ಬೆಂಗಳೂರು ಹವಾಮಾನ; ಮೂರ್ನಾಲ್ಕು ದಿನಗಳಿಂದ ಸ್ಥಿರವಾಗಿ ಸುರಿಯುತ್ತಿದೆ ವರ್ಷಧಾರೆ, ನಗರದಲ್ಲಿ ಇಂದು ಹೇಗಿದೆ ಮಳೆ ಸಾಧ್ಯತೆ
Oct 22, 2024 07:51 AM IST
ಬೆಂಗಳೂರು ಹವಾಮಾನ: ಕರ್ನಾಟಕದ ರಾಜಧಾನಿಯಲ್ಲಿ ಇಂದು ಮೋಡ ಕವಿದ ವಾತಾವರಣ ಇರಲಿದ್ದು ಗುಡುಗು ಮಿಂಚು ಸಹಿತ ವ್ಯಾಪಕ ಮಳೆ ಸುರಿಯುವ ಸಾಧ್ಯತೆ ಎಂದು ಹವಾಮಾನ ಇಲಾಖೆ ತಿಳಿಸಿದೆ. (ಕಡತ ಚಿತ್ರ)
ಬೆಂಗಳೂರಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸತತ ಮಳೆ ಸುರಿಯುತ್ತಿದ್ದು, ಇಂದು ಕೂಡ ಅದು ಮುಂದುವರಿಯಲಿದೆ. ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಇಂದು (ಅಕ್ಟೋಬರ್ 22) ಮೋಡ ಕವಿದ ವಾತಾವರಣ, ಗುಡುಗು ಮಿಂಚು ಸಹಿತ ವ್ಯಾಪಕ ಮಳೆ ಸುರಿಯುವ ಸಾಧ್ಯತೆ ಇದೆ. ಉಳಿದ ವಿವರ ಈ ವರದಿಯಲ್ಲಿದೆ.
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಬೆಂಗಳೂರಲ್ಲಿ ಸ್ಥಿರವಾಗಿ ಮಳೆ ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಹಾಗಾಗಿ ಸಹಜವಾಗಿ ಇಂದಿನ ಹವಾಮಾನ ಏನು ಎಂಬ ಕುತೂಹಲ ಇದ್ದೇ ಇರುತ್ತೆ. ನಿನ್ನೆ ತಡರಾತ್ರಿ ಮತ್ತೆ ಸುರಿದ ಮಳೆಯ ಕಾರಣ ಬೆಂಗಳೂರು ನಗರದ ವಿವಿಧ ಪ್ರದೇಶಗಳಲ್ಲಿ ನೀರು ನಿಂತು ಜನಜೀವನ ಅಸ್ತವ್ಯಸ್ತವಾಗಿದೆ. ತಗ್ಗು ಪ್ರದೇಶಗಳು ಪ್ರವಾಹ ಪೀಡಿತ ಪ್ರದೇಶಗಳಂತೆ ಕಂಡುಬಂದಿವೆ. ಗಲ್ಲಿ ರಸ್ತೆಗಳಲ್ಲೂ ಮಳೆ ನೀರು ಹಳ್ಳದಂತೆ ಹರಿಯುತ್ತಿದ್ದ ಕಾರಣ ಜನರು ಜಲದಿಗ್ಭಂಧನದ ಅನುಭವ ಪಡೆದರು. ಅಗತ್ಯ ವಸ್ತು ತರುವುದಕ್ಕೂ ಹೊರ ಹೋಗಲು ಸಾಧ್ಯವಿಲ್ಲದ ಪರಿಸ್ಥಿತಿ ಅನೇಕ ಕಡೆ ಇದೆ. ಇದೇ ರೀತಿ, ಇಂದು (ಅಕ್ಟೋಬರ್ 22) ಬೆಂಗಳೂರು ಸುತ್ತಮುತ್ತ ಮೋಡಕವಿದ ವಾತಾವರಣ ಇರಲಿದ್ದು, ಗುಡುಗು ಮಿಂಚು ಸಹಿತ ವ್ಯಾಪಕ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರ ಪ್ರಕಟಿಸಿರುವ ಹವಾಮಾನ ಮುನ್ಸೂಚನೆ ವರದಿ ತಿಳಿಸಿದೆ.
ಬೆಂಗಳೂರು ಹವಾಮಾನ ಇಂದು ಹೀಗಿರಲಿದೆ
ಬೆಂಗಳೂರು ಹವಾಮಾನ ಕೇಂದ್ರ ಪ್ರಕಟಿಸಿರುವ ಹವಾಮಾನ ಮುನ್ಸೂಚನೆ ವರದಿ ಪ್ರಕಾರ ನಾಳೆ (ಅಕ್ಟೋಬರ್ 23)ರ ಬೆಳಗ್ಗೆ 8.30ರ ತನಕ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶಗಳ ವ್ಯಾಪ್ತಿಯಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಇದಲ್ಲದೆ, ಗುಡುಗು ಮಿಂಚು ಸಹಿತ ವ್ಯಾಪಕ ಮಳೆಯಾಗಲಿದೆ. ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಶಿಯಸ್ ಇರಲಿದೆ. ಅಂತೆಯೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಶಿಯಸ್ ಇರಲಿದೆ.
ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಹವಾಮಾನ ಇಲಾಖೆಯ ಪಟ್ಟಿಯಲ್ಲಿ ದಕ್ಷಿಣ ಒಳನಾಡಿನಲ್ಲಿದ್ದು, ಈ ಭಾಗದಲ್ಲಿ ಇಂದು ವ್ಯಾಪಕ ಮಳೆಯಾಗಲಿದೆ ಎಂದು ಇಲಾಖೆ ನೀಡಿರುವ ಹವಾಮಾನ ಮುನ್ಸೂಚನೆ ವರದಿ ವಿವರಿಸಿದೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ ನಿನ್ನೆ 61.9 ಮಿಮೀ ಮಳೆ
ಬೆಂಗಳೂರು ನಗರ ಜಿಲ್ಲೆಯಲ್ಲಿ ನಿನ್ನೆ ಮಧ್ಯಾಹ್ನ 1 ಗಂಟೆ ತನಕ 61.9 ಮಿಮೀ ಮಳೆಯಾಗಿತ್ತು. ತಡರಾತ್ರಿಯೂ ಮಳೆ ಸುರಿದಿದ್ದು, ಮಳೆಯ ಒಟ್ಟು ಪ್ರಮಾಣದ ವಿವರವನ್ನು ಹವಾಮಾನ ಇಲಾಖೆ ಇನ್ನಷ್ಟೆ ಪ್ರಕಟಿಸಬೇಕಾಗಿದೆ. ನಿನ್ನೆ ತಡರಾತ್ರಿ ಸುರಿದ ಮಳೆಗೆ ಹಲವು ಕಡೆಗಳಲ್ಲಿ ರಸ್ತೆ ಜಲಾವೃತ್ತವಾಗಿದ್ದು, ಅಂಡರ್‌ಪಾಸ್‌ಗಳಲ್ಲಿ ಮತ್ತೆ ನೀರು ತುಂಬಿಕೊಂಡು ಸಂಚಾರ ವ್ಯವಸ್ಥೆಗೆ ಅಡ್ಡಿ ಉಂಟಾಗಿತ್ತು.
ಈ ನಡುವೆ, ಬಿಬಿಎಂಪಿ ಸಿಬ್ಬಂದಿ, ವಿಪತ್ತು ನಿರ್ವಹಣಾ ತಂಡಗಳು ಸಕ್ರಿಯವಾಗಿದ್ದು ನೀರು ನಿಂತ ಜಾಗಗಳಲ್ಲಿ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡುತ್ತಿದ್ದಾರೆ. ಮರ ಬಿದ್ದ ಜಾಗದಲ್ಲಿ ಅದನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ವಿಪತ್ತು ನಿರ್ವಹಣೆಗೆ ಸಿದ್ಧತೆಗಳನ್ನು ಮಾಡಿಕೊಂಡಿದ್ದು, 24/7 ಕಾರ್ಯನಿರ್ವಹಿಸುವ ಉಚಿತ ಸಹಾಯವಾಣಿ ಸಂಖ್ಯೆ 1533 ಜೊತೆಗೆ ಪಾಲಿಕೆಯ ಎಂಟು ವಲಯಗಳಲ್ಲಿ ಪ್ರತ್ಯೇಕವಾಗಿ ಕಂಟ್ರೋಲ್ ರೂಮ್‌ಗಳನ್ನು ಸ್ಥಾಪಿಸಿದ್ದು, ವಲಯವಾರು ದೂರವಾಣಿ ಸಂಖ್ಯೆಗಳ ವಿವರವನ್ನೂ ಕೊಟ್ಟಿದೆ.
ಬೆಂಗಳೂರು ಮಳೆ ಕಾರಣ ತೊಂದರೆಗೆ ಸಿಲುಕಿದರೆ 1533ಕ್ಕೆ ಕರೆಮಾಡಿ
ಬೆಂಗಳೂರು ಮಳೆ ಇಂದು ಕೂಡ ಮುಂದುವರಿಯಲಿದ್ದು, ನಿನ್ನೆ ಮಳೆ ಮುನ್ಸೂಚನೆ ವಿವರ ನೀಡಿದ ಬಿಬಿಎಂಪಿ, ನಾಗರಿಕರಿಗೆ 7 ಅಂಶಗಳ ಸಲಹೆ ನೀಡಿತ್ತು.
1) ಮಳೆ ಬರುತ್ತಿರುವಾಗ ಮನೆ, ಕಚೇರಿಗಳಲ್ಲಿದ್ದರೆ ಅಲ್ಲೇ ಇರಿ. ಹೊರಗೆ ಹೋಗಬೇಡಿ. ಸಾಧ್ಯವಾದಷ್ಟು ಮಟ್ಟಿಗೆ ಪ್ರಯಾಣ ಮಾಡಬೇಡಿ.
2) ಸುರಕ್ಷಿತ ಸ್ಥಳದಲ್ಲಿ ತಂಗುವುದು ಉತ್ತಮ. ಯಾವುದೇ ಮರದ ಅಡಿಯಲ್ಲಿ ನಿಲ್ಲಬೇಡಿ
3) ಕಾಂಕ್ರೀಟ್ ಗೋಡೆ, ಕಾಂಪೌಂಡ್ ಗೋಡೆ ಪಕ್ಕವೂ ಹೋಗಬೇಡಿ.
4) ವಿದ್ಯುತ್, ವಿದ್ಯುನ್ಮಾನ ಉಪಕರಣಗಳ ಪ್ಲಗ್ ತೆಗೆದು ಸುರಕ್ಷಿತವಾಗಿ ಇಟ್ಟುಕೊಳ್ಳಿ. ಮರ ಬಿದ್ದು ವಿದ್ಯುತ್ ತಂತಿ ಕಡಿದಾಗ ಉಂಟಾಗಬಹುದಾದ ಅನಾಹುತ ತಪ್ಪುತ್ತದೆ.
5) ಜಲಾಶಯಗಳ ಕಡೆಗೆ, ಚರಂಡಿ, ಹಳ್ಳಗಳ ಕಡೆಗೆ ಹೋಗಬೇಡಿ
6) ವಿದ್ಯುತ್ ಪ್ರವಹಿಸುವ ಉಪಕರಣಗಳ ಸನಿಹ ಹೋಗಬೇಡಿ
7) ವಾಹನ ಚಲಾಯಿಸುತ್ತಿದ್ದರೆ ಜಾಗರೂಕರಾಗಿ ಪ್ರಯಾಣ ಮಾಡಿ, ತೊಂದರೆಗೆ ಸಿಲುಕಿದರೆ 1533ಕ್ಕೆ ಕರೆ ಮಾಡಿ