logo
ಕನ್ನಡ ಸುದ್ದಿ  /  ಕರ್ನಾಟಕ  /  ಅಲಂಕಾರಿಕ ಸಸ್ಯಗಳ ನಡುವೆ ಗಾಂಜಾ ಬೆಳೆದ ಸಿಕ್ಕಿಂ ಮೂಲದ ದಂಪತಿ, ರೀಲ್ಸ್‌ ನೋಡಿ ಮನೆಗೆ ಬಂದ ಪೊಲೀಸರು

ಅಲಂಕಾರಿಕ ಸಸ್ಯಗಳ ನಡುವೆ ಗಾಂಜಾ ಬೆಳೆದ ಸಿಕ್ಕಿಂ ಮೂಲದ ದಂಪತಿ, ರೀಲ್ಸ್‌ ನೋಡಿ ಮನೆಗೆ ಬಂದ ಪೊಲೀಸರು

Umesh Kumar S HT Kannada

Nov 10, 2024 12:06 PM IST

google News

ಅಲಂಕಾರಿಕ ಸಸ್ಯಗಳ ನಡುವೆ ಗಾಂಜಾ ಬೆಳೆದ ಸಿಕ್ಕಿಂ ಮೂಲದ ದಂಪತಿಯ ರೀಲ್ಸ್‌ ನೋಡಿ ಮನೆಗೆ ಬಂದ ಪೊಲೀಸರು, ಅವರನ್ನು ಬಂಧಿಸಿದ್ದಾರೆ. (ಸಾಂಕೇತಿಕ ಚಿತ್ರ)

  • ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಲಂಕಾರಿಕ ಸಸ್ಯಗಳ ನಡುವೆ ಗಾಂಜಾ ಬೆಳೆದ ಸಿಕ್ಕಿಂ ಮೂಲದ ದಂಪತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ದಂಪತಿಯ ರೀಲ್ಸ್‌ನಲ್ಲಿ ಗಾಂಜಾ ಗಿಡ ಕಂಡ ಕಾರಣ ಪೊಲೀಸರು ಹುಡುಕಿ ಹೋಗಿ ಅವರನ್ನು ಬಂಧಿಸಿ, ಗಾಂಜಾ ವಶಪಡಿಸಿಕೊಂಡರು.

ಅಲಂಕಾರಿಕ ಸಸ್ಯಗಳ ನಡುವೆ ಗಾಂಜಾ ಬೆಳೆದ ಸಿಕ್ಕಿಂ ಮೂಲದ ದಂಪತಿಯ ರೀಲ್ಸ್‌ ನೋಡಿ ಮನೆಗೆ ಬಂದ ಪೊಲೀಸರು, ಅವರನ್ನು ಬಂಧಿಸಿದ್ದಾರೆ. (ಸಾಂಕೇತಿಕ ಚಿತ್ರ)
ಅಲಂಕಾರಿಕ ಸಸ್ಯಗಳ ನಡುವೆ ಗಾಂಜಾ ಬೆಳೆದ ಸಿಕ್ಕಿಂ ಮೂಲದ ದಂಪತಿಯ ರೀಲ್ಸ್‌ ನೋಡಿ ಮನೆಗೆ ಬಂದ ಪೊಲೀಸರು, ಅವರನ್ನು ಬಂಧಿಸಿದ್ದಾರೆ. (ಸಾಂಕೇತಿಕ ಚಿತ್ರ) (AFP)

ಬೆಂಗಳೂರು: ಹೂವಿನ ಕುಂಡಗಳಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿದ್ದ ಸಿಕ್ಕಿಂ ಮೂಲದ ದಂಪತಿಯನ್ನು ಸದಾಶಿವನಗರ ಪೊಲೀಸರು ಬಂಧಿಸಿ, ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದಾರೆ. ಬಂಧಿತರನ್ನು ಎಂಎಸ್‌ಆರ್‌ ನಗರದ 3ನೇ ಮೇನ್ ನಿವಾಸಿಗಳಾದ ಕೆ ಸಾಗರ್ ಗುರುಂಗ್ (37) ಮತ್ತು ಅವರ ಪತ್ನಿ ಊರ್ಮಿಳಾ ಕುಮಾರಿ (38) ಎಂದು ಗುರುತಿಸಲಾಗಿದೆ. ಇವರು ಫಾಸ್ಟ್‌ಫುಡ್ ಜಾಯಿಂಟ್ ಒಂದನ್ನು ನಡೆಸುತ್ತಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಈ ದಂಪತಿ ಅಲಂಕಾರಿಕ ಸಸ್ಯಗಳ ನಡುವೆ ಗಾಂಜಾ ಬೆಳೆದಿದ್ದರು ಎಂದು ವರದಿ ಹೇಳಿದೆ.

ರೀಲ್ಸ್ ನೋಡಿ ಮನೆಗೆ ಹೋದ ಪೊಲೀಸರು; ಏನಿದು ಪ್ರಕರಣ

ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯ ಎಂಎಸ್‌ಆರ್‌ ನಗರದಲ್ಲಿ ವಾಸವಿರುವ ಊರ್ಮಿಳಾ ಕುಮಾರಿ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ಧಾರೆ. ಅವರು ಸ್ಟೋರಿ, ರೀಲ್ಸ್‌ ಮತ್ತು ಫೇಸ್‌ಬುಕ್ ಪೋಸ್ಟ್‌ಗಳನ್ನು ನಿರಂತರ ಮಾಡುತ್ತಿರುತ್ತಾರೆ. ಇತ್ತೀಚೆಗೆ ತಮ್ಮ ಮನೆಯ ಬಾಲ್ಕನಿಯಲ್ಲಿ ಇರಿಸಿದ್ದ ಹೂವಿನ ಕುಂಡಗಳಿರುವ ವಿಡಿಯೋ ಮತ್ತು ಫೋಟೋ ಪೋಸ್ಟ್ ಮಾಡಿದ್ದರು. 17 ಕುಂಡಗಳ ಪೈಕಿ 2ರಲ್ಲಿ ಗಾಂಜಾ ಬೆಳೆದಿದ್ದರು. ಅದು ಪೊಲೀಸರ ಗಮನ ಸೆಳೆದಿತ್ತು.

ಪೊಲೀಸರು ಫೇಸ್‌ಬುಕ್‌ನಲ್ಲಿದ್ದ ಲೊಕೇಷನ್ ಪತ್ತೆ ಹೆಚ್ಚಿ ಊರ್ಮಿಳಾ ಅವರ ಮನೆ ಸಮೀಪ ಬಂದಿದ್ದರು. ಕೂಡಲೇ ಅಪಾಯದ ಸುಳಿವು ಅರಿತ ಊರ್ಮಿಳಾ ದಂಪತಿ ಗಾಂಜಾ ಗಿಡಗಳನ್ನು ಕುಂಡದಿಂದ ಕಿತ್ತು ಡಸ್ಟ್ ಬಿನ್‌ಗೆ ಹಾಕಿದ್ದರು. ಪೊಲೀಸರು ಬಂದು ಮನೆ ಶೋಧ ನಡೆಸಿದಾಗ ಕುಂಡ ಖಾಲಿಯಾಗಿರುವುದು ಕಂಡುಬಂದಿತ್ತು. ಅದರ ಎಲೆಗಳು ಕುಂಡದ ಬಳಿ ಬಿದ್ದಿದ್ದವು. ಅದನ್ನು ಹಿಡಿದು ವಿಚಾರಣೆ ನಡೆಸಿದಾಗ ಡಸ್ಟ್‌ ಬಿನ್‌ಗೆ ಹಾಕಿದ್ದನ್ನು ಒಪ್ಪಿಕೊಂಡಿದ್ದಾರೆ.

54 ಗ್ರಾಂ ಗಾಂಜಾ ವಶಕ್ಕೆ, ಕೇಸ್ ದಾಖಲು

ಕೂಡಲೇ ಅವರನ್ನು ಬಂಧಿಸಿದ ಪೊಲೀಸರು ಅವರ ಬಳಿ ಇದ್ದ 54 ಗ್ರಾಂ ಗಾಂಜಾ ಗಿಡ ವಶಪಡಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಅವರು ಗಾಂಜಾ ವ್ಯಸನಿಗಳು ಅಲ್ಲ ಎಂಬುದು ಪೊಲೀಸರಿಗೆ ಮನವರಿಕೆಯಾಗಿದೆ. ಹಾಗಾಗಿ ಅವರಿಗೆ ಎಚ್ಚರಿಕೆ ನೀಡಿ ಠಾಣಾ ಜಾಮೀನು ನೀಡಿ ವಾಪಸ್ ಕಳುಹಿಸಿರುವುದಾಗಿ ಬೆಂಗಳೂರು ಪೊಲೀಸ್ ಮೂಲಗಳು ತಿಳಿಸಿವೆ ಎಂದು ವರದಿ ಹೇಳಿದೆ.

ಆರಂಭದಲ್ಲಿ ಊರ್ಮಿಳಾ ಕುಮಾರಿ ಗಾಂಜಾ ಬೆಳೆಸಿದ್ದನ್ನು ನಿರಾಕರಿಸಿದ್ದರು. ಬಳಿಕ ಒಪ್ಪಿಕೊಂಡಿದ್ದು ಮಾರಾಟ ಏನೂ ಮಾಡಿಲ್ಲ ಎಂದು ಹೇಳಿದ್ದರು. ಅವರ ಹೇಳಿಕೆಯನ್ನು ದೃಢೀಕರಿಸಿಕೊಂಡ ಪೊಲೀಸರು, ಮತ್ತೆ ಗಾಂಜಾ ಬೆಳೆಯದಂತೆ ತಾಕೀತು ಮಾಡಿ ಕಳುಹಿಸಿದ್ದಾರೆ. ಊರ್ಮಿಳಾ ದಂಪತಿ ಮೊದಲ ಮಹಡಿಯಲ್ಲಿ ವಾಸವಿದ್ದು, ಕೆಳಗೆ ಫಾಸ್ಟ್‌ ಫುಡ್‌ ಜಾಯಿಂಟ್ ಇದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ