Digital Arrest Scam: ಡಿಜಿಟಲ್‌ ಅರೆಸ್ಟ್‌ ವಂಚನೆ ಬಗ್ಗೆ ನಿಮಗೆಷ್ಟು ಗೊತ್ತು? ಆನ್‌ಲೈನ್‌ ವಂಚಕರ ಈ ಖೆಡ್ಡಾಕ್ಕೆ ಬೀಳದಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  Digital Arrest Scam: ಡಿಜಿಟಲ್‌ ಅರೆಸ್ಟ್‌ ವಂಚನೆ ಬಗ್ಗೆ ನಿಮಗೆಷ್ಟು ಗೊತ್ತು? ಆನ್‌ಲೈನ್‌ ವಂಚಕರ ಈ ಖೆಡ್ಡಾಕ್ಕೆ ಬೀಳದಿರಿ

Digital Arrest Scam: ಡಿಜಿಟಲ್‌ ಅರೆಸ್ಟ್‌ ವಂಚನೆ ಬಗ್ಗೆ ನಿಮಗೆಷ್ಟು ಗೊತ್ತು? ಆನ್‌ಲೈನ್‌ ವಂಚಕರ ಈ ಖೆಡ್ಡಾಕ್ಕೆ ಬೀಳದಿರಿ

What is digital arrest?: ಎಚ್‌ಟಿ ಕನ್ನಡ ಡಿಜಿಟಲ್‌ ಜಾಗೃತಿ ಸರಣಿಯಲ್ಲಿ ಇಂದು ಡಿಜಿಟಲ್‌ ಅರೆಸ್ಟ್‌ ಎಂಬ ವಂಚನೆ ಬಗ್ಗೆ ತಿಳಿದುಕೊಳ್ಳೋಣ. ಆನ್‌ಲೈನ್‌ ವಂಚಕರು ತಾವು ಪೊಲೀಸ್‌ ಅಧಿಕಾರಿಗಳು, ಸಿಬಿಐ ಏಜೆಂಟ್‌, ತೆರಿಗೆ ಅಧಿಕಾರಿಗಳೆಂಬ ಸೋಗಿನಲ್ಲಿ ಕರೆ ಮಾಡಿ ನಡೆಸುವ ವಂಚನೆ ಇದಾಗಿದೆ.

Digital Arrest Scam: ಡಿಜಿಟಲ್‌ ಅರೆಸ್ಟ್‌ ವಂಚನೆ ಬಗ್ಗೆ ನಿಮಗೆಷ್ಟು ಗೊತ್ತು?
Digital Arrest Scam: ಡಿಜಿಟಲ್‌ ಅರೆಸ್ಟ್‌ ವಂಚನೆ ಬಗ್ಗೆ ನಿಮಗೆಷ್ಟು ಗೊತ್ತು?

What is digital arrest?: ಡಿಜಿಟಲ್‌ ಅರೆಸ್ಟ್‌ ಎಂಬ ಆನ್‌ಲೈನ್‌ ವಂಚನೆ ಪ್ರತಿನಿತ್ಯ ವರದಿಯಾಗುತ್ತಿದೆ. ಆನ್‌ಲೈನ್‌ ವಂಚಕರು ತಾವು ಪೊಲೀಸ್‌ ಅಧಿಕಾರಿಗಳು, ಸಿಬಿಐ ಏಜೆಂಟ್‌, ತೆರಿಗೆ ಅಧಿಕಾರಿಗಳೆಂಬ ಸೋಗಿನಲ್ಲಿ ಕರೆ ಮಾಡಿ ವಂಚನೆ ಮಾಡುತ್ತಾರೆ. ಸಾಕಷ್ಟು ಜನರು ಇಂತಹ ಕರೆಗಳಿಗೆ ಭಯಗೊಂಡು ತಕ್ಷಣ ವಂಚಕರು ಹೇಳಿದ್ದಷ್ಟು ಹಣ ಪಾವತಿ ಮಾಡಿದ್ದಾರೆ. ಕರೆ ಸ್ವೀಕರಿಸಿದವರನ್ನು ಫೋನ್‌ ಕಟ್‌ ಮಾಡಲು ಬಿಡದಂತೆ ಎಂಗೇಜ್‌ ಮಾಡುತ್ತಾ, ವಿವಿಧ ಅಧಿಕಾರಿಗಳ ಹೆಸರಿನಲ್ಲಿ ನಾನಾ ಕರೆ ಮಾಡುತ್ತಾ.. ಇವರು ಭಯಗೊಳಿಸುವುದುಂಟು. ಕರ್ನಾಟಕದಲ್ಲಿ ಪ್ರತಿನಿತ್ಯ ಇಂತಹ ಘಟನೆ ವರದಿಯಾಗುತ್ತಿದೆ. ಸಾಕಷ್ಟು ಸುಶಿಕ್ಷಿತರೂ ಇಂತಹ ಡಿಜಿಟಲ್‌ ಅರೆಸ್ಟ್‌ನಿಂದ ಹಣ ಕಳೆದುಕೊಂಡಿದ್ದಾರೆ. ಎಚ್‌ಟಿ ಕನ್ನಡ ಡಿಜಿಟಲ್‌ ಜಾಗೃತಿ ಸರಣಿಯಲ್ಲಿ ಇಂದು ಡಿಜಿಟಲ್‌ ಅರೆಸ್ಟ್‌ ಎಂಬ ವಂಚನೆ ಬಗ್ಗೆ ತಿಳಿದುಕೊಳ್ಳೋಣ.

ಹುಬ್ಬಳ್ಳಿಯ ಕಾಡಸಿದ್ದೇಶ್ವರ ಆರ್ಟ್ಸ್ ಕಾಲೇಜಿನ ಪ್ರಿನ್ಸಿಪಾಲ್ ನಿರ್ಮಲಾ ಸೋಮನಗೌಡ ಪಾಟೀಲ್ ಎಂಬವರು ಕೆಲವು ದಿನದ ಹಿಂದೆ ಇಂತಹ ವಂಚನೆಗೆ ಒಳಗಾಗಿದ್ದರು. ಇನ್ನೆನೂ ನಿವೃತ್ತಿ ಅಂಚಿನಲ್ಲಿದ್ದ ಇವರು ಆನ್‌ಲೈನ್‌ ವಂಚಕರಿಂದ 14.90 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಇವರಿಗೆ ವಾಟ್ಸಪ್‌ ಮೂಲಕ ಕಾಲ್‌ ಬಂದಿತ್ತು. "ನಿಮ್ಮ ಆಧಾರ್‌ ಕಾರ್ಡ್‌ ಮಾನವ ಕಳ್ಳ ಸಾಗಾಣಿಕೆ ಮಾಡುವ ಗ್ಯಾಂಗ್‌ ನಂಬರ್‌ ಜತೆ ಲಿಂಕ್‌ ಆಗಿದೆ. ತಕ್ಷಣ ನೀವು ಸಿಬಿಐಗೆ ದೂರು ನೀಡಬೇಕು. ಈಗಲೇ ನಿಮ್ಮ ಫೋನ್‌ ಕರೆಯನ್ನು ಸಿಬಿಐಗೆ ವರ್ಗಾಯಿಸಲಾಗುತ್ತದೆ" ಎಂದು ಕಾಲ್‌ ಮಾಡಿದ್ದವರು ತಿಳಿಸಿದ್ದಾರೆ. ಇವರಿಗೆ ಏನಾಗುತ್ತದೆ ಎಂದು ತಿಳಿಯಲಿಲ್ಲ. ಟೆನ್ಷನ್‌ ಆಗಿದೆ. ಫೋನ್‌ ಕಟ್‌ ಮಾಡದಂತೆ ಎಚ್ಚರಿಸಿದ ಅವರು ಇವರಿಗೆ ಸಿಬಿಐ ಅಧಿಕಾರಿ ಹೆಸರಿನಲ್ಲಿ ಮತ್ತೊಬ್ಬನಲ್ಲಿ ಮಾತನಾಡಿಸಿದ್ದರು. "ನಿಮ್ಮ ಆಧಾರ್‌ ಕಾರ್ಡ್‌ ಮಕ್ಕಳ ಅಪಹರಣ, ಕೊಲೆ, ಅಂಗಾಂಗಗಳ ಮಾರಾಟ ಮಾಡುವ ಗ್ಯಾಂಗ್‌ ಜತೆ ಲಿಂಕ್‌ ಆಗಿದೆ. ನಿಮ್ಮ ಆಧಾರ್‌ ಕಾರ್ಡ್‌ ಮಾಹಿತಿಯಿಂದ 6.8 ದಶಲಕ್ಷ ರೂಪಾಯಿ ಕಾನೂನು ಬಾಹಿರವಾಗಿ ವರ್ಗಾವಣೆಯಾಗಿದೆ. ಇದನ್ನು ನಾವು ಟ್ರ್ಯಾಕ್‌ ಮಾಡುತ್ತಿದ್ದೇವೆ. ನೀವು ವಾಟ್ಸಪ್‌ ವಿಡಿಯೋ ಕಾಲ್‌ ಮೂಲಕ ವಿಚಾರಣೆ ಎದುರಿಸಬೇಕು" ಎಂದು ಹೇಳಿದ್ದಾರೆ. ಬಳಿಕ ವಾಟ್ಸಪ್‌ ಕಾಲ್‌ನಲ್ಲಿಯೇ ಇವರಿಂದ ಹಣ ಪಡೆದಿದ್ದಾರೆ. ಒಟ್ಟು 14,90,000 ರೂಪಾಯಿ ವರ್ಗಾಯಿಸಿಕೊಂಡಿದ್ದಾರೆ.

ಇದು ಉದಾಹರಣೆಯಷ್ಟೇ, ಮೈಸೂರು, ಮಂಗಳೂರು, ಉಡುಪಿ, ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ನಗರಗಳಲ್ಲಿ ಈ ರೀತಿ ಹಣ ಕಳೆದುಕೊಂಡವರ ಸುದ್ದಿ ಪ್ರತಿನಿತ್ಯ ವರದಿಯಾಗುತ್ತಿದೆ. ಕೆಲವರು ಹತ್ತಿಪ್ಪತ್ತು ಸಾವಿರ ರೂಪಾಯಿ ಕಳೆದುಕೊಂಡರೆ, ಇನ್ನು ಕೆಲವರು ಲಕ್ಷಾಂತರ ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ. ಪೊಲೀಸ್‌, ಸಿಬಿಐ ಹೆಸರಿನಲ್ಲಿ ಕರೆ ಬಂದಾಗ ಸಾಕಷ್ಟು ಜನರು ಭಯಪಟ್ಟು ಯೋಚನಾ ಶಕ್ತಿಯನ್ನೇ ಕಳೆದುಕೊಳ್ಳುತ್ತಾರೆ. ಈ ಭಯವನ್ನೇ ಬಂಡವಾಳ ಮಾಡಿಕೊಂಡಿರುವ ಆನ್‌ಲೈನ್‌ ವಂಚಕರು ನಿರಂತರವಾಗಿ ಅಮಾಯಕರಿಂದ ಹಣ ಸುಳಿಗೆ ಮಾಡುತ್ತಿದ್ದಾರೆ.

ಡಿಜಿಟಲ್‌ ಅರೆಸ್ಟ್‌ ಎಂದರೇನು?

ಇದು ಒಂದು ಬಗೆಯ ಆನ್‌ಲೈನ್‌ ವಂಚನೆ. ಇಲ್ಲಿ ವಂಚಕರು ಪೊಲೀಸ್‌ ಅಧಿಕಾರಿ, ಸಿಬಿಐ, ಇಡಿ ಅಧಿಕಾರಿಗಳ ಸೋಗಿನಲ್ಲಿ ಅಮಾಯಕರನ್ನು ಭಯಗೊಳಿಸುತ್ತಾರೆ. ನೀವು ಯಾವುದಾದರೂ ವಂಚನೆ ಮಾಡಿದ್ದೀರಿ ಎಂದು ಹೆದರಿಸುತ್ತಾರೆ. ನಿಮ್ಮ ಕೊರಿಯರ್‌ನಲ್ಲಿ ಡ್ರಗ್ಸ್‌ ಪತ್ತೆಯಾಗಿದೆ, ನಿಮ್ಮ ಅಥವಾ ನಿಮ್ಮ ಕುಟುಂಬದ ಸದಸ್ಯರ ಹೆಸರಿನಲ್ಲಿ ವಂಚನೆಯಾಗಿದೆ ಎಂದೆಲ್ಲ ಹೇಳುತ್ತಾರೆ. ಈ ತಕ್ಷಣ ನೀವು ಬಂಧನಕ್ಕೆ ಒಳಗಾಗುತ್ತೀರಿ ಎಂದು ಬೆದರಿಸುತ್ತಾರೆ. ವಿವಿಧ ಅಧಿಕಾರಿಗಳ ನೆಪದಲ್ಲಿ ನಿಮ್ಮನ್ನು ವಿಚಾರಣೆ ನಡೆಸುತ್ತಾರೆ. ವಿಡಿಯೋ ಕಾಲ್‌ನಲ್ಲಿ ಆ ಕಡೆಯ ವಂಚಕರು ಸಿಬಿಐ ಅಥವಾ ಪೊಲೀಸ್‌ ಅಧಿಕಾರಿಗಳಂತೆ ಕಾಣಿಸಬಹುದು. ಅವರು ಇರುವ ಕೋಣೆಯೂ ಸಿಬಿಐ ಅಧಿಕಾರಿಗಳ ಕೋಣೆಯಂತೆ ಕಾಣಿಸಬಹುದು. ಈಗಲೇ ನೀವು ಡಿಜಿಟಲ್‌ ಬಂಧನಕ್ಕೆ ಒಳಗಾಗಿದ್ದೀರಿ, ಯಾರಿಗೂ ಕಾಲ್‌ ಮಾಡಬೇಡಿ ಎಂದು ಹೇಳಬಹುದು. ಡಿಜಿಟಲ್‌ ಬಂಧನ ಎಂದರೆ ಯಾವುದೇ ಜೈಲಿನಲ್ಲಿ ಬಂಧನವಾಗುವುದಲ್ಲ. ಆ ವಂಚಕರಿಗೆ ಕಾಣಿಸುವಂತೆ ವಿಡಿಯೋ ಕಾಲ್‌ ಆನ್‌ ಮಾಡಿಕೊಂಡು ಯಾವುದಾದರೂ ಕೋಣೆಯಲ್ಲಿ ಇರುವಂತೆ ಹೇಳಬಹುದು. ಕೆಲವು ವಂಚಕರು ಯಾವುದಾದರೂ ಲಾಡ್ಜ್‌ಗೆ ಹೋಗಿ ಅಲ್ಲಿಯೇ ಇರುವಂತೆ ಹೇಳಬಹುದು. ಈ ಮೂಲಕ ದೂರದಲ್ಲಿ ಎಲ್ಲೋ ಇದ್ದುಕೊಂಡು ನಿಮ್ಮನ್ನು ಡಿಜಿಟಲ್‌ ಬಂಧನಕ್ಕೆ ಈ ವಂಚಕರು ಒಳಪಡಿಸಬಹುದು. ನೆನಪಿಡಿ, ಭಾರತದಲ್ಲಿ ಜೈಲು ಕೋಣೆ ಅಥವಾ ಪೊಲೀಸ್‌ ಸ್ಟೇಷನ್‌ನೊಳಗೆ ಬಂಧನವಾಗುವುದು ಬಿಟ್ಟರೆ ಈ ರೀತಿಯ ಡಿಜಿಟಲ್‌ ಬಂಧನ ಎಂಬ ಕಾನೂನು, ಪರಿಕಲ್ಪನೆ ಇಲ್ಲ. ಹೀಗಾಗಿ, ಯಾರಾದರೂ ನಿಮ್ಮಲ್ಲಿ ಇರುವಲ್ಲಿಯೇ ಬಂಧನವಾಗಿದ್ದೀರಿ ಎಂದರೆ ನಂಬಲೇಬೇಡಿ.

ಡಿಜಿಟಲ್‌ ಅರೆಸ್ಟ್‌ ವಂಚನೆಯ ಸೂಚನೆಗಳು

ಅಧಿಕಾರಿಗಳಿಂದ ಅನಿರೀಕ್ಷಿತ ಕರೆ: ನೀವು ಯಾವುದಾದರೂ ಅಪರಾಧ ಮಾಡಿದ್ದರೆ ಪೊಲೀಸ್‌ ಸ್ಟೇಷನ್‌ನಿಂದ ಕರೆ ಬರಬಹುದು. ಯಾವುದೇ ಅಪರಾಧ ಮಾಡದೆ ಇದ್ದರೂ ಈ ರೀತಿಯ ಕರೆ ಬಂದಾಗ ಅಲರ್ಟ್‌ ಆಗಿರಿ. ತಕ್ಷಣ ಕಾನೂನು ಕ್ರಮಕೈಗೊಳ್ಳಲಾಗುತ್ತದೆ ಎಂದರೂ ವಿಚಲಿತರಾಗಬೇಡಿ. ಈ ರೀತಿಯ ಫೋನ್‌ ಕರೆ ಅಥವಾ ಸಂದೇಶ ಬಂದಾಗ ಭಯಪಡಬೇಡಿ. ಅವರು ಹೇಳಿದಂತೆ ಕೇಳಬೇಡಿ.

ಭಯಗೊಳಿಸುವುದು ಮತ್ತು ಅವಸರಪಡಿಸುವುದು: ಈ ರೀತಿ ಕರೆ ಮಾಡುವ ವಂಚಕರು ನಿಮಗೆ ಹೆಚ್ಚು ಯೋಚಿಸಲು ಬಿಡದಂತೆ ಅವಸರ ಮಾಡುತ್ತಾರೆ. ತಕ್ಷಣ ಬಂಧಿಸಲಾಗುವುದು, ಕಾನೂನು ಕ್ರಮ ಈಗಲೇ ಕೈಗೊಳ್ಳಲಾಗುವುದು, ನೀವು ತಕ್ಷಣ ಈ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಅವಸರಪಡಿಸಬಹುದು.

ಸೂಕ್ಷ್ಮ ಮಾಹಿತಿ ಅಥವಾ ಹಣಕ್ಕೆ ಬೇಡಿಕೆ: ವಂಚಕರು ದೊಡ್ಡ ಮೊತ್ತದ ಹಣ ಕೇಳಬಹುದು. ಇಷ್ಟು ಹಣ ನೀಡಿದರೆ ನಿಮ್ಮನ್ನು ಈ ಅಪರಾಧದಿಂದ ಪಾರು ಮಾಡುತ್ತೇವೆ ಎಂದು ಹೇಳಬಹುದು. ನಿರ್ದಿಷ್ಟ ಯುಪಿಐ ಐಡಿಗೆ, ಬ್ಯಾಂಕ್‌ಖಾತೆಗೆ ಹಣ ಹಾಕುವಂತೆ ಕೇಳಬಹುದು. ನಿಮಗೆ ಯಾವುದಾದರೂ ಒಟಿಪಿ ಕಳುಹಿಸಿ ಆ ಒಟಿಪಿ ಹೇಳುವಂತೆ ಹೇಳಬಹುದು.

ಫೇಕ್‌ ವಿಡಿಯೋ ಕಾಲ್‌ಗಳು ಮತ್ತು ಯೂನಿಫಾರ್ಮ್‌ಗಳು: ಕೆಲವು ವಂಚಕರು ನಕಲಿ ಪೊಲೀಸ್‌ ಸೆಟಪ್‌ ಕೂಡ ಮಾಡಿರುತ್ತಾರೆ. ಎದುರು ಇರುವ ಅಮಾಯಕರಿಗೆ ಯಾವುದೇ ಸಂಶಯ ಬರದಂತೆ ವರ್ತಿಸಬಹುದು.

ಸುರಕ್ಷಿತವಾಗಿರುವುದು ಹೇಗೆ?

ಈ ರೀತಿ ಕರೆ ಅಥವಾ ಸಂದೇಶ ಬಂದಾಗ ಭಯಪಡಬೇಡಿ. ಕರೆ ಮಾಡಿದವರ ಸಂಖ್ಯೆ ಮತ್ತು ಇತರೆ ವಿವರವನ್ನು ಸಾಧ್ಯವಾದರೆ ದೃಢಪಡಿಸಿಕೊಳ್ಳಲು ಯತ್ನಿಸಿ. ಈ ರೀತಿ ಕರೆ ಮಾಡಿದವರು ಫೋನ್‌ ಕಟ್‌ ಮಾಡಬೇಡಿ ಎಂದರೂ ಕಟ್‌ ಮಾಡಿ. ಸ್ನೇಹಿತರು ಅಥವಾ ಬಂಧು ಬಳಗ ಅಥವಾ ಆಪ್ತರ ಜತೆ ವಿವರ ಹಂಚಿಕೊಳ್ಳಿ. (ನಿಮ್ಮ ಭಯ ಹೆಚ್ಚಿಸುವವರ ನೆರವು ಪಡೆಯಬೇಡಿ). ನೆನಪಿಡಿ, ನಿಜವಾದ ಪೊಲೀಸ್‌ ಅಧಿಕಾರಿಗಳು, ಸಿಬಿಐ ಅಧಿಕಾರಿಗಳು, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹಣಕ್ಕೆ ಬೇಡಿಕೆ ಇಡುವುದಿಲ್ಲ.

ಆ ಕಡೆಯಿಂದ ನಿಮ್ಮ ಬಗ್ಗೆ ಎಷ್ಟು ದೊಡ್ಡ ಅಪರಾಧವನ್ನು ಹೇಳಿದರೂ ಭಯಪಡಬೇಡಿ. ಒಟಿಪಿ ಹಂಚಿಕೊಳ್ಳಬೇಡಿ. ಹಣ ನೀಡಬೇಡಿ.

ಆ ಕಡೆಯಿಂದ ಕರೆ ಮಾಡಿದವರು ವಂಚಕರೆಂಬ ಅನುಮಾನ ಬಂದಾಗ ತಕ್ಷಣ ಸೈಬರ್‌ ಕ್ರೈಮ್‌ ಸಹಾಯವಾಣಿ 1930 ಸಂಖ್ಯೆಗೆ ಕರೆ ಮಾಡಿ ಅಥವಾ sancharsaathi.gov.in/sfc/ ವೆಬ್‌ಸೈಟ್‌ನಲ್ಲಿ ದೂರು ದಾಖಲಿಸಿ.\

  • ಲೇಖನ: ಪ್ರವೀಣ್‌ ಚಂದ್ರ ಪುತ್ತೂರು

Whats_app_banner