ಬೆಂಗಳೂರು ಟೆಕ್ಕಿ ಆತ್ಮಹತ್ಯೆ ಕೇಸ್; ಕೌಟುಂಬಿಕ ಕಲಹಕ್ಕೆ ನೊಂದ ಉತ್ತರ ಪ್ರದೇಶದ ಯುವಕ, 10ಕ್ಕೂ ಹೆಚ್ಚು ದೂರು ದಾಖಲಿಸಿದ್ದ ಪತ್ನಿ
Dec 10, 2024 10:06 PM IST
ಬೆಂಗಳೂರು ಟೆಕ್ಕಿ ಆತ್ಮಹತ್ಯೆ ಕೇಸ್; ಕೌಟುಂಬಿಕ ಕಲಹಕ್ಕೆ ನೊಂದ ಉತ್ತರ ಪ್ರದೇಶದ ಯುವಕ, 10ಕ್ಕೂ ಹೆಚ್ಚು ದೂರುಗಳನ್ನು ಪತ್ನಿ ದಾಖಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. (ಸಾಂಕೇತಿಕ ಚಿತ್ರ)
Bengaluru techie suicide: ಬೆಂಗಳೂರು ಟೆಕ್ಕಿ ಆತ್ಮಹತ್ಯೆ ಕೇಸ್ ದೇಶದ ಗಮನಸೆಳೆದಿದ್ದು, ಕೌಟುಂಬಿಕ ಕಲಹಕ್ಕೆ ನೊಂದು ಉತ್ತರ ಪ್ರದೇಶದ ಯುವಕ ಅತಿರೇಕದ ನಿರ್ಧಾರ ಮಾಡಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ. ಯುವಕನ ಮೇಲೆ ಆತನ ಪತ್ನಿ 10ಕ್ಕೂ ಹೆಚ್ಚು ದೂರು ದಾಖಲಿಸಿದ್ದು, 26 ಪುಟಗಳ ಮರಣ ಪತ್ರದಲ್ಲಿ ಉಲ್ಲೇಖವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Bengaluru techie suicide: ಕೌಟುಂಬಿಕ ಕಲಹದಿಂದ ಮನನೊಂದ ಬೆಂಗಳೂರಿನ ಟೆಕ್ಕಿಯೊಬ್ಬ 26 ಪುಟಗಳ ಮರಣ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾರತ್ತಹಳ್ಳಿ ಮಂಜುನಾಥ ಲೇಔಟ್‌ನಿಂದ ವರದಿಯಾಗಿದೆ. ಭಾನುವಾರ ತಡರಾತ್ರಿ ಈ ಖೇದಕರ ಘಟನೆ ನಡೆದಿದ್ದು, ಮೃತನನ್ನು ಉತ್ತರಪ್ರದೇಶ ಮೂಲದ ಅತುಲ್ ಸುಭಾಷ್ (34) ಎಂದು ಗುರುತಿಸಲಾಗಿದೆ. ಸೋಮವಾರ ಬೆಳಗ್ಗೆ ತೆರೆದಿಟ್ಟ ಕಿಟಕಿ ಮೂಲಕ ಆತ್ಮಹತ್ಯೆ ಪ್ರಕರಣ ಬಹಿರಂಗವಾಗಿದೆ. ಖಚಿತ ನಿರ್ಧಾರ ಮಾಡಿಕೊಂಡು ಅತುಲ್ ಸುಭಾಷ್ ನಡೆಸಿದ ಅತಿರೇಕದ ಕೃತ್ಯ ಕಳವಳಕಾರಿಯಾಗಿದ್ದು ಸಾಮಾಜಿಕವಾಗಿ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರು ಟೆಕ್ಕಿ ಆತ್ಮಹತ್ಯೆ ಕೇಸ್; ಏನಿದು ಪ್ರಕರಣ
ಉತ್ತರಪ್ರದೇಶ ಮೂಲದ ಅತುಲ್ ಸುಭಾಷ್ 5 ವರ್ಷಹಿಂದೆ ತನ್ನದೇ ಊರಿನ ಯುವತಿಯನ್ನು ಮದುವೆಯಾಗಿದ್ದರು. 3 ವರ್ಷ ಉತ್ತರ ಪ್ರದೇಶದಲ್ಲಿ ನೆಲೆಸಿದ್ದ ದಂಪತಿ 2 ವರ್ಷ ಹಿಂದೆ ದಂಪತಿ ಬೆಂಗಳೂರಿಗೆ ಬಂದು ಮಂಜುನಾಥ ಲೇಔಟ್‌ನ ಖಾಸಗಿ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ನಲ್ಲಿ ನೆಲೆಸಿದ್ದರು. ಅತುಲ್ ಸುಭಾಷ್ ಬೆಂಗಳೂರಿನಲ್ಲಿ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಉನ್ನತ ಹುದ್ದೆಯಲ್ಲಿದ್ದರು. ಈ ನಡುವೆ ದಂಪತಿ ನಡುವೆ ಗಲಾಟೆ ನಡೆದಿದ್ದು, ಅತುಲ್ ಪತ್ನಿ ಉತ್ತರ ಪ್ರದೇಶದ ತವರು ಮನೆಗೆ ತೆರಳಿದ್ದರು. ಅತುಲ್ ಸುಭಾಷ್ ಮನೆಯಲ್ಲಿ ಒಂಟಿಯಾಗಿದ್ದರು. ಭಾನುವಾರ ತಡರಾತ್ರಿ ಮನೆಯ ಫ್ಯಾನ್‌ಗೆ ನೇಣು ಬಿಗಿದುಕೊಂಡು ಅತುಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮವಾರ ಬೆಳಗ್ಗೆ ನೆರೆಹೊರೆಯವರು ಅತುಲ್ ಫ್ಲ್ಯಾಟ್‌ಗೆ ಕಡೆಗೆ ತೆರೆದಿಟ್ಟಿದ್ದ ಕಿಟಕಿಯ ಮೂಲಕ ನೇಣು ಬಿಗಿದ ಸ್ಥಿತಿಯಲ್ಲಿ ಅತುಲ್ ಮೃತದೇಹ ಕಂಡು ಬಂದಿದೆ. ಕೂಡಲೇ ಸ್ಥಳೀಯರು 112 ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತತ್‌ಕ್ಷಣ ಸ್ಥಳಕ್ಕೆ ಬಂದ ಪೊಲೀಸರು, ಸ್ಥಳ ಪರಿಶೀಲಿಸಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದು, ಕೇಸ್ ದಾಖಲಿಸಿಕೊಂಡಿದ್ಧಾರೆ.
ಅತುಲ್ ಮನೆಯಲ್ಲಿ 26 ಪುಟಗಳ ಡೆತ್‌ನೋಟ್ ಪತ್ತೆ; ಎದೆ ಮೇಲೆ ಜಸ್ಟೀಸ್ ಈಸ್ ಡ್ಯೂ ಪೋಸ್ಟರ್
ಅತುಲ್ ಸುಭಾಷ್ ಮನೆಯಲ್ಲಿ 26 ಪುಟಗಳ ಸುದೀರ್ಘ ಮರಣ ಪತ್ರ ಸಿಕ್ಕಿದೆ. ಮೃತ ದೇಹದ ಎದೆಯ ಮೇಲೆ 'ಜಸ್ಟೀಸ್ ಈಸ್ ಡ್ಯೂ' ಎಂಬ ಪೋಸ್ಟರ್ ಕೂಡ ಇತ್ತು. ಎರಡನ್ನೂ ಪೊಲೀಸರು ವಶಪಡಿಸಿಕೊಂಡಿದ್ದು, ತನಿಖೆ ನಡೆಸಿದ್ದಾರೆ. ಪೊಲೀಸ್ ಮಾಹಿತಿ ಪ್ರಕಾರ, ಸಾವಿಗೂ ಮುನ್ನ ಕೆಲಸಗಳ ಪಟ್ಟಿ ಬರೆದಿಟ್ಟುಕೊಂಡಿದ್ದ. ಆತ್ಮಹತ್ಯೆಗೂ 2 ದಿನ ಹಿಂದೆಯೇ ಮಾಡಿ ಮುಗಿಸಬೇಕಾದ ಕೆಲಸಗಳು ಯಾವುವು ಎಂದು ಪಟ್ಟಿ ಮಾಡಿಟ್ಟುಕೊಂಡಿದ್ದ. ಯಾರಿಗೆ ಕರೆ ಮಾಡ ಬೇಕು, ಆತ್ಮಹತ್ಯೆ ದಿನ ಏನೆಲ್ಲಾ ಕೆಲಸ ಮಾಡಬೇಕು ಎಂಬ ಪಟ್ಟಿಯನ್ನು ಗೋಡೆ ಮೇಲೆ ಅಂಟಿಸಿರುವುದು ಕಂಡು ಬಂದಿದೆ. ಆತ್ಮಹತ್ಯೆ ದಿನ ಸ್ನಾನ ಮಾಡಬೇಕು, ಕಿಟಕಿ ತೆಗೆದಿರಿಸಬೇಕು. ಗೇಟ್ ಲಾಕ್ ಮಾಡಬೇಕು, ನೂರು ಬಾರಿ ಶಿವನ ಜಪ ಮಾಡಬೇಕು, ಫ್ರಿಡ್ಜ್ ಮೇಲೆ ರೂಮ್, ಕಾರು, ಬೈಕ್ ಕೀ ಇರಿಸಬೇಕು, ಡೆತ್ ನೋಟ್ ಟೇಬಲ್ ಮೇಲೆ ಇರಿಸಬೇಕು ಎಂಬಿತ್ಯಾದಿ ಸೇರಿ ಪ್ರತಿ ಕೆಲಸಗಳು ಪಟ್ಟಿಯಲ್ಲಿದ್ದವು. ಇನ್ನು, ಮರಣ ಪತ್ರವನ್ನು ಅತುಲ್ ಸುಭಾಷ್ ಅವರು ಸೇವ್ ಇಂಡಿಯಾ ಫ್ಯಾಮಿಲಿ ಫೌಂಡೇಶನ್‌ಗೆ ವಾಟ್ಸ್‌ಆಪ್ ಮೂಲಕ ಕಳುಹಿಸಿದ್ದಾರೆ. ಬಳಿಕ, ಸುಪ್ರೀಂ ಕೋರ್ಟ್, ಹೈಕೋರ್ಟ್ ಮತ್ತು ಕುಟುಂಬದ ಕೆಲ ಸದಸ್ಯರು ಹಾಗೂ ತಮ್ಮ ಕಂಪನಿ ಇಮೇಲ್ ವಿಳಾಸಕ್ಕೆ ಕಳುಹಿಸಿದ್ದಾರೆ.
ಅತುಲ್ ಸುಭಾಷ್ ವಿರುದ್ಧ 10ಕ್ಕೂ ಹೆಚ್ಚು ದೂರು ನೀಡಿದ್ದ ಪತ್ನಿ
ಅತುಲ್ ಸುಭಾಷ್ ವಿರುದ್ಧ ವದಕ್ಷಿಣೆ ಕಿರುಕುಳ, ಹಲ್ಲೆ, ದೌರ್ಜನ್ಯ, ಹಿಂಸೆ ಸೇರಿ ವಿವಿಧ ಆರೋಪ ಮಾಡಿ 10ಕ್ಕೂ ಅಧಿಕ ದೂರುಗಳನ್ನು ಉತ್ತರ ಪ್ರದೇಶದ ಪೊಲೀಸ್ ಠಾಣೆಯಲ್ಲಿ ಪತ್ನಿ ದಾಖಲಿಸಿದ್ದಾರೆ. ಇದಕ್ಕೆ, ಅತುಲ್ ಸುಬಾಷ್ ಕೂಡ ಪತ್ನಿ ವಿರುದ್ಧ ಪ್ರತಿ ದೂರು ದಾಖಲಿಸಿದ್ದರು. ಈ ನಡುವೆ ಪತ್ನಿ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದು, ಅತುಲ್‌ನಿಂದ 11 ಕೋಟಿ ರೂಪಾಯಿ ಪರಿಹಾರ ಕೊಡಿಸುವಂತೆ ಮನವಿ ಮಾಡಿದ್ದಾರೆ. ಇದರ ವಿಚಾರಣೆ ಶುರುಮಾಡಿದ್ದ ನ್ಯಾಯಾಲಯ, ಪತ್ನಿಗೆ ಪ್ರತಿ ತಿಂಗಳು 2.50 ಲಕ್ಷ ರೂಪಾಯಿ ಜೀವನಾಂಶ ನೀಡುವಂತೆ ಆದೇಶಿಸಿತ್ತು ಎಂದು ಹೇಳಲಾಗುತ್ತಿದೆ.
ಮೃತನ ಸಹೋದರ ಬಿಕಾಸ್ ಕುಮಾರ್ ನೀಡಿದ ಹೇಳಿಕೆ ಪ್ರಕಾರ, ಅತುಲ್ ಸುಭಾಷ್ ಅವರ ಪತ್ನಿ ಮತ್ತು ಅವರ ಪಾಲಕರು ಕೇಸ್ ಇತ್ಯರ್ಥಗೊಳಿಸುವುದಕ್ಕೆ 3 ಕೋಟಿ ರೂಪಾಯಿ ಬೇಡಿಕೆ ಇರಿಸಿದ್ದರು. ಅತುಲ್‌ನ ಕುಟುಂಬ ಸದಸ್ಯರೆಲ್ಲರನ್ನೂ ಆರೋಪಿಗಳನ್ನಾಗಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾಗಿ ಎಎನ್‌ಐ ವರದಿ ಮಾಡಿದೆ.
ಗಮನಿಸಿ: ಆತ್ಮಹತ್ಯೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ನಿಮ್ಮನ್ನು ಪ್ರೀತಿಸುವ, ಬೆಂಬಲಿಸುವ ಆಪ್ತರು ಇದ್ದೇ ಇರುತ್ತಾರೆ. ನಿಮ್ಮ ಸಮಸ್ಯೆಗಳನ್ನು ಅಂಥವರೊಂದಿಗೆ ಹಂಚಿಕೊಂಡು ನೆರವು ಪಡೆಯಿರಿ. ಆತ್ಮಹತ್ಯೆಯ ಆಲೋಚನೆಗಳು ಮನಸ್ಸಿಗೆ ಪದೇಪದೆ ಬರುತ್ತಿದ್ದರೆ ಹಿಂಜರಿಕೆಯಿಲ್ಲದೆ ಆಪ್ತಸಮಾಲೋಚಕರ ಮಾರ್ಗದರ್ಶನ ಪಡೆದುಕೊಳ್ಳಿ. ಮಾನಸಿಕ ಆರೋಗ್ಯದ ಕಡೆಗೆ ಗಮನಕೊಡಿ. ತುರ್ತು ಸಂದರ್ಭದಲ್ಲಿ ಬೆಂಗಳೂರಿನ SAHAI ಸಹಾಯವಾಣಿ (080 - 25497777) ಅಥವಾ ನಿಮ್ಹಾನ್ಸ್ ಸಹಾಯವಾಣಿಯ (080 – 4611 0007) ನೆರವು ಪಡೆಯಿರಿ.