logo
ಕನ್ನಡ ಸುದ್ದಿ  /  ಕರ್ನಾಟಕ  /  Bengaluru News: ಬೆಂಗಳೂರು ನಗರದಲ್ಲಿ ಪೊಲೀಸ್ ಸಿಬ್ಬಂದಿ ಕೊರತೆ; ಲಕ್ಷ ಜನಸಂಖ್ಯೆಗೆ 673 ಪೋಲೀಸರು ಬೇಕು, ಆದರೆ ಇಷ್ಟು ಸಾಕೇ?

Bengaluru News: ಬೆಂಗಳೂರು ನಗರದಲ್ಲಿ ಪೊಲೀಸ್ ಸಿಬ್ಬಂದಿ ಕೊರತೆ; ಲಕ್ಷ ಜನಸಂಖ್ಯೆಗೆ 673 ಪೋಲೀಸರು ಬೇಕು, ಆದರೆ ಇಷ್ಟು ಸಾಕೇ?

Rakshitha Sowmya HT Kannada

Feb 22, 2024 08:11 AM IST

google News

ಬೆಂಗಳೂರು ನಗರದಲ್ಲಿ ಶೇ 23ರಷ್ಟು ಪೊಲೀಸ್‌ ಸಿಬ್ಬಂದಿ ಕೊರತೆ (ಸಾಂದರ್ಭಿಕ ಚಿತ್ರ)

  • Bengaluru News: ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲಿ ಬಹುತೇಕ ಬೆಂಗಳೂರಿನಲ್ಲೇ ನಡೆಯುತ್ತಿದೆ. ಆದರೆ ನಗರದಲ್ಲಿ ಪ್ರತಿ ಲಕ್ಷ ಜನಸಂಖ್ಯೆಗೆ ಕೇವಲ 191 ಪೊಲೀಸರು ಇದ್ದು ಸರ್ಕಾರ ಇದರ ಬಗ್ಗೆ ಗಮನ ಹರಿಸಬೇಕಿದೆ. (ವರದಿ: ಮಾರುತಿ ಹನುಮಂತಯ್ಯ)

ಬೆಂಗಳೂರು ನಗರದಲ್ಲಿ ಶೇ 23ರಷ್ಟು ಪೊಲೀಸ್‌ ಸಿಬ್ಬಂದಿ ಕೊರತೆ (ಸಾಂದರ್ಭಿಕ ಚಿತ್ರ)
ಬೆಂಗಳೂರು ನಗರದಲ್ಲಿ ಶೇ 23ರಷ್ಟು ಪೊಲೀಸ್‌ ಸಿಬ್ಬಂದಿ ಕೊರತೆ (ಸಾಂದರ್ಭಿಕ ಚಿತ್ರ) (PC: @BlrCityPolice)

ಬೆಂಗಳೂರು: ಪ್ರತಿ ಲಕ್ಷ ಜನಸಂಖ್ಯೆಗೆ 673 ಪೊಲೀಸರು ಇರಬೇಕೆಂದು ವಿಶ್ವಸಂಸ್ಥೆ ಶಿಫಾರಸು ಮಾಡಿದೆ. ಆದರೆ ಬೆಂಗಳೂರು ನಗರದಲ್ಲಿ ಪ್ರತಿ ಲಕ್ಷ ಜನಸಂಖ್ಯೆಗೆ ಕೇವಲ 191 ಪೊಲೀಸರು ಕರ್ತವ್ಯ ನಿರತರಾಗಿದ್ದಾರೆ. ದೇಶದ ಇತರ ಪ್ರಮುಖ ನಗರಗಳಿಗೆ ಹೋಲಿಸಿದರೆ ಈ ಸಂಖ್ಯೆ ತುಂಬಾ ಕಡಿಮೆಯಿದ್ದು, ಬೆಂಗಳೂರು ಕೊನೆಯ ಸ್ಥಾನದಲ್ಲಿದೆ.

ಶೇ 23ರಷ್ಟು ಪೊಲೀಸ್‌ ಸಿಬ್ಬಂದಿ ಕೊರತೆ

ಸದ್ಯ ಬೆಂಗಳೂರಿನಲ್ಲಿ ಶೇ.22 ರಿಂದ 23ರಷ್ಟು ಪೊಲೀಸ್ ಸಿಬ್ಬಂದಿ ಕೊರತೆ ಇದೆ. ಉದ್ಯಾನ ನಗರಿ ಬೆಂಗಳೂರಿನಲ್ಲಿ 25,307 ಪೊಲೀಸರಿದ್ದು, ಇವರಲ್ಲಿ 18,308 ಸಿವಿಲ್ ಪೊಲೀಸರು ಮತ್ತು 6,999 ಸಶಸ್ತ್ರ ಮೀಸಲು ಸಿಬ್ಬಂದಿ ಸೇರಿ ಬೆಂಗಳೂರಿನಲ್ಲಿ ಒಟ್ಟು 25,307 ಪೊಲೀಸರಿದ್ದಾರೆ ಎಂದು ಇತ್ತೀಚೆಗೆ ಪೊಲೀಸ್ ಆಯುಕ್ತ ಬಿ ದಯಾನಂದ ಅವರೇ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಕೇವಲ ಇಡೀ ಬೆಂಗಳೂರಿನಲ್ಲಿ ಮಾತ್ರ ಕೊರತೆ ಇಲ್ಲ. ಪ್ರತಿ ಪೊಲೀಸ್ ಠಾಣೆಯಲ್ಲೂ ಸಿಬ್ಬಂದಿ ಕೊರತೆ ಎದುರಾಗಿದೆ.

ಬೆಂಗಳೂರಿನ 113 ಪೊಲೀಸ್ ಠಾಣೆಗಳಲ್ಲಿ ಪ್ರತಿ ಠಾಣೆಯಲ್ಲಿ 162 ಪೊಲೀಸರು ಮಾತ್ರ ಇದ್ದಾರೆ. ಮುಂಬೈನ 99 ಪೊಲೀಸ್ ಠಾಣೆಗಳಲ್ಲಿ ಒಂದೊಂದರಲ್ಲೂ 499 ಪೊಲೀಸರು, ದೆಹಲಿಯ 203 ಪೊಲೀಸ್ ಠಾಣೆಗಳಲ್ಲಿ 416 ಪೊಲೀಸರು ಕರ್ತವ್ಯ ನಿರತರಾಗಿದ್ದಾರೆ. ಕೋಲ್ಕತ್ತಾದ 80 ಪೊಲೀಸ್ ಠಾಣೆಗಳಲ್ಲಿ 310 ಪೊಲೀಸರಿದ್ದರೆ, ಚೆನ್ನೈನ 102 ಪೊಲೀಸ್ ಠಾಣೆಗಳಲ್ಲಿ 190 ಪೊಲೀಸರು ಸೇವೆ ಸಲ್ಲಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ರಿಯಲ್ ಎಸ್ಟೇಟ್ , ಸೈಬರ್ ಕ್ರೈಮ್, ಕೊಲೆ ಸುಲಿಗೆಯಂತಹ ನಾನಾ ರೀತಿಯ ಅಪರಾಧಗಳನ್ನು ನಿಭಾಯಿಸಲು ಅಗತ್ಯ ಸಿಬ್ಬಂದಿ ಬೇಕೇ ಬೇಕು.

25 ಸಾವಿರ ಹುದ್ದೆಗಳು ಖಾಲಿ

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸುಮಾರು 1.10. ಲಕ್ಷ ಹುದ್ದೆಗಳು ಮಂಜೂರಾಗಿದ್ದು, ಅಂದಾಜು 88 ಸಾವಿರ ಸಿಬ್ಬಂದಿ‌ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನುಳಿದ 25 ಸಾವಿರ ಹುದ್ದೆಗಳು ಖಾಲಿ ಉಳಿದಿವೆ. ರಾಜ್ಯ ಸರ್ಕಾರ ಅಳೆದೂ ತೂಗಿ ಸಿಬ್ಬಂದಿ ನೇಮಕಾತಿ ನಡೆಸುತ್ತಿದೆ. ತ್ವರಿತ ನೇಮಕಾತಿ ವಿಳಂಬವಾಗುತ್ತಿದೆ. ಜನಸಂಖ್ಯೆ ಹೆಚ್ಚಾದಂತೆ ಅಪರಾಧ ಪ್ರಕರಣಗಳೂ ಹೆಚ್ಚುತ್ತಿವೆ. ಅಪರಾಧಗಳ ವಿಧಾನವೂ ಹೊಸ ಹೊಸ ಅವತಾರ ತಾಳುತ್ತಿದೆ. ಅದರಲ್ಲೂ ನಗರ ಪ್ರದೇಶಗಳಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಸಿಬ್ಬಂದಿ ಕೊರತೆ, ಜನಸಂಖ್ಯೆ ಹೆಚ್ಚಳ ಮೊದಲಾದ ಕಾರಣಗಳಿಗಾಗಿ ಅಪರಾಧ ಪ್ರಕರಣ‌ಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ.

ಕೇವಲ ಬೆಂಗಳೂರು ಕರ್ನಾಟಕದಲ್ಲಿ ಮಾತ್ರ ಈ ಕೊರತೆಯಿಲ್ಲ ದೇಶದ ಎಲ್ಲಾ ರಾಜ್ಯಗಳಲ್ಲೂ ಈ ಸಮಸ್ಯೆ ಇದ್ದು, ಕೆಲವು ರಾಜ್ಯಗಳಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಪೊಲೀಸ್ ಸಿಬ್ಬಂದಿ ಕೊರತೆ ದೇಶದ ಎಲ್ಲಾ ರಾಜ್ಯಗಳ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಜನಸಂಖ್ಯೆಗೆ ಅನುಗುಣವಾಗಿ ಪೊಲೀಸರ ಕೊರತೆ ಇರುವುದೂ ಅಪರಾಧ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ದೇಶದಲ್ಲಿ ನಗರ ಪ್ರದೇಶಗಳ ಸಂಖ್ಯೆ ವಿಸ್ತಾರವಾಗುತ್ತಿದೆ. ನಗರ ಪ್ರದೇಶಗಳಿಗೆ ಉದ್ಯೋಗ ಅರಸಿ ವಲಸೆ ಬರುವವರ ಪ್ರಮಾಣ ಹೆಚ್ಚುತ್ತಿದೆ. ಆರ್ಥಿಕ ಚಟುವಟಿಕೆಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ ಹೆಚ್ಚುತ್ತಿದ್ದು, ಆರ್ಥಿಕ ಅಪರಾಧಗಳ ಸಂಖ್ಯೆಯೂ ವಿಪರೀತವಾಗಿದೆ.

ಡಿಜಿಟಲೀಕರಣ ಹೆಚ್ಚಾಗುತ್ತಿರುವ ಪರಿಣಾಮ

ಎಲ್ಲೆಡೆ ಸೈಬರ್ ಅಪರಾಧಗಳ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಏರುತ್ತಿದೆ. ಮತ್ತೊಂದು ಕಡೆ ಕೋಮುಗಲಭೆ ಹಾಗೂ ಭಯೋತ್ಪಾದನೆ ಕೃತ್ಯಗಳ‌ ಜೊತೆಗೆ ಅಪರಾಧ ಜಗತ್ತಿನಲ್ಲಿ ಹೊಸ ಹೊಸ ರೀತಿಯಲ್ಲಿ ವಂಚನೆ ಪ್ರಕರಣಗಳು ವರದಿಯಾಗುತ್ತಿವೆ. ಇಂತಹ ಹಲವು ಸವಾಲುಗಳ‌ನ್ನು ಎದುರಿಸಲು ಬಲವಾದ ಪಡೆ ಅನಿವಾರ್ಯವಾಗಿದೆ. ಎಸ್. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪೊಲೀಸ್ ಮಹಾ ನಿರ್ದೇಶಕರಾಗಿದ್ದ ಬಾಲಕೃಷ್ಣ ರಾವ್ ಅವರು ಯಾವ ಯಾವ ಮಾದರಿಯ ಪೊಲೀಸ್ ಠಾಣೆಗಳಲ್ಲಿ ಎಷ್ಟೆಷ್ಟು ಪೊಲೀಸರು ಇರಬೇಕು ಎಂದು ವರದಿ ನೀಡಿದ್ದರು.

ಗ್ರಾಮೀಣ, ನಗರ,‌ ಮಹಾ ನಗರ‌ ಎಂದು ಮೂರು ಭಾಗಗಳಾಗಿ ವಿಂಗಡಿಸಿ ಯಾವ ಠಾಣೆಗಳಲ್ಲಿ ಎಷ್ಟು ಮಂದಿ‌‌ ಪೊಲೀಸರು ಇರಬೇಕು ಎಂದು ವರದಿ ನೀಡಿದ್ದರು. ಈ ವರದಿಯನ್ನು ಬಂಗಾರಪ್ಪ ಒಪ್ಪಿದ್ದರು. ಎರಡೂವರೆ ದಶಕಗಳಾದರೂ ಈ ವರದಿ ಧೂಳು ತಿನ್ನುತ್ತಿದೆ. ಇಂತದೊಂದು ವರದಿ ಇದೆ ಎನ್ನುವುದೇ ಇತ್ತೀಚಿನ ಸರ್ಕಾರಗಳಿಗೆ ಅರಿವಿನ ಕೊರತೆ ಇರಬಹುದು ಎನ್ನಲಾಗುತ್ತಿದೆ.

ವರದಿ: ಮಾರುತಿ ಹನುಮಂತಯ್ಯ, ಬೆಂಗಳೂರು

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ