Bangalore Rural Result: ಬೆಂಗಳೂರು ಗ್ರಾಮಾಂತರದಲ್ಲಿ ಅಚ್ಚರಿ ಫಲಿತಾಂಶ; ಡಿಕೆ ಸುರೇಶ್ ವಿರುದ್ದ ಬಿಜೆಪಿಯ ಡಾ ಮಂಜುನಾಥ್ ಗೆಲುವು
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಚುನಾವಣಾ ಫಲಿತಾಂಶ 2024: ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಸೋಲು ಕಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಡಾ ಸಿಎನ್ ಮಂಜುನಾಥ್ ಅವರು 2,69,647 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ. Bengaluru Rural Lok Sabha Elections Result.
ಬೆಂಗಳೂರು: ಭಾರಿ ಪೈಪೋಟಿ ಹಾಗೂ ಇಡೀ ದೇಶದ ಗಮನ ಸೆಳೆದಿದ್ದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ (Bangalore Rural Lok Sabha Election Result) ಬಿಜೆಪಿ ಅಭ್ಯರ್ಥಿ ಡಾ ಸಿಎನ್ ಮಂಜನಾಥ್ (BJP Candidate Dr CN Manjunath) ಅವರು ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ (Congress Candidate DK Suresh) ಅವರನ್ನು 2,69,647 ಮತಗಳ ಭಾರಿ ಅಂತರದಲ್ಲಿ ಸೋಲಿಸಿದ್ದಾರೆ. ಇದು ಕಾಂಗ್ರೆಸ್‌ಗೆ ಭಾರಿ ಅಚ್ಚರಿ ತರಿಸಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಲೆಯ ನಡುವೆ ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದಿದ್ದ ಏಕೈಕ ಕ್ಷೇತ್ರ ಎಂದರೆ ಅದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ. 2024ರ ಚುನಾವಣೆಯ ಆರಂಭದಿಂದಲೂ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಈ ಕ್ಷೇತ್ರದಲ್ಲಿ ಹೃದ್ರೋಗ ತಜ್ಞ ಹಾಗೂ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ ಅಳಿಯ ಡಾ ಸಿಎನ್ ಮಂಜುನಾಥ್ ಅವರನ್ನು ಬಿಜೆಪಿ ಕಣಕ್ಕಿಳಿಸಿತ್ತು. ಕಾಂಗ್ರೆಸ್ ನಾಯಕರ ಎಲ್ಲಾ ಲೆಕ್ಕಾಚಾರಗಳು ಇಲ್ಲಿ ಬುಡಮೇಲಾಗಿವೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಮೂರು ಬಾರಿ ಗೆದ್ದು ಬೀಗಿದ್ದ ಡಿಸಿಎಂ ಡಿಕೆ ಶಿವಕುಮಾರ್ ಅವರ ಸಹೋದರ ಡಿಕೆ ಸುರೇಶ್ ನಾಲ್ಕನೇ ಬಾರಿ ಗೆಲುವಿನ ನಿರೀಕ್ಷೆಯಲ್ಲಿದ್ದರು. ಆದರೆ ಇಲ್ಲಿ ಭಾರಿ ಮುಖಭಂಗ ಅನುಭವಿಸಿದ್ದಾರೆ. 2009ರಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ನಿರ್ಮಾಣಯಿತು. 2014 ಮತ್ತು 2019ರ ತನಕ ಇಲ್ಲಿ ಸತತವಾಗಿ ಕಾಂಗ್ರೆಸ್ ಗೆಲುವು ಸಾಧಿಸಿದೆ.
ಡಿಕೆ ಸುರೇಶ್ ಅವರ ರಾಜಕೀಯ ಹಿನ್ನೆಲೆ
ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿಯ ಸುರೇಶ್ ಅವರು ಆಕಸ್ಮಿಕವಾಗಿ ರಾಜಕಾರಣ ಪ್ರವೇಶ ಪಡೆದವರು. ಸಹೋದರ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಬೆಂಬಲವಾಗಿ ತೆರೆಮರೆಯಲ್ಲಿ ಕೆಲಸ ಮಾಡುತ್ತಾ ಕನಕಪುರ ಕ್ಷೇತ್ರದ ಉಸ್ತುವಾರಿ ಹೊತ್ತಿದ್ದರು. 2008 ರಲ್ಲಿ ಇಲ್ಲಿ ಮಾಜಿ ಸಿಎಂ ಹಾಗೂ ಜೆಡಿಎಸ್ ನಾಯಕ ಹೆಚ್‌ಡಿ ಕುಮಾರಸ್ವಾಮಿ ಅವರು ಆಯ್ಕೆಯಾಗಿದ್ದರು. 2013ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆಗ ನಡೆದ ಉಪ ಚುನಾವಣೆಗೆ ಈಗಿನ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಮ್ಮ ಸಹೋದರ ಡಿಕೆ ಸುರೇಶ್ ಅವರನ್ನು ರಾಜಕೀಯಕ್ಕೆ ಕರೆ ತಂದರು.
2013ರ ಲೋಕಸಭಾ ಉಪ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು ಸುರೇಶ್ ಅವರು 1.37 ಲಕ್ಷ ಮತಗಳ ಅಂತರದಿಂದ ಸೋಲಿಸಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ್ದರು. ಮರು ವರ್ಷವೇ ನಡೆದ 2014ರ ಸಾರ್ವತ್ರಿಕ ಚುನಾವಣೆಯಲ್ಲಿ 2.31 ಲಕ್ಷ ಮತಗಳ ಅಂತರದಿಂದ ಮರು ಆಯ್ಕೆಯಾಗಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಅಶ್ವಥ್ ನಾರಾಯಣಗೌಡ ಅವರನ್ನು 2,06,870 ಮತಗಳ ಅಂತರದಿಂದ ಮಣಿಸಿ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಸೇರಿವೆ. ಕನಕಪುರ, ಆರ್‌ಆರ್ ನಗರ, ಆನೇಕಲ್, ಕುಣಿಗಲ್, ರಾಮನಗರ, ಚನ್ನಪಟ್ಟಣ, ಮಾಗಡಿ, ಬೆಂಗಳೂರು ದಕ್ಷಿಣ ಕ್ಷೇತ್ರಗಳಿವೆ. ಈ ಪೈಕಿ ಆರ್‌ಆರ್ ನಗರ, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಗಳು ಬಿಜೆಪಿ ಹಿಡಿತದಲ್ಲಿದ್ದರೆ, ಚನ್ನಪಟ್ಟಣದಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಪ್ರಸ್ತುತ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. 2 ರಲ್ಲಿ ಬಿಜೆಪಿ ಹಾಗೂ 1 ರಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 27,63,910 ಮತದಾರರು ಇದ್ದು, ಇದರಲ್ಲಿ 14,06,042 ಪುರುಷರು ಹಾಗೂ 13,57,547 ಮಹಿಳಾ ಮತದಾರರು ಇದ್ದಾರೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)