ನಮ್ಮ ಮೆಟ್ರೋ ಪ್ರಯಾಣ ದರ ಶೇ 15-25ರಷ್ಟು ಏರಿಕೆ ಸಂಭವ; ಪ್ರಯಾಣಿಕರ ಜೇಬಿಗೆ ಹೊರೆ, ಎಸಿಯಲ್ಲೂ ಬೆವರುವ ಪರಿಸ್ಥಿತಿ!
Oct 04, 2024 10:07 PM IST
ನಮ್ಮ ಮೆಟ್ರೋ ಪ್ರಯಾಣ ದರ ಶೇ 15-25ರಷ್ಟು ಏರಿಕೆ ಸಂಭವ
- Namma Metro: ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ಖಚಿತವಾಗಿದ್ದು, ಶೇಕಡಾ 15-25ರಷ್ಟು ಏರಿಕೆ ಸಂಭವ ಸಾಧ್ಯತೆ ಇದೆ. ಪ್ರಯಾಣಿಕರ ಜೇಬಿಗೆ ಹೊರೆ, ಎಸಿಯಲ್ಲೂ ಬೆವರುವ ಪರಿಸ್ಥಿತಿ ಬಂದಿದೆ. (ವರದಿ-ಎಚ್.ಮಾರುತಿ)
ಬೆಂಗಳೂರು: ನಮ್ಮ ಮೆಟ್ರೋ ರೈಲಿನಲ್ಲಿ ಹವಾ ನಿಯಂತ್ರಣದಲ್ಲಿ ತಂಪಾಗಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಶಾಕಿಂಗ್ ಸುದ್ದಿ. ಶೀಘ್ರದಲ್ಲೇ ಪ್ರಯಾಣ ದರ ಏರಿಕೆಯಾಗಲಿದ್ದು, ಒಮ್ಮೆ ಯೋಚಿಸಿ ನಂತರ ಮೆಟ್ರೋ ರೈಲು ಹತ್ತುವ ಪರಿಸ್ಥಿತಿ ಸಾವಿರಾರು ಪ್ರಯಾಣಿಕರದ್ದು. ಬಲ್ಲ ಮೂಲಗಳ ಪ್ರಕಾರ ಬಹುಶಃ ಮುಂದಿನ ಮೂರು ತಿಂಗಳಲ್ಲಿ ಪ್ರಯಾಣ ದರ ಶೇ.15-25ರಷ್ಟು ಏರಿಕೆ ನಿಶ್ಚಿತ ಎಂದು ನಮ್ಮ ಮೆಟ್ರೋ ಮೂಲಗಳು ತಿಳಿಸಿವೆ. ಪ್ರಯಾಣ ದರ ಏರಿಕೆಗಾಗಿ ರಚಿಸಲಾಗಿರುವ ಮೆಟ್ರೋ ರೈಲ್ವೆ ದರ ನಿಗದಿ ಸಮಿತಿ ಅಥವಾ ರೈಲ್ ಫೇರ್ ಫಿಕ್ಸೇಶನ್ ಕಮಿಟಿ (ಎಫ್ ಎಫ್ ಸಿ)ಗೆ ಸಾರ್ವಜನಿಕರು ಬೆಲೆ ಏರಿಕೆ ಕುರಿತು ಸಲಹೆ ಸೂಚನೆಗಳನ್ನು ನೀಡಬಹುದಾಗಿದೆ. ಇದಕ್ಕಾಗಿ ಅಕ್ಟೋಬರ್ 21 ಕೊನೆಯ ದಿನವಾಗಿರುತ್ತದೆ.
ಮೆಟ್ರೋ ರೈಲುಗಳಲ್ಲಿ ದೇಶಾದ್ಯಂತ ಪ್ರಯಾಣ ದರ ನಿಗದಿಪಡಿಸಲು ರಚಿಸಲಾಗಿರುವ ಎಫ್ಎಫ್ಸಿ ಸ್ವಾಯತ್ತ ಸಂಸ್ಥೆಯಾಗಿದ್ದು, ಅರೆ ನ್ಯಾಯಿಕ ಅಧಿಕಾರ ಹೊಂದಿದೆ. ಎಫ್ಎಫ್ಸಿಯು ಮೆಟ್ರೋ ರೈಲು ಕಾಯಿದೆ-2022ರ ಅಡಿಯಲ್ಲಿ ರಚಿಸಲಾಗಿದೆ. ಈ ಸಂಸ್ಥೆಯು ಮೆಟ್ರೋ ನಿರ್ವಹಣಾ ವೆಚ್ಚ, ಪ್ರಯಾಣಿಕರ ಬೇಡಿಕೆ ಆಧಾರದಲ್ಲಿ ಪರಿಶಿಲನೆ ನಡೆಸಿ ಪ್ರಯಾಣ ದರ ನಿಗದಿ ಮಾಡಲಿದೆ. ಮದ್ರಾಸ್ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆರ್ ಥರಾಣಿ ಅಧ್ಯಕ್ಷರಾಗಿದ್ದರೆ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಸತ್ಯೇಂದ್ರ ಪಾಲ್ ಸಿಂಗ್ ಮತ್ತು ಕರ್ನಾಟಕದ ನಿವೃತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ ಸದಸ್ಯರಾಗಿದ್ದಾರೆ. ಈ ಸಂಬಂಧ ಬಿಎಂಆರ್ ಸಿ ಎಲ್ ಅಧಿಸೂಚನೆ ಹೊರಡಿಸಿದ್ದು, ಸಾರ್ವಜನಿಕರು ffc@bmrc.co.in ಅಥವಾ ಬಿಎಂಆರ್ಸಿಎಲ್ನ ಕೇಂದ್ರ ಕಚೇರಿಗೆ ಅಂಚೆ ಮೂಲಕವೂ ತಮ್ಮ ಸಲಹೆ ಸೂಚನೆಗಳನ್ನು ತಿಳಿಸಬಹುದಾಗಿದೆ. ಆದರೆ ನಿಗಮವು ತನ್ನ ವೆಬ್ಸೈಟ್ನಲ್ಲಿ ಅಧಿಸೂಚನೆ ಹೊರಡಿಸಿದೆಯೇ ಹೊರತು ಮಾಧ್ಯಮ ಪ್ರಕಟಣೆ ನೀಡಿಲ್ಲ ಎನ್ನುವುದು ಕುತೂಹಲಕಾರಿಯಾಗಿದೆ.
ಪ್ರಯಾಣ ದರ ಎಷ್ಟಿರಬಹುದು?
2017ರಿಂದ ಇದುವರೆಗೂ ಮೆಟ್ರೋ ಪ್ರಯಾಣ ದರ ಏರಿಕೆಯಾಗಿಲ್ಲ. ಈ ಬಾರಿ ಶೇ. 15-25ರಷ್ಟು ಏರಿಕೆಯಾಗಬಹುದು ಎಂದು ನಮ್ಮ ಮೆಟ್ರೋ ಮೂಲಗಳು ತಿಳಿಸಿವೆ. 2017ರಲ್ಲಿ ಶೇ.10-15ರಷ್ಟು ಏರಿಕೆಯಾಗಿತ್ತು. ಎಫ್ಎಫ್ಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಕ್ಕೂ ಮುನ್ನ ಪ್ರಯಾಣಿಕರು ಮತ್ತು ಬಿಎಂಆರ್ಸಿಎಲ್ನ ಅಭಿಪ್ರಾಯಗಳನ್ನು ಪರಿಗಣಿಸಲಿದೆ. ಮೆಟ್ರೋ ರೈಲುಗಳ ನಿರ್ವಹಣಾ ವೆಚ್ಚ, ನಿರ್ವಹಣಾ ವೆಚ್ಚ ಮತ್ತು ಸಿಬ್ಬಂದಿಯ ಸಂಬಳ ಇತ್ಯಾದಿ ವೆಚ್ಚಗಳನ್ನು ಲೆಕ್ಕ ಹಾಕಿ ನಿಗದಿ ಮಾಡಲಿದೆ. ಪ್ರಸ್ತುತ ಪ್ರಯಾಣ ದರ ಕನಿಷ್ಠ 10 ರೂ.ಗಳಿಂದ ಗರಿಷ್ಠ 60 ರೂ ವರೆಗೆ ಇದೆ. ಈ ದರ ನೇರಳೆ ಮತ್ತು ಹಸಿರು ಮಾರ್ಗಗಳೆರಡಕ್ಕೂ ಅನ್ವಯವಾಗುತ್ತದೆ.
ವೈಟ್ ಫೀಲ್ಡ್-ಚಲ್ಲಘಟ್ಟ ನಡುವಿನ ದೂರ 43.49 ಕಿಮೀ ದೂರವಿದೆ. ಸಿಲ್ಕ್ ಇನ್ ಸ್ಟಿಟ್ಯೂಟ್ ನಾಗಸಂದ್ರ ನಡುವಿನ ದೂರ 30.32 ಕಿಮೀ ದೂರ ಇದ್ದರೂ ಕೊನೆಯ ನಿಲ್ದಾಣದ ಪ್ರಯಾಣ ದರ 60 ರೂ. ಇದೆ. ಬಿಎಂಆರ್ಸಿಎಲ್ ಕಳೆದ 3 ವರ್ಷಗಳಿಂದ ಪ್ರಯಾಣದರದ ಪರಿಷ್ಕರಣೆಗಾಗಿ ಮನವಿ ಮಾಡಿಕೊಳ್ಳುತ್ತಲೇ ಬಂದಿತ್ತು. ಇದೀಗ ಸಮಿತಿಯನ್ನು ರಚಿಸಲಾಗಿದೆ. ಸ್ಮಾರ್ಟ್ ಕಾರ್ಡ್ ಹೊಂದಿರುವವರಿಗೆ ಶೇ 5ರಷ್ಟು ರಿಯಾಯಿತಿ ಸಿಗುತ್ತಿದೆ. 2020ರವರೆಗೂ ಶೇ.15ರಷ್ಟು ರಿಯಾಯಿತಿ ಸಿಗುತ್ತಿತ್ತು. ಈಗ ಕಡಿಮೆ ಮಾಡಲಾಗಿದೆ. ಒಟ್ಟಾರೆ ಬಡ ಮಧ್ಯಮ ವರ್ಗದ ಪ್ರಯಾಣಿಕರು ಮೆಟ್ರೋ ಹತ್ತುವ ಮುನ್ನ 2 ಬಾರಿ ಯೋಚಿಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಲಿದೆ.