ್ತಿಕೊಂಡಿದೆ. ಸ್ಥಳೀಯರು ಕೂಡಲೇ ಇದನ್ನು ಗಮನಿಸಿ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದರು. ವಿಷಯ ತಿಳಿದ ಕೂಡಲೇ, ಬ್ಯಾಡರಹಳ್ಳಿ ಠಾಣೆಯ ಹೋಯ್ಸಳ ಗಸ್ತು ವಾಹನದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಯನ್ನು ಕರೆಸಿ ಬೆಂಕಿ ನಂದಿಸಿದ್ದಾರೆ. ಕಾರಿನೊಳಗೆ ಪರಿಶೀಲಿಸಿದಾಗ ಕಾರಿನ ಚಾಲಕನ ಸೀಟಿನಲ್ಲಿ ಅರೆಬರೆ ಬೆಂದ ಸ್ಥಿತಿಯಲ್ಲಿ ಪುರುಷನ ಮೃತದೇಹ ಪತ್ತೆಯಾಗಿದೆ ಎಂದು ವರದಿ ವಿವರಿಸಿದೆ.
ಪತ್ನಿ ಹೆಸರಿನಲ್ಲಿ ಕಾರು; ಕೃತ್ಯಕ್ಕೆ ಮುನ್ನ ಪೆಟ್ರೋಲ್ ಖರೀದಿ
ಹೋಟೆಲ್ ಕನ್ಸಲ್ವೆನ್ಸಿ ಸರ್ವಿಸ್ ಹೊಂದಿದ್ದ ಪ್ರದೀಪ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹಣಕಾಸು ವಿಚಾರ ಅಥವಾ ವ್ಯವಹಾರ ನಷ್ಟದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಪ್ರಾಥಮಿಕ ತನಿಖೆ ಪ್ರಕಾರ, ಪ್ರದೀಪ್ ಮಾರ್ಗ ಮಧ್ಯೆ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಖರೀದಿಸಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಳಿಕ ಮುದ್ದಿನಪಾಳ್ಯದ ವಿಶ್ವೇಶ್ವರಯ್ಯ ಲೇಔಟ್ ರಸ್ತೆಯಲ್ಲಿ ಕಾರು ನಿಲ್ಲಿಸಿಕೊಂಡು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ ಎಂದು ವರದಿ ವಿವರಿಸಿದೆ.
ಮೃತನ ಗುರುತು ಪತ್ತೆ ಕೆಲಸ ಆರಂಭದಲ್ಲಿ ಕಷ್ಟವಾಗಿತ್ತು. ಸ್ಕೋಡಾ ಕಾರಿನ ನೋಂದಣಿ ಸಂಖ್ಯೆಯನ್ನು ದೆಹಲಿ ಆರ್‌ಟಿಒ ಅಧಿಕಾರಿಗಳೊಂದಿಗೆ ಪರಿಶೀಲಿಸಿದಾಗ ಕಾರು ಖರೀದಿಸಿದ ವ್ಯಕ್ತಿ ಪ್ರದೀಪ್ ಎಂಬುದು ಬಹಿರಂಗವಾಗಿದೆ. ಆದರೆ ಕಾರು ಪ್ರದೀಪ್ ಪತ್ನಿಯ ಹೆಸರಿನಲ್ಲಿದೆ. ಪ್ರದೀಪ್ ಆ ಕಾರಿನ ಮಾಲೀಕನಿಂದ ಎನ್‌ಒಸಿ ಪಡೆದು ಪತ್ನಿ ಹೆಸರಿಗೆ ಕಾರಿನ ಮಾಲೀಕತ್ವ ವರ್ಗಾವಣೆಗೆ ಜಯನಗರ ಆರ್ ಟಿಒ ಕಚೇರಿಗೆ ಎನ್ ಒಸಿ ಸಲ್ಲಿಸಿರುವುದು ತಿಳಿದು ಬಂದಿದೆ. ಪೊಲೀಸರು ಪ್ರದೀಪ್ ಅವರ ಪತ್ನಿಯನ್ನು ಸಂಪರ್ಕಿಸಿ ವಿಚಾರಿಸಿದಾಗ, ಸ್ಕೋಡಾ ಕಾರನ್ನು ಪತಿ ಪ್ರದೀಪ್ ಬಳಸುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಇದರ ಆಧಾರದ ಮೇಲೆ ಕಾರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಪ್ರದೀಪ್ ಎ೦ದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾಗಿ ವರದಿ ಹೇಳಿದೆ.
ಗಮನಿಸಿ: ಖಿನ್ನತೆ, ಆತ್ಮಹತ್ಯೆಯ ಆಲೋಚನೆಗಳು ಬಾಧಿಸುತ್ತಿದ್ದರೆ ನಿಮ್ಮ ಗೆಳತಿ / ಗೆಳೆಯರೊಂದಿಗೆ, ಹೆತ್ತವರೊಂದಿಗೆ, ಸಂಬಂಧಿಕರು, ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ಪೊಲೀಸರ, ಆಪ್ತಸಮಾಲೋಚಕರ, ವೈದ್ಯರ ನೆರವು ಪಡೆಯಿರಿ. ಕರ್ನಾಟಕದಲ್ಲಿ ಆರೋಗ್ಯ ಸಹಾಯವಾಣಿ 104, ವೃದ್ಧರ ಸಹಾಯವಾಣಿ 1090, ಮಕ್ಕಳ ಸಹಾಯವಾಣಿ 1098 ಮತ್ತು ಸ-ಮುದ್ರ ಸಹಾಯವಾಣಿ 98803 96331 ಮೂಲಕ ಟೆಲಿ ಕೌನ್ಸೆಲಿಂಗ್ ನೆರವು ಪಡೆದುಕೊಳ್ಳಿ. ಕೊನೇ ನಿರ್ಧಾರಕ್ಕೆ ಮೊದಲು ನಿಮ್ಮವರ ಬಗ್ಗೆ ಒಂದು ಕ್ಷಣ ಯೋಚಿಸಿ.