ಅರ್ಕಾವತಿ ಪ್ರಕರಣ: ಸಿಎಂ ಸಿದ್ದರಾಮಯ್ಯ, ಬಿಡಿಎ ಆಯುಕ್ತ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ದೂರು
Oct 15, 2024 01:18 PM IST
ಅರ್ಕಾವತಿ ಹಗರಣ: ಸಿಎಂ ಸಿದ್ದರಾಮಯ್ಯ, ಬಿಡಿಎ ಆಯುಕ್ತ, ಬಿಡಿಎ ಅಧಿಕಾರಿಗಳ ವಿರುದ್ಧ ದೂರು
- Arkavathy layout controversy: ಮುಡಾ ಹಗರಣದ ಬೆನ್ನಲ್ಲೇ ಬೆಂಗಳೂರು ಅರ್ಕಾವತಿ ಬಡಾವಣೆ ವಿಚಾರವೂ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಂಕಷ್ಟ ತರುವ ಸಾಧ್ಯತೆ ಇದೆ.ಬೆಂಗಳೂರಿನ ಅರ್ಕಾವತಿ ಲೇಔಟ್‌ನ ನಿವೇಶನದಾರರು ಸಿಎಂ ಸಿದ್ದರಾಮಯ್ಯ, ಬಿಡಿಎ ಆಯುಕ್ತ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ಬೆಂಗಳೂರು: ಒಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ವಿಚಾರದಲ್ಲಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಮುಡಾ ಹಗರಣದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಿವೇಶನ ವಿಚಾರವೂ ತಲೆನೋವು ತರುವ ಸೂಚನೆ ದೊರಕಿದೆ. ಬೆಂಗಳೂರಿನ ಅರ್ಕಾವತಿ ಲೇಔಟ್‌ನ ನಿವೇಶನದಾರರು ಸಿಎಂ ಸಿದ್ದರಾಮಯ್ಯ, ಬಿಡಿಎ ಆಯುಕ್ತ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ದೂರು ನೀಡಿದ್ದು ಯಾರು?
ಸಿಎಂ ಸಿದ್ದರಾಮಯ್ಯ, ಬಿಡಿಎ ಆಯುಕ್ತ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಅರ್ಕಾವತಿ ಬಡಾವಣೆಯಲ್ಲಿ ನಿವೇಶನ ಪಡೆದಿದ್ದ ಶಿವಲಿಂಗಪ್ಪ, ವೆಂಕಟಕೃಷ್ಣಪ್ಪ ,ರಾಮಚಂದ್ರಯ್ಯ, ರಾಜಶೇಖರ್ ಎಂಬವರು ದೂರು ನೀಡಿದ್ದಾರೆ. ಇವರೆಲ್ಲರೂ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದು, ಹಂಚಿಕೆಯಾಗಿದ್ದ ಸೈಟ್‌ಗಳು ಭೂಮಿ ಕಳ್ಳರ ಪಾಲಾಗುತ್ತಿದೆ. ಇದರಿಂದ ನಿವೇಶನದಾರರಿಗೆ ತೊಂದರೆಯಾಗುತ್ತಿದೆ" ಎಂದು ದೂರು ದಾಖಲಿಸಿದ್ದಾರೆ.
ನಿವೇಶನದ ಮಾಲೀಕರಾದ ಎಂ.ಎಸ್.ಶಿವಲಿಂಗಪ್ಪ, ಎಂ.ಚಂದ್ರಶೇಖರನ್, ಕೆ.ರಾಮಚಂದ್ರಯ್ಯ ಮತ್ತು ಡಾ.ವೆಂಕಟಕೃಷ್ಣಪ್ಪ ಅವರು ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ, 2004-05ರಲ್ಲಿ ಬಡಾವಣೆ ರಚನೆಗೆ ಹಲವು ಜಮೀನುಗಳಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಕೆಲವು ಭೂ ಮಾಲೀಕರು ತಮ್ಮ ಜಮೀನು ಸ್ವಾಧೀನಪಡಿಸಿಕೊಳ್ಳುವುದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ನ್ಯಾಯಾಲಯದ ಆದೇಶಗಳನ್ನು ತಪ್ಪಾಗಿ ಅರ್ಥೈಸಿ ದುರ್ಬಳಕೆ ಮಾಡಿಕೊಂಡು ಕಾನೂನಾತ್ಮಕ ತೊಡಕುಗಳನ್ನು ನಿವಾರಿಸಲು ಸಿದ್ದರಾಮಯ್ಯ ಅವರು ‘ರೀ ಡು’ ಅಂತಿಮ ಅಧಿಸೂಚನೆ ಹೊರಡಿಸಿತ್ತು. ಇದರ ಆಧಾರದ ಮೇಲೆ ಬಡಾವಣೆ ನಿರ್ಮಿಸಲು ಸ್ವಾಧೀನಪಡಿಸಿಕೊಂಡ ಹಲವು ಜಮೀನುಗಳನ್ನು ಬಿಡಿಎ ಅಳಿಸಿ, ನಿವೇಶನ ಹಂಚಿಕೆ ಮಾಡಿದೆ ಎಂದು ದೂರುದಾರರು ಆರೋಪಿಸಿದ್ದಾರೆ.
ಮಂಜೂರು ಮಾಡಿದ ನಿವೇಶನಗಳಿಗೆ ಬಿಡಿಎ ಹಣ ಮತ್ತು ಮಂಜೂರು ಮಾಡಿದವರಿಂದ ತೆರಿಗೆ ಸಂಗ್ರಹಿಸಿದ ನಂತರ ಇದನ್ನು ಮಾಡಲಾಗಿದೆ. ಇದರಿಂದ ನಿವೇಶನ ಹಂಚಿಕೆಯಾಗಿದ್ದ ಅನೇಕರಿಗೆ ತೊಂದರೆಯಾಗಿದೆ. ಕೆಲವು ಮಧ್ಯವರ್ತಿಗಳು ಬಿಡಿಎ ಅಧಿಕಾರಿಗಳ ಜತ ಶಾಮೀಲಾಗಿದ್ದಾರೆ.ಅರ್ಕಾವತಿ ಬಡಾವಣೆಯಲ್ಲಿ ನಡೆದಿರುವ ಅಕ್ರಮಗಳ ತನಿಖೆಗೆ ನ್ಯಾಯಮೂರ್ತಿ ಎಚ್.ಎಸ್.ಕೆಂಪಣ್ಣ ಅವರ ನೇತೃತ್ವದಲ್ಲಿ ಸರ್ಕಾರ ಆಯೋಗ ರಚಿಸಲಾಗಿತ್ತು. ಆದರೆ, ಆರೋಪಿಗಳನ್ನು ರಕ್ಷಿಸುವ ಸಲುವಾಗಿ ವರದಿಯನ್ನು ಸಾರ್ವಜನಿಕವಾಗಿ ನೀಡಲಾಗಿಲ್ಲ. ಸಿಎಂ ಸೇರಿದಂತೆ ಬಿಡಿಎ ಅಧಿಕಾರಿಗಳು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ. ಅಕ್ರಮ ಎಸಗಿರುವ ಆರೋಪದ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಕೋರುತ್ತಿದ್ದೇವೆ ಎಂದು ರಾಜ್ಯಪಾಲರಿಗೆ ದೂರುದಾರರು ತಿಳಿಸಿದ್ದಾರೆ.
ಅರ್ಕಾವತಿ ಬಡಾವಣೆ ರಿಡೂ ಪ್ರಕರಣ
2004ರಲ್ಲಿ ಅರ್ಕಾವತಿ ಲೇಔಟ್‌ಗಾಗಿ ಬಿಡಿಎ ಅರ್ಜಿ ಆಹ್ವಾನಿಸಿತ್ತು. ಒಂದು ಲಕ್ಷಕ್ಕೂ ಹೆಚ್ಚು ಜನರು ಸೈಟ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಸುಮಾರು 20 ಸಾವಿರ ಜನರನ್ನು ನಿವೇಶನಕ್ಕಾಗಿ ಆಯ್ಕೆ ಮಾಡಲಾಗಿತ್ತು. ಇವರಲ್ಲಿ ಹನ್ನೆರಡು ಸಾವಿರದಷ್ಟು ಜನರಿಗೆ ಬಿಡಿಎ ನಿವೇಶನ ನೋಂದಣಿ ಮಾಡಲಾಗಿತ್ತು. ಕ್ರಯಪತ್ರ ಮಾಡಲಾಗಿತ್ತು. ಆ ಸಮಯದಲ್ಲಿ 30-40 ಸೈಟ್‌ಗೆ ಎರಡೂವರೆ ಲಕ್ಷ ರೂಪಾಯಿ, 40-60 ಸೈಟ್‌ಗೆ ನಾಲ್ಕೂವರೆ ಲಕ್ಷ ರೂಪಾಯಿ ಪಡೆದು ಹಂಚಿಕೆ ಮಾಡಲಾಗಿತ್ತು. ಬಿಡಿಎ ಸೈಟ್ ಪಡೆದವರು ಹತ್ತು ವರ್ಷ ಸೈಟ್ ಮಾರುವಂತೆ ಇರಲಿಲ್ಲ. ಆದರೆ, 2014ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರವು ಅರ್ಕಾವತಿ ಬಡಾವಣೆಯಲ್ಲಿ ನೀಡಲಾದ ಸೈಟ್‌ಗಳನ್ನು ಹಿಂಪಡೆದಿತ್ತು.
ಅರ್ಕಾವತಿ ಡಿ ನೋಟಿಫಿಕೇಶನ್(ರೀಡೂ) ಪ್ರಕರಣ ಇದೀಗ ರಾಜಭವನ ತಲುಪಿದೆ. ಮುಡಾ ಪ್ರಕರಣ ತಣ್ಣಗಾಗುವ ಲಕ್ಷಣ ಕಂಡುಬರುವಾಗಲೇ ಅರ್ಕಾವತಿ ಪ್ರಕರಣದ ಕಂಟಕ ಎದುರಾಗಿದೆ. ನಾಲ್ವರು ಸಿಎಂ ಸಿದ್ದರಾಮಯ್ಯ ಹಾಗೂ ಬಿಡಿಎ ಅಂದಿನ ಆಯುಕ್ತ ಶ್ಯಾಮ್ ಭಟ್ ಹಾಗೂ ಭೂಸ್ವಾಧೀನ ಅಧಿಕಾರಿ ಬೋರಯ್ಯ ಮತ್ತು ಇತರೆ ಅಧಿಕಾರಿಗಳ ವಿರುದ್ಧ ಕೆಲವು ನಿವೇಶನದಾರರು ದೂರು ನೀಡಿದ್ದಾರೆ.