ಬೆಂಗಳೂರು ಐಟಿ, ಬಿಟಿ ಪಾರ್ಕ್‌ಗಳ ಸಮಸ್ಯೆ ಆಲಿಸಲು ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಮಾಲೋಚನಾ ಸಮಿತಿ ರಚನೆ; ಜನ ಸ್ಪಂದನೆ ಹೀಗಿತ್ತು
Oct 24, 2024 02:37 PM IST
ಬೆಂಗಳೂರು ಐಟಿ, ಬಿಟಿ ಪಾರ್ಕ್‌ಗಳ ಸಮಸ್ಯೆ ಆಲಿಸಲು ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಮಾಲೋಚನಾ ಸಮಿತಿ ರಚನೆ ಮಾಡಲಾಗಿದೆ ಎಂದು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. (ಬೆಂಗಳೂರು ಮಳೆಗೆ ರಸ್ತೆಯಲ್ಲಿ ಮೀನು ಹಿಡಿದ ಜನರ ಚಿತ್ರವನ್ನು ಸಾಂಕೇತಿಕವಾಗಿ ಬಳಸಲಾಗಿದೆ)
ಬೆಂಗಳೂರು ಐಟಿ, ಬಿಟಿ ಪಾರ್ಕ್‌ಗಳ ಸಮಸ್ಯೆಗಳನ್ನು ಆಲಿಸುವುದಕ್ಕೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಮಾಲೋಚನಾ ಸಮಿತಿ ರಚಿಸಿರುವುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಅವರ ಈ ಹೇಳಿಕೆಯು ಭಾರಿ ಮಳೆ ಮತ್ತು ಸಂಕಷ್ಟದ ನಡುವೆ ಬಂದ ಕಾರಣ, ವ್ಯಾಪಕ ಟೀಕೆಗೆ, ಜನರ ಅಸಮಾಧಾನಕ್ಕೆ ಗುರಿಯಾಯಿತು.
ಬೆಂಗಳೂರು: ನಿರಂತರ ಸುರಿದ ಮಳೆಗೆ ಬೆಂಗಳೂರು ಜನಜೀವನ ಅಸ್ತವ್ಯಸ್ತವಾಗಿರುವ ನಡೆಯವೇ, ಹೊರ ವರ್ತುಲ ರಸ್ತೆಯ ಭಾಗದಲ್ಲಿರುವ ಐಟಿ ಬಿಟಿ ಪಾರ್ಕ್‌ಗಳಲ್ಲಿರುವ ಉದ್ಯೋಗಿಗಳ ಆಕ್ರೋಶ, ಅಸಮಾಧಾನಗಳು ತೀವ್ರಗೊಂಡಿವೆ. ಈ ನಡುವೆ, ಐಟಿ, ಬಿಟಿ ಪಾರ್ಕ್‌ಗಳ ಸಮಸ್ಯೆಗಳನ್ನು ಆಲಿಸುವುದಕ್ಕೆ ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಮಾಲೋಚನ ಸಮಿತಿ ರಚಿಸಲಾಗಿದೆ ಎಂದು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಭಾರೀ ಮಳೆಯಿಂದ ಉಲ್ಬಣಗೊಂಡಿರುವ ಬೆಂಗಳೂರಿನ ಮೂಲಸೌಕರ್ಯ ಸಮಸ್ಯೆಗಳನ್ನು ಪರಿಹರಿಸಲು ಸಮಾಲೋಚನಾ ಸಮಿತಿ ಕೆಲಸ ಮಾಡಲಿದೆ ಎಂದು ಆಶ್ವಾಸನೆ ನೀಡಲು ಸಚಿವ ಖರ್ಗೆ ಪ್ರಯತ್ನಿಸಿದರು.
ಡಿಕೆ ಶಿವಕುಮಾರ್ ನೇತೃತ್ವದ ಸಮಾಲೋಚನಾ ಸಮಿತಿ
"ಅಲ್ಪಾವಧಿಯ ಮತ್ತು ದೀರ್ಘಾವಧಿಯ ಕಾರ್ಯತಂತ್ರಗಳನ್ನು ಅಭಿವೃದ್ಧಿಪಡಿಸಲು ಉದ್ಯಮದ ನಾಯಕರು, ನಿಗಮಗಳು ಮತ್ತು ನಾಗರಿಕ ಗುಂಪುಗಳನ್ನು ತೊಡಗಿಸಿಕೊಳ್ಳಲು ಕರ್ನಾಟಕ ಸರ್ಕಾರ ಉದ್ದೇಶಿಸಿದೆ. ಈಗಿರುವ ಪರಿಸ್ಥಿತಿಯಲ್ಲಿ ಸಮಸ್ಯೆಗಳನ್ನು ಬಗೆಹರಿಸಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿಯು ಐಟಿ, ಬಿಟಿ ಮತ್ತು ಸ್ಟಾರ್ಟಪ್ ವಿಷನ್ ಗ್ರೂಪ್‌ಗಳ ಮುಖ್ಯಸ್ಥರನ್ನು ಒಳಗೊಂಡಿರುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ನಗರದ ಮೂಲಸೌಕರ್ಯವನ್ನು ಬಲಪಡಿಸಲು ತತ್‌ಕ್ಷಣದ, ಅಲ್ಪಾವಧಿಯ ಮತ್ತು ದೀರ್ಘಾವಧಿಯ ಕ್ರಮಗಳನ್ನು ಚರ್ಚಿಸಲು ಉದ್ಯಮದ ಮಧ್ಯಸ್ಥಗಾರರು, ಕಾರ್ಪೊರೇಟ್‌ಗಳು ಮತ್ತು ನಾಗರಿಕ ಗುಂಪುಗಳ ಸಲಹೆ ಸೂಚನೆಯನ್ನು ಪಡೆದುಕೊಂಡು ಕಾರ್ಯಪ್ರವೃತ್ತವಾಗುವುದು ಸಮಿತಿಯ ಉದ್ದೇಶ. ಈ ಪ್ರಮುಖ ಕ್ಷೇತ್ರಗಳ ಸಂಸ್ಥೆಗಳು ಎದುರಿಸುತ್ತಿರುವ ಕಾರ್ಯಾಚರಣೆಯ ಸವಾಲುಗಳನ್ನು ಪರಿಹರಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಅವರು ವಿವರಿಸಿದ್ದಾರೆ.
"ಪ್ರಮುಖ ಬಹುರಾಷ್ಟ್ರೀಯ ಸಂಸ್ಥೆಗಳೊಂದಿಗೆ ಪ್ರತಿಷ್ಠಿತ ಕಂಪನಿಗಳು ನಗರದಾದ್ಯಂತ ವಿವಿಧ ಟೆಕ್ ಪಾರ್ಕ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದುದರಿಂದ ಈ ಉಪಕ್ರಮವು ನಿರ್ಣಾಯಕ. ಈ ಕಂಪನಿಗಳು ಎಲೆಕ್ಟ್ರಾನಿಕ್ ಸಿಟಿ, ವೈಟ್‌ಫೀಲ್ಡ್ ಮತ್ತು ಮಾನ್ಯತಾ ಟೆಕ್ ಪಾರ್ಕ್‌ನಂತಹ ಪ್ರದೇಶಗಳಲ್ಲಿ ಲಕ್ಷಾಂತರ ವ್ಯಕ್ತಿಗಳನ್ನು ನೇಮಿಸಿಕೊಂಡಿವೆ”ಎಂದು ಸಚಿವ ಖರ್ಗೆ ಹೇಳಿದರು.
ಇನ್ನೊಂದು ಸಮಿತೀನಾ, ತಳಮಟ್ಟದಲ್ಲಿ ಕೆಲಸ ಮಾಡೋ ಅಧಿಕಾರಿಗಳನ್ನು ಕೇಳಿ
ಸಚಿವ ಖರ್ಗೆ ಅವರ ಟ್ವೀಟ್ ಗಮನಿಸಿದ ಎಕ್ಸ್ ಬಳಕೆದಾರರು ಅನೇಕರು ತಮ್ಮ ಹತಾಶೆ, ಆಕ್ರೋಶ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಅರೆ, ಇನ್ನೊಂದು ಸಮಿತೀನಾ, ತಳಮಟ್ಟದಲ್ಲಿ ಕೆಲಸ ಮಾಡುವ ಅಧಿಕಾರಿಗಳನ್ನು ಕೇಳಿದರೆ ಸಾಕಿತ್ತು. ಅವರೇ ಏನು ಆಗಬೇಕು ಎಂಬುದನ್ನು ಸರ್ಕಾರಕ್ಕೆ ಮನದಟ್ಟು ಮಾಡಿಕೊಡ್ತಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಮಿತಿ ರಚನೆಯ ವಿದ್ಯಮಾನ ತಿಳಿದ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಸಮಿತಿಯು ನಗರದ ಮೂಲಸೌಕರ್ಯ ಬಿಕ್ಕಟ್ಟನ್ನು ನಿಭಾಯಿಸಲು ಐಟಿ, ಬಿಟಿ ಮತ್ತು ಸ್ಟಾರ್ಟ್ಅಪ್ ವಿಷನ್ ಗುಂಪುಗಳ ವಿವಿಧ ಪಾಲುದಾರರನ್ನು ಒಟ್ಟುಗೂಡಿಸುತ್ತದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಕ್ಯೂರ್‌ಫುಡ್ಸ್‌ನ ಸಂಸ್ಥಾಪಕ ಅಂಕಿತ್ ನಗೋರಿ, ಜಲಾವೃತವಾದ ರಸ್ತೆಗಳಿಂದಾಗಿ ಮೂರು ಗಂಟೆಗಳಿಗೂ ಹೆಚ್ಚು ಕಾಲ ಟ್ರಾಫಿಕ್‌ನಲ್ಲಿ ಸಿಲುಕಿರುವ ತಮ್ಮ ಇತ್ತೀಚಿನ ಅನುಭವವನ್ನು ಹಂಚಿಕೊಂಡಿದ್ದಾರೆ. “ನಾನು ಕೊನೆಯ 5 ಕಿಮೀ ನಡೆಯದಿದ್ದರೆ ಬೆಳಗಿನ ಜಾವ 4 ಗಂಟೆ ಆಗುತ್ತಿತ್ತು. ಈ ಹಿಂದೆ ವರ್ಷಕ್ಕೆ ಒಂದು ಅಥವಾ ಎರಡು ಬಾರಿ ಬರುತ್ತಿದ್ದ ಮಳೆ ಈಗ ಖಾಯಂ ಆಗಿ ಬರುತ್ತಿದೆ” ಎಂದು ನಗೋರಿ ಪೋಸ್ಟ್ ಮಾಡಿದ್ದಾರೆ.
ರಿತೇಶ್ ಬಂಗ್ಲಾನಿ ಎಂಬ ಹೂಡಿಕೆದಾರ, ನೀರು ತುಂಬಿದ ರಸ್ತೆ ಫೋಟೋ ಶೇರ್ ಮಾಡಿ, ನದಿಯ ಮಧ್ಯೆ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ್ದೇನೆ ಎಂದು ಕಾಮೆಂಟ್ ಮಾಡುತ್ತ, ಕನ್ನಡ ಬಳಕೆಯ ವಿಚಾರವನ್ನು ಮುನ್ನೆಲೆಗೆ ತಂದಿದ್ದಾರೆ. ಇದು ಹೆಚ್ಚು ಟೀಕೆಗೆ ಗುರಿಯಾಯಿತು.