logo
ಕನ್ನಡ ಸುದ್ದಿ  /  ಕರ್ನಾಟಕ  /  Digital Arrest Scam: ಡಿಜಿಟಲ್‌ ಬಂಧನ ವಂಚನೆಯಿಂದ 11.8 ಕೋಟಿ ರೂ ಕಳೆದುಕೊಂಡ ಬೆಂಗಳೂರಿನ ಟೆಕ್ಕಿ, ಏನಿದು ಡಿಜಿಟಲ್‌ ಅರೆಸ್ಟ್‌ ಸ್ಕ್ಯಾಮ್‌?

Digital arrest scam: ಡಿಜಿಟಲ್‌ ಬಂಧನ ವಂಚನೆಯಿಂದ 11.8 ಕೋಟಿ ರೂ ಕಳೆದುಕೊಂಡ ಬೆಂಗಳೂರಿನ ಟೆಕ್ಕಿ, ಏನಿದು ಡಿಜಿಟಲ್‌ ಅರೆಸ್ಟ್‌ ಸ್ಕ್ಯಾಮ್‌?

Praveen Chandra B HT Kannada

Dec 23, 2024 06:35 PM IST

google News

Digital arrest scam: ಡಿಜಿಟಲ್‌ ಬಂಧನ ವಂಚನೆಯಿಂದ 11.8 ಕೋಟಿ ರೂ ಕಳೆದುಕೊಂಡ ಬೆಂಗಳೂರಿನ ಸಾಫ್ಟ್‌ವೇರ್‌ ಎಂಜಿನಿಯರ್‌

  • Digital arrest scam: ಬೆಂಗಳೂರಿನ ಟೆಕಿಯೊಬ್ಬರು ಡಿಜಿಟಲ್‌ ಅರೆಸ್ಟ್‌ ವಂಚನೆಯಿಂದ 11.8 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಏನಿದು ಘಟನೆ? ಇಂತಹ ಡಿಜಿಟಲ್‌ ಅರೆಸ್ಟ್‌ ವಂಚನೆ ಹೇಗೆ ನಡೆಯುತ್ತದೆ? ಇಂತಹ ವಂಚನೆಯಿಂದ ಪಾರಾಗುವುದು ಹೇಗೆ? ಇತ್ಯಾದಿಗಳನ್ನು ತಿಳಿದುಕೊಳ್ಳೋಣ.

Digital arrest scam: ಡಿಜಿಟಲ್‌ ಬಂಧನ ವಂಚನೆಯಿಂದ 11.8 ಕೋಟಿ ರೂ ಕಳೆದುಕೊಂಡ ಬೆಂಗಳೂರಿನ  ಸಾಫ್ಟ್‌ವೇರ್‌ ಎಂಜಿನಿಯರ್‌
Digital arrest scam: ಡಿಜಿಟಲ್‌ ಬಂಧನ ವಂಚನೆಯಿಂದ 11.8 ಕೋಟಿ ರೂ ಕಳೆದುಕೊಂಡ ಬೆಂಗಳೂರಿನ ಸಾಫ್ಟ್‌ವೇರ್‌ ಎಂಜಿನಿಯರ್‌

Digital arrest scam: ಬೆಂಗಳೂರಿನ ಸಾಫ್ಟ್‌ವೇರ್‌ ಉದ್ಯೋಗಿಯೊಬ್ಬರು ಡಿಜಿಟಲ್‌ ಅರೆಸ್ಟ್‌ ವಂಚನೆಯಿಂದ ಕೋಟ್ಯಾಂತರ ರೂಪಾಯಿ ಕಳೆದುಕೊಂಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಈ ವಂಚನೆಗೆ ಒಳಗಾದ ವ್ಯಕ್ತಿಯೊಬ್ಬರನ್ನು ಹಲವು ದಿನಗಳ ಕಾಲ ನಕಲಿ ಸ್ವಯಂ ಬಂಧನಕ್ಕೆ ಒಳಗಾಗಿಸಲಾಗಿತ್ತು ಎಂಬ ಆತಂಕಕಾರಿ ಅಂಶವೂ ಬೆಳಕಿಗೆ ಬಂದಿದೆ. ಹೆಬ್ಬಾಳ ಸಮೀಪದ ಜಿಕೆವಿಕೆ ಲೇಔಟ್ ನಿವಾಸಿ ಈ ರೀತಿ ವಂಚನೆಗೆ ಒಳಗಾಗಿದ್ದಾರೆ. "ಮುಂಬೈನ ಕೊಲಾಬಾದಲ್ಲಿ ಹಣ ಅಕ್ರಮ ವರ್ಗಾವಣೆಗೆ ಸಂಬಂಧಪಟ್ಟಂತೆ ನಿಮ್ಮ ವಿರುದ್ಧ ದೂರು ದಾಖಲಾಗಿದೆ" ಎಂದು ವಂಚಕರು ಇವರನ್ನು ಹೆದರಿಸಿದ್ದರು.

ವಂಚಕರ ಬಲೆಗೆ ಬಿದ್ದದ್ದು ಹೇಗೆ?

ನವೆಂಬರ್‌ 11ರಂದು ವ್ಯಕ್ತಿಯೊಬ್ಬರಿಂದ ಬೆಂಗಳೂರಿನ ಸಾಫ್ಟ್‌ವೇರ್‌ ಎಂಜಿನಿಯರ್‌ವೊಬ್ಬರಿಗೆೆ ಕರೆ ಬಂದಿತ್ತು. ತಾನು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್‌ ಇಂಡಿಯಾ (ಟ್ರಾಯ್‌) ಅಧಿಕಾರಿಯೆಂದು ಆ ವಂಚಕ ಪರಿಚಯಿಸಿಕೊಂಡಿದ್ದ. "ನಿಮ್ಮ ಆಧಾರ್‌ ಕಾರ್ಡ್‌ಗೆ ಲಿಂಕ್‌ ಆಗಿರುವ ಸಿಮ್‌ ಮೂಲಕ ಕಾನೂನುಬಾಹಿರ ಚಟುವಟಿಕೆಗಳು ಮತ್ತು ಕೆಟ್ಟ ಸಂದೇಶಗಳು ವರ್ಗಾವಣೆಯಾಗುತ್ತಿದೆ ಎಂದು ಆ ವ್ಯಕ್ತಿಯು ಹೇಳಿದ್ದ" ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಇಷ್ಟು ಮಾತ್ರವಲ್ಲ. "ನಿಮ್ಮ ವಿರುದ್ಧ ಮುಂಬೈನ ಕೊಲಾಬಾ ಸೈಬರ್‌ ಪೊಲೀಸ್‌ ಸ್ಟೇಷನ್‌ನಲ್ಲಿ ದೂರು ದಾಖಲಾಗಿದೆ" ಎಂದು ಆ ವ್ಯಕ್ತಿ ತಿಳಿಸಿದ್ದ. ಇದಾದ ಬಳಿಕ ಇವರಿಗೆ ಪೊಲೀಸ್‌ ಅಧಿಕಾರಿ ಎಂದು ಪರಿಚಯಿಸಿಕೊಂಡ ಬೇರೊಬ್ಬ ವಂಚಕ ಕರೆ ಮಾಡಿದ್ದ. "ನಿಮ್ಮ ಆಧಾರ್‌ ಕಾರ್ಡ್‌ ಬಳಸಿ ಬ್ಯಾಂಕ್‌ ಖಾತೆಯೊಂದನ್ನು ತೆರೆಯಲಾಗಿದೆ. ಆ ಬ್ಯಾಂಕ್‌ ಖಾತೆಯಲ್ಲಿ ಮನಿ ಲ್ಯಾಂಡರಿಂಗ್‌ ವ್ಯವಹಾರ ನಡೆಯುತ್ತಿದೆ. ಕೋಟ್ಯಾಂತರ ರೂಪಾಯಿಗಳ ಅಕ್ರಮ ಹಣ ವರ್ಗಾವಣೆ ನಡೆದಿದೆ" ಎಂದು ಆ ನಕಲಿ ಪೊಲೀಸ್‌ ಕರೆ ಮಾಡಿ ಬೆದರಿಸಿದ್ದ.

ಡಿಜಿಟಲ್‌ ಬಂಧನಕ್ಕೆ ಒಳಗಾಗಿದ್ದು ಹೇಗೆ?

ಹೀಗೆ ಕರೆಗಳ ಮೂಲಕವೇ ಈ ವ್ಯಕ್ತಿಗೆ ಭಯವಾಗುವಂತೆ ಡಿಜಿಟಲ್‌ ಅರೆಸ್ಟ್‌ ವಂಚಕರು ಹಂತಹಂತವಾಗಿ ಮಾಡಿದ್ದರು. "ಈ ವಿವರವನ್ನು ನೀವು ಯಾರ ಜತೆಗೂ ಹಂಚಿಕೊಳ್ಳಬಾರದು. ಗೌಪ್ಯವಾಗಿಡಬೇಕು" ಎಂದು ಹೇಳಿದ್ದರು. "ನೀವು ಆನ್‌ಲೈನ್‌ ಮೂಲಕ ನಡೆಯುವ ಈ ತನಿಖೆಗೆ ಸಹಕರಿಸದೆ ಇದ್ದರೆ ಬಂಧಿಸಲಾಗುವುದು ಎಂದು ಬೆದರಿಸಿದ್ದರು" ಎಂದು ಪಿಟಿಐ ವರದಿ ತಿಳಿಸಿದೆ.

ಬೆಂಗಳೂರಿನ ಈ ವ್ಯಕ್ತಿಗೆ ಮತ್ತೊಬ್ಬ ವ್ಯಕ್ತಿ ಕಾಲ್‌ಮಾಡಿ ಸ್ಕೈಪ್‌ ಅಪ್ಲಿಕೇಷನ್‌ ಡೌನ್‌ಲೋಡ್‌ ಮಾಡುವಂತೆ ತಿಳಿಸಿದ್ದ. ಇದಾದ ಬಳಿಕ ಫೇಕ್‌ ಪೊಲೀಸ್‌ ಆಫೀಸರ್‌ ವಿಡಿಯೋ ಕರೆ ಮಾಡಿದ್ದ. ಆತ ಪೊಲೀಸ್‌ ಯೂನಿಫಾರ್ಮ್‌ ಕೂಡ ಧರಿಸಿದ್ದನಂತೆ. "ನಿಮ್ಮ ಮೊಬೈಲ್‌ ನಂಬರ್‌ ಇರುವ ಬ್ಯಾಂಕ್‌ ಖಾತೆಯಿಂದ 6 ಕೋಟಿ ರೂಪಾಯಿ ಅಕ್ರಮವಾಗಿ ವರ್ಗಾವಣೆಯಾಗಿದೆ" ಎಂದು ಆ ವ್ಯಕ್ತಿ ತಿಳಿಸಿದ್ದ.

ನವೆಂಬರ್‌ 25ರಂದು ಇವರಿಗೆ ಮತ್ತೊಂದು ಕರೆ ಬಂದಿತ್ತು. ಕರೆ ಮಾಡಿದವ ಪೊಲೀಸ್‌ ಉಡುಗೆಯಲ್ಲಿದ್ದ. "ಪ್ರಕರಣ ಟಾಪ್‌ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ. ನೀವು ವಿಚಾರಣೆಗೆ ಸಹಕರಿಸದೆ ಇದ್ದರೆ ನಿನ್ನ ಕುಟುಂಬದ ಸದಸ್ಯರನ್ನೂ ಬಂಧಿಸಲಾಗುವುದು" ಎಂದು ಆ ನಕಲಿ ಪೊಲೀಸ್‌ ಅಧಿಕಾರಿ ಬೆದರಿಸಿದ್ದ. ಈ ಪ್ರಕರಣದಲ್ಲಿ ತನ್ನ ಬಂಧನವಾಗಬಹುದು ಎಂಬ ಭಯದಲ್ಲಿ ಅವರು ಹೇಳಿದಂತೆ ವಂಚನೆಗೆ ಒಳಗಾದ ವ್ಯಕ್ತಿ ಕೇಳುತ್ತಿದ್ದರು. ಇದಾದ ಬಳಿಕ "ನಕಲಿ ಆರ್‌ಬಿಐ ಗೈಡ್‌ಲೈನ್ಸ್‌ ತೋರಿಸಿ ಆರೋಪಿಯು ನಿರ್ದಿಷ್ಟ ಮೊತ್ತವನ್ನು ದೃಢೀಕರಣದ ಉದ್ದೇಶಕ್ಕಾಗಿ ಕಳುಹಿಸಬೇಕು" ಎಂದು ಹೇಳಲಾಯಿತು. ಪ್ರತಿದಿನ ಈ ರೀತಿ ವಿಚಾರಣೆ ನೆಪದಲ್ಲಿ ಬೆದರಿಸುತ್ತ ಸುಮಾರು 11.8 ಕೋಟಿ ರೂಪಾಯಿಯನ್ನು ಈ ವ್ಯಕ್ತಿಯಿಂದ ಪಡೆಯಲಾಯಿತು.

ಈ ಕುರಿತು ಐಟಿ ಕಾಯಿದೆ ಮತ್ತು ಭಾರತೀಯ ನ್ಯಾಯ ಸಂಹಿತೆಯ ಇತರೆ ಸೆಕ್ಷನ್‌ಗಳಡಿ ದೂರು ದಾಖಲಿಸಲಾಗಿದೆ. ಪ್ರಕರಣ ತನಿಖೆಯಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಇದು ಡಿಜಿಟಲ್‌ ಅರೆಸ್ಟ್‌ ಪ್ರಕರಣ ಹೇಗೆ?

ಈ ಪ್ರಕರಣದಲ್ಲಿ ವಂಚಕರು ಈ ವ್ಯಕ್ತಿಗೆ ಎಲ್ಲೂ ಹೋಗದಂತೆ, ಯಾರಿಗೂ ವಿಷಯ ತಿಳಿಸದಂತೆ ತಿಳಿಸಿ ಒಂದು ನಿರ್ದಿಷ್ಟ ಸ್ಥಳದಲ್ಲಿ ಸ್ವಯಂ ಬಂಧನಕ್ಕೆ ಒಳಗಾಗುವಂತೆ ಮಾಡಿದ್ದರು. ಬಲಿಪಶುವನ್ನು ಆನ್‌ಲೈನ್‌ ಮೂಲಕವೇ ವಿಚಾರಣೆ ಮಾಡುವ ನಾಟಕ ಮಾಡಲಾಗಿತ್ತು. ಇದೇ ರೀತಿ ಈ ಪ್ರಕರಣದಲ್ಲಿ ಆರೋಪಿಯು ಡಿಜಿಟಲ್‌ ಬಂಧನದಲ್ಲಿ ಇರುವಂತೆ ಹೇಳಲಾಗಿತ್ತು.

ಏನಿದು ಡಿಜಟಿಲ್‌ ಬಂಧನ ವಂಚನೆ?

ಡಿಜಟಿಲ್‌ ಅರೆಸ್ಟ್‌ ವಂಚನೆಗೆ ಮೇಲಿನ ಘಟನೆ ಸರಿಯಾದ ಉದಾಹರಣೆಯಾಗಿದೆ. ಇಂತಹ ವಂಚನೆಗಳಲ್ಲಿ ವಂಚಕರು ಪೊಲೀಸ್‌ ಅಧಿಕಾರಿ, ಸಿಬಿಐ, ಇಡಿ ಅಧಿಕಾರಿಗಳ ಸೋಗಿನಲ್ಲಿ ಅಮಾಯಕರನ್ನು ಭಯಗೊಳಿಸುತ್ತಾರೆ. ನೀವು ಯಾವುದಾದರೂ ವಂಚನೆ ಮಾಡಿದ್ದೀರಿ ಎಂದು ಹೆದರಿಸುತ್ತಾರೆ. ನಿಮ್ಮ ಕೊರಿಯರ್‌ನಲ್ಲಿ ಡ್ರಗ್ಸ್‌ ಪತ್ತೆಯಾಗಿದೆ, ನಿಮ್ಮ ಅಥವಾ ನಿಮ್ಮ ಕುಟುಂಬದ ಸದಸ್ಯರ ಹೆಸರಿನಲ್ಲಿ ವಂಚನೆಯಾಗಿದೆ ಎಂದೆಲ್ಲ ಹೇಳುತ್ತಾರೆ. ಈಗಲೇ ನಿಮ್ಮ ಬಂಧನವಾಗಿದೆ. ನೀವು ಎಲ್ಲಿದ್ದೀರೋ ಅಲ್ಲೇ ಇರಬೇಕು ಅಥವಾ ನಿರ್ದಿಷ್ಟ ಲಾಡ್ಜ್‌ನಲ್ಲಿ ಬಂಧನದಲ್ಲಿ ಇರಬೇಕು ಎಂದು ಹೇಳುತ್ತಾರೆ. ವಿವಿಧ ಅಧಿಕಾರಿಗಳ ನೆಪದಲ್ಲಿ ನಿಮ್ಮನ್ನು ವಿಚಾರಣೆ ನಡೆಸುತ್ತಾರೆ. ವಿಡಿಯೋ ಕಾಲ್‌ನಲ್ಲಿ ಆ ಕಡೆಯ ವಂಚಕರು ಸಿಬಿಐ ಅಥವಾ ಪೊಲೀಸ್‌ ಅಧಿಕಾರಿಗಳಂತೆ ಕಾಣಿಸಬಹುದು. ಅವರು ಇರುವ ಕೋಣೆಯೂ ಸಿಬಿಐ ಅಧಿಕಾರಿಗಳ ಕೋಣೆಯಂತೆ ಕಾಣಿಸಬಹುದು. ಈಗಲೇ ನೀವು ಡಿಜಿಟಲ್‌ ಬಂಧನಕ್ಕೆ ಒಳಗಾಗಿದ್ದೀರಿ, ಯಾರಿಗೂ ಕಾಲ್‌ ಮಾಡಬೇಡಿ ಎಂದೂ ಹೇಳಬಹುದು. ಆ ವಂಚಕರಿಗೆ ಕಾಣಿಸುವಂತೆ ವಿಡಿಯೋ ಕಾಲ್‌ ಆನ್‌ ಮಾಡಿಕೊಂಡು ಯಾವುದಾದರೂ ಕೋಣೆಯಲ್ಲಿ ಅವರು ಹೇಳಿದಂತೆ ಕೇಳುತ್ತ ಇರಬೇಕಾಗುತ್ತದೆ. ಭಾರತದ ಕಾನೂನಿನಲ್ಲಿ ಇಂತಹ ಡಿಜಿಟಲ್‌ ಅರೆಸ್ಟ್‌ ಎಂಬ ವಿಧಾನವೇ ಇಲ್ಲ. ಹೀಗಾಗಿ ಇಂತಹ ಕರೆಗಳು ಬಂದಾಗ ಭಯಪಡಬೇಡಿ. ಇಂತಹ ವಂಚನೆಯ ಸೂಚನೆ ದೊರಕಿದ ತಕ್ಷಣ ಸಹಾಯವಾಣಿ 1930 ಸಂಖ್ಯೆಗೆ ಕರೆ ಮಾಡಿ ಅಥವಾ sancharsaathi.gov.in/sfc/ ವೆಬ್‌ಸೈಟ್‌ನಲ್ಲಿ ದೂರು ದಾಖಲಿಸಿ.

ಡಿಜಿಟಲ್‌ ಅರೆಸ್ಟ್‌ ವಂಚನೆ ಎಂದರೇನು? ಈ ವಂಚನೆಯ ಲಕ್ಷಣಗಳೇನು? ಈ ರೀತಿಯ ವಂಚನೆಯಿಂದ ಪಾರಾಗುವುದು ಹೇಗೆ? ಇತ್ಯಾದಿ ವಿವರವಾದ ಮಾಹಿತಿಯನ್ನು "Digital Arrest Scam: ಡಿಜಿಟಲ್‌ ಅರೆಸ್ಟ್‌ ವಂಚನೆ ಬಗ್ಗೆ ನಿಮಗೆಷ್ಟು ಗೊತ್ತು? ಆನ್‌ಲೈನ್‌ ವಂಚಕರ ಈ ಖೆಡ್ಡಾಕ್ಕೆ ಬೀಳದಿರಿ" ಎಂಬ ಲೇಖನದಲ್ಲಿ ಓದಿರಿ. ದಯವಿಟ್ಟು ಈ ಆನ್‌ಲೈನ್‌ ಜಗತ್ತಿನಲ್ಲಿ ಅಗತ್ಯಕ್ಕಿಂತ ತುಸು ಹೆಚ್ಚೇ ಎಚ್ಚರವಾಗಿರಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ