logo
ಕನ್ನಡ ಸುದ್ದಿ  /  ಕರ್ನಾಟಕ  /  Namma Metro: ನಮ್ಮ ಮೆಟ್ರೋ ಸರ್ಜಾಪುರ ಹೆಬ್ಬಾಳ ಮಾರ್ಗ ವಿಸ್ತರಣೆಗೆ ಕರ್ನಾಟಕ ಬಜೆಟಲ್ಲಿ ಅನುದಾನದ ನಿರೀಕ್ಷೆ

Namma Metro: ನಮ್ಮ ಮೆಟ್ರೋ ಸರ್ಜಾಪುರ ಹೆಬ್ಬಾಳ ಮಾರ್ಗ ವಿಸ್ತರಣೆಗೆ ಕರ್ನಾಟಕ ಬಜೆಟಲ್ಲಿ ಅನುದಾನದ ನಿರೀಕ್ಷೆ

Umesh Kumar S HT Kannada

Jan 18, 2024 08:10 AM IST

google News

ನಮ್ಮ ಮೆಟ್ರೋ ಮಾರ್ಗ ವಿಸ್ತರಣೆಗೆ ಬಿಎಂಆರ್‌ಸಿಎಲ್ ಚಿಂತನೆ ನಡೆಸಿದ್ದು, ಯೋಜನಾ ವರದಿ ಸಿದ್ಧಪಡಿಸಿದೆ. (ಸಾಂಕೇತಿಕ ಚಿತ್ರ)

  • Bangalore Metro Expansion: ಬೆಂಗಳೂರು ಉಪನಗರಗಳನ್ನೂ ನಮ್ಮ ಮೆಟ್ರೋ ಮೂಲಕ ಸಂಪರ್ಕಿಸುವುದರ ಕಡೆಗೆ ಬಿಎಂಆರ್‌ಸಿಎಲ್ ಗಮನಹರಿಸಿದೆ. ಸರ್ಜಾಪುರ– ಹೆಬ್ಬಾಳ ಮಾರ್ಗಕ್ಕೆ ಯೋಜನಾ ವರದಿ ಸಿದ್ದಪಡಿಸಿದ್ದು, ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ. ಈ ಸಲದ ಕರ್ನಾಟಕ ಬಜೆಟ್‌ನಲ್ಲಿ ಅನುದಾನ ನಿರೀಕ್ಷಿಸಲಾಗುತ್ತಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)

ನಮ್ಮ ಮೆಟ್ರೋ ಮಾರ್ಗ ವಿಸ್ತರಣೆಗೆ ಬಿಎಂಆರ್‌ಸಿಎಲ್ ಚಿಂತನೆ ನಡೆಸಿದ್ದು, ಯೋಜನಾ ವರದಿ ಸಿದ್ಧಪಡಿಸಿದೆ. (ಸಾಂಕೇತಿಕ ಚಿತ್ರ)
ನಮ್ಮ ಮೆಟ್ರೋ ಮಾರ್ಗ ವಿಸ್ತರಣೆಗೆ ಬಿಎಂಆರ್‌ಸಿಎಲ್ ಚಿಂತನೆ ನಡೆಸಿದ್ದು, ಯೋಜನಾ ವರದಿ ಸಿದ್ಧಪಡಿಸಿದೆ. (ಸಾಂಕೇತಿಕ ಚಿತ್ರ) (HT_PRINT / ANI)

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನ ನಮ್ಮ ಮೆಟ್ರೊ ಮಾರ್ಗ ಮತ್ತಷ್ಟು ವಿಸ್ತರಣೆಯಾಗಲಿದ್ದು ಸರ್ಜಾಪುರ– ಹೆಬ್ಬಾಳವನ್ನು ಸಂಪರ್ಕಿಸುವ 37 ಕಿಲೋ ಮೀಟರ್‌ ಉದ್ದದ ಮೆಟ್ರೊ ರೈಲು ಮಾರ್ಗಕ್ಕೆ ಸಿದ್ಧತೆ ನಡೆದಿದೆ. ಈ ಹೊಸ ಮೆಟ್ರೊ ರೈಲು ಮಾರ್ಗಕ್ಕಾಗಿ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್‌) ಬಿಎಂಆರ್‌ಸಿಎಲ್‌ ಸಿದ್ಧಪಡಿಸಿದೆ.

37 ಕಿಲೋ ಮೀಟರ್‌ ಉದ್ದದ ಈ ಮಾರ್ಗಕ್ಕೆ 16,543 ಕೋಟಿ ರೂಪಾಯಿ ಅಂದಾಜು ವೆಚ್ಚ ನಿಗದಿ ಮಾಡಲಾಗಿದೆ. ಸರ್ಕಾರಕ್ಕೆ ಈ ತಿಂಗಳ ಅಂತ್ಯದೊಳಗೆ ಡಿಪಿಆರ್‌ ವರದಿಯನ್ನು ಬಿಎಂಆರ್‌ಸಿಎಲ್ ಸಲ್ಲಿಸಲಿದೆ. ಈ ಯೋಜನೆ ಅನುಷ್ಠಾನಗೊಂಡರೆ ಮಾಹಿತಿ ತಂತ್ರಜ್ಞಾನ ವಲಯ ಮತ್ತಿತರ ಉದ್ಯಮಗಳಲ್ಲಿ ಕೆಲಸ ನಿರ್ವಹಿಸುವವರು ಭಾರಿ ಅನುಕೂಲವಾಗಲಿದೆ.

ವಿಸ್ತೃತ ಯೋಜನಾ ವರದಿಯ ಕರಡು ಪ್ರಕಾರ ಸರ್ಜಾಪುರದ ಐಟಿ ಕಾರಿಡಾರ್ ಸಮೀಪದಿಂದ ಜಕ್ಕಸಂದ್ರವರೆಗೆ ಎತ್ತರಿಸಿದ ಮಾರ್ಗ ನಿರ್ಮಾಣಗೊಳ್ಳಲಿದೆ. ನಂತರ ಕೋರಮಂಗಲದಲ್ಲಿ ಭೂಗತ ಮಾರ್ಗವಾಗಿ ಪರಿವರ್ತನೆಗೊಳ್ಳಲಿದ್ದು, ಅಲ್ಲಿಂದ ಸುರಂಗ ಮಾರ್ಗದ ಮೂಲಕ ನಗರದಲ್ಲಿ ಹಾದು ಹೋಗಲಿದೆ. ಬಳ್ಳಾರಿ ಮಾರ್ಗದಲ್ಲಿ ಗಂಗಾನಗರದಿಂದ ಹೆಬ್ಬಾಳದವರೆಗೆ ಮತ್ತೆ ಎತ್ತರಿಸಿದ ಮಾರ್ಗ ನಿರ್ಮಾಣಗೊಳ್ಳಲಿದೆ.

ಸರ್ಜಾಪುರ–ಹೆಬ್ಬಾಳ ಮಾರ್ಗವು ಈಗಾಗಲೇ ಚಾಲನೆಯಲ್ಲಿರುವ ಮೆಟ್ರೊ ನೇರಳೆ ಮಾರ್ಗ ಮತ್ತು ಕಾಮಗಾರಿ ನಡೆಯುತ್ತಿರುವ ನೀಲಿ, ಗುಲಾಬಿ ಮಾರ್ಗಗಳೊಂದಿಗೆ ಸಂಪರ್ಕ ಕಲ್ಪಿಸಲಿದೆ. ಇದರಿಂದ ಪ್ರಯಾಣಿಕರಿಗೆ ಮಾರ್ಗ ಬದಲಾವಣೆಗೆ ಸುಲಭವಾಗಲಿದೆ. ಇಬ್ಬಲೂರು ಬಳಿ ಸಿಲ್ಕ್‌ ಬೋರ್ಡ್‌– ದೇವನಹಳ್ಳಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪುವ ಮಾರ್ಗವನ್ನು ಸಂಪರ್ಕಿಸಲಿದೆ.

ಡೇರಿ ಸರ್ಕಲ್‌ನಲ್ಲಿ ಕಾಳೇನ ಅಗ್ರಹಾರ–ನಾಗವಾರ ನಡುವೆ ನಿರ್ಮಾಣಗೊಳ್ಳುತ್ತಿರುವ ಗುಲಾಬಿ ಮಾರ್ಗವನ್ನು ಕೂಡಿ ಕೊಳ್ಳಲಿದೆ. ಚಲ್ಲಘಟ್ಟ–ವೈಟ್‌ಫೀಲ್ಡ್‌ ನಡುವಿನ ನೇರಳೆ ಮಾರ್ಗವನ್ನು ಕೆ.ಆರ್. ಸರ್ಕಲ್‌ ಬಳಿ (ಸರ್‌.ಎಂ. ವಿಶ್ವೇಶ್ವರಯ್ಯ ನಿಲ್ದಾಣ) ಸಂಪರ್ಕಿಸಲಿದೆ.

ಅಂತಿಮವಾಗಿ ಹೆಬ್ಬಾಳದಲ್ಲಿ ಉಪನಗರ ರೈಲು ಯೋಜನೆಯ ಚಿಕ್ಕಬಾಣಾವರ–ಬೈಯಪ್ಪನಹಳ್ಳಿ ಮಾರ್ಗವನ್ನು ಸಂಪರ್ಕಿಸುತ್ತದೆ. ಈ ರೀತಿ ನಗರದ ಬಹುತೇಕ ಮೆಟ್ರೋ ಸಂಪರ್ಕ ಜಾಲಗಳೊಂದಿಗೆ ಕೊಂಡಿಯಾಗುವ ವಿಶಿಷ್ಟ ಯೋಜನೆ ಇದಾಗಿದ್ದು, ನಗರದಲ್ಲಿ ಜನದಟ್ಟಣೆಯನ್ನು ಕಡಿಮೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಲಿದೆ.

ಈ ಹೊಸ ಮಾರ್ಗವು ಪ್ರಮುಖ ಭಾಗಗಳಲ್ಲಿ ಹಾದು ಹೋಗುವ ಮೂಲಕ ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಲಿದೆ ಎಂದೂ ನಗರ ತಜ್ಞರು ಅಭಪ್ರಾಯಪಡುತ್ತಾರೆ.

ಕೆ ಆರ್ ಸರ್ಕಲ್ ಮೆಟ್ರೋ ನಿಲ್ದಾಣದಲ್ಲಿ ನೇರಳೆ ಮಾರ್ಗಕ್ಕೆ ಕೊಂಡಿಯಾಗಿರುವುದು ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸುವುದರ ಜೊತೆಗೆ ಅಪಾರ ಪ್ರಮಾಣದ ಪ್ರಯಾಣಿಕರಿಗೆ ಪ್ರಯೋಜನಕಾರಿಯಾಗಲಿದೆ. ಬಳ್ಳಾರಿ ರಸ್ತೆಯಲ್ಲಿ ಉಂಟಾಗುವ ಟ್ರಾಫಿಕ್ ಸಮಸ್ಯೆಯನ್ನು ಸರ್ಜಾಪುರ– ಹೆಬ್ಬಾಳ ಮಾರ್ಗವು ಕಡಿಮೆ ಮಾಡಲಿದೆ. ಈ ಮಾರ್ಗದಲ್ಲಿ ಬಸವೇಶ್ವರವೃತ್ತ, ಗಾಲ್ಫ್ ಕ್ಲಬ್, ಪ್ಯಾಲೇಸ್ ಗುಟ್ಟಹಳ್ಳಿ, ಮೇಖ್ರಿ ಸರ್ಕಲ್, ಪಶುವೈದ್ಯ ಕಾಲೇಜು, ಗಂಗಾನಗರ ಮತ್ತು ಹೆಬ್ಬಾಳದಲ್ಲಿ ಮೆಟ್ರೋ ನಿಲ್ದಾಣಗಳು ಬರಲಿವೆ.

ಇದಕ್ಕೆ ಸಂಬಂಧಿಸಿದ ಯೋಜನಾ ವರದಿಯನ್ನು ಎರಡು ವಾರದೊಳಗೆ ಸರ್ಕಾರಕ್ಕೆ ಸಲ್ಲಿಸಲಾಗುವುದು. ಸರ್ಕಾರವು ಈ ಬಜೆಟ್‌ನಲ್ಲಿ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಸ್ತೃತ ಯೋಜನಾ ವರದಿ ಸಿದ್ಧವಾಗಿದ್ದು, 10-15 ದಿನಗಳಲ್ಲಿ ಸರ್ಕಾರಕ್ಕೆ ಸಲ್ಲಿಸಲು ಬಿಎಂಆರ್‌ಸಿಎಲ್‌ ಸಿದ್ಧತೆ ಮಾಡಿಕೊಂಡಿದೆ. ಈ ಮಹತ್ವದ ಯೋಜನೆ ಕುರಿತು ಫೆಬ್ರವರಿ ಯಲ್ಲಿ ಮಂಡನೆಯಾಗಲಿರುವ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಲಿದ್ದಾರೆ ಎಂದು ಸರ್ಕಾರದ ಮೂಲಗಳು ಖಚಿತಪಡಿಸಿವೆ.

(ವರದಿ- ಎಚ್. ಮಾರುತಿ, ಬೆಂಗಳೂರು)

---------------------------

'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ. ಇತರರೂ ಬರೆಯುವಂತೆ ಪ್ರೇರೇಪಿಸಿ.. ನಮ್ಮ ಇಮೇಲ್: ht.kannada@htdigital.in

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ