ಬೆಂಗಳೂರಿನಲ್ಲಿರುವ ಕನ್ನಡೇತರರಿಗೆ ಕನ್ನಡ ಕಲಿಸುವ ಪ್ರಯತ್ನ; ಸಂಚಾರ ಪೊಲೀಸರು-ನಮ್ಮ ಮೆಟ್ರೋದಿಂದ ವಿನೂತನ ಕ್ರಮ
Nov 02, 2024 08:31 AM IST
ಕನ್ನಡೇತರರಿಗೆ ಕನ್ನಡ ಕಲಿಸುವ ಪ್ರಯತ್ನ; ಸಂಚಾರ ಪೊಲೀಸರು-ನಮ್ಮ ಮೆಟ್ರೋದಿಂದ ವಿನೂತನ ಕ್ರಮ
- ಕನ್ನಡ ರಾಜ್ಯೋತ್ಸವ ನಿಮಿತ್ತ ಬೆಂಗಳೂರು ಸಂಚಾರ ಪೊಲೀಸರು ಹಾಗೂ ನಮ್ಮ ಮೆಟ್ರೋ ವಿನೂತನ ಕ್ರಮ ಕೈಗೊಂಡಿದೆ. ಉದ್ಯಾನ ನಗರಿಯಲ್ಲಿರುವ ಕನ್ನಡೇತರರಿಗೆ ಕನ್ನಡ ಕಲಿಸುವ ಸಲುವಾಗಿ ಸರಳವಾಗಿ ಕನ್ನಡ ಭಾಷೆ ಕಲಿಸುವ ಪ್ರಯ್ನ ಮಾಡಿದೆ.
ಬೆಂಗಳೂರು: ಉದ್ಯಾನ ನಗರಿಯಲ್ಲಿ ಆಟೋ ರಿಕ್ಷಾಗಳಲ್ಲಿ ಪ್ರಯಾಣಿಸುವಾಗ ಕನ್ನಡೇತರರಿಗೆ ಕನ್ನಡ ಕಲಿಸುವ ಪ್ರಯತ್ನವನ್ನು ಬೆಂಗಳೂರು ಸಂಚಾರ ಪೊಲೀಸರು ಮಾಡಿದ್ದಾರೆ. ಕನ್ನಡ ರಾಜ್ಯೋತ್ಸವ ನಿಮಿತ್ತ ಕನ್ನಡ ಕಲಿಸುವ ಕಾರ್ಡ್‌ಗಳನ್ನು ವಿತರಿಸುವ ಮೂಲಕ ಕನ್ನಡ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ಸಿಲಿಕಾನ್ ಸಿಟಿಯಲ್ಲಿರುವ 5000ಕ್ಕೂ ಹೆಚ್ಚು ಆಟೋ ರಿಕ್ಷಾಗಳಲ್ಲಿ ದೈನಂದಿನ ಪ್ರಯಾಣದ ಸಮಯದಲ್ಲಿ ಬಳಕೆಯಾಗುವ ಸರಳ ಕನ್ನಡ ವಾಕ್ಯಗಳನ್ನು ಈ ಕಾರ್ಡ್‌ಗಳಲ್ಲಿ ಬರೆಯಲಾಗಿದೆ. ಕನ್ನಡೇತರರಿಗೆ ಆಟೋ ಚಾಲಕನೊಂದಿಗೆ ಸಂವಹನಕ್ಕೆ ಇದು ನೆರವಾಗಲಿದೆ.
ಕನ್ನಡ ರಾಜ್ಯೋತ್ಸವದ ದಿನ ನಗರದ ಸಂಚಾರ ಪೊಲೀಸರು ಎರಡು ಬಣ್ಣದ ಶಾಲುಗಳನ್ನು ಧರಿಸಿ ಎಲ್ಲಾ ಆಟೋರಿಕ್ಷಾ ಚಾಲಕರಿಗೆ ಈ ಕಾರ್ಡ್‌ಗಳನ್ನು ವಿತರಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಬೆಂಗಳೂರು ಟ್ರಾಫಿಕ್ ಪೊಲೀಸರು, “ಕನ್ನಡ ರಾಜ್ಯೋತ್ಸವದಂದು, ಬೆಂಗಳೂರು ಸಂಚಾರ ಪೋಲಿಸ್ ವತಿಯಿಂದ ಪರಭಾಷಿಕರಿಗೆ ಕನ್ನಡ ಭಾಷೆಯನ್ನು ಕಲಿಸುವ ಒಂದು ಅಳಿಲು ಪ್ರಯತ್ನ. ಆಟೋ ಕನ್ನಡಿಗರ ಸಹಯೋಗದಲ್ಲಿ ಅಭಿಯಾನ. ಸಿರಿಗನ್ನಡಂ ಗೆಲ್ಗೆ! ಸಿರಿಗನ್ನಡಂ ಬಾಳ್ಗೆ” ಎಂದು ಟ್ವೀಟ್ ಮಾಡಿದ್ದಾರೆ.
ಪ್ರತಿ ರಿಕ್ಷಾಗಳಲ್ಲೂ ಈ ಕಾರ್ಡ್‌ಗಳನ್ನು ಅಳವಡಿಸಲಾಗುತ್ತದೆ. ಇತ್ತೀಚೆಗಷ್ಟೇ ವ್ಯಕ್ತಿಯೊಬ್ಬರ ಆಟೋದಲ್ಲಿ ಇಂಥಾ ಕಾರ್ಡ್ ಇದ್ದ ಫೋಟೊ ವೈರಲ್ ಆಗಿತ್ತು. ರಿಕ್ಷಾದಲ್ಲಿ ಕನ್ನಡ ಬಾರದ ಪ್ರಯಾಣಿಕರು ಬಂದರೆ, ಕಾರ್ಡ್ ನೋಡಿ ಅದರಲ್ಲಿ ಇಂಗ್ಲೀಷ್‌ನಲ್ಲಿ ಇರುವ ವಾಕ್ಯಗಳನ್ನು ಕನ್ನಡದಲ್ಲಿ ಹೇಳಬಹುದು. ಕನ್ನಡ ವಾಕ್ಯವನ್ನು ಇಂಗ್ಲೀಷ್‌ನಲ್ಲಿ ಬರೆದು ಅನ್ಯಭಾಷಿಕರು ಸುಲಭವಾಗಿ ಓದುವಂತೆ ಮಾಡಲಾಗಿದೆ. ಈ ಕಾರ್ಡ್‌ನಲ್ಲಿ 'ಇಲ್ಲೇ ಇದ್ದಿನಿ ಎರಡು ನಿಮಿಷ ಬಂದೆ (I am right here, will be there in two minutes), ನನಗೆ ತುಂಬಾ ತುರ್ತು ಇದೆ ದಯವಿಟ್ಟು ಬೇಗ ಬನ್ನಿ (I am in some urgency please come fast) ಸೇರಿದಂತೆ ಹಲವು ಕನ್ನಡ ಸಾಲುಗಳಿವೆ. ಇದು ಬೆಂಗಳೂರಿನಲ್ಲಿ ವಾಸಿಸುವ ಲಕ್ಷಾಂತರ ಕನ್ನಡೇತರರ ನಿತ್ಯ ಜೀವನ ಸುಲಭಗೊಳಿಸುತ್ತದೆ.
ಅಜ್ಮಲ್ ಸುಲ್ತಾನ್ ಎಂಬ ಚಾಲಕ ಕೆಲವು ವಾರಗಳ ಹಿಂದೆ ಬೆಂಗಳೂರಿನಲ್ಲಿ ವಾಸಿಸುವ ಕನ್ನಡಿಗರು ಮತ್ತು ಕನ್ನಡೇತರರ ನಡುವಿನ ಸಂವಹನದ ಅಂತರವನ್ನು ಕಡಿಮೆ ಮಾಡುವ ಸಲುವಾಗಿ ಇಂಥಾ ಉಪಕ್ರಮವನ್ನು ಆರಂಭಿಸಿದ್ದರು. ಆ ಬಳಿಕ ಅವರು ಮಾತ್ರವಲ್ಲದೆ ಈ ಸಂಭಾಷಣೆಯ ಕಾರ್ಡ್ ಜನಪ್ರಿಯತೆ ಗಳಿಸಿತ್ತು. ಸಾಮಾಜಿಕ ಮಾಧ್ಯಮದಲ್ಲಿ ಇದು ವೈರಲ್ ಆಯ್ತು. ಕನ್ನಡ ತಿಳಿಯದವರಿಗೆ ಕನ್ನಡ ಕಲಿಸುವ ಚಾಲಕನ ಪ್ರಯತ್ನ ಇದೀಗ ಬೆಂಗಳೂರಿನ ಎಲ್ಲಾ ರಿಕ್ಷಾಗಳಿಗೂ ಹರಡಿದೆ.
ನಮ್ಮ ಮೆಟ್ರೋ ವಿಶೇಷ ಕ್ರಮ
ಬೆಂಗಳೂರಿನ ನಮ್ಮ ಮೆಟ್ರೋ ಕೂಡಾ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವ ಕನ್ನಡೇತರ ಪ್ರಯಾಣಿಕರಿಗೆ ಪ್ರಯಾಣಿಸುವಾಗ ಸಂವಹನ ನಡೆಸಲು ಕನ್ನಡವನ್ನು ಕಲಿಸಲು ನಿರ್ಧರಿಸಿದೆ. ಬೆಂಗಳೂರು ಮೆಟ್ರೋ ರೈಲು ನಿಗಮವು, ಮೆಟ್ರೋ ಪ್ರಯಾಣದ ಸಂದರ್ಭದಲ್ಲಿ ಸಾಮಾನ್ಯವಾಗಿ ಬಳಕೆಯಾಗುವ ವಾಕ್ಯಗಳನ್ನು ಇಂಗ್ಲೀಷ್‌ನಲ್ಲಿ ಬರೆದು ಕನ್ನಡೇತರರಿಗೆ ಅರ್ಥವಾಗುವಂತೆ ಹಂಚಿಕೊಂಡಿದೆ.
“ಕನ್ನಡವನ್ನು ಕಲಿಸೋದು ನಮ್ಮ ಜವಾಬ್ದಾರಿ ಮಾತ್ರ ಅಲ್ಲ, ನಿಮ್ಮದು ಕೂಡ. ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು,” ಎಂದು ನಮ್ಮ ಮೆಟ್ರೋ ಹಂಚಿಕೊಂಡಿದೆ.
ಯಾವ ಪ್ಲಾಟ್‌ಫಾರ್ಮ್‌ಗೆ ಹೋಗ್ಬೇಕು? ದಯವಿಟ್ಟು ಸ್ವಲ್ಪ ಜಾಗ ಬಿಡಿ, ಮೆಟ್ರೋ ಯಾವಾಗ ಬರುತ್ತೆ, ವಾಶ್‌ರೂಮ್ ಎಲ್ಲಿದೆ? ಹೀಗೆ ಸಾಮಾನ್ಯವಾಗಿ ಬಳಸುವ ವಾಕ್ಯಗಳನ್ನು ಮೆಟ್ರೋದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಕಲಿಸಿಕೊಟ್ಟಿದ್ದಾರೆ.