ಮಂಗಳೂರು ಮಹಾನಗರಕ್ಕೆ ಕುಡಿಯುವ ನೀರಿನ ಕೊರತೆ ಸದ್ಯಕ್ಕಿಲ್ಲ; ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಡಿಸಿ ಸೂಚನೆ
ಬೇಸಿಗೆ ಆರಂಭವಾಗುತ್ತಿದ್ದು, ಮಂಗಳೂರು ಮಹಾನಗರಕ್ಕೆ ಕುಡಿಯುವ ನೀರಿನ ಕೊರತೆ ಸದ್ಯಕ್ಕಿಲ್ಲ. ಆದಾಗ್ಯೂ ಮುಂಬರುವ ತಿಂಗಳುಗಳಲ್ಲಿ ನೀರಿನ ಕೊರತೆ ಉಂಟಾಗದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದ್ದಾರೆ. (ವರದಿ: ಹರೀಶ ಮಾಂಬಾಡಿ, ಮಂಗಳೂರು)
ಮಂಗಳೂರು: ಫೆಬ್ರವರಿ ತಿಂಗಳ ಅಂತ್ಯ ಸಮೀಪಿಸುತ್ತಿದ್ದರೂ ಮಂಗಳೂರು ಮಹಾನಗರಕ್ಕೆ ಕುಡಿಯುವ ನೀರೊದಗಿಸುವ ತುಂಬೆ ಅಣೆಕಟ್ಟಿನಲ್ಲಿ ನೀರಿನ ಕೊರತೆ ಆಗಿಲ್ಲ. ಕಳೆದ ಬಾರಿ ಮಳೆ ಕಡಿಮೆ ಇರುವ ಸಂದರ್ಭ, ಫೆಬ್ರವರಿ ಹೊತ್ತಿನಲ್ಲಿ ಮಂಗಳೂರಿನ ಜನತೆಗೆ ಕುಡಿಯುವ ನೀರಿಗೆ ಸಮಸ್ಯೆ ಉಂಟಾದೀತು ಎಂದು ಅಂದಾಜಿಸಲಾಗಿತ್ತು. ಆದರೆ ಏಳು ಮೀಟರ್ ಎತ್ತರದ ತುಂಬೆ ಅಣೆಕಟ್ಟಿನಲ್ಲಿ 6 ಮೀಟರ್ ಎತ್ತರಕ್ಕೆ ನೀರು ಸಂಗ್ರಹವಾಗಿದೆ.
ತುಂಬೆ ನೇತ್ರಾವತಿ ಡ್ಯಾಂನಲ್ಲಿ ಪ್ರಸ್ತುತ 6 ಮೀಟರ್ ನೀರು ಇದೆ. ಮಂಗಳೂರು ಮಹಾನಗರಪಾಲಿಕೆ, 3 ಗ್ರಾಮ ಪಂಚಾಯತ್, ಮುಲ್ಕಿ ಮತ್ತು ಉಳ್ಳಾಲ ನಗರ ಪ್ರದೇಶಗಳಿಗೆ ಇಲ್ಲಿಂದ ನೀರು ಪೂರೈಕೆ ಆಗುತ್ತಿದೆ. ತುಂಬೆ ವೆಂಟೆಡ್ ಡ್ಯಾಂ ಕೆಳಭಾಗದ ನೀರನ್ನು ಪ್ರತಿನಿತ್ಯ ತುಂಬೆ ಡ್ಯಾಂಗೆ ಹಾಯಿಸಿ ನದಿ ನೀರಿನ ಮಟ್ಟವನ್ನು ಕಾಯ್ದುಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ.
ನೀರಿನ ಕೊರತೆ ಆಗದಂತೆ ನೋಡಿಕೊಳ್ಳಿ: ಅಧಿಕಾರಿಗಳಿಗೆ ಡಿಸಿ ಸೂಚನೆ
ಈತನ್ಮಧ್ಯೆ ಮುಂಜಾಗರೂಕತೆ ಸಭೆ ನಡೆಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ನೀರಿನ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬೇಸಿಗೆ ಆರಂಭವಾಗುತ್ತಿದ್ದು, ಸಾರ್ವಜನಿಕರಿಗೆ, ಜನ ಜಾನುವಾರುಗಳಿಗೆ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಆಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚಿಸಿದ್ದಾರೆ. ಕುಡಿಯುವ ನೀರಿನ ಲಭ್ಯತೆ ಹಾಗೂ ಸಮಸ್ಯಾತ್ಮಕ ಏರಿಯಾಗಳು ಹಾಗೂ ಗ್ರಾಮಗಳನ್ನು ಗುರುತಿಸಿಕೊಳ್ಳಬೇಕು. ನೀರು ಪೂರೈಕೆಗೆ ಪರ್ಯಾಯ ಮೂಲಗಳನ್ನು ಗುರುತಿಸಿಡಬೇಕು. ಅಗತ್ಯ ಬಿದ್ದರೆ ಖಾಸಗಿ ಬೋರ್‍ವೆಲ್‍ಗಳಿಂದಲೂ ನೀರು ಪಡೆಯಲು ಕ್ರಮ ವಹಿಸಬೇಕು. ನೀರಿನ ಸಮಸ್ಯೆ ಎದುರಾದರೆ ಅಧಿಕಾರಿಗಳೇ ಜವಾಬ್ದಾರರು ಎಂದು ಎಚ್ಚರಿಸಿದ್ದಾರೆ.
ಮುಂದಿನ ತಿಂಗಳಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗಬಹುದು
ಕುಡಿಯುವ ನೀರಿನ ಸಮಸ್ಯೆ ಎದುರಾದರೆ ಟ್ಯಾಂಕರ್ ಮೂಲಕ ನೀರು ನೀಡಲು ಅಗತ್ಯ ಇರುವ ಕಡೆಗೆ ಟೆಂಡರ್ ಕರೆದು ವ್ಯವಸ್ಥೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳ 39 ಗ್ರಾಮಗಳಲ್ಲಿ ಹಾಗೂ ನಗರ, ಪಟ್ಟಣ ಪ್ರದೇಶಗಳ 112 ವಾರ್ಡುಗಳಲ್ಲಿ ಮುಂಬರುವ ತಿಂಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗುವ ಸಾಧ್ಯತೆ ಅಂದಾಜಿಸಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದರೆ ತಿಳಿಸಲು ಹೆಲ್ಪ್‍ಲೈನ್ ತೆರೆದು, ಸಿಬ್ಬಂದಿ ನೇಮಕ ಮಾಡಬೇಕು. ಕುಡಿಯುವ ನೀರಿನ ಪೂರೈಕೆ ಮಾಡುವ ನೀರನ್ನು ಅದರ ಶುದ್ಧತೆ ಹಾಗೂ ಗುಣಮಟ್ಟ ಕುರಿತು ಪರಿಶೀಲನೆ ನಡೆಸಲು ಉದ್ದೇಶಿಸಲಾಗಿದೆ. ಹೊಸ ಬೋರ್‍ವೆಲ್‍ಗಳನ್ನು ಕೊರೆಯಲು ಅಗತ್ಯ ಇರುವ ಕಡೆ ಗುರುತಿಸಿ ಇಟ್ಟುಕೊಳ್ಳಬೇಕು. ಬರವನ್ನು ಸಮರ್ಥವಾಗಿ ನಿರ್ವಹಿಸಲು ಅಧಿಕಾರಿಗಳು ಕ್ಷೇತ್ರಗಳಿಗೆ ಭೇಟಿ ನೀಡಬೇಕು ಎಂದು ಈಗಾಗಲೇ ಡಿಸಿ ಸೂಚಿಸಿದ್ದಾರೆ.
ತುಂಬೆ ನೇತ್ರಾವತಿ, ಎ.ಎಂ.ಆರ್., ಮಳವೂರು ಅಣೆಕಟ್ಟುಗಳ ನೀರಿನ ಪ್ರಮಾಣದ ಮಾಹಿತಿಯನ್ನು ಜಿಲ್ಲಾಧಿಕಾರಿ ಪಡೆದಿದ್ದು, ನಿರ್ದಿಷ್ಟ ಪ್ರಮಾಣಕ್ಕಿಂತ ಕೆಳಗೆ ನೀರು ಇಳಿದರೆ, ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಿದ್ಧತೆ ಮಾಡಿಕೊಳ್ಳಲು ತಿಳಿಸಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಇರುವ ಮಂಗಳೂರು ನಗರದ ಎತ್ತರ ಪ್ರದೇಶಗಳಿಗೆ 15 ಟ್ಯಾಂಕರ್‌ಗಳ ಮೂಲಕ ಮಹಾನಗರಪಾಲಿಕೆಯು ನೀರು ಪೂರೈಕೆ ಮಾಡುತ್ತಿದೆ.
1.5 ಮೀಟರ್ ಎತ್ತರದಲ್ಲಿ ನೀರು ಮಳವೂರಿನಲ್ಲಿ ಲಭ್ಯ
ಮಳವೂರು ಡ್ಯಾಂನಲ್ಲಿ 1.5 ಮೀ. ಎತ್ತರದಲ್ಲಿ ನೀರು ಲಭ್ಯವಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಮೂಲಕವೂ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಗ್ರಾಮೀಣ ಕುಡಿಯುವ ನೀರು ಇಂಜಿನಿಯರ್ ತಿಳಿಸಿದ್ದಾರೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿರುವ ಅಡ್ಯಾರ್-ಹರೇಕಳ ಡ್ಯಾಂ ಹಾಗೂ ಪುತ್ತೂರು ತಾ. ಬಿಳಿಯೂರು ಡ್ಯಾಂನಿಂದಲೂ ಅಗತ್ಯ ಬಿದ್ದರೆ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್, ಪುತ್ತೂರು ಉಪವಿಭಾಗಾಧಿಕಾರಿ ಜುಬಿನ್ ಮಹಾಪಾತ್ರ್ರ, ಮಂಗಳೂರು ಉಪವಿಭಾಗಾಧಿಕಾರಿ ಹರ್ಷವರ್ಧನ್, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
(ವರದಿ: ಹರೀಶ ಮಾಂಬಾಡಿ, ಮಂಗಳೂರು)
(This copy first appeared in Hindustan Times Kannada website. To read more like this please logon to kannada.hindustantimes.com)