ಒಳಗೆ ಹೋಗು ಎಂದಿದ್ದಕ್ಕೆ ಬಿಎಂಟಿಸಿ ಕಂಡಕ್ಟರ್‌ಗೆ ಚಾಕುವಿನಿಂದ ಇರಿದ ವಲಸಿಗ; ಕೆಲಸ ಕಳೆದುಕೊಂಡ ಚಿಂತೆಯಲ್ಲಿ ಎಡವಟ್ಟು
Oct 02, 2024 04:19 PM IST
ಬಿಎಂಟಿಸಿ ಕಂಡಕ್ಟರ್‌ಗೆ ಚಾಕುವಿನಿಂದ ಇರಿದ ವಲಸಿಗ; ಕೆಲಸ ಕಳೆದುಕೊಂಡ ಚಿಂತೆಯಲ್ಲಿ ಎಡವಟ್ಟು
- ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಒಳಗೆ ಯುವಕನೊಬ್ಬ ಭಾರಿ ರಾದ್ಧಾಂತ ಮಾಡಿದ್ದಾನೆ. ಕ್ಷುಲ್ಲಕ ಕಾರಣಕ್ಕೆ ಕಂಡಕ್ಟರ್‌ಗೆ ಚಾಕುವಿನಿಂದ ಇರಿದಿದ್ದಾನೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದೆ. ಗಾಯಗೊಂಡ ನಿರ್ವಾಹಕ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೆಂಗಳೂರು: 25 ವರ್ಷದ ಯುವಕನೊಬ್ಬ ಬಿಎಂಟಿಸಿ ಬಸ್ ನಿರ್ವಾಹಕನಿಗೆ ಚಾಕುವಿನಿಂದ ಇರಿದ ಘಟನೆ ಅಕ್ಟೋಬರ್ 1ರ ಮಂಗಳವಾರ ನಡೆದಿದೆ. ವೈಟ್ ಫೀಲ್ಡ್ ಬಳಿ ಈ ಘಟನೆ ನಡೆದಿದ್ದು, ವೈಟ್‌ಫೀಲ್ಡ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಕಂಡಕ್ಟರ್ ಅಪಾಯದಿಂದ ಪಾರಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಯನ್ನು ಹರೀಶ್ ಸಿನ್ಹಾ ಎಂದು ಗುರುತಿಸಲಾಗಿದೆ. ಈತ ಬಿಪಿಒ ಉದ್ಯೋಗಿಯಾಗಿದ್ದ. ಜಾರ್ಖಂಡ್ ಮೂಲದವನಾದ ಈತನನ್ನು ಕೆಲವು ದಿನಗಳ ಹಿಂದಷ್ಟೇ ಕೆಲಸದಿಂದ ವಜಾ ಮಾಡಲಾಗಿತ್ತು ಎಂಬ ವರದಿಗಳಿವೆ. ಇದೇ ಚಿಂತೆಯಲ್ಲಿದ್ದ ವ್ಯಕ್ತಿ, ಸಣ್ಣ ವಾದಕ್ಕೆ ಕೋಪಗೊಂಡು ಕಂಡಕ್ಟರ್‌ಗೆ ಚಾಕು ಇರಿದಿದ್ದಾನೆ. ಆದರೆ, ನಿರ್ವಾಹಕ ಮಾತ್ರ ಗಾಯಗಳೊಂದಿಗೆ ಬಚಾವ್ ಆಗಿದ್ದಾರೆ.
ಮಂಗಳವಾರ ಸಿನ್ಹಾ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ. ಬಸ್‌ನಲ್ಲಿ ಹೆಚ್ಚು ಜನರಿದ್ದರು. ಈ ವೇಳೆ ಬಾಗಿಲ ಬಳಿ ನಿಂತಿದ್ದ ಸಿನ್ಹಾ ಬಳಿ, ಫುಟ್‌ಬೋರ್ಡ್‌ನಿಂದ ಮೇಲೆ ಹತ್ತುವಂತೆ ಬಸ್ ಕಂಡಕ್ಟರ್ ಯೋಗೇಶ್ ಹೇಳಿದ್ದಾರೆ. ಇತರ ಪ್ರಯಾಣಿಕರು ಹತ್ತಲು ಮತ್ತು ಇಳಿಯಲು ಸಮಸ್ಯೆಯಾಗದಂತೆ ಬಾಗಿಲಿನಿಂದ ಒಳಗೆ ಹೋಗುವಂತೆ ಹೇಳಿದ್ದಾರೆ. ಇದೇ ವಿಷಯವಾಗಿ ಸಿನ್ಹಾ ಮತ್ತು ಯೋಗೇಶ್ ನಡುವೆ ವಾಗ್ವಾದ ನಡೆದಿದೆ. ವಾದ ಉಲ್ಬಣಗೊಳ್ಳುತ್ತಿದ್ದಂತೆ ತನ್ನ ಬ್ಯಾಗ್‌ನಿಂದ ಚಾಕುವನ್ನು ತೆಗೆದ ಸಿನ್ಹಾ, ಯೋಗೇಶ್‌ಗೆ ಇರಿದಿದ್ದಾನೆ. ಈ ವೇಳೆ ಕಂಡಕ್ಟರ್ ತಕ್ಷಣ ಬಸ್ಸಿನಿಂದ ಜಿಗಿದಿದ್ದಾರೆ. ಅಷ್ಟರಲ್ಲೇ ಡ್ರೈವರ್ ಕೂಡಾ ಬಸ್ ಡೋರ್‌ಗಳನ್ನು ಒಳಗಿನಿಂದ ಲಾಕ್ ಮಾಡಿ, ಆರೋಪಿ ಓಡಿ ಹೋಗದಂತೆ ಮಾಡಿದ್ದಾರೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವ್ಯಕ್ತಿ ಮಾಡಿದ ರಾದ್ಧಾಂತದಿಂದ ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಭಾರಿ ಭೀತಿ ಉಂಟಾಗಿದೆ. ಕಂಡಕ್ಟರ್ ಮಾತ್ರವಲ್ಲದೆ ಸಿನ್ಹಾ ಇತರ ಪ್ರಯಾಣಿಕರಿಗೂ ಬೆದರಿಕೆ ಹಾಕಿದ್ದಾನೆ. ಅಲ್ಲದೆ ಬಸ್ ಗಾಜುಗಳನ್ನು ಒಡೆದು ಬಸ್‌ಗೆ ಹಾನಿ ಮಾಡಿದ್ದಾನೆ ಎಂದು ಬಿಎಂಟಿಸಿ ತಿಳಿಸಿದೆ.
ಬಿಎಂಟಿಸಿ ಬಸ್‌ಗೆ ಹಾನಿ
ಘಟನೆ ಕುರಿತು ಹೇಳಿಕೆ ನೀಡಿರುವ ಬಿಎಂಟಿಸಿ, “ಕಂಡಕ್ಟರ್ ಮೇಲೆ ದಾಳಿ ನಡೆಸಿದ ನಂತರ ಸಿನ್ಹಾ ಇತರ ಪ್ರಯಾಣಿಕರಿಗೆ ಬೆದರಿಕೆ ಹಾಕಿದ್ದಾನೆ. ತಕ್ಷಣ ಬಸ್ ಖಾಲಿ ಮಾಡುವಂತೆ ಬೆದರಿಸಿದ್ದಾನೆ. ಅಷ್ಟೇ ಅಲ್ಲದೆ ಸುತ್ತಿಗೆಯನ್ನು ಬಳಸಿ ಬಸ್ಸಿನ ಕಿಟಕಿಗಳು ಮತ್ತು ಇತರ ಆಸ್ತಿಪಾಸ್ತಿಗಳನ್ನು ಹಾನಿಗೊಳಿಸಿದ್ದಾನೆ” ಎಂದು ಹೇಳಿದೆ.
ಚಾಲಕನಿಗೆ ಶ್ಲಾಘನೆ
ಘಟನೆಯ ಸಮಯದಲ್ಲಿ ಬುದ್ಧಿ ಉಪಯೋಗಿಸಿದ ಬಿಎಂಟಿಸಿ ಡ್ರೈವರ್ ಅನ್ನು ಸಂಸ್ಥೆ ಶ್ಲಾಘಿಸಿದೆ. "ಎಲ್ಲಾ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ದಾಳಿಕೋರನನ್ನು ಬಸ್ ಒಳಗೆ ಲಾಕ್ ಮಾಡಿದ ನಮ್ಮ ಚಾಲಕ ಶ್ರೀ ಸಿದ್ದಲಿಂಗಸ್ವಾಮಿ ಅವರ ತ್ವರಿತ ಮತ್ತು ನಿರ್ಣಾಯಕ ಕ್ರಮಗಳನ್ನು ನಾವು ಶ್ಲಾಘಿಸುತ್ತೇವೆ. ಪ್ರಯಾಣಿಕರ ಸಹಾಯದಿಂದ, ಅವರು ಪೊಲೀಸರು ಮತ್ತು ತುರ್ತು ಸೇವೆಗಳಿಗೆ ಕರೆ ಮಾಡಿದ್ದಾರೆ. ಕಂಡಕ್ಟರ್ ಯೋಗೇಶ್ ಅವರನ್ನು ಚಿಕಿತ್ಸೆಗಾಗಿ ವೈದೇಹಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅಪಾಯದಿಂದ ಪಾರಾಗಿದ್ದು, ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ.
ವರದಿಗಳ ಪ್ರಕಾರ, ಆರೋಪಿಯನ್ನು ಉದ್ಯೋಗದಿಂದ ವಜಾಗೊಳಿಸಲಾಗಿತ್ತು. ಅಲ್ಲದೆ ಉದ್ಯೋಗ ಸಂದರ್ಶನದಲ್ಲಿ ಆಯ್ಕೆಯಾಗದ ಕಾರಣ ಆರೋಪಿ ನಿರಾಶೆಗೊಂಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. “ಇಂತಹ ಕೃತ್ಯ ನಡೆಸಿದ ನಂತರ ಜೀವನಕ್ಕಾಗಿ ಜೈಲಿಗೆ ಹೋಗಬಹುದು ಎಂದು ಆರೋಪಿ ಯೋಚಿಸಿದ್ದ” ಎಂದು ಪೊಲೀಸರು ತಿಳಿಸಿದ್ದಾರೆ.