Crime News: 74 ಗರ್ಭಪಾತಗಳನ್ನು ನಡೆಸಿರುವ ಆರೋಪ, ನೆಲಮಂಗಲ ಆಸ್ಪತ್ರೆ ಮಾಲೀಕನ ವಿರುದ್ದ ದೂರು ದಾಖಲು
Mar 07, 2024 07:16 AM IST
ನೆಲಮಂಗಲ ಆಸ್ಪತ್ರೆ ಮಾಲೀಕನ ವಿರುದ್ದ ದೂರು
- Bengaluru Crime News: ನಿಯಮಗಳನ್ನು ಉಲ್ಲಂಘಿಸಿ ಸುಮಾರು 74 ಗರ್ಭಪಾತಗಳನ್ನು ನಡೆಸಿರುವ ಆರೋಪದ ಮೇಲೆ ನೆಲಮಂಗಲದ ಆಸರೆ ಆಸ್ಪತ್ರೆಯ ಮಾಲೀಕ ರವಿಕುಮಾರ್ ವಿರುದ್ಧ ದೂರು ದಾಖಲಾಗಿದೆ. ಇನ್ನೊಂದೆಡೆ ಬೆಸ್ಕಾಂ ಆರನೇ ಪೂರ್ವ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಶಂಕರಪ್ಪ ಕೆ.ಎಂ. ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಬೆಂಗಳೂರು: ನಿಯಮಗಳನ್ನು ಉಲ್ಲಂಘಿಸಿ ಸುಮಾರು 74 ಗರ್ಭಪಾತಗಳನ್ನು ನಡೆಸಿರುವ ಆರೋಪದ ಮೇಲೆ ನೆಲಮಂಗಲದ ಆಸರೆ ಆಸ್ಪತ್ರೆಯ ಮಾಲೀಕ ರವಿಕುಮಾರ್ ವಿರುದ್ಧ ದೂರು ದಾಖಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳು ನೀಡಿದ ದೂರಿನನ್ವಯ ನೆಲಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆಸ್ಪ್ರತ್ರೆಯಲ್ಲಿದ್ದ ಶಸ್ತ್ರಚಿಕಿತ್ಸೆ ಗೆ ಸಂಬಂಧಪಟ್ಟ ಕಡತಗಳನ್ನು ಆರೋಗ್ಯ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ.
ನೆಲಮಂಗಲದ ಬಿ.ಎಚ್. ರಸ್ತೆಯಲ್ಲಿರುವ ಆಸರೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಈ ಕಾನೂನುಬಾಹಿರ ಕೃತ್ಯ ನಡೆಸಿರುವುದು ಬೆಳಕಿಗೆ ಬಂದಿದೆ. 2021ರ ಸೆಪ್ಟೆಂಬರ್ 17 ರಿಂದ 2026ರ ಸೆಪ್ಟೆಂಬರ್ 16 ರವರೆಗೆ ಕೆಪಿಎಂಇ ಪ್ರಾಧಿಕಾರದಿಂದ ಪರವಾನಗಿ ಪಡೆದುಕೊಂಡು ಆಸ್ಪತ್ರೆ ನಡೆಸಲಾಗುತ್ತಿದೆ. ಎಂಟಿಪಿ ಕಾಯ್ದೆ ಅಡಿಯಲ್ಲಿ ಪರವಾನಗಿ ಪಡೆಯದೆ ಗರ್ಭಪಾತ ನಡೆಸಲಾಗಿದೆ. ಇದು ವೈದ್ಯಕೀಯ ಗರ್ಭಪಾತ ಕಾಯ್ದೆ–1971 ಅನ್ನು ಉಲ್ಲಂಘಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆಸ್ಪತ್ರೆಯಲ್ಲಿ ನಡೆಸಿದ ಗರ್ಭಪಾತಗಳಿಗೆ ಸಂಬಂಧಿಸಿದ ಕಡತವನ್ನು ನಿರ್ವಹಣೆ ಮಾಡಿಲ್ಲ. ಬದಲಿಗೆ ಗರ್ಭಪಾತಕ್ಕೆ ಸಂಬಂಧಿಸಿದಂತೆ ಎಲ್ಲ ವಿವರಗಳನ್ನು ತಮ್ಮ ಸಂಸ್ಥೆಯ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿರುವ ಕಡತದಲ್ಲಿ ದಾಖಲಿಸಲಾಗಿದೆ. ಇದು ನಿಯಮ ಉಲ್ಲಂಘನೆ ಎಂದು ದೂರಿನಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳು ಉಲ್ಲೇಖಿಸಿದ್ದಾರೆ.
ಆಸ್ಪತ್ರೆಯಲ್ಲಿ ನಡೆಸಿರುವ ಗರ್ಭಪಾತ ಪ್ರಕರಣಗಳಿಗೆ ಅಲ್ಮಾಸೌಂಡ್ ವರದಿ ಸೇರಿದಂತೆ ಪೂರಕ ದಾಖಲೆಗಳು ಕೇಸ್ ಶೀಟ್‌ನಲ್ಲಿ ಲಭ್ಯ ಇರುವುದಿಲ್ಲ. ಗರ್ಭಪಾತ ನಡೆಸಿದ ತಿಂಗಳ ವಿವರಗಳನ್ನು ಇದುವರೆಗೂ ನಿಗದಿತ ನಮೂನೆಯಲ್ಲಿ ಜಿಲ್ಲಾ ಪ್ರಾಧಿಕಾರಕ್ಕೆ ಸಲ್ಲಿಸಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಅಮಾನತು
ವಿದ್ಯುತ್ ಸಂಪರ್ಕದ ಆರ್.ಆರ್. ನಂಬರ್ ಗಳನ್ನು ಒಂದು ಸಂಸ್ಥೆಯಿಂದ ಮತ್ತೊಂದು ಸಂಸ್ಥೆಯ ಹೆಸರಿಗೆ ವರ್ಗಾಯಿಸಲು ಕೋರಿದ್ದ ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸಿದ ಬೆಸ್ಕಾಂ ಆರನೇ ಪೂರ್ವ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಶಂಕರಪ್ಪ ಕೆ.ಎಂ. ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಹೋಟೆಲ್ ಲೀಲಾ ವೆಂಚರ್ ಲಿ. ಹೆಸರಿನಲ್ಲಿದ್ದ ಎರಡು ಆರ್.ಆರ್. ಸಂಖ್ಯೆಗಳನ್ನು ಶ್ಲಾಷ್ ಬೆಂಗಳೂರು ಪ್ರೈವೇಟ್ ಲಿಮಿಟೆಡ್ ಕಂಪನಿ ಹೆಸರಿಗೆ ವರ್ಗಾವಣೆ ಮಾಡುವಂತೆ ಕೋರಿ ಅರ್ಜಿ ಸಲ್ಲಿಸಲು ಶ್ಲಾಷ್ ಕಂಪನಿಯ ಪ್ರತಿನಿಧಿಗಳು 2023ರ ಡಿಸೆಂಬರ್ 9ರಿಂದ 2024ರ ಮಾರ್ಚ್ 1 ರವರೆಗೆ ಏಳು ಬಾರಿ ಬೆಸ್ಕಾಂ ಎಇಇ ಕಚೇರಿಗೆ ಭೇಟಿ ನೀಡಿದ್ದರು. ಆದರೆ, ಅವರ ಅರ್ಜಿಯನ್ನು ಶಂಕರಪ್ಪ ನಿರಾಕರಿಸಿದ್ದರು ಮತ್ತು ಅರ್ಜಿ ಸ್ವೀಕರಿಸದಂತೆ ಸಿಬ್ಬಂದಿಗೆ ಸೂಚನೆ ನೀಡಿದ್ದರು ಎಂದು ತಿಳಿದು ಬಂದಿದೆ.
ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಮಹಾಂತೇಶ ಬೀಳಗಿ ಅವರಿಗೆ ಶ್ಲಾಷ್ ಕಂಪನಿ ದೂರು ನೀಡಿತ್ತು. ಈ ದೂರನ್ನು ಕುರಿತು ಬೆಸ್ಕಾಂ ಕೇಂದ್ರ ಕಚೇರಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು.
ದೂರುದಾರರ ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸಿದ ಎಇಇ, ಅರ್ಜಿಯನ್ನು ಏಕೆ ತಿರಸ್ಕರಿಸಲಾಗಿದೆ ಎಂದು ಹಿಂಬರಹ ನೀಡಿರಲಿಲ್ಲ. ಮೇಲಾಗಿ ಗ್ರಾಹಕರು ಪದೇ ಪದೇ ಕಚೇರಿಗೆ ಅಲೆದಾಡುವಂತೆ ಮಾಡಿದ್ದರು. ಗ್ರಾಹಕರ ಅರ್ಜಿ ಸ್ವೀಕರಿಸದಂತೆ ಕೆಳಗಿನ ಸಿಬ್ಬಂದಿಗೆ ಆದೇಶ ನೀಡಿರುವುದು ತನಿಖೆಯಿಂದ ಕಂಡುಬಂದಿತ್ತು. ಆದ್ದರಿಂದ ಶಂಕರಪ್ಪ ಅವರನ್ನು ಅಮಾನತು ಮಾಡಿ ಬುಧವಾರ ಮಹಾಂತೇಶ ಬೀಳಗಿ ಆದೇಶ ಹೊರಡಿಸಿದ್ದಾರೆ.
ಗ್ರಾಹಕರ ಹೆಸರು ಬದಲಾವಣೆಗೆ ಅರ್ಜಿ ಸಲ್ಲಿಸಿದಾಗ, ಆ ಅರ್ಜಿಯನ್ನು ಮತ್ತು ಅದರೊಂದಿಗೆ ಸಲ್ಲಿಸಿರುವ ದಾಖಲೆಗಳನ್ನು ನಿಯಮಾನುಸಾರ ಪರಿಶೀಲಿಸಿ, ಸಕಾಲದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಪ್ರಕರಣದಲ್ಲಿ ನಿಯಮ ಪಾಲಿಸದೇ ಗ್ರಾಹಕರಿಗೆ ತೊಂದರೆ ನೀಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಅವರು ಹೇಳಿದ್ದಾರೆ.
ಗ್ರಾಹಕರೊಂದಿಗೆ ಸೌಜನ್ಯದಿಂದ ವರ್ತಿಸದೆ, ತೊಂದರೆ ನೀಡುವ ಮೂಲಕ ಕರ್ತವ್ಯಲೋಪ ಎಸಗಿರುವ ಆರೋಪದಡಿಯಲ್ಲಿ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಶಂಕರಪ್ಪ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ವರದಿ: ಎಚ್. ಮಾರುತಿ