Bengaluru Crime: ಬೆಂಗಳೂರಲ್ಲಿ ಆಯುರ್ವೇದಿಕ್ ಸೆಂಟರ್ ಉದ್ಯೋಗಿಯ ಚಿನ್ನಾಭರಣ ದೋಚಿದ್ದ ದಂಪತಿ ಸೇರಿ ಐವರ ಬಂಧನ
Jan 18, 2024 07:54 AM IST
ಬೆಂಗಳೂರು ಅಪರಾಧ ಸುದ್ದಿ (ಸಾಂಕೇತಿಕ ಚಿತ್ರ)
Bengaluru Crime: ಬೆಂಗಳೂರು ಕೊಡಿಗೇಹಳ್ಳಿ ಗಂಗಾ ಆಯುರ್ವೇದಿಕ್ ಸೆಂಟರ್‌ಗೆ ನುಗ್ಗಿ ಉದ್ಯೋಗಿಯ ಚಿನ್ನಾಭರಣ ದೋಚಿದ್ದ ದಂಪತಿ ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೊಂದು ಪ್ರಕರಣದಲ್ಲಿ, ಕೆಎಸ್‌ಆರ್‌ಟಿಸಿ ಬಸ್‌ಗಳ ಗಾಜುಗಳನ್ನು ಒಡೆದಿದ್ದ ಆರೋಪಿಗಳನ್ನು ಪೊಲೀಸರು ಸೆರೆಹಿಡಿದಿದ್ದಾರೆ. (ವರದಿ- ಎಚ್. ಮಾರುತಿ, ಬೆಂಗಳೂರು)
ಬೆಂಗಳೂರು: ಸಾಲ ತೀರಿಸಲು ಹಗಲು ಹೊತ್ತಿನಲ್ಲೇ ಆಯುರ್ವೇದಿಕ್ ಸೆಂಟರ್‌ಗೆ ನುಗ್ಗಿ ಅಲ್ಲಿನ ಸಿಬ್ಬಂದಿಯ ಕೈ, ಕಾಲು ಕಟ್ಟಿಹಾಕಿ ಮಾಂಗಲ್ಯ ಸರ, ಚಿನ್ನಾಭರಣ ಮತ್ತು ಮೊಬೈಲ್ ಸುಲಿಗೆ ಮಾಡಿ ಪರಾರಿಯಾಗಿದ್ದ ದಂಪತಿ ಸೇರಿ ಐವರನ್ನು ಬೆಂಗಳೂರು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ನಗರದ ಹಾರೋಹಳ್ಳಿ ನಿವಾಸಿಗಳಾದ ಗುರು, ಆತನ ಪತ್ನಿ ರೇಣುಕಾ, ಸ್ನೇಹಿತೆ ಪ್ರಭಾವತಿ ಹಾಗೂ ಈಕೆಯ ಸಂಬಂಧಿಕರಾದ ರುದ್ರೇಶ್, ಸಂದೀಪ್ ಬಂಧಿತ ಆರೋಪಿಗಳು.
ಈ ಆರೋಪಿಗಳು ಭಾನುವಾರ (ಜ.14) ಕೊಡಿಗೇಹಳ್ಳಿ ಹತ್ತಿರದ ತಿಂಡ್ಲು ವೃತ್ತದಲ್ಲಿರುವ ಗಂಗಾ ಆಯುರ್ವೇದಿಕ್ ಸೆಂಟರ್‌ಗೆ ನುಗ್ಗಿ, ಅಲ್ಲಿನ ಸಿಬ್ಬಂದಿ ಅನುಶ್ರೀ ಎಂಬುವವರ ಕೈ, ಕಾಲು ಕಟ್ಟಿಹಾಕಿ, 48 ಗ್ರಾಂ ಚಿನ್ನ ಹಾಗೂ ಐಫೋನ್ ಸುಲಿಗೆ ಮಾಡಿದ್ದರು.
ಈ ಆಯುರ್ವೇದಿಕ್ ಸೆಂಟರ್‌ನಲ್ಲಿ ರೇಣುಕಾ ಕೆಲಸ ಮಾಡುತ್ತಿದ್ದಳು. ಈ ಮೂಲಕ ಅನುಶ್ರೀಯ ಪರಿಚಯವಾಗಿತ್ತು. ಅನುಶ್ರೀ ಬಳಿ ಚಿನ್ನಾಭರಣ ಮತ್ತು ನಗದು ಹಣ ಇರಬಹುದು ಎಂದು ಊಹಿಸಿದ್ದ ರೇಣುಕಾ ಸುಲಿಗೆಗೆ ಸಂಚು ರೂಪಿಸಿದ್ದು ನೆರವು ನೀಡುವಂತೆ ಪ್ರಭಾವತಿಗೆ ತಿಳಿಸಿದ್ದಳು.
ಪ್ರಭಾವತಿ ಜ.13ರಂದು ಸಂಜೆ ಸೆಂಟರ್‌ಗೆ ಹೋಗಿ ಬೆನ್ನು ನೋವಿಗೆ ಚಿಕಿತ್ಸೆ ಬೇಕೆಂದು ಕೇಳಿದ್ದಳು. ಆಗ ಅನುಶ್ರೀ, ಮರುದಿನ ಬರುವಂತೆ ಸೂಚಿಸಿದ್ದರು. ಅದರಂತೆ ಮರುದಿನ ಬೆಳಿಗ್ಗೆ ಆಯುರ್ವೇದಿಕ್ ಸೆಂಟರ್‌ಗೆ ಬಂದ ಪ್ರಭಾವತಿಗೆ, ಅನುಶ್ರೀ ಚಿಕಿತ್ಸೆ ಕೊಡಲು ಒಳಗಡೆ ಕರೆದೊಯ್ಯುತ್ತಾರೆ. ಆಗ ರುದ್ರೇಶ್, ಸಂದೀಪ್ ಮತ್ತು ಗುರು ಏಕಾಏಕಿ ಸೆಂಟರ್ ಒಳಕ್ಕೆ ನುಗ್ಗಿದ್ದಾರೆ. ಇವರು ಒಳಗೆ ಸೇರಿಕೊಂಡು ರಾಸಾಯನಿಕದಲ್ಲಿ ಅದ್ದಿದ್ದ ಕರವಸ್ತ್ರವನ್ನು ಅನುಶ್ರೀಯ ಮೂಗಿಗೆ ಹಿಡಿದು ಪ್ರಜ್ಞೆ ತಪ್ಪಿಸಿ ಚಿನ್ನಾಭರಣ ಹಾಗೂ ಮೊಬೈಲ್ ಸುಲಿಗೆ ಮಾಡಿದ್ದರು ಎಂದು ಕೊಡಿಗೇಹಳ್ಳಿ ಪೊಲೀಸರು ತಿಳಿಸಿದ್ದಾರೆ.
ಆಯುರ್ವೇದಿಕ್ ಸೆಂಟರ್‌ನಲ್ಲಿದ್ದ ಸಿಸಿ ಟಿ.ವಿ ಕ್ಯಾಮೆರಾ ಪರಿಶೀಲಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೆಎಸ್‌ಆರ್‌ಟಿಸಿ ಬಸ್‌ಗಳ ಗಾಜುಗಳನ್ನು ಒಡೆದಿದ್ದ ಆರೋಪಿಗಳ ಬಂಧನ
ಬೆಂಗಳೂರಿನ ಮೆಜೆಸ್ಟಿಕ್ ಸಮೀಪ ಪಾರ್ಕಿಂಗ್ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಎರಡು ಕೆಎಸ್‌ಆರ್‌ಟಿಸಿ ಬಸ್‌ಗಳ ಗಾಜುಗಳನ್ನು ಪುಡಿ ಮಾಡಿ ಹಾನಿಗೊಳಿಸಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಗೋರಿಪಾಳ್ಯದ ರಿಯಾಜ್ ಹಾಗೂ ಇಮ್ರಾನ್ ಬಂಧನಕ್ಕೊಳಗಾದ ಆರೋಪಿಗಳು. ಇವರನ್ನು ಕಾಟನ್‌ಪೇಟೆ ಪೊಲೀಸರು ಬಂಧಿಸಿದ್ದಾರೆ. ಉಳಿದ ಮೂವರು ದುಷ್ಕರ್ಮಿಗಳ ಬಂಧನಕ್ಕೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಮಂಗಳವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ.
ಮೈಸೂರು ಡಿಪೊಗೆ ಸೇರಿದ ಎರಡು ಬಸ್‌ಗಳು ಮೈಸೂರಿನಿಂದ ಬೆಂಗಳೂರಿಗೆ ಬಂದಿದ್ದವು. ಮೆಜೆಸ್ಟಿಕ್‌ನ ಶಾಂತಲಾ ವೃತ್ತದ ಬಳಿ ಪಾರ್ಕಿಂಗ್ ಮಾಡುತ್ತಿದ್ದ ವೇಳೆ, ಅದೇ ಸಮಯಕ್ಕೆ ಒಂದು ಬೈಕ್ ಹಾಗೂ ಎರಡು ಆಟೊದಲ್ಲಿ ಬಂದ ಐವರು ಆರೋಪಿಗಳ ನಡುವೆ ಪಾರ್ಕಿಂಗ್ ವಿಚಾರವಾಗಿ ಜೋರು ಗಲಾಟೆ ನಡೆದಿದೆ. ಮಾತಿಗೆ ಮಾತು ಬೆಳೆದಾಗ ಬಸ್‌ಗಳ ಮೇಲೆ ದಾಳಿ ನಡೆಸಿ ಗಾಜುಗಳನ್ನು ಪುಡಿ ಮಾಡಿ ಹಾನಿ ಮಾಡಿದ್ದಾರೆ.
ಬಸ್‌ನಲ್ಲಿ ಪ್ರಯಾಣಿಕರು ಇರುವಾಗಲೇ ಈ ಗಲಾಟೆ ನಡೆದಿದೆ. ದುಷ್ಕರ್ಮಿಗಳು ಗಾಜುಗಳನ್ನು ಒಡೆದು ಹಾಕುವ ದೃಶ್ಯಗಳನ್ನು ಹಲವು ಪ್ರಯಾಣಿಕರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ಈ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಮದ್ಯ ಸೇವಿಸಿ ಅದರ ಮತ್ತಿನಲ್ಲಿ ಪುಂಡಾಟ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾತ್ರಿ 1.45ರ ಸುಮಾರಿಗೆ ಮೈಸೂರಿನಿಂದ ಆಗಮಿಸಿದ್ದೆವು. ನಾವು ನಿಲುಗಡೆ ಮಾಡಿದ್ದ ಬಸ್ ಎದುರು ಹಾಗೂ ಹಿಂಬದಿಯಲ್ಲಿಯೂ ಸಹ ಬಸ್‌ಗಳು ನಿಂತಿದ್ದವು. ಆದರೆ ಈ ಆರೋಪಿಗಳು ಏಕಾಏಕಿ ದಾಳಿ ನಡೆಸಿ ಗಾಜು ಪುಡಿ ಮಾಡಿದರು. ತಕ್ಷಣವೇ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಲಾಯಿತು. ಪೊಲೀಸರು ಬರುವಷ್ಟರಲ್ಲಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು ಎಂದು ಬಸ್ ನಿರ್ವಾಹಕ ಸಿದ್ದೇಶ್ ಮಾಹಿತಿ ನೀಡಿದ್ದಾರೆ.
(ವರದಿ- ಎಚ್. ಮಾರುತಿ, ಬೆಂಗಳೂರು)
----
'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ. ಇತರರೂ ಬರೆಯುವಂತೆ ಪ್ರೇರೇಪಿಸಿ.. ನಮ್ಮ ಇಮೇಲ್: ht.kannada@htdigital.in