Fast Food: ಅಡುಗೆ, ತಿಂಡಿಗೆ ಕೃತಕ ಬಣ್ಣ ಬಳಸುತ್ತೀದ್ದೀರಾ, ಫಾಸ್ಟ್‌ ಫುಡ್‌, ಹೊಟೇಲ್‌ ಮೇಲೆ ದಾಳಿ ಮಾಡ್ತಾರೆ ಅಧಿಕಾರಿಗಳು-bangalore news chemicals for food in hotel restaurants fast foods officials to raid across state 2 days kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Fast Food: ಅಡುಗೆ, ತಿಂಡಿಗೆ ಕೃತಕ ಬಣ್ಣ ಬಳಸುತ್ತೀದ್ದೀರಾ, ಫಾಸ್ಟ್‌ ಫುಡ್‌, ಹೊಟೇಲ್‌ ಮೇಲೆ ದಾಳಿ ಮಾಡ್ತಾರೆ ಅಧಿಕಾರಿಗಳು

Fast Food: ಅಡುಗೆ, ತಿಂಡಿಗೆ ಕೃತಕ ಬಣ್ಣ ಬಳಸುತ್ತೀದ್ದೀರಾ, ಫಾಸ್ಟ್‌ ಫುಡ್‌, ಹೊಟೇಲ್‌ ಮೇಲೆ ದಾಳಿ ಮಾಡ್ತಾರೆ ಅಧಿಕಾರಿಗಳು

Food Safety ಕರ್ನಾಟಕದಲ್ಲಿ ಆಹಾರಗಳಲ್ಲಿ ರಾಸಾಯನಿಕ ಬಳಕೆ ಪ್ರಮಾಣ ಹೆಚ್ಚಿರುವುದರಿಂದ ಆರೋಗ್ಯ ಮತ್ತು ಆಹಾರ ಇಲಾಖೆಗಳು ದಾಳಿ ಜತೆಗೆ ಜಾಗೃತಿ ಮೂಡಿಸಲು ಮುಂದಾಗಿವೆ.

ಫಾಸ್ಟ್‌ ಫುಡ್‌ ಗಳಲ್ಲಿನ ಆಹಾರ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಕರ್ನಾಟಕದಲ್ಲಿ ದಾಳಿ ನಡೆಯಲಿವೆ.
ಫಾಸ್ಟ್‌ ಫುಡ್‌ ಗಳಲ್ಲಿನ ಆಹಾರ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಕರ್ನಾಟಕದಲ್ಲಿ ದಾಳಿ ನಡೆಯಲಿವೆ.

ಬೆಂಗಳೂರು: ಕರ್ನಾಟಕದ ನಾನಾ ಭಾಗಗಳಲ್ಲಿ ಬೀದಿಬದಿ ಫಾಸ್ಟ್‌ಫುಡ್‌ ಅಂಗಡಿಗಳು, ಹೊಟೇಲ್‌ ಗಳಲ್ಲಿ ಆಹಾರದ ರುಚಿ ಹೆಚ್ಚಿಸಲು ಅಡುಗೆ ಹಾಗೂ ತಿಂಡಿಗೆ ಕೃತಕ ವಸ್ತುಗಳನ್ನು ಬಳಸುವ ಪ್ರಮಾಣ ಅಧಿಕವಾಗುತ್ತಲೇ ಇದೆ. ಇದರಿಂದ ಮಕ್ಕಳು ಸೇರಿದಂತೆ ಎಲ್ಲಾ ವಯೋಮಾನದವರಿಗೆ ಆ ಕ್ಷಣದಲ್ಲಿ ರುಚಿ ನೀಡಿದ ತಿಂಡಿಗಳು ಅನಾರೋಗ್ಯಕ್ಕೂ ದಾರಿ ಮಾಡಿಕೊಟ್ಟಿವೆ. ಭವಿಷ್ಯದಲ್ಲಿ ಇನ್ನಷ್ಟು ಆರೋಗ್ಯ ಅನಾಹುತ ತರುವ ಸಾಧ್ಯತೆಗಳು ಅಧಿಕವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಹಾಗೂ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಎರಡು ದಿನ ವಿಶೇಷ ಕಾರ್ಯಾಚರಣೆಯನ್ನು ಹಮ್ಮಿಕೊಂಡಿವೆ. ಶುಕ್ರವಾರ ಹಾಗೂ ಶನಿವಾರದಂದು ಬೆಂಗಳೂರು ಮಾತ್ರವಲ್ಲದೇ ಮೈಸೂರು, ಹುಬ್ಬಳ್ಳಿ ಧಾರವಾಡ, ಮಂಗಳೂರು, ವಿಜಯಪುರ, ಶಿವಮೊಗ್ಗ, ತುಮಕೂರು, ಬೆಳಗಾವಿ, ಕಲಬುರಗಿ, ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದಾಳಿ ನಡೆಸಲಿವೆ. ಕಲಬೆರಕೆ ವಸ್ತುಗಳ ಜಪ್ತಿ ಜತೆಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ.

ಆಹಾರಗಳಲ್ಲಿ ರುಚಿ ಪ್ರಮಾಣ ಹೆಚ್ಚಿಸಲು ಬಳಸುವ ಕೃತಕ ಬಣ್ಣ ಹಾಗೂ ರಾಸಾಯನಿಕ ವಸ್ತುಗಳ ನಿಷೇಧಕ್ಕೂ ಕರ್ನಾಟಕ ಸರ್ಕಾರ ಮುಂದಾಗಿದೆ. ವಿಶೇಷವಾಗಿ ಗೋಬಿ ಮಂಚೂರಿ ಸೇರಿ ಫಾಸ್ಟ್‌ ಫುಡ್‌ಗಳಲ್ಲಿ ಬಳಸುತ್ತಿರುವ ರಾಸಾಯನಿಗಳನ್ನು ನಿಷೇಧಿಸಲಾಗಿದೆ. ಹೀಗಿದ್ದರೂ ಪರಿಸ್ಥಿತಿ ಸುಧಾರಿಸಿಲ್ಲ. ನಗರಗಳ ಜತೆಗೆ ಪಟ್ಟಣಗಳಲ್ಲೂ ರಾಸಾಯನಿಕಗಳ ಬಳಕೆ ಅವ್ಯಾಹತವಾಗಿ ನಡೆದೇ ಇದೆ. ಈ ಕಾರಣದಿಂದಲೇ ಫಾಸ್ಟ್‌ಫುಡ್‌ಗಳಲ್ಲಿಯೇ ಇಂತಹ ಆಹಾರ ಬಳಸುವವರಿಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಲಾಗಿದೆ. ಇದರ ಭಾಗವಾಗಿಯೇ ಆಹಾರ ಹಾಗೂ ಆರೋಗ್ಯ ಇಲಾಖೆಯಿಂದ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಈವರೆಗೂ ಕರ್ನಾಟಕದಲ್ಲಿ ಆಹಾರ ತಯಾರಿ ವೇಳೆ ಹಾಗೂ ಹಣ್ಣು ತರಕಾರಿಗಳೊಂದಿಗೆ ಬಳಸುವ ರಾಸಾಯನಿಕ ವಸ್ತುಗಳತ್ತ ಗಮನ ಹರಿಸಲಾಗಿದೆ. ಹಣ್ಣು, ತರಕಾರಿಗಳ 385 ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಲಾಗಿದ್ದು, 266 ಮಾದರಿಗಳಲ್ಲಿ 239 ಸುರಕ್ಷಿತ, 27 ಅಸುರಕ್ಷಿತ ಎಂದು ಕಂಡುಬಂದಿದೆ.ಈ ಕಾರಣದಿಂದಲೇ ಮುನ್ನೆಚ್ಚರಿಕೆ ವಹಿಸಿ ಜನರಲ್ಲಿ ಜಾಗೃತಿ ಹಾಗೂ ಬಳಕೆ ಮಾಡುವ ಹೊಟೇಲ್‌, ರೆಸ್ಟೋರೆಂಟ್‌ ಹಾಗೂ ಫಾಸ್ಟ್‌ಫುಡ್‌ ಅಂಗಡಿಯವರ ವಿರುದ್ದ ಕ್ರಮಕ್ಕೆ ಮುಂದಾಗಲಾಗಿದೆ.

ಅಸುರಕ್ಷಿತವೆಂದು ಕಂಡುಬಂದ ಮಾದರಿಗಳಲ್ಲಿ ಕ್ರಿಮಿನಾಶಕಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿದೆ. ಫಂಗಸ್ ಬೆಳವಣಿಗೆಯೂ ಪತ್ತೆಯಾಗಿದೆ. 211 ಪನ್ನೀರ್, 246 ಕೇಕ್, 67 ಕೋವಾದ ಆಹಾರ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಲಾಗಿದ್ದು, ವಿಶ್ಲೇಷಣಾ ವರದಿ ಬಂದ ಬಳಿಕ ಕ್ರಮ ಕೈಗೊಳ್ಳುವ ಬಗ್ಗೆಯೂ ಕರ್ನಾಟಕ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

ಆಹಾರ ಇಲಾಖೆ ಅಧಿಕಾರಿಗಳು ಮಫ್ತಿಯಲ್ಲಿ ಬೆಂಗಳೂರಿನ ವಿಜಯನಗರದ ಸ್ಟ್ರೀಟ್ ಫುಡ್ ಅಂಗಡಿಗಳಿಗೆ ಭೇಟಿ ನೀಡಿ ಆಹಾರ ಗುಣಮಟ್ಟ ಪರಿಶೀಲನೆ ಮಾಡಿದ ನಂತರ ರಾಜ್ಯದಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಲು ಇಲಾಖೆ ಮುಂದಾಗಿದೆ. ಶುಕ್ರವಾರ ಮತ್ತು ಶನಿವಾರ ಕರ್ನಾಟಕದಾದ್ಯಂತ ಹೋಟೆಲ್, ರೆಸ್ಟೋರೆಂಟ್​​ಗಳ ವಿರುದ್ಧ ಕಾರ್ಯಾಚರಣೆ ನಡೆಯಲಿದೆ.

ಹೋಟೆಲ್ ಹಾಗೂ ರೆಸ್ಟೋರೆಂಟ್​​ಗಳಲ್ಲಿನ ಮಾಂಸ, ಮೀನು, ಮೊಟ್ಟೆಗಳ ಮಾದರಿಗಳನ್ನೂ ಸಂಗ್ರಹಿಸಿ ತಪಾಸಣೆ ನಡೆಸಲಾಗುವುದು. ಅಸುರಕ್ಷಿತ ಆಹಾರ ತಯಾರಿಸುತ್ತಿರುವವರ ಮೇಲೆ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲಾಗುವುದು ಎನ್ನುವುದು ಸಚಿವ ದಿನೇಶ್‌ ಗುಂಡೂರಾವ್‌ ವಿವರಣೆ.

ಇದರೊಟ್ಟಿಗೆ ಜನರೇ ಅಹಾರದ ಗುಣಮಟ್ಟ ಪರೀಕ್ಷೆ ಮಾಡಿಕೊಳ್ಳುವ ಸಲುವಾಗಿ ಹೋಟೆಲ್, ರೆಸ್ಟೋರೆಂಟ್, ಫುಡ್​ಪಾರ್ಕ್​​ಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ 3400 ಟೆಸ್ಟಿಂಗ್ ಕಿಟ್​​ಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ ಎನ್ನುತ್ತಾರೆ ಸಚಿವ ದಿನೇಶ್‌ ಗುಂಡೂರಾವ್.