logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಮಳೆ; ಚೌಡೇಶ್ವರಿ ಬಡಾವಣೆಯಲ್ಲಿ ದಾಖಲೆಯ 15.5 ಸೆಂ.ಮೀ. ಮಳೆ, ತಡರಾತ್ರಿವರೆಗೆ ಎಲ್ಲೆಲ್ಲಿ ಎಷ್ಟು ಮಳೆ ಸುರಿದಿದೆ

ಬೆಂಗಳೂರು ಮಳೆ; ಚೌಡೇಶ್ವರಿ ಬಡಾವಣೆಯಲ್ಲಿ ದಾಖಲೆಯ 15.5 ಸೆಂ.ಮೀ. ಮಳೆ, ತಡರಾತ್ರಿವರೆಗೆ ಎಲ್ಲೆಲ್ಲಿ ಎಷ್ಟು ಮಳೆ ಸುರಿದಿದೆ

Umesh Kumar S HT Kannada

Oct 22, 2024 08:51 AM IST

google News

ಬೆಂಗಳೂರಿನಲ್ಲಿ ಜಲಾವೃತಗೊಂಡ ರಸ್ತೆ ಮತ್ತು ಯಲಹಂಕ ಸಮೀಪ ಕಾಂಪೌಂಡ್ ಕುಸಿದ ದೃಶ್ಯ.

  • ಬೆಂಗಳೂರು ಮಳೆ ವ್ಯಾಪಕವಾಗಿದ್ದು, ಇಂದು ಕೂಡ ಮುಂದುವರಿಯಲಿದೆ. ನಿನ್ನೆ ರಾತ್ರಿ ಕೂಡ ಮಳೆ ಸುರಿದಿದೆ. ಸೋಮವಾರ (ಅಕ್ಟೋಬರ್ 21) ತಡರಾತ್ರಿ 12 ರ ತನಕ ಸುರಿದ ಮಳೆ ಪ್ರಮಾಣ ಗಮನಿಸಿದರೆ ಚೌಡೇಶ್ವರಿ ಬಡಾವಣೆಯಲ್ಲಿ ಗರಿಷ್ಠ ಮಳೆ ಬಿದ್ದಿದೆ. ತಡರಾತ್ರಿವರೆಗೆ ಎಲ್ಲೆಲ್ಲಿ ಎಷ್ಟು ಮಳೆ ಸುರಿದಿದೆ ಎಂಬುದರ ವಿವರ ಇಲ್ಲಿದೆ.

ಬೆಂಗಳೂರಿನಲ್ಲಿ ಜಲಾವೃತಗೊಂಡ ರಸ್ತೆ ಮತ್ತು ಯಲಹಂಕ ಸಮೀಪ ಕಾಂಪೌಂಡ್ ಕುಸಿದ ದೃಶ್ಯ.
ಬೆಂಗಳೂರಿನಲ್ಲಿ ಜಲಾವೃತಗೊಂಡ ರಸ್ತೆ ಮತ್ತು ಯಲಹಂಕ ಸಮೀಪ ಕಾಂಪೌಂಡ್ ಕುಸಿದ ದೃಶ್ಯ. (PC - Twitter)

ಬೆಂಗಳೂರು: ಸ್ಥಿರವಾಗಿ ಸುರಿಯುತ್ತಿರುವ ಮಳೆಗೆ ಕರ್ನಾಟಕದ ರಾಜಧಾನಿ ಬೆಂಗಳೂರು ಕಂಗಾಲಾಗಿದೆ. ಬೆಂಗಳೂರಿನ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದ್ದು, ರಸ್ತೆಗಳು ಜಲಾವೃತವಾಗಿವೆ. ನಿನ್ನೆ ತಡರಾತ್ರಿ ಮತ್ತೆ ಮಳೆ ಸುರಿದ ಕಾರಣ, ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಭಾನುವಾರ ಮತ್ತು ಸೋಮವಾರ ತಡರಾತ್ರಿ ಬೆಂಗಳೂರು ಮಹಾ ನಗರದಲ್ಲಿ ಸುರಿದ ಮಳೆಗೆ ರಸ್ತೆಯಲ್ಲಿ ನೀರು ನಿಂತು, ತಗ್ಗು ಪ್ರದೇಶಗಳಿಗೆ ನುಗ್ಗಿ ಹಲವೆಡೆ ಜನಜೀವನ ಮತ್ತು ಸಂಚಾರ ಅಸ್ತವ್ಯಸ್ತ ಗೊ೦ಡಿತು. ಅಂಡರ್‌ಪಾಸ್‌ಗಳು, ರಸ್ತೆಗಳಲ್ಲಿ ಮಳೆ ನೀರು ಹರಿದಿದ್ದು, ಸಂಚಾರ ಅಸ್ತವ್ಯಸ್ತವಾಗಿತ್ತು. ಜಿಕೆವಿಕೆ ಬಳಿ ಕಲ್ಲಿನ ತಡೆಗೋಡೆ ಬಿದ್ದಿದ್ದು, ಪಾಲಿಕೆ ಸಿಬ್ಬಂದಿ ಅದನ್ನು ತೆರವುಗೊಳಿಸಿದರು. ಸೋಮವಾರ ತಡರಾತ್ರಿ ಒಂದು ಗಂಟೆಯ ಸುಮಾರಿಗೆ ಸಣ್ಣದಾಗಿ ಶುರುವಾದ ಮಳೆ ನಂತರದಲ್ಲಿ ಹೆಚ್ಚು ತೀವ್ರಗೊಂಡು ಬೆಳಗ್ಗೆವರೆಗೂ ಸುರಿಯಿತು.

ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನುಗ್ಗಿ ಅವಾಂತರ

ಬೆಂಗಳೂರು ನಗರದ ಹಲವೆಡೆ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ಅವಾಂತರವಾಗಿತ್ತು. ಪುಲಕೇಶಿನಗರ, ಬನ್ನೇರುಘಟ್ಟ ರಸ್ತೆಯ ವಿಜಯಶ್ರೀ ಲೇಔಟ್‌, ರಾಜರಾಜೇಶ್ವರಿ ನಗರದ ಬಿಇಎಂಎಲ್ ಲೇಔಟ್‌, ನಾಗದೇವನಹಳ್ಳಿಯ ತಗ್ಗುಪ್ರದೇಶ, ಬ್ಯಾಟರಾಯನಪುರದಲ್ಲಿ ಮನೆಗಳಿಗೆ ನೀರು ನುಗ್ಗಿ, ದಿನಸಿ ಸಾಮಗ್ರಿಗಳು, ಎಲೆಕ್ಟ್ರಾನಿಕ್ ಉಪಕರಣಗಳು ನೀರಿನಲ್ಲಿ ತೇಲಾಡಿವೆ. ತಗ್ಗು ಪ್ರದೇಶಗಳ ರಸ್ತೆಗಳಲ್ಲಿ ನೀರು ತುಂಬಿರುವುದರಿಂದ ಪರ್ಯಾಯ ಮಾರ್ಗವಿಲ್ಲದೇ ಕೊಳಚೆ ನೀರಿನಲ್ಲೇ ಓಡಾಟ ಮಾಡುವ ಸ್ಥಿತಿ ನಿರ್ಮಾಣವಾಗಿದೆ.

ಜೆ.ಜೆ.ಆರ್.ನಗರದ ವಿ.ಎಸ್‌.ಗಾರ್ಡನ್‌ನಲ್ಲಿ ಮೋರಿ ತಡೆಗೋಡೆ ಕುಸಿದಿದೆ. ಇದರ ಪರಿಣಾಮ ಸಮೀಪದಲ್ಲಿದ್ದ 10ಕ್ಕೂ ಹೆಚ್ಚು ಮನೆಗಳಿಗೆ ಮೋರಿ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಇದೇ ರೀತಿ, ಸರ್ಜಾಪುರ ಆರ್‌ಜಿಬಿ ಟೆಕ್ ಪಾರ್ಕ್‌ ಸಮೀಪದ ರೈಲ್ವೆ ಮಾರ್ಗದ ಬಳಿ ನೀರು ಹರಿಯಲು ಸರಿಯಾದ ವ್ಯವಸ್ಥೆ ಇಲ್ಲದಿರುವ ಕಾರಣ ನೀರು ನಿಂತು ಸಮಸ್ಯೆ ಸೃಷ್ಟಿಯಾಗಿತ್ತು. ಇನ್ನೊಂದೆಡೆ, ಬೆಂಗಳೂರು ಮೈಸೂರು ರಸ್ತೆಯಲ್ಲಿರುವ ಪ್ರಸಿದ್ಧ ಗಾಳಿ ಆಂಜನೇಯ ದೇವಾಲಯದ ಆವರಣಕ್ಕೂ ಮಳೆ ನೀರು ನುಗ್ಗಿದೆ. ರಸ್ತೆಯಲ್ಲಿ ನೀರು ತುಂಬಿದ್ದು ಸಂಚಾರಕ್ಕೂ ಅಡ್ಡಿಯಾಗಿದೆ. ಓಕಳಿಪುರಂ ಅಂಡರ್ ಪಾಸ್‌ನಲ್ಲಿ ಎರಡು ಅಡಿಯಷ್ಟು ನೀರು ನಿಂತು ವಾಹನ ಸವಾರರು ಪರದಾಡಿದ್ದಾರೆ.

ಚೌಡೇಶ್ವರಿ ಬಡಾವಣೆಯಲ್ಲಿ ದಾಖಲೆಯ 15.5 ಸೆಂಮೀ ಮಳೆ

ಬೆಂಗಳೂರು ಮಳೆ ವಿವಿಧ ಪ್ರದೇಶಗಳಲ್ಲಿ ಸುರಿದಿದ್ದು, ಸೋಮವಾರ ರಾತ್ರಿ 12 ಗಂಟೆ ತನಕದ ಮಾಹಿತಿ ಪ್ರಕಾರ, ಚೌಡೇಶ್ವರಿ ಬಡಾವಣೆಯಲ್ಲಿ ಗರಿಷ್ಠ ಮಳೆ ದಾಖಲಾಗಿದೆ. ಬೆಳ್ಳಂದೂರು, ಬಾಣಸವಾಡಿ, ರಾಜಾಜಿನಗರದಲ್ಲಿ 2 ಸೆಂಟಿ ಮೀಟರ್ ಮಳೆಯಾಗಿದೆ. ಉಳಿದ ಪ್ರದೇಶಗಳಲ್ಲಿ ದಾಖಲಾದ ಮಳೆ ವಿವರ ಹೀಗಿದೆ.

 ಬೆಂಗಳೂರು ಮಳೆ: ಸೋಮವಾರ ರಾತ್ರಿ 12 ರ ತನಕ ಮಳೆ ಎಲ್ಲೆಲ್ಲಿ ಎಷ್ಟು ಪ್ರಮಾಣ (ಸೆಂ.ಮೀ) 

ಪ್ರದೇಶಮಳೆ (ಸೆಂ.ಮೀ)
ಚೌಡೇಶ್ವರಿ ಬಡಾವಣೆ15.5
ವಿದ್ಯಾರಣ್ಯಪುರ10.8
ಜಕ್ಕೂರು8.8
ಹೊರಮಾವು 7.2
ಕೊಡಿಗೆಹಳ್ಳಿ6.7
ಶೆಟ್ಟಿಹಳ್ಳಿ6.5
ಬಾಗಲಕುಂಟೆ5.4
ಪೀಣ್ಯ ಕೈಗಾರಿಕಾ ಪ್ರದೇಶ4.0
ಚೊಕ್ಕಸಂದ್ರ3.4
ನಾಗಸಂದ್ರ3.1
ಹೆಮ್ಮಿಗೆಪುರ2.9
ಮಾರತ್‌ಹಳ್ಳಿ2.7
ವಿ ನಾಗೇನಹಳ್ಳಿ2.7
ಎಚ್ ಗೊಲ್ಲಹಳ್ಳಿ2.4
ದಯಾನಂದ ನಗರ2.4
ಎಚ್‌ಎಎಲ್‌ ವಿಮಾನ ನಿಲ್ದಾಣ2.4
ಮನೋರಾಯನ ಪಾಳ್ಯ2.3
ರಾಜರಾಜೇಶ್ವರಿ ನಗರ2.2
ಕೋಣನಕುಂಟೆ2.1
ನಂದಿನಿ ಲೇಔಟ್‌2.1

ಕೆಂಗೇರಿ, ಆರ್.ಆರ್.ನಗರ, ಟಿ ದಾಸರಹಳ್ಳಿ, ಓಕಳಿಪುರಂ, ರಾಜಾಜಿನಗರ, ಶಿವಾಜಿ ನಗರ, ಜಯನಗರ, ಬೊಮ್ಮಸಂದ್ರ, ಜೆ.ಪಿ.ನಗರ, ಆಡುಗೋಡಿ, ಬೆಳ್ಳಂದೂರು, ಎಚ್‌ಎಸ್ಆರ್ ಲೇ ಔಟ್, ನಾಗದೇವನಹಳ್ಳಿ, ಬಸವನಗುಡಿ, ಚಾಮರಾಜಪೇಟೆ, ಹೆಬ್ಬಾಳ, ಆರ್.ಟಿ.ನಗರ, ಸದಾಶಿವನಗರ, ಬೊಮ್ಮಸಂದ್ರ, ಮಹದೇವಪುರ, ಜಾಲಹಳ್ಳಿ, ಯಲಹಂಕ, ಕೋರಮಂಗಲ, ಸಿಂಗಸಂದ್ರ, ಬಾಗಲಗುಂಟೆ, ಹಂಪಿ ನಗರ, ವಿಜಯನಗರ, ಮಾನ್ಯತಾ ಟೆಕ್ ಪಾರ್ಕ್, ಸಿಲ್ಕ್ ಬೊರ್ಡ್, ಚಲ್ಲಘಟ್ಟ, ಬ್ಯಾಟರಾಯನಪುರ, ಪುಲಕೇಶಿ ನಗರ, ಕುಮಾರಸ್ವಾಮಿ ಲೇಔಟ್, ಉತ್ತರಹಳ್ಳಿ, ವಿಲ್ಸನ್ ಗಾರ್ಡನ್, ಕೆ.ಆರ್.ಮಾರುಕಟ್ಟೆ, ಕೆರೆಮಾವು, ಚೌಡಪ್ಪ ಬಡಾವಣೆ, ಕಾವೇರಿ ಬಡಾವಣೆ ಭಾಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ