ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ ಸಿಎನ್ ಮಂಜುನಾಥ್‌ಗೆ ಗೆಲುವಿನ ನಂತರ ಡಿಕೆ ಕುಟುಂಬದ ಎದುರು ಹಲವು ಪ್ರಶ್ನೆಗಳು
Jun 04, 2024 05:13 PM IST
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಡಾ ಸಿಎನ್ ಮಂಜುನಾಥ್
- Dr CN Manjunath: ಮುಖ್ಯಮಂತ್ರಿಯಾಗಬೇಕೆಂಬ ಶಿವಕುಮಾರ್ ಅವರಿಗೆ ತಮ್ಮ ಕ್ಷೇತ್ರದಲ್ಲಿಯೇ ಸೋದರ ಡಿ.ಕೆ.ಸುರೇಶ್ ಅನುಭವಿಸಿದ ಸೋಲು ಹಿನ್ನೆಡೆಯಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. (ವರದಿ: ಮಾರುತಿ ಎಚ್.)
ಬೆಂಗಳೂರು: ಕರ್ನಾಟಕದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಕ್ಷೇತ್ರಗಳ ಪೈಕಿ ಬೆಂಗಳೂರು ಗ್ರಾಮಾಂತರ ಕ್ಷೇತ್ರವೂ ಒಂದು. ಇಬ್ಬರು ಪ್ರಬಲ ಅಭ್ಯರ್ಥಿಗಳು ಅಖಾಡಾದಲ್ಲಿ ಇದ್ದ ಕಾರಣ ಈ ಕ್ಷೇತ್ರವು ತೀವ್ರ ಕುತೂಹಲ ಕೆರಳಿಸಿತ್ತು. ಕಾಂಗ್ರೆಸ್‌ನಿಂದ ಡಿ.ಕೆ.ಸುರೇಶ್ ಮತ್ತು ಬಿಜೆಪಿಯಿಂದ ಡಾ ಸಿ.ಎನ್. ಮಂಜುನಾಥ್ ಕಣದಲ್ಲಿದ್ದರು. ಡಿಕೆ ಸುರೇಶ್ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಹೋದರ. ಮಂಜುನಾಥ್ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಅಳಿಯ. ಮೇಲಾಗಿ ಜಯದೇವ ಆಸ್ಪತ್ರೆಯ ನಿರ್ದೇಶಕರಾಗಿ ಸಾಕಷ್ಟು ಹೆಸರು ಮಾಡಿದ್ದ ಹೃದಯವಂತ ವೈದ್ಯ. ಒಂದು ಸರ್ಕಾರಿ ಆಸ್ಪತ್ರೆಯನ್ನು ಉತ್ತುಂಗಕ್ಕೆ ಕೊಂಡೊಯ್ಯಬಹುದು ಎನ್ನುವುದನ್ನು ತೋರಿಸಿಕೊಟ್ಟ ವ್ಯಕ್ತಿ.
ಡಾ.ಮಂಜುನಾಥ್ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಡಿಕೆ ಸಹೋದರರಿಗೆ ಶಾಕ್ ನೀಡಿದ್ದಾರೆ. ಅವರ ಗೆಲುವಿನ ಹಿನ್ನೆಲೆಯಲ್ಲಿ ಗಮನಿಸಬೇಕಾದ ಅಂಶಗಳಿವು.
1) ಸೇವಾ ಮನೋಭಾವ: ವೈಯಕ್ತಿಕವಾಗಿ ಮಂಜುನಾಥ್ ಅವರು ಆರೋಗ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಅವರ ಕೈಹಿಡಿದಿದೆ. ದೇವೇಗೌಡ ಅವರ ಕುಟುಂಬದ ಸಂಬಂಧಿ ಎನ್ನುವುದು, ಕೇಂದ್ರದಲ್ಲಿ ಆರೋಗ್ಯ ಸಚಿವರಾಗಲಿದ್ದಾರೆ ಎಂಬ ನಂಬಿಕೆಯೂ ಮಂಜುನಾಥ್ ಪರವಾಗಿ ಕೆಲಸ ಮಾಡಿವೆ. ಜೆಡಿಎಸ್‌ನ ಮತಗಳು ಸಾರಾಸಗಟಾಗಿ ವರ್ಗಾವಣೆಯಾಗಿರುವುದು ಮತ್ತು ಬಿಜೆಪಿಯ ಸಾಂಪ್ರದಾಯಿಕ ಮತಗಳು ಗೆಲುವಿಗೆ ನೆರವಾಗಿವೆ. ಮತದಾರರು ಪಕ್ಷ ಭೇದ ಮರೆತು ಮಂಜುನಾಥ್ ಅವರಿಗೆ ಮತ ಚಲಾಯಿಸಿದ್ದಾರೆ ಎನ್ನುವುದು ಗುಟ್ಟೇನೂ ಅಲ್ಲ.
2) ಮತದಾರರ ಮನೋಭಾವ: ಎಚ್.ಡಿ. ದೇವೇಗೌಡ ಮತ್ತು ಡಿ.ಕೆ. ಶಿವಕುಮಾರ್ ಅವರ ಕುಟುಂಬಗಳು ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳ ಮೇಲೆ ಹಿಡಿತ ಸಾಧಿಸಲು ಸರ್ವ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಈ ಜಿಲ್ಲೆ ಎಚ್.ಡಿ.ಕುಮಾರಸ್ವಾಮಿ ಅವರ ಕಾರ್ಯಕ್ಷೇತ್ರವೂ ಹೌದು. ಹಾಗಾಗಿ ಎರಡೂ ಕುಟುಂಬಗಳ ನಡುವೆ ದಶಕಗಳ ಕಾಲದಿಂದ ರಾಜಕೀಯ ಜಿದ್ದಾಜಿದ್ದಿ ನಡೆಯುತ್ತಲೇ ಇತ್ತು. ಈ ಕ್ಷೇತ್ರವನ್ನು ಡಿಕೆ ಸಹೋದರರ ಹಿಡಿತದಿಂದ ಮುಕ್ತಗೊಳಿಸಲೇಬೇಕೆಂಬ ಹಟ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಸಾಧಿಸಿದಾಗ ಕಾಣಿಸಿಕೊಂಡಿತ್ತು. ಈ ಸೋಲಿನಿಂದ ಕ್ಷೇತ್ರದ ಮೇಲೆ ಡಿಕೆ ಸಹೋದರರ ಹಿಡಿತ ಕಡಿಮೆಯಾಗಿರುವುದು ನಿಜ.
3) ಡಿಕೆ ಕೈಹಿಡಿದ ಕನಕಪುರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ 8 ವಿಧಾನಸಭಾ ಕ್ಷೇತ್ರಗಳು ಒಳಪಡುತ್ತವೆ. ರಾಜರಾಜೇಶ್ವರಿ ನಗರ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲೇ ಶೇ 50 ರಷ್ಟು ಮತದಾರರಿದ್ದಾರೆ. ಎರಡೂ ಕ್ಷೇತ್ರಗಳು ಬಿಜೆಪಿ ಹಿಡಿತದಲ್ಲಿವೆ. ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಶಾಸಕರಾಗಿದ್ದರೆ ಉಳಿದ ಐದು ಕ್ಷೇತ್ರಗಳಾದ ಆನೇಕಲ್, ರಾಮನಗರ, ಮಾಗಡಿ, ಕನಕಪುರ ಮತ್ತು ಕುಣಿಗಲ್‌ನಲ್ಲಿ ಕಾಂಗ್ರೆಸ್ ಶಾಸಕರಿದ್ದರೂ ಕನಿಷ್ಠ ಲೀಡ್ ಕೊಡಿಸಲು ಸಾಧ್ಯವಾಗಿಲ್ಲ. ಡಿ.ಕೆ.ಶಿವಕುಮಾರ್ ಪ್ರತಿನಿಧಿಸುವ ಕನಕಪುರ ಹೊರತುಪಡಿಸಿದರೆ ಯಾವುದೇ ಕ್ಷೇತ್ರದಲ್ಲಿ ಸುರೇಶ್ ಅವರಿಗೆ ಮುನ್ನೆಡೆ ಸಾಧಿಸಲು ಸಾಧ್ಯವಾಗಿಲ್ಲ.
4) ಉಳಿದಿವೆ ಎರಡು ಪ್ರಶ್ನೆಗಳು: ಈಗ ಉಳಿದಿರುವುದು ಎರಡು ಪ್ರಶ್ನೆಗಳು. ಒಂದು ಡಾ ಮಂಜುನಾಥ್ ಕೇಂದ್ರ ಸರಕಾರದಲ್ಲಿ ಆರೋಗ್ಯ ಸಚಿವರಾಗಲಿದ್ದಾರೆಯೇ? ಎರಡನೆಯದಾಗಿ ಮುಖ್ಯಮಂತ್ರಿಯಾಗಬೇಕೆಂಬ ಶಿವಕುಮಾರ್ ಅವರ ಕನಸಿಗೆ ಈ ಸೋಲು ಹಿನ್ನೆಡೆಯಾಗಲಿದೆಯೇ ಎಂದೂ ಕಾದು ನೋಡಬೇಕಿದೆ.