logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನಲ್ಲಿ ಉಡುಪ ಸಂಗೀತೋತ್ಸವ 2024; ಫೆ 16 ರಂದು ಉಸ್ತಾದ್ ಜಾಕಿರ್ ಹುಸೇನ್‌ರಿಂದ ಚಾಲನೆ, 3 ದಿನಗಳ ಸಂಗೀತ ಸಂಭ್ರಮ

ಬೆಂಗಳೂರಿನಲ್ಲಿ ಉಡುಪ ಸಂಗೀತೋತ್ಸವ 2024; ಫೆ 16 ರಂದು ಉಸ್ತಾದ್ ಜಾಕಿರ್ ಹುಸೇನ್‌ರಿಂದ ಚಾಲನೆ, 3 ದಿನಗಳ ಸಂಗೀತ ಸಂಭ್ರಮ

Umesh Kumar S HT Kannada

Feb 14, 2024 06:28 PM IST

google News

ಬೆಂಗಳೂರಿನಲ್ಲಿ ಉಡುಪ ಸಂಗೀತೋತ್ಸವ 2024: ಫೆ 16 ರಂದು ಉಸ್ತಾದ್ ಜಾಕಿರ್ ಹುಸೇನ್‌ರಿಂದ ಚಾಲನೆ ನೀಡಲಿದ್ದಾರೆ. 3 ದಿನಗಳ ಸಂಗೀತ ಸಂಭ್ರಮದಲ್ಲಿ ಮೇರು ಕಲಾ ಸಾಧಕರು ಸಂಗೀತ ರಸದೌತಣ ಬಡಿಸಲಿದ್ದಾರೆ.

  • ಉಡುಪ ಸಂಗೀತೋತ್ಸವ 2024 ಕ್ಕೆ ಚಾಲನೆ ನೀಡಲಿದ್ದಾರೆ ಉಸ್ತಾದ್ ಜಾಕಿರ್ ಹುಸೇನ್; ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ 3 ದಿನಗಳ ಸಂಗೀತ ಸಂಭ್ರಮದ ಕಾರ್ಯಕ್ರಮ ಮತ್ತು ವಿಶ್ವ ವಿಖ್ಯಾತ ಕಲಾವಿದರ ಸಂಗಮದ ವಿವರ ಇಲ್ಲಿದೆ. (ವರದಿ- ಶಿವಮೊಗ್ಗ ರಾಮ್‌)

ಬೆಂಗಳೂರಿನಲ್ಲಿ ಉಡುಪ ಸಂಗೀತೋತ್ಸವ 2024: ಫೆ 16 ರಂದು ಉಸ್ತಾದ್ ಜಾಕಿರ್ ಹುಸೇನ್‌ರಿಂದ ಚಾಲನೆ ನೀಡಲಿದ್ದಾರೆ. 3 ದಿನಗಳ ಸಂಗೀತ ಸಂಭ್ರಮದಲ್ಲಿ ಮೇರು ಕಲಾ ಸಾಧಕರು ಸಂಗೀತ ರಸದೌತಣ ಬಡಿಸಲಿದ್ದಾರೆ.
ಬೆಂಗಳೂರಿನಲ್ಲಿ ಉಡುಪ ಸಂಗೀತೋತ್ಸವ 2024: ಫೆ 16 ರಂದು ಉಸ್ತಾದ್ ಜಾಕಿರ್ ಹುಸೇನ್‌ರಿಂದ ಚಾಲನೆ ನೀಡಲಿದ್ದಾರೆ. 3 ದಿನಗಳ ಸಂಗೀತ ಸಂಭ್ರಮದಲ್ಲಿ ಮೇರು ಕಲಾ ಸಾಧಕರು ಸಂಗೀತ ರಸದೌತಣ ಬಡಿಸಲಿದ್ದಾರೆ. (Udupa Foundation)

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಈಗ ವಿಭಿನ್ನವಾದ ಸಂಗೀತ ಉತ್ಸವಕ್ಕೆ ಅಣಿಯಾಗಿದೆ. ಪ್ರತಿ ಬಾರಿಯೂ ವಿಶೇಷ, ವಿಶಿಷ್ಟ ಸಂಗೀತ ಸಮಾರಾಧನೆಗೆ ಹೆಸರಾದ ಉಡುಪ ಪ್ರತಿಷ್ಠಾನ ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಫೆ. 16, 17 ಮತ್ತು 18ರಂದು ಹಮ್ಮಿಕೊಂಡಿರುವ ಉಡುಪ ಸಂಗೀತೋತ್ಸವ 5ನೇ ಆವೃತ್ತಿಗೆ ಈಗ ದಿನಗಣನೆ ಶುರುವಾಗಿದೆ.

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕಲಾ ದಿಗ್ಗಜರು ತಮ್ಮ ಅದ್ಭುತ ಪ್ರೌಢಿಮೆಯನ್ನು ಒರೆಗೆ ಹಚ್ಚುವ ಮೂಲಕ ಉತ್ಸವವನ್ನು ಸಾರ್ಥಕಗೊಳಿಸುವುದು, ಆ ಮೂಲಕ ಶ್ರೋತೃವರ್ಗದಲ್ಲಿ ಕರ್ನಾಟಕ- ಹಿಂದುಸ್ತಾನಿ ಸಂಗೀತ ಮತ್ತು ವಾದ್ಯ ತರಂಗದಲ್ಲಿ ವಿನೂತನ ತರಂಗಗಳನ್ನು ಮೂಡಿಸಲಿರುವುದು ಬಹು ವಿಶೇಷ.

ಇತ್ತೀಚೆಗಷ್ಟೇ ಲಾಸ್ ಏಂಜಲೀಸ್‌ನಲ್ಲಿ ವಿಶ್ವದ ಪ್ರತಿಷ್ಠಿತ ಗ್ರಾೃಮಿ ಅವಾರ್ಡ್ ಕಿರೀಟ ಮುಡಿಗೇರಿಸಿಕೊಂಡ ಜಾಗತಿಕ ತಬಲಾ ಮಾಂತ್ರಿಕ ಪಂಡಿತ್ ಉಸ್ತಾದ್ ಝಾಕೀರ್ ಹುಸೇನ್ ಅವರು ಫೆ. 16ರ ಸಂಜೆ 7ಕ್ಕೆ ಪಂಡಿತ್ ನೀಲಾದ್ರಿ ಕುಮಾರ್ ಸಿತಾರ್ ವಾದನಕ್ಕೆ ಜುಗಲ್ ಬಂದಿಯಾಗಲಿದ್ದಾರೆ.

ಫೆ.17ರಂದು ಮಹಿಳಾ ಕಲಾವಿದರ ವಾದ್ಯಮೇಳ

ಫೆ. 17ರ ಸಂಜೆ 6ಕ್ಕೆ ಸ್ತ್ರೀ ತಾಳ ತರಂಗದ ‘ಲಯ ರಾಗ ಸಮರ್ಪಣಂ’ ರಂಜಿಸಲಿದೆ. ಮಹಿಳಾ ಕಲಾವಿದರೇ ಇದಕ್ಕೆ ಸಾಕ್ಷಿಯಾಗಲಿದ್ದು, ವಿದುಷಿ ಸುಕನ್ಯಾ ರಾಮಗೋಪಾಲ್ ಘಟ ತರಂಗ್, ವಿದುಷಿಯರಾದ ವೈ.ಜಿ. ಶ್ರೀಲತಾ ವೀಣೆ, ಜಿ. ಲಕ್ಷ್ಮೀ ಮೃದಂಗ, ಭಾಗ್ಯಲಕ್ಷ್ಮಿ ಎಂ. ಕೃಷ್ಣ ಅವರು ಮೋರ್ಚಿಂಗ್ ವಾದನ ಮೇಳೈಸಲಿದೆ. ಸಂಜೆ 7ಕ್ಕೆ ಇನ್ನೊಬ್ಬ ಗಾಯನ ಮೇರು ವಿದ್ವಾಂಸ ಟಿ. ಎಂ. ಕೃಷ್ಣ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಲಿದೆ. ಪಕ್ಕವಾದ್ಯದಲ್ಲಿ ವಿದ್ವಾನ್ ಎಚ್.ಕೆ. ವೆಂಕಟರಾಮ್ ಪಿಟೀಲು, ಉಮಯಾಳ್ಪರಂ ಕೆ. ಶಿವರಾಮನ್ ಅವರು ಮೃದಂಗ, ಕಾರ್ತಿಕ್ ಅವರು ಘಟ ಪಕ್ಕವಾದ್ಯ ಸಾಥ್ ನೀಡಲಿದ್ದಾರೆ.

ಫೆ. 18ರಂದು ಅರುಣಾ ಸಾಯಿರಾಂ ಗಾಯನ

18ರ ಸಂಜೆ 7ಕ್ಕೆ ವಿದುಷಿ ಅರುಣಾ ಸಾಯಿರಾಂ ಗಾಯನ ಮಾಧುರ್ಯವಿದೆ. ಈ ಸಂದರ್ಭ ಪೂರ್ವ ಮತ್ತು ಪಾಶ್ಚಿಮಾತ್ಯ ನಾಡಿನ ಪ್ರಮುಖ ವಾದ್ಯಗಳು ಅನುರಣಿಸಲಿವೆ. ತ್ರಿಲೋಕ್ ಗುರ್ತು ಅವರು ಡ್ರಮ್ಸ್, ಪಂಡಿತ್ ಪ್ರವೀಣ್ ಗೋಡ್ಖಿಂಡಿ ಕೊಳಲು, ಮಹೇಶ ಕಾಳೆ ಗಾಯನ, ಕೀತ್ ಪೀಟರ್ಸ್ ಬಾಸ್ ಗಿಟಾರ್, ಮಿಗಿಲ್ ಚೌಹಾಸ್ಕಿ ಅವರ ಫ್ಲಮೆಂಕೋ ಗಿಟಾರ್, ಅರುಣ್ ಕುಮಾರ್ ಅವರ ಡ್ರಮ್ಸ್, ಪ್ರಮಥ ಕಿರಣ್ ಅವರ ಪರ್ಕ್ಯೂಶನ್ಸ್ ಮತ್ತು ಸಂಗೀತ್ ಹಳದೀಪುರ ಅವರು ಕೀಬೋರ್ಡ್ ನುಡಿಸಿ ರಂಜಿಸಲಿದ್ದಾರೆ.

ಗ್ರ್ಯಾಮಿ ಅವಾರ್ಡ್ ಪುರಸ್ಕಾರದ ಬಳಿಕ ತಬಲಾ ಮೇರು ಮಾಂತ್ರಿಕನ ಮೊದಲ ಕಛೇರಿ

ಮೂರು ದಿನಗಳ ಸಂಗೀತ ಉತ್ಸವ ಒಂದು ಹೊಸ ಸಂಚಲನ ಮೂಡಿಸಲಿದೆ. ತಬಲಾ ಮೇರು ಮಾಂತ್ರಿಕ ಉಸ್ತಾದ್ ಝಾಕೀರ್ ಹುಸೇನ್ ಅವರು ವಿಶ್ವ ಮಟ್ಟದ ಗ್ರ್ಯಾಮಿ ಅವಾರ್ಡ್ ಪುರಸ್ಕೃತರಾದ ನಂತರ ಕರ್ನಾಟಕದಲ್ಲಿ ಮೊದಲ ಬಾರಿಗೆ ಕಛೇರಿ ನೀಡಲು ಸಮ್ಮತಿಸಿದ್ದಾರೆ. ಇವರೊಂದಿಗೆ ಕಲಾ ಕೋವಿದರೂ ಸಂಗಮಗೊಂಡಿರುವುದು ಮಹತ್ವದ ಸಂಗತಿ. ಹಾಗಾಗಿ ಉದ್ಯಾನ ನಗರಿಯಲ್ಲಿ ಉಡುಪ ಸಂಗೀತ ಉತ್ಸವದ 5ನೇ ಆವೃತ್ತಿ ಒಂದು ಹೊಸ ಮೈಲಿಗಲ್ಲನ್ನೇ ಸ್ಥಾಪಿಸಲಿದೆ. ಎಂದು ಆಯೋಜಕ ಮತ್ತು ಪ್ರಖ್ಯಾತ ಘಟ ವಿದ್ವಾಂಸ ಗಿರಿಧರ ಉಡುಪ ಸಂಭ್ರಮದಿಂದಲೇ ಹೇಳುತ್ತಾರೆ.

ಕಲಾ ಮೇರುಗಳ ಪರಿಚಯ

1) ಉಸ್ತಾದ್ ಝಾಕಿರ್ ಹುಸೇನ್ : ಹೆಸರೊಂದೇ ಚೇತನ ಶಕ್ತಿ. ಅವರು ವಿಶ್ವ ಶ್ರೇಷ್ಠ ತಬಲಾ ವಾದಕ, ಸಂಯೋಜಕ, ತಾಳವಾದ್ಯ ಮತ್ತು ಸಂಗೀತ ನಿರ್ಮಾಪಕ. ಕಲೆ ಎಂಬುದು ಅವರಿಗೆ ಜನ್ಮಜಾತ ವರ. 12ನೇ ವಯಸ್ಸಿನಲ್ಲೇ ಭಾರತದ ಶ್ರೇಷ್ಠ ಶಾಸ್ತ್ರೀಯ ಸಂಗೀತಗಾರರೊಂದಿಗೆ

ಅಂತಾರಾಷ್ಟ್ರೀಯ ಮಟ್ಟದ ಕಛೇರಿ ನೀಡಿದ್ದು ಹೆಗ್ಗಳಿಕೆ. ಸಂಗೀತವೇ ಅವರ ವೃತ್ತಿ ಮತ್ತು ಪ್ರವೃತ್ತಿ. ಮಾತ್ರವಲ್ಲ, ಉಸಿರೇ ಆಗಿದೆ. ತಬಲಾದ ಮೇಲೆ ಪ್ರಭುತ್ವ ಸಾಧಿಸಿದ ಅವರ ಅವಿರತ ಸಾಧನೆಗಾಗಿ 1988 ರಲ್ಲಿ ಪದ್ಮಶ್ರೀ, 2002 ರಲ್ಲಿ ಪದ್ಮ ಭೂಷಣ ಮತ್ತು 2023 ರಲ್ಲಿ ಪದ್ಮ ವಿಭೂಷಣ ಸೇರಿದಂತೆ ಅಸಂಖ್ಯಾತ ಪ್ರಶಸ್ತಿ, ಗೌರವ ಅರಸಿಬಂದಿವೆ. ಲಾಸ್ ಏಂಜಲೀಸ್‌ನಲ್ಲಿ ಕಳೆದ ಫೆ. 5 ರಂದು 66 ನೇ ಗ್ರ್ಯಾಮಿ ಪ್ರಶಸ್ತಿ ಅವರ ಕಿರೀಟವನ್ನು ಅಲಂಕರಿಸಿದ್ದು ವಿಶ್ವವೇ ಕಲಾವಂತಿಕೆಗೆ ತಲೆಬಾಗಿದೆ.

ಜಾಗತಿಕ ವೇದಿಕೆಗಳಲ್ಲಿ ಕಛೇರಿ ನೀಡುವುದು ಅವರ ಜೀವಂತಿಕೆ ಸಂಕೇತ. ಸಂಗೀತ ತಜ್ಞರೂ ಆಗಿರುವ ಅವರು ದೇಶ, ಮತ್ತು ಹೊರ ದೇಶಗಳಲ್ಲಿ ಸಂಗೀತ ಪ್ರಾತ್ಯಕ್ಷಿಕೆ, ಕಾರ್ಯಾಗಾರ ನಡೆಸುವುದು ವಿಶೇಷ ಹವ್ಯಾಸವಾಗಿದೆ.

2) ವಿದುಷಿ ಸುಕನ್ಯಾ ರಾಮಗೋಪಾಲ್- ಹೆಸರು ಕೇಳಿದರೆ ಮೊದಲಿಗೆ ಘಟದ ನಾದ ಅನುರಣಿಸುತ್ತದೆ. ಈಕೆ ವಿಶ್ವದ ಮೊದಲ ಮಹಿಳಾ ‘ಘಟಂ ವಾದಕಿ’. ಎಳವೆಯಲ್ಲೇ ಕರ್ನಾಟಕ ಶಾಸ್ತ್ರೀಯ ಸಂಗೀತ ಕರಗತ ಮಾಡಿಕೊಂಡ ಅವರು, ಘಟಂ ತಜ್ಞ ವಿಕ್ಕು ವಿನಾಯಕರಂ ಅವರ ಕುಟುಂಬದವರು ಸ್ಥಾಪಿಸಿದ ಜಯ ಗಣೇಶ ತಾಳ ವಾದ್ಯ ವಿದ್ಯಾಲಯದಲ್ಲಿ ಪಿಟೀಲು ಕಲಿತರು. ಆಘ ಮೃದಂಗ ಸೆಳೆಯಿತು. ತದನಂತರ ಅವರು ವಿಕ್ಕು ವಿನಾಯಕರಂರವರಿಂದ ಘಟಂ ವಾದ್ಯದ ಮೇಲೂ ಪ್ರಭುತ್ವ ಸಾಧಿಸಿದರು. ಸುಕನ್ಯಾ ಎ-ಟಾಪ್ ‘ಆಕಾಶವಾಣಿ’ ಕಲಾವಿದೆ. ಅವರ ಕಲಾ ಪ್ರೌಢಿಮೆಗೆ ದೇಶ- ವಿದೇಶದ ಶ್ರೋತೃಗಳು ತಲೆತೂಗಿದ್ದಾರೆ.

ರಾಜ್ಯ, ಕೇಂದ್ರ ಸಂಗೀತ- ನಾಟಕ ಅಕಾಡೆಮಿ, ಮದ್ರಾಸ್ ಸಂಗೀತ ಅಕಾಡೆಮಿ ಗೌರವಕ್ಕೆ ಭಾಜನರಾಗಿದ್ದಾರೆ. ನೂರಾರು ಪ್ರಶಸ್ತಿ, ಪುರಸ್ಕಾರ ಅವರ ಮುಡಿಗೇರಿವೆ.

ಲಾಲ್ಗುಡಿ ಜಯರಾಮನ್, ಎಂ. ಬಾಲಮುರಳಿಕೃಷ್ಣ, ಪಾಲ್ಘಾಟ್ ರಘು ಸೇರಿದಂತೆ ಕರ್ನಾಟಕ ಸಂಗೀತ ರಂಗದ ದಿಗ್ಗಜರ ಕಛೇರಿಗೆ ಅವರು ಘಟಂ ಸಾಥ್ ನೀಡಿದ ಕಲಾವಿದೆ. ಅವರು ಏಕ ಕಾಲದಲ್ಲಿ ವಿವಿಧ ಶ್ರುತಿಗಳ 6-7 ಘಟಂಗಳನ್ನು ನುಡಿಸುವ ನಿಷ್ಣಾತೆಯಾಗಿದ್ದಾರೆ. ಅವರು ಘಟಂ, ಪಿಟೀಲು, ವೀಣೆ, ಮೋರ್ಸಿಂಗ್ ಮತ್ತು ಮೃದಂಗವನ್ನು ಒಳಗೊಂಡಿರುವ ‘ಸ್ತ್ರೀ ತಾಳ ತರಂಗ’ ಎಂಬ ಸಂಪೂರ್ಣ ಮಹಿಳಾ ವಾದ್ಯ ತಂಡ ಕಟ್ಟಿ ಬೆಳೆಸಿದ್ದಾರೆ. ವಿಶ್ವಾದ್ಯಂತ ಕಛೇರಿ ಸವಿ ಉಣಬಡಿಸಿದ್ದಾರೆ.

3) ವಿದ್ವಾನ್ ಟಿ.ಎಂ. ಕೃಷ್ಣ- ಕರ್ನಾಟಕ ಶಾಸ್ತ್ರೀಯ ಸಂಗೀತದ ಅಗ್ರ ಪಂಕ್ತಿ ಗಾಯಕ. 12 ನೇ ವಯಸ್ಸಿನಲ್ಲೇ ಚೆನ್ನೈನ ಮ್ಯೂಸಿಕ್ ಅಕಾಡೆಮಿ ಆಯೋಜಿಸಿದ್ದ ಸ್ಪಿರಿಟ್ ಆಫ್ ಯೂತ್ ಸರಣಿಯಿಂದ ಗೆಲುವು ಆರಂಭ. ಅಂದಿನಿಂದ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. ಪ್ರಪಂಚದಾದ್ಯಂತ ವಿವಿಧ ಉತ್ಸವಗಳು ಮತ್ತು ಸ್ಥಳಗಳಲ್ಲಿ ವ್ಯಾಪಕವಾಗಿ ಅವರು ಕಲೆಗಾರಿಕೆ

ಪ್ರದರ್ಶಿಸಿ ಅಸಂಖ್ಯ ಶ್ರೋತೃಗಳ ಮನ ಗೆದ್ದಿದ್ದಾರೆ. ಕೃಷ್ಣರವರ ಸಂಗೀತವು ಭಾವಪೂರ್ಣ ಮತ್ತು ’ರಾಗ ಭಾವ’ದಿಂದ ತುಂಬಿರುತ್ತದೆ ಎಂಬುದೇ ವಿಶೇಷ. ಯಮುನಕಲ್ಯಾಣಿಯಲ್ಲಿನ ’ಜಂಬೂಪಥೆ’ ಮತ್ತು ನಳಿನಕಾಂತಿಯಲ್ಲಿನ ’ಮನವಿನಾಳ’ ಅವರ ಅತ್ಯಂತ ಜನಪ್ರಿಯ ರಚನೆಗಳು. ನದಿ ತೀರದಲ್ಲಿ, ಮೀನುಗಾರರ ಮಧ್ಯದಲ್ಲಿ ಕುಳಿತು ಸಂಗೀತ ಸುಧೆ ಹರಿಸಿ, ಅತಿ ಕೆಳ ವರ್ಗದವರೊಂದಿಗೂ ಬೆರೆಯುವುದು ಇವರ ವಿಶೇಷತೆ. 2017 ರಲ್ಲಿ ಇಂದಿರಾ ಗಾಂಧಿ ರಾಷ್ಟ್ರೀಯ ಪ್ರಶಸ್ತಿ, 2019 ರಲ್ಲಿ ಕೇರಳ ಸರ್ಕಾರದ ಅತ್ಯುನ್ನತ ಗೌರವ ‘ ಸ್ವಾತಿ ಸಂಗೀತ ಪುರಸ್ಕಾರಕ್ಕೆ ಭಾಜನ. ಇವರ ಕಂಠಸಿರಿಗೆ ರಾಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ಅರಸಿ ಬಂದಿದೆ.

4) ವಿದುಷಿ ಅರುಣಾ ಸಾಯಿರಾಂ- ಕಂಠ ಶ್ರೀಗೆ ಮಾರುಹೋಗದವರೇ ಇಲ್ಲ. ಈಕೆ ಸಂಗೀತಾ ಕಲಾನಿಧಿ. ಕರ್ನಾಟಕ ಶಾಸ್ತ್ರೀಯ ಸಂಗೀತ ಇವರ ನಾಲಿಗೆಯಲ್ಲಿ ನಲಿದಾಡುವ ಪರಿ ಭಿನ್ನ. 14 ನೇ ವಯಸ್ಸಿನಲ್ಲೇ ಏಕವ್ಯಕ್ತಿ ಸಂಗೀತ ಕಚೇರಿ ನೀಡಿ ಚೆನ್ನೈನ ಸಂಗೀತ ಅಕಾಡೆಮಿಯಲ್ಲಿ ವಿದ್ವಾಂಸರಿಂದ ಸೈ ಎನಿಸಿಕೊಂಡವರು. ದೇಶ- ವಿದೇಶದಲ್ಲಿ ಗಾನಸಿರಿ ಹರಿಸಿದ ಪ್ರಖ್ಯಾತೆ. ಲಂಡನ್‌ನಲ್ಲಿ ನಡೆದ ಬಿಬಿಸಿ ಪ್ರಾಮ್ಸ್ ಮತ್ತು ಇಸ್ರೇಲ್‌ನಲ್ಲಿ ನಡೆದ ಸಂಗೀತ ಉತ್ಸವದಲ್ಲಿ ಪ್ರದರ್ಶನ ನೀಡಿದ ಮೊದಲ ಕರ್ನಾಟಕ ಸಂಗೀತ ಕಲಾವಿದೆ ಎಂಬ ಹೆಗ್ಗಳಿಕೆ ಇದೆ. ಭಾರತ ಸರ್ಕಾರದ ಪದ್ಮಶ್ರೀ ಸೇರಿದಂತೆ ನೂರಾರು ಪ್ರಶಸ್ತು ಇವರನ್ನು ಅಲಂಕರಿಸಿದೆ.

5) ಪಂಡಿತ್ ಪ್ರವೀಣ್ ಗೋಡ್ಖಿಂಡಿ - ಕೊಳಲಿಗೆ ಅನ್ವರ್ಥ. ಭಾರತೀಯ ಶಾಸ್ತ್ರೀಯ ಹಿಂದೂಸ್ತಾನಿ ಕೊಳಲು ಇವರಿಗೆ ಮಣಿದಿದೆ. ಜಗತ್ತು ಬಾಗಿದೆ. ಆಲ್ ಇಂಡಿಯಾ ರೇಡಿಯೊದಿಂದ ಇಂಡಿಯನ್ ಬ್ಯಾನ್‌ಬರಿ ವರೆಗೆ ಅಗ್ರ ಶ್ರೇಯಾಂಕದ ಕಲಾವಿದ ಎಂಬ ಪಟ್ಟ. 8 ಅಡಿ ಉದ್ದದ ಕಾಂಟ್ರಾಬಾಸ್ ಎಂಬ ಕೊಳಲನ್ನು ವಿಶ್ವಕ್ಕೆ ಪರಿಚಯಿಸಿದ ವೇಣು- ಮಾಂತ್ರಿಕ. ಪಂಡಿತ್ ವೆಂಕಟೇಶ ಗೋಡ್ಖಿಂಡಿ ಮತ್ತು ಆನೂರು ಅನಂತ ಕೃಷ್ಣ ಶರ್ಮಾರಿಂದ ಕೊಳಲು ಕಲಿತ ಇವರು ಜಗ ಮೆಚ್ಚಿದ ಗಾಯನ ಮೇರುಗಳಾದ ಡಾ. ಬಾಲಮುರಳಿ ಕೃಷ್ಣ, ಉಸ್ತಾದ್ ಜಾಕಿರ್ ಹುಸೇನ್, ವಿಶ್ವ ಮೋಹನ ಭಟ್, ಡಾ. ಕದ್ರಿ ಗೋಪಾಲನಾಥ, ಶಿವಮಣಿ ಮೊದಲಾದವರೊಂದಿಗೆ ವೇದಿಕೆ ಹಂಚಿಕೊಂಡಿರುವುದು ಕನ್ನಡ ನಾಡಿಗೆ ಹೆಮ್ಮೆ. ಹತ್ತು ಹಲವು ಉನ್ನತ ಸನ್ಮಾನಾದಿಗಳು ಇವರ ಕೊರಳಿಗೆ ಭೂಷಣವಾಗಿವೆ.

ಉಡುಪ ಸಂಗೀತ ಉತ್ಸವದ ಆಯೋಜಕ ವಿದ್ವಾನ್ ಗಿರಿಧರ ಉಡುಪ

- ದಿ ಕಿಂಗ್ ಆಫ್ ಪಾಟ್ ಮ್ಯೂಸಿಕ್- ಎಂದೇ ವಿಖ್ಯಾತ. ಘಟಂ ವಾದನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರ್ಯಾಯ ಹೆಸರು ಗಿರಿಧರ. ಜಗತ್ತಿನ ತಾಳವಾದ್ಯಗಾರರಲ್ಲಿ ಇದು ಮೇರು ‘ಗಿರಿ’. ವಿಶ್ವ ವಿಖ್ಯಾತ ಕಲಾವಿದರ ಜೊತೆಗೆಲ್ಲಾ 30 ವರ್ಷದಿಂದ ಪ್ರೀತಿಯಿಂದ ಇದ್ದು, ಕಲಾ ರಸಿಕರ ಮನಗೆದ್ದ ವಾದಕ. ಇವರ ಶ್ರಮ ಹಾಗೂ ಮಾಡಿರುವ ಸಾಧನೆ ಅನನ್ಯ. ಅಂತಾರಾಷ್ಟ್ರೀಯ ಸಂಗೀತ ಕ್ಷೇತ್ರದ ರಾಯಭಾರಿ ಎಲ್ಲ ಕಲಾವಿದರನ್ನೂ ಸಮನ್ವಯಿಸುವ ವಿಶೇಷ ಗುಣ ಹೊಂದಿದ್ದಾರೆ.

ತಮ್ಮ ನಾಲ್ಕನೇ ವಯಸ್ಸಿನಲ್ಲೇ ತಂದೆ ವಿದ್ವಾನ್ ಉಳ್ಳೂರು ನಾಗೇಂದ್ರರಲ್ಲಿ ಅಭ್ಯಾಸ ಆರಂಭ ಮಾಡಿದರು. ವಿದುಷಿ ಸುಕನ್ಯಾ ರಾಮ್‌ಗೋಪಾಲ್ ಅವರ ಶಿಷ್ಯ. ಘಟವಾದನವನ್ನು ಶಾಸ್ತ್ರೀಯ ಸಂಗೀತಕ್ಕೆ ಸೀಮಿತಗೊಳಿಸದೆ, ಅನೇಕ ಪಾಶ್ಚಾತ್ಯ ಸಂಗೀತದಲ್ಲಿಯು ಕೂಡ ಅವರ ವಿದ್ವತನ್ನು ವಿಸ್ತರಿಸಿದ್ದಾರೆ. ಉಡುಪ ಫೌಂಡೇಶನ್ ಸಂಸ್ಥೆಯ ಸ್ಥಾಪಿತ ನಿರ್ದೇಶಕರೂ ಆಗಿರುವ ಗಿರಿಧರ 2015ರಿಂದ ಸಂಸ್ಥೆಯ ಮುಖಾಂತರ ಶಾಸ್ತ್ರೀಯ ಸಂಗೀತ ಕಲೆಯನ್ನು ಎಲ್ಲೆಡೆಯು ಪಸರಿಸುತ್ತಿದ್ದಾರೆ. ಮಾರ್ಚ್ 2011ರಲ್ಲಿ ವಿಶ್ವಸಂಸ್ಥೆಯಲ್ಲಿ ಪ್ರದರ್ಶನ ನೀಡಿದ ಭಾರತದ ಕೆಲವೇ ಸಂಗೀತಗಾರರಲ್ಲಿ ಇವರೂ ಒಬ್ಬರು. ಇವರು ಹಲವಾರು ಅಂತರಾಷ್ಟ್ರೀಯ ಸಂಗೀತ ಉತ್ಸವಗಳಲ್ಲಿ ಭಾಗವಹಿಸಿ ಜಗತ್ತಿನ ಪ್ರಖ್ಯಾತ ಸ್ಥಳಗಳಲ್ಲಿ ಗೌರವಾದರಗಳಿಗೆ ಭಾಜನರಾಗಿದ್ದಾರೆ.

(ವರದಿ- ಶಿವಮೊಗ್ಗ ರಾಮ್‌)

(This copy first appeared in Hindustan Times Kannada website. To read more like this please logon to kannada.hindustantime.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ