logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ನಗರದಲ್ಲಿ ಕಾಲರಾ ಪ್ರಕರಣಗಳು ಶೇ 40 ಹೆಚ್ಚಳ, ಮುನ್ನೆಚ್ಚರಿಕೆ ವಹಿಸುವುದಕ್ಕೆ ವೈದ್ಯರ ಸಲಹೆ

ಬೆಂಗಳೂರು ನಗರದಲ್ಲಿ ಕಾಲರಾ ಪ್ರಕರಣಗಳು ಶೇ 40 ಹೆಚ್ಚಳ, ಮುನ್ನೆಚ್ಚರಿಕೆ ವಹಿಸುವುದಕ್ಕೆ ವೈದ್ಯರ ಸಲಹೆ

Umesh Kumar S HT Kannada

Apr 05, 2024 10:08 AM IST

google News

ಬೆಂಗಳೂರು ನಗರದಲ್ಲಿ ಕಾಲರಾ ಪ್ರಕರಣಗಳು ಶೇ 40 ಹೆಚ್ಚಳ (ಸಾಂಕೇತಿಕ ಚಿತ್ರ)

  • ಬೆಂಗಳೂರಿನಲ್ಲಿ ಕಾಲರಾ ಪ್ರಕರಣಗಳು ಶೇ 40 ಹೆಚ್ಚಳವಾಗಿದೆ. ಹೀಗಾಗಿ ಇದನ್ನು ತಡೆಯಲು ಜನರು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ವೈದ್ಯರ ಸಲಹೆ ನೀಡಿದ್ದಾರೆ. ಕಾಲರಾ ತಡೆಗಟ್ಟಲು ಅನುಸರಿಸಬಹುದಾದ ಕ್ರಮಗಳನ್ನು ವೈದ್ಯರು ಸೂಚಿಸಿದ್ದಾರೆ. ವಿವರ ಇಲ್ಲಿದೆ (ವರದಿ- ಎಚ್. ಮಾರುತಿ, ಬೆಂಗಳೂರು) 

ಬೆಂಗಳೂರು ನಗರದಲ್ಲಿ ಕಾಲರಾ ಪ್ರಕರಣಗಳು ಶೇ 40 ಹೆಚ್ಚಳ (ಸಾಂಕೇತಿಕ ಚಿತ್ರ)
ಬೆಂಗಳೂರು ನಗರದಲ್ಲಿ ಕಾಲರಾ ಪ್ರಕರಣಗಳು ಶೇ 40 ಹೆಚ್ಚಳ (ಸಾಂಕೇತಿಕ ಚಿತ್ರ)

ಬೆಂಗಳೂರು: ಬೇಸಗೆ ತಾಪ ಒಂದೆಡೆ, ನೀರಿನ ಸಮಸ್ಯೆ ಇನ್ನೊಂದೆಡೆ - ಹೀಗೆ ಬೆಂಗಳೂರು ಮಹಾನಗರದ ಜನ ಹೈರಾಣಾಗಿರುವಾಗಲೇ ಮತ್ತೊಂದೆಡೆ ಆರೋಗ್ಯ ಸಮಸ್ಯೆ ಕಾಡತೊಡಗಿದೆ. ಕಲುಷಿತ ನೀರು, ನೈರ್ಮಲ್ಯದ ಕೊರತೆ ಪರಿಣಾಮ ಕಾಲರಾ ಪ್ರಕರಣಗಳು ಹೆಚ್ಚುತ್ತಿವೆ. ಆರೋಗ್ಯ ಇಲಾಖೆ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೂಲಗಳ ಪ್ರಕಾರ ಮಹಾನಗರದಲ್ಲಿ ಶೇಕಡಾ 40 ರಷ್ಟು ಕಾಲರಾ ಪ್ರಕರಣಗಳು ಏರಿಕೆಯಾಗಿವೆ.

ಕಲುಷಿತ ನೀರು, ನೈರ್ಮಲ್ಯ ಕೊರತೆ ಮತ್ತು ಸ್ವಚ್ಛತೆ ಕಾಪಾಡದೇ ಮಾಡಿದ ಆಹಾರ ಸೇವನೆಯಿಂದ ಕಾಲರಾ ಮತ್ತು ವಾಂತಿಬೇಧಿ ಪ್ರಕರಣಗಳು ಹೆಚ್ಚಾಗುತ್ತಿವೆ. ಖಾಸಗಿ ಆಸ್ಪತ್ರೆಗಳಲ್ಲಿ ತಿಂಗಳಿಗೆ ಒಂದೆರಡು ಪ್ರಕರಣಗಳು ದಾಖಲಾಗುತ್ತಿದ್ದವು. ಈಗ 6-7 ಪ್ರಕರಣಗಳು ದಾಖಲಾಗುತ್ತಿವೆ.

ಮಲ್ಲೇಶ್ವರಂನಲ್ಲಿ ಒಂದು ಕಾಲರಾ ಪ್ರಕರಣ ದೃಢಪಟ್ಟಿದ್ದು, ಎರಡು ಶಂಕಿತ ಪ್ರಕರಣಗಳು ಕಂಡು ಬಂದಿವೆ. ಈ ಪ್ರಕರಣಗಳು ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮಲೇಶ್ವರಂನ ಪಿಜಿಯಲ್ಲಿರುವ ಬೆಳ್ಳಂದೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಯುವತಿಯೊಬ್ಬರಿಗೆ ಕಾಲರಾ ದೃಢಪಟ್ಟಿದೆ ಎಂದು ಬಿಬಿಎಂಪಿ ಮೂಲಗಳು ಖಚಿತಪಡಿಸಿವೆ.

ಕಾಲರಾ ಎಂದರೇನು?

ಸರಳವಾಗಿ ಹೇಳುವುದಾದರೆ ಕಾಲರಾ ಎನ್ನುವುದು ಸಣ್ಣ ಕರುಳಿನ ಸೋಂಕು. ಇದು ವಿಬ್ರಿಯೋ ಎಂಬ ಬ್ಯಾಕ್ಟೀರಿಯಾದಿಂದ ಹರಡುತ್ತದೆ. ಕಲುಷಿತ ನೀರು ಅಥವಾ ಆಹಾರ ಸೇವನೆಯಿಂದ ಹರಡುತ್ತದೆ.

ವಿಬ್ರಿಯೋ ಬ್ಯಾಕ್ಟೀರಿಯಾ ದೇಹವನ್ನು ಪ್ರವೇಶಿಸಿದ ನಾಲ್ಕೈದು ದಿನಗಳವರೆಗೆ ಕಾಲರಾ ರೋಗದ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ. ಅತಿಯಾದ ವಾಂತಿ ಭೇದಿ ಕಾಣಿಸಿಕೊಳ್ಳುತ್ತದೆ. ಕೂಡಲೇ ಚಿಕಿತ್ಸೆ ಪಡೆಯದಿದ್ದರೆ ಸಾವು ಸಂಭವಿಸುವ ಸಾಧ್ಯತೆಗಳಿರುತ್ತವೆ.

ಕಾಲರಾ ತಡೆಗೆ ಮುನ್ನೆಚ್ಚರಿಕೆಯ ಕ್ರಮಗಳು

1) ನೀರನ್ನು ಕಾಯಿಸಿ ಆರಿಸಿದ ನೀರನ್ನು ಕುಡಿಯಬೇಕು.

2) ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು.

3) ಹಣ್ಣು ಮತ್ತು ತರಕಾರಿಯನ್ನು ತೊಳೆದು ಬಳಸಬೇಕು.

4) ಒಂದು ವೇಳೆ ವಾಂತಿ ಅಥವಾ ಬೇಧಿ ಕಾಣಿಸಿಕೊಂಡರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯಬೇಕು

ಕಾಲರಾ ಒಮ್ಮೊಮ್ಮೆ ಭೀಕರ ಪರಿಣಾಮ ಬೀರುತ್ತದೆ. ನಿರ್ಜಲೀಕರಣದಿಂದ ಮೂತ್ರಪಿಂಡಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ರಸ್ತೆ ಬದಿಯ ಆಹಾರ ಪದಾರ್ಥಗಳನ್ನು ಸೇವಿಸದೇ ಇರುವದು ಉತ್ತಮ ಎಂದು ಸಲಹೆ ನೀಡುತ್ತಾರೆ.

ಬೇಸಿಗೆಯಲ್ಲಿ ಕಾಲರಾ ಪ್ರಕರಣಗಳು ಸರ್ವೇ ಸಾಮಾನ್ಯ. ಬಿಸಿಲು ಸ್ವಾಭಾವಿಕ ಕಾರಣವಾದರೆ ಕಲುಷಿತ ನೀರಿನ ಬಳಕೆ ಮತ್ತು ಆಹಾರ ಪದಾರ್ಥ, ಸಣ್ಣ ಸಣ್ಣ ಹೋಟೆಲ್ ಗಳು, ರಸ್ತೆ ಬದಿಯ ತಳ್ಳುವ ಗಾಡಿಗಳ ಊಟತಿಂಡಿಯಿಂದಲೂ ಕಾಲರಾ ಹರಡುತ್ತಿದೆ. ಸ್ವಚ್ಚ ನೀರು ದುರ್ಲಭವಾಗಿದ್ದು, ಕಲುಷಿತ ನೀರನ್ನೇ ಬಳಸುತ್ತಿದ್ದಾರೆ. ಇದರಿಂದಲೂ ಕಾಲರಾ ಉಲ್ಬಣಗೊಳ್ಳಲು ಸಾಧ್ಯತೆಗಳಿವೆ ಎಂದು ವೈದ್ಯರು ಹೇಳುತ್ತಾರೆ.

(ವರದಿ- ಎಚ್. ಮಾರುತಿ, ಬೆಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ