ವಿದ್ಯಾನಗರ - ಟೆಲಿಕಾಂ ಲೇ ಔಟ್ ರಸ್ತೆ ಮೂರು ವಾರ ಬಂದ್; ಬೆಂಗಳೂರು ಸಂಚಾರ ಸಲಹೆ ವಿವರ ಹೀಗಿದೆ
Nov 17, 2024 03:24 PM IST
ಬೆಂಗಳೂರು ಸಂಚಾರ ಸಲಹೆ: ವಿದ್ಯಾನಗರ - ಟೆಲಿಕಾಂ ಲೇ ಔಟ್ ರಸ್ತೆ ಮೂರು ವಾರ ಬಂದ್ ಆಗಿರಲಿದೆ. (ಸಾಂಕೇತಿಕ ಚಿತ್ರ)
ಬೆಂಗಳೂರು ಸಂಚಾರ ಸಲಹೆ: ವಿದ್ಯಾನಗರ - ಟೆಲಿಕಾಂ ಲೇ ಔಟ್ ರಸ್ತೆ ಮೂರು ವಾರ ಬಂದ್ ಆಗಿರಲಿದೆ. ಈ ದಾರಿಯಲ್ಲಿ ಹೋಗುವವರು ಮೂರು ಪರ್ಯಾಯ ಮಾರ್ಗವನ್ನು ಬಳಸಬಹುದು ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ. ಅದರ ವಿವರ ಇಲ್ಲಿದೆ.
ಬೆಂಗಳೂರು: ವಿಪರೀತ ಮಳೆ ಬಂದ ಬಳಿಕ ಬೆಂಗಳೂರಿನ ರಸ್ತೆಗಳು ಕುಲಗೆಟ್ಟುಹೋಗಿವೆ. ರಸ್ತೆಗುಂಡಿಗಳ ನಡುವೆ ವಾಹನ ಸವಾರಿ ಮಾಡುವುದೇ ದೊಡ್ಡ ಸಾಹಸದ ಕೆಲಸ. ಈ ನಡುವೆ, ನವೆಂಬರ್ 16 ರಿಂದ ಡಿಸೆಂಬರ್ 6ರ ತನಕ ವಿದ್ಯಾ ನಗರ - ಟೆಲಿಕಾಂ ಲೇಔಟ್ (ವೆಂಕಟೇಶ್ವರ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ತನಕ ರಸ್ತೆ ಸಂಚಾರ ನಿರ್ಬಂಧಿಸಲಾಗಿದೆ. ಈ ಪ್ರದೇಶದಲ್ಲಿ ರಸ್ತೆಗೆ ವೈಟ್ ಟಾಪಿಂಗ್ ನಡೆಯುವ ಕಾರಣ ಈ ನಿರ್ಬಂಧ ವಿಧಿಸಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.
ವಿದ್ಯಾನಗರ - ಟೆಲಿಕಾಂ ಲೇ ಔಟ್ ರಸ್ತೆ ಮೂರು ವಾರ ಬಂದ್; ಸಂಚಾರ ಸಲಹೆ ಹೀಗಿದೆ
ಉತ್ತನಹಳ್ಳಿ ಕಡೆಗೆ ತೆರಳುವ ವಾಹನಗಳು ಬಿಎಂಡಬ್ಲ್ಯು ಶೋರೂಂ ಬಳಿ ಬಲ ತಿರುವು ಪಡೆದು ಶಕ್ತಿನಗರ, ಆಕ್ಸ್‌ಫರ್ಡ್ ಶಾಲೆ, ಬಿಲ್ಲಮಾರನಹಳ್ಳಿ, ಟೆಲಿಕಾಂ ಲೇಔಟ್‌ಗೆ ತೆರಳಿ ಉತ್ತನಹಳ್ಳಿ ಮುಖ್ಯರಸ್ತೆ ತಲುಪುವಂತೆ ಸೂಚಿಸಲಾಗಿದೆ. ಉತ್ತನಹಳ್ಳಿಯಿಂದ ಹುಣಸಮಾರನಹಳ್ಳಿ ಸರ್ವಿಸ್ ರಸ್ತೆ ಕಡೆಗೆ ಹೋಗುವ ವಾಹನ ಸವಾರರು ಹೊಸಹಳ್ಳಿ ಮಾರ್ಗವಾಗಿ ತೆರಳಬೇಕು ಎಂದು ಬೆಂಗಳೂರು ಸಂಚಾರ ಪೊಲೀಸರು ಹೇಳಿದ್ದಾರೆ.
ಉತ್ತನಹಳ್ಳಿ ಮುಖ್ಯರಸ್ತೆಯಿಂದ ಕೋಟೆ ಕ್ರಾಸ್ ಕಡೆಗೆ ಹೋಗುವವರು ದೊಡ್ಡಜಾಲದ ಮೂಲಕ ಸಾಗಬೇಕು. ಚಿಕ್ಕಜಾಲ ಅಂಡರ್‌ಪಾಸ್‌ಗೆ ತೆರಳಲು ಮೂಂಗೇಟ್ ಮತ್ತು ಮಾರನಾಯಕನಹಳ್ಳಿ ಮಾರ್ಗವಾಗಿ ಪ್ರಯಾಣಿಕರನ್ನು ಮರುನಿರ್ದೇಶಿಸಲಾಗಿದೆ. ಬಸ್ಸುಗಳು ಮತ್ತು ಭಾರೀ ಸರಕು ಸಾಗಣೆ ವಾಹನಗಳು ಕಡ್ಡಾಯವಾಗಿ ಬಾಗಲೂರು ಕ್ರಾಸ್-ರೇವಾ ಜಂಕ್ಷನ್-ಸಾತನೂರು-ಬಾಗಲೂರು ಮುಖ್ಯ ರಸ್ತೆ ಮೂಲಕ ಮಾರ್ಗವನ್ನು ತೆಗೆದುಕೊಳ್ಳಬೇಕು ಎಂದು ಬೆಂಗಳೂರು ಸಂಚಾರ ಪೊಲೀಸರು ಸಂಚಾರ ಸಲಹೆಯಲ್ಲಿ ತಿಳಿಸಿದ್ದಾರೆ.
ಸಕ್ರ ಆಸ್ಪತ್ರೆ ಸಮೀಪ ಬಿಬಿಎಂಪಿ ಕಾಮಗಾರಿ
ಸಕ್ರ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಬಿಬಿಎಂಪಿ ಕಾಮಗಾರಿಯಿಂದಾಗಿ ಬೆಳ್ಳಂದೂರು ಕೋಡಿ ಕಡೆಗೆ ಸಕ್ರ ಆಸ್ಪತ್ರೆಯಿಂದ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಎಚ್‌ಎಎಲ್ ಏರ್‌ಪೋರ್ಟ್ ಟ್ರಾಫಿಕ್ ಪೊಲೀಸರು ಟ್ವೀಟ್ ಮಾಡಿದ್ದಾರೆ.
ಬಿಬಿಎಂಪಿ ಕಾಮಗಾರಿ ಪ್ರಗತಿಯಲ್ಲಿರುವ ಕಾರಣ ಬೆಳ್ಳಂದೂರು ಕೋಡಿ- ಸಕ್ರ ಆಸ್ಪತ್ರೆ ಕಡೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಈ ರಸ್ತೆಯಲ್ಲಿ ಸಂಚರಿಸಬೇಕಾದ ವಾಹನಗಳು ಮೂರು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಬಹುದು ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ. ಇದರಂತೆ, 1ನೇ ಪರ್ಯಾಯ ಮಾರ್ಗದಲ್ಲಿ ಬಲಕ್ಕೆ ಹೋಗುವವರು ಒಆರ್‌ಆರ್ ಕಡೆಗೆ ಚಲಿಸುವವರು ಕಡ್ಡಾಯವಾಗಿ ಬಲಕ್ಕೆ ಚಲಿಸಬೇಕು. ಬೆಳ್ಳಂದೂರು ಗ್ರಾಮದ ಮೂಲಕ ಮುಂದುವರಿಯಬೇಕು. 2 ನೇ ಪ್ರರ್ಯಾಯ ಮಾರ್ಗದಲ್ಲಿ ಸಂಚರಿಸುವವರು ಒಆರ್‌ಆರ್ ಕಡೆಗೆ ಹೋಗುವವರು ಯಮಲೂರು ಕೋಡಿಯಿಂದ ಎಡಕ್ಕೆ ತಿರುಗಿ ಕರಿಯಮ್ಮ ಅಗ್ರಹಾರ ರಸ್ತೆ ಮೂಲಕ ಕಾಡುಬೀಸನಹಳ್ಳಿ ಜಂಕ್ಷನ್ ಕಡೆಗೆ ಹೋಗಬೇಕು. ಇದೇ ರೀತಿ 3ನೇ ಪರ್ಯಾಯ ರಸ್ತೆಯಲ್ಲಿ ಒಆರ್‌ಆರ್ ಕಡೆಗೆ ಹೋಗುವವರು ಯಮಲೂರು, ಮಾರತ್ತಹಳ್ಳಿ ಬ್ರಿಜ್, ಕಾಡುಬೀಸನಹಳ್ಳಿ, ದೇವರಜೀವನಹಳ್ಳಿ ಮೂಲಕ ಸಾಗಬೇಕು ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.