logo
ಕನ್ನಡ ಸುದ್ದಿ  /  ಕರ್ನಾಟಕ  /  ಏಪ್ರಿಲ್ 23ಕ್ಕೆ ಬೆಂಗಳೂರು ಕರಗ ಶಕ್ತ್ಯೋತ್ಸವ; ಈ 4 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ -Bengaluru Karaga

ಏಪ್ರಿಲ್ 23ಕ್ಕೆ ಬೆಂಗಳೂರು ಕರಗ ಶಕ್ತ್ಯೋತ್ಸವ; ಈ 4 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ -Bengaluru Karaga

Raghavendra M Y HT Kannada

Apr 22, 2024 05:51 PM IST

google News

ಬೆಂಗಳೂರು ಕರಗ ಮಹೋತ್ಸವ

    • ಏಪ್ರಿಲ್ 23ರ ಮಂಗಳವಾರ ಬೆಂಗಳೂರು ಕರಗ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆ 6 ರಿಂದ ಏ. 24 ಬೆಳಗ್ಗೆ ‌10 ಗಂಟೆಯವರೆಗೆ ಬೆಂಗಳೂರಿನ ನಾಲ್ಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. (ವರದಿ:ಎಚ್. ಮಾರುತಿ)
ಬೆಂಗಳೂರು ಕರಗ ಮಹೋತ್ಸವ
ಬೆಂಗಳೂರು ಕರಗ ಮಹೋತ್ಸವ

ಬೆಂಗಳೂರಿನ ಪ್ರಸಿದ್ಧ ಐತಿಹಾಸಿಕ ಕರಗ ಮಹೋತ್ಸವ (Bengaluru Karaga 2024) ಆರಂಭವಾಗಿದ್ದು, ಏಪ್ರಿಲ್ 23 ರಂದು ಕರಗ ಶಕ್ತ್ಯೋತ್ಸವ ನಡೆಯಲಿದೆ. ಈ ಹಿನ್ನಲೆಯಲ್ಲಿ ಬೆಂಗಳೂರಿನ ನಾಲ್ಕು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಮುನ್ನೆಚ್ಚರಿಕೆ ಅಂಗವಾಗಿ ಏಪ್ರಿಲ್ 23ರ ಬೆಳಗ್ಗೆ 6 ರಿಂದ ಏ. 24 ಬೆಳಗ್ಗೆ ‌10 ಗಂಟೆಯವರೆಗೆ ಬೆಂಗಳೂರಿನ ನಾಲ್ಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಹಲಸೂರು ಗೇಟ್, ಎಸ್ ಆರ್ ನಗರ, ವಿಲ್ಸನ್ ಗಾರ್ಡನ್, ಎಸ್‌ಜೆ ಪಾರ್ಕ್ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ ಮಾಡುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ ಅವರು ಅದೇಶ ಹೊರಡಿಸಿದ್ದಾರೆ.

ಬೆಂಗಳೂರು ಕರಗ ವೇಳ ಮದ್ಯ ನಿಷೇಧಕ್ಕೆ ಇದೇ ಕಾರಣ

ನಾಲ್ಕು ಠಾಣೆಗಳ ವ್ಯಾಪ್ತಿಯಲ್ಲಿ ಬಾರ್ ಅಂಡ್ ರೆಸ್ಟೋರೆಂಟ್, ಮದ್ಯದ ಅಂಗಡಿಗಳು, ವೈನ್ ಶಾಪ್,‌ ಪಬ್‌ಗಳನ್ನು ಮುಚ್ಚುವಂತೆ ಆಯುಕ್ತರು ಸೂಚಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಈ ಆದೇಶ ಹೊರಡಿಸಲಾಗಿದೆ. ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗುತ್ತಾರೆ. ಬೆಂಗಳೂರು ಮಾತ್ರವಲ್ಲದೆ ವಿವಿಧ ಜಿಲ್ಲೆಗಳು ಮತ್ತು ನೆರೆಯ ರಾಜ್ಯಗಳ ಭಕ್ತರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಈ ಸಂದರ್ಭದಲ್ಲಿ ದುಷ್ಕರ್ಮಿಗಳು ಮತ್ತು ಕಿಡಿಗೇಡಿಗಳು ಮದ್ಯದ ಅಮಲಿನಲ್ಲಿ ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿಯಾಗುವ ಸಾಧ್ಯತೆಗಳಿರುತ್ತವೆ. ಇದರಿಂದ ಸಾರ್ವಜನಿಕರ ಶಾಂತಿಗೆ‌ ಭಂಗ ಉಂಟಾಗಲಿದೆ. ಆದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಏಪ್ರಿಲ್ 15ರಿಂದ ಕರಗ ಮಹೋತ್ಸವ ಆರಂಭವಾಗಿದ್ದು, ಪ್ರತಿದಿನ ಒಂದೊಂದು ಉತ್ಸವ ಪೂಜೆ ಪುನಸ್ಕಾರ ನಡೆಯುತ್ತಿದೆ. ಕರಗ ಏ. 23 ರಂದು ಕೊನೆಗೊಳ್ಳಲಿದೆ. ಈ ಬಾರಿಯೂ ಕರಗವನ್ನು ಎ. ಜ್ಞಾನೇಂದ್ರ ಹೊರಲಿದ್ದಾರೆ. ಈ ಮೂಲಕ ಜ್ಞಾನೇಂದ್ರ 13ನೇ ಬಾರಿಗೆ ಕರಗ ಹೊರುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಕಳೆದ ವರ್ಷ ಕರಗ ಶಕ್ತ್ಯೋತ್ಸವ ನಡೆಯುವ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಕರಗ ಹೊತ್ತ ಜ್ಞಾನೇಂದ್ರ ಅವರ ಮೇಲೆ ರಾಸಾಯನಿಕವನ್ನು ಎರಚಿದ್ದರು. ಆ ಮೂಲಕ ಕರಗ ಮಹೋತ್ಸವಕ್ಕೆ ಅಡ್ಡಿಪಡಿಸಲು ಸಂಚು ರೂಪಿಸಿದ್ದರು. ಆದರೂ ಜ್ಞಾನೇಂದ್ರ ಅವರು ಎದೆಗುಂದದೆ ದ್ರೌಪದಿದೇವಿ ಕರಗವನ್ನು ಹೊತ್ತು ಯಶಸ್ವಿಯಾಗಿ ಮುಗಿಸಿದ್ದರು. ಈ ಬಾರಿ ಅವರಿಗೆ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ. (ವರದಿ:ಎಚ್. ಮಾರುತಿ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ