ಕನ್ನಡವನ್ನು ಹೀಯಾಳಿಸಬೇಡಿ, ಅದು ನಾಡದ್ರೋಹ; ಅದರ ವಿರುದ್ಧ ಕಠಿಣ ಕ್ರಮ: ಕನ್ನಡ ರಾಜ್ಯೋತ್ಸವ ಭಾಷಣದಲ್ಲಿ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
ಕರ್ನಾಟಕ ರಾಜ್ಯೋತ್ಸವ (Karnataka Rajyotsava 2024): ಕರ್ನಾಟಕದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕನ್ನಡವನ್ನು ಹೀಯಾಳಿಸಬೇಡಿ, ಅದು ನಾಡದ್ರೋಹ ಎಂದು ಅಂತಹ ಕೃತ್ಯವೆಸಗುತ್ತಿರುವವರಿಗೆ ಎಚ್ಚರಿಕೆ ನೀಡಿದ್ದಾರೆ. ಅವರ ಭಾಷಣದ ಮುಖ್ಯ ಅಂಶಗಳ ವಿವರ ಇಲ್ಲಿದೆ.
ಬೆಂಗಳೂರು: ಕನ್ನಡವನ್ನು ಹೀಯಾಳಿಸುವುದು ನಾಡದ್ರೋಹವಾಗುತ್ತದೆ. ಅಂತಹ ಕೃತ್ಯಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಜರುಗಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ (ನವೆಂಬರ್ 1) ಎಚ್ಚರಿಸಿದರು. ಅವರು ಇಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 69 ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭ -2024 ದಲ್ಲಿ ಭಾಗವಹಿಸಿ ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ , ಕನ್ನಡಿಗರನ್ನು ಹೀಯಾಳಿಸುವ ಪ್ರವೃತ್ತಿಯು ಕಂಡುಬರುತ್ತಿದೆ. ಇದು ನಾಡದ್ರೋಹ ಎಂದು ಪರಿಗಣಿಸಿ, ಅಂತಹ ಕಿಡಿಗೇಡಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿಗಳು ಎಚ್ಚರಿಕೆ ನೀಡಿದರು.
ಭಾಷೆಯ ಬಗ್ಗೆ ದುರಭಿಮಾನ ಬೇಡ, ಅಭಿಮಾನಿಗಳಾಗಿ ಸಾಕು ಎಂದ ಮುಖ್ಯಮಂತ್ರಿ
ಕನ್ನಡವನ್ನು ವ್ಯಾವಹಾರಿಕವಾಗಿ ಬಳಸುವ ಮೂಲಕ ಇತರರ ಜತೆಗೂ ಕನ್ನಡದದಲ್ಲೆ ಮಾತನಾಡುವ ಮತ್ತು ಕನ್ನಡೇತರರಿಗೆ ಕನ್ನಡವನ್ನು ಕಲಿಸುವ ಪ್ರಯತ್ನ ಮಾಡಬೇಕು. ಕನ್ನಡ ರಾಜ್ಯದ ಅನ್ನ, ನೀರು, ಗಾಳಿ ಸೇವಿಸಿದ ಮೇಲೆ ಯಾವುದೇ ಜಾತಿ, ಧರ್ಮ ಭಾಷೆಯವರಿದ್ದರೂ ಅವರು ಕನ್ನಡಿಗರೇ ಆಗುತ್ತಾರೆ. ಕನ್ನಡ ಭಾಷೆಗೆ 2000 ವರ್ಷಗಳ ಇತಿಹಾಸ ಇದೆ. ಕನ್ನಡ ಶಾಸ್ತ್ರೀಯ ಭಾಷೆಯ ಸ್ಥಾನಮಾನವೂ ಇದೆ. ಹೀಗಿರುವಾಗ ಭಾಷೆಯಲ್ಲಿ ಬಲಿಕೊಡುವ ಮಟ್ಟಿಗೆ ಉದಾರಿಗಳಾಗಬಾರದು. ಭಾಷೆಯ ಬಗ್ಗೆ ದುರಭಿಮಾನ ಬೆಳೆಸಿಕೊಳ್ಳಬಾರದು. ಅಭಿಮಾನ ಬೆಳೆಸಿಕೊಂಡು ಅಭಿಮಾನಿಗಳಾಗಬೇಕು. ಕನ್ನಡದಲ್ಲೇ ಶಿಕ್ಷಣ ಪಡೆಯಬೇಕು. ಕನ್ನಡದಲ್ಲೇ ಮಾತನಾಡಬೇಕು. ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯವುದು ಉತ್ತಮ ಎಂದು ಮಹಾತ್ಮ ಗಾಂಧಿಯವರು ಹೇಳಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ವೇಳೆ ಪ್ರತಿಪಾದಿಸಿದರು.
ಸುವರ್ಣ ಸಂಭ್ರಮ ಮರೆತ ಬಿಜೆಪಿ ಸರ್ಕಾರ
ಕರ್ನಾಟಕ ರಾಜ್ಯ ಏಕೀಕರಣಗೊಂಡು 68 ವರ್ಷಗಳು ಕಳೆದಿವೆ. 1953 ರಲ್ಲಿ ಫಜಲ್ ಅಲಿ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಪುನರ್ವಿಂಗಡನಾ ಆಯೋಗ ರಚನೆಯಾಯಿತು. ಆಯೋಗದ ವರದಿಯನ್ನು ಆಧರಿಸಿ ರಾಜ್ಯಗಳ ಭಾಷಾವಾರು ವಿಂಗಡನೆಯಾಧರಿಸಿ, 1956ರ ನವೆಂಬರ್ 1 ರಂದು ರಾಜ್ಯ ಏಕೀಕರಣಗೊಂಡು ಮೈಸೂರು ರಾಜ್ಯ ಉದಯವಾಯಿತು. ಮಾಜಿ ಮುಖ್ಯಮಂತ್ರಿ, ದಿ.ದೇವರಾಜ ಅರಸು ಅವರ ಅವಧಿಯಲ್ಲಿ 1973ರ ನವೆಂಬರ್ 1 ರಂದು ಮೈಸೂರು ರಾಜ್ಯ , ಇಡೀ ರಾಜ್ಯವನ್ನು ಪ್ರತಿನಿಧಿಸುವ ಹೆಸರಾದ ಕರ್ನಾಟಕ ವೆಂದು ಮರುನಾಮಕರಣಗೊಂಡಿತು. ಕರ್ನಾಟಕ ಹೆಸರು ನಾಮಕರಣಗೊಂಡು 50 ವರ್ಷಗಳು ಸಂದಿವೆ. ಈ ಸುವರ್ಣ ಸಂಭ್ರಮವನ್ನು ಬಿಜೆಪಿ ಸರ್ಕಾರ ಸಂಭ್ರಮಿಸಲಿಲ್ಲ. ಆದರೆ 2023ರ ನವೆಂಬರ್ 1 ರಂದು 51 ನೇ ವರ್ಷ ಎಂದು ಕರ್ನಾಟಕ ನಾಮಕರಣಗೊಂಡ ದಿನವೆಂದು ವರ್ಷಪೂರ್ತಿ ಆಚರಿಸಬೇಕೆಂದು ನಿರ್ಧರಿಸಲಾಯಿತು. ಕನ್ನಡ ನಾಡು, ನುಡಿ, ನೆಲ, ಜಲದ ಮಹತ್ವ ಪ್ರಚುರಪಡಿಸಲು ‘ಹೆಸರಾಯಿತು ಕರ್ನಾಟಕ , ಉಸಿರಾಯಿತು ಕನ್ನಡ’ ಎಂಬ ಘೋಷ ವಾಕ್ಯದಡಿ ಇಡೀ ವರ್ಷ ಕನ್ನಡವನ್ನು ಸಂಭ್ರಮಿಸಲಾಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕೇಂದ್ರದಿಂದ ಅನ್ಯಾಯವಾದರೂ ಕರ್ನಾಟಕದ ಅಭಿವೃದ್ಧಿ
ದೇಶದಲ್ಲಿ ಅತಿ ಹೆಚ್ಚು ತೆರಿಗೆ ನೀಡುವ ಎರಡನೇ ರಾಜ್ಯ ಕರ್ನಾಟಕ. 4 ಲಕ್ಷ ಕೋಟಿಗೂ ಹೆಚ್ಚು ತೆರಿಗೆ ನೀಡಿದರೂ, ಕೇಂದ್ರದಿಂದ ಕರ್ನಾಟಕಕ್ಕೆ ಸಿಗುವ ತೆರಿಗೆ ಪಾಲು ಕೇವಲ 50-60 ಸಾವಿರ ಕೋಟಿ ರೂಪಾಯಿ ಮಾತ್ರ. ಕನ್ನಡ ನಾಡು ಮುಂದುವರಿದಿದೆ ಎಂದು ಕೇಂದ್ರ ಸರ್ಕಾರ ನಮಗೆ ಅನ್ಯಾಯವೆಸಗಬಾರದು. ರಾಜ್ಯಕ್ಕೆ ಬರಬೇಕಾದ ನ್ಯಾಯಯುತ ತೆರಿಗೆ ಪಾಲನ್ನು ನೀಡಿ ಎಂಬ ನಮ್ಮ ಬೇಡಿಕೆಗೆ ರಾಜಕೀಯ ಬಣ್ಣ ಬಳಿಯುವ ಕೆಲಸವಾಗುತ್ತಿದೆ. ನಮ್ಮ ಹಕ್ಕಿಗೆ ಹೋರಾಡಬೇಕಾಗಿದೆ. ರಾಜ್ಯದ ಸಂಸದರು ಕೇಂದ್ರಕ್ಕೆ ಹೋಗಿದ್ದು, ಕೇಂದ್ರದಲ್ಲಿ ಕನ್ನಡ ಪರ ಧ್ವನಿ ಎತ್ತಬೇಕು. ಈ ಶಕ್ತಿಯನ್ನು ಆಯ್ಕೆಯಾಗಿ ಹೋದವರು ಬೆಳೆಸಿಕೊಂಡರೆ ರಾಜ್ಯಕ್ಕೆ ನ್ಯಾಯ ದೊರೆಯುತ್ತದೆ. ಕೇಂದ್ರದ ಅನ್ಯಾಯದ ನಡುವೆಯೂ , ಕರ್ನಾಟಕದ ಅಭಿವೃದ್ಧಿಗೆ ನಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ವೇಳೆ ಹೇಳಿದರು.