ಕನ್ನಡ ನನ್ನ ಭಾಷೆ ಎಂಬ ಆತ್ಮಗೌರವ ಪ್ರತಿ ಕನ್ನಡಿಗನಲ್ಲೂ ಇದ್ದರೆ ಭಾಷೆ ಉಳಿಸಿ, ಬೆಳೆಸಲು ಯಾವ ಹೋರಾಟವೂ ಬೇಕಿಲ್ಲ; ರಂಗಸ್ವಾಮಿ ಮೂಕನಹಳ್ಳಿ ಬರಹ
ಕನ್ನಡ ಸುದ್ದಿ  /  ಕರ್ನಾಟಕ  /  ಕನ್ನಡ ನನ್ನ ಭಾಷೆ ಎಂಬ ಆತ್ಮಗೌರವ ಪ್ರತಿ ಕನ್ನಡಿಗನಲ್ಲೂ ಇದ್ದರೆ ಭಾಷೆ ಉಳಿಸಿ, ಬೆಳೆಸಲು ಯಾವ ಹೋರಾಟವೂ ಬೇಕಿಲ್ಲ; ರಂಗಸ್ವಾಮಿ ಮೂಕನಹಳ್ಳಿ ಬರಹ

ಕನ್ನಡ ನನ್ನ ಭಾಷೆ ಎಂಬ ಆತ್ಮಗೌರವ ಪ್ರತಿ ಕನ್ನಡಿಗನಲ್ಲೂ ಇದ್ದರೆ ಭಾಷೆ ಉಳಿಸಿ, ಬೆಳೆಸಲು ಯಾವ ಹೋರಾಟವೂ ಬೇಕಿಲ್ಲ; ರಂಗಸ್ವಾಮಿ ಮೂಕನಹಳ್ಳಿ ಬರಹ

ಕನ್ನಡ ಬದುಕಿನ ಭಾಷೆ, ಮನಸ್ಸಿನ ಭಾಷೆ. ಎಲ್ಲಾ ಕನ್ನಡಿಗರೂ ಇವತ್ತಿನಿಂದ ವ್ಯವಹಾರಿಕ ಪ್ರಪಂಚದಲ್ಲಿ ಕನ್ನಡ ಬಿಟ್ಟು ಬೇರೆ ಭಾಷೆ ಉಪಯೋಗಿಸುವುದಿಲ್ಲ ಎನ್ನುವ ನಿರ್ಧಾರ ತೆಗೆದುಕೊಂಡರೆ ಸಾಕು. ಬೇರಾವ ಕನ್ನಡ ಸಂಘಟನೆಗಳು ಕೂಡ ಬೇಡವಾಗುತ್ತವೆ. ಒತ್ತಾಯ , ಹೋರಾಟದಿಂದ ಪರಿಸ್ಥಿತಿ ಬದಲಾಗುವುದಿಲ್ಲ , ಬದಲಿಗೆ ವ್ಯಕ್ತಿ, ಸಂಘಂಟನೆಗಳು ಬಲವಾಗುತ್ತವೆ.

ಕನ್ನಡ ಎಂಬ ಆತ್ಮಗೌರವ
ಕನ್ನಡ ಎಂಬ ಆತ್ಮಗೌರವ (PC: Rangaswamy N R Mookanahalli/ Facebook / Pinterest )

ಕನ್ನಡ ಭಾಷೆಯ ಅಸ್ತಿತ್ವದ ಅಳಿವು, ಉಳಿವಿಗಾಗಿ ಹೋರಾಡುವ ಪರಿಸ್ಥಿತಿಯಲ್ಲಿ ನಾವಿಂದು ಇದ್ದೇವೆ. ನಮ್ಮ ಮಾತೃಭಾಷೆ ಕನ್ನಡವಾದರೂ ಕನ್ನಡ ಭಾಷೆಯ ನಡುವೆ ನುಸುಳಿದ ಅದೆಷ್ಟೋ ಆಂಗ್ಲಪದಗಳು ಕನ್ನಡವಾಗಿಯೇ ನಮ್ಮ ಮಾತಲ್ಲಿ ಬೆರೆತು ಹೋಗಿದೆ. ಅದೆಷ್ಟೋ ಮಂದಿ ಪೋಷಕರು ನಮ್ಮ ಮಗುವಿಗೆ ಕನ್ನಡ ಬರುವುದಿಲ್ಲ ಎಂದು ಹೆಮ್ಮೆ ಹೇಳಿಕೊಳ್ಳುವ ಹೀನಾಯ ಸ್ಥಿತಿಯಲ್ಲಿ ನಾವಿದ್ದೇವೆ. ಅಲ್ಲದೇ ಕನ್ನಡ ಒಳಿವಿಗಾಗಿ ಹೋರಾಟ ಮಾಡುವ ಪರಿಸ್ಥಿತಿಯೂ ಎದುರಾಗಿದೆ. ಆದರೆ ಪ್ರತಿಯೊಬ್ಬ ಕನ್ನಡಿಗನಲ್ಲೂ ಭಾಷೆಯ ಬಗ್ಗೆ ಆತ್ಮಗೌರವ ಮೂಡಿದರೆ ಯಾವ ಹೋರಾಟವು ಅಗತ್ಯವಿಲ್ಲ ಎನ್ನುತ್ತಿದ್ದಾರೆ ರಂಗಸ್ವಾಮಿ ಮೂಕನಹಳ್ಳಿ. ಕನ್ನಡ ರಾಜ್ಯೋತ್ಸವದ ದಿನವಾದ ಇಂದು ಅವರು ಕನ್ನಡ ಭಾಷಾಭಿಮಾನ ಹೇಗೆ ಬಿಂಬಿಸಬೇಕು ಎಂಬುದನ್ನು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಅವರ ಬರಹ ಇಲ್ಲಿದೆ.

ರಂಗಸ್ವಾಮಿ ಮೂಕನಹಳ್ಳಿ ಬರಹ

ನಾವ್ಯಾರೂ ವೇಳೆ ಎಷ್ಟು?, ವಾರಾಂತ್ಯ ಎಲ್ಲಿಗೆ ಹೋಗೋಣ?, ಕಾಲುಚೀಲ ಎಲ್ಲಿ? ಎಂದು ಕೇಳುವುದಿಲ್ಲ. ಆ ಜಾಗದಲ್ಲಿ ಇಂಗ್ಲಿಷ್ ಪದಗಳು ನುಸುಳಿವೆ. ಟೈಮ್ ಎಷ್ಟು? ವೀಕೆಂಡ್ ಎಲ್ಲಿಗೆ ಹೋಗೋಣ? ಸಾಕ್ಸ್ ಎಲ್ಲಿ? ಹೀಗೆ ಪಟ್ಟಿ ದೊಡ್ಡದು. ಮಾತೃಭಾಷೆ ಕನ್ನಡವಾಗಿದ್ದವರ ಮನೆಯಲ್ಲಿ ಕೂಡ ಇಂದಿಗೆ ಅವರ ಮನೆ ಮಕ್ಕಳು ಕನ್ನಡ ಓದಲು, ಬರೆಯಲು ಬಾರದವರಾಗಿದ್ದರೆ! ಅವರ ಪೋಷಕರು ‘ನಮ್ಮ ಮಗ /ಮಗಳಿಗೆ ಕನ್ನಡ ಬರುವುದಿಲ್ಲ‘ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಜಗತ್ತಿನ ೧/೩ ಭಾಗ ದೇಶಗಳನ್ನು ನೋಡುವ ಅವಕಾಶ ಭಗವಂತ ನೀಡಿದ, ಪ್ರಮಾಣ ಮಾಡಿ ಹೇಳುತ್ತೇನೆ ಮಾತೃ ಭಾಷೆ ಓದಲು, ಬರೆಯಲು ಬರುವುದಿಲ್ಲ ಎನ್ನುವುದನ್ನು ಹೆಮ್ಮೆಯಿಂದ ಹೇಳುವ ಇನ್ನೊಂದು ಜನಾಂಗ ನಾನು ನೋಡಿಲ್ಲ. ನಾವು, ನಮ್ಮದು ಎನ್ನುವ ಹೆಮ್ಮೆ ನಮಗಿಲ್ಲದ ಮೇಲೆ ಅದು ಬೇರೆಯವರಿಗೆ ಹೇಗೆ ಬಂದೀತು? ಅವರೇಕೆ ನಮ್ಮನ್ನು ಗೌರವಿಸುತ್ತಾರೆ?

ಗಮನಿಸಿ: 'ವಡಾ, ದೋಸಾ, ವೈಟ್ ರೈಸ್, ತೈರು ವಡ ಎನ್ನುವುದನ್ನು ಬೇರೆಯವರಿಗಿಂತ ಹೆಚ್ಚು ಉಪಯೋಗಿಸುವುದು ನಾವೇ! ಇದನ್ನು ಬದಲಿಸಿಕೊಳ್ಳಲು ವೈಯಕ್ತಿಕ ಬದಲಾವಣೆ ಆಗಬೇಕು. ಇಲ್ಲಿ ಸಂಘಟನೆ ಕೆಲಸಕ್ಕೆ ಬರುವುದಿಲ್ಲ

ಯಾವುದೇ ಒಂದು ಪದ ಜನಸಾಮಾನ್ಯನ ಮನದಲ್ಲಿ ಅಚ್ಚಾಗುವ ಮುನ್ನ ಅದಕ್ಕೊಂದು ಕನ್ನಡ ಪದ ಸೃಷ್ಟಿಯಾಗಬೇಕು. ಇಮೇಲ್ ಜನ ಮಾಸದಲ್ಲಿ ಕುಳಿತ ನಂತರ ನಾವೆಷ್ಟೇ ಮಿಂಚಂಚೆ ಎಂದರೂ ಅದು ಮಿಂಚಿನಂತೆ ಕ್ಷಣ ಮಾತ್ರದಲ್ಲಿ ಜನ ಮಾಸದಿಂದ ಮಾಯವಾಗುತ್ತದೆ.

ಜಪಾನ್, ಜರ್ಮನಿ, ಫ್ರಾನ್ಸ್, ಸ್ಪೇನ್‌ನಂತಹ ದೇಶಗಳಲ್ಲಿ ಕಲಿಕೆ ಇರುವುದು ಅವರವರ ಮಾತೃ ಭಾಷೆಯಲ್ಲಿ! ನಾನು ಮಾತ್ರ ಇಂಗ್ಲಿಷ್ ಬಂದವನು ಬುದ್ದಿವಂತ ಎನ್ನುವ ಗ್ರಹಿಕೆಯಲ್ಲಿ ಇನ್ನೂ ಕುಳಿತಿದ್ದೇವೆ. ಇಂಗ್ಲಿಷ್ ಬೇಕು, ಬೇರೆ ಭಾಷೆಗಳೂ ಬೇಕು. ಎಷ್ಟು ಭಾಷೆ ಕಲಿತರೆ ಅಷ್ಟೂ ಒಳ್ಳೆಯದು. ಆದರೆ ಕನ್ನಡ ಬದುಕಿನ ಭಾಷೆ, ಮನಸ್ಸಿನ ಭಾಷೆ. ಎಲ್ಲಾ ಕನ್ನಡಿಗರೂ ಇವತ್ತಿನಿಂದ ವ್ಯವಹಾರಿಕ ಪ್ರಪಂಚದಲ್ಲಿ ಕನ್ನಡ ಬಿಟ್ಟು ಬೇರೆ ಭಾಷೆ ಉಪಯೋಗಿಸುವುದಿಲ್ಲ ಎನ್ನುವ ನಿರ್ಧಾರ ತೆಗೆದುಕೊಂಡರೆ ಸಾಕು. ಬೇರಾವ ಕನ್ನಡ ಸಂಘಟನೆಗಳು ಕೂಡ ಬೇಡವಾಗುತ್ತವೆ. ಒತ್ತಾಯ , ಹೋರಾಟದಿಂದ ಪರಿಸ್ಥಿತಿ ಬದಲಾಗುವುದಿಲ್ಲ , ಬದಲಿಗೆ ವ್ಯಕ್ತಿ , ಸಂಘಂಟನೆಗಳು ಬಲವಾಗುತ್ತವೆ ಅಷ್ಟೇ , ಅದರಿಂದ ಕನ್ನಡಕ್ಕೆ ಯಾವ ಉಪಯೋಗವೂ ಆಗುವುದಿಲ್ಲ.

ಕನ್ನಡ ಉಳಿಸಲು, ಬೆಳೆಸಲು ಯಾರೂ ಬೇಕಾಗಿಲ್ಲ. ಹೆಣಗಬೇಕಾಗಿಲ್ಲ, ತಿಣುಕಬೇಕಾಗಿಲ್ಲ. ಕನ್ನಡ ನನ್ನ ಭಾಷೆ ಎನ್ನುವ ಆತ್ಮಗೌರವ ಪ್ರತಿಯೊಬ್ಬ ಕನ್ನಡಿಗನಲ್ಲೂ ಬಂದರೆ ಸಾಕು! ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

ಇಂದು (ನವೆಂಬರ್ 1) ಬೆಳಿಗ್ಗೆ ಅವರು ಈ ಪೋಸ್ಟ್ ಹಾಕಿದ್ದು, ಈಗಾಗಲೇ ಹಲವರು ವೀಕ್ಷಿಸಿದ್ದಾರೆ. 70ಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದು, 10 ಮಂದಿ ಇವರ ಪೋಸ್ಟ್ ಅನ್ನು ಶೇರ್ ಮಾಡಿದ್ದಾರೆ. ಕೆಲವರು ಕಾಮೆಂಟ್ ಮಾಡಿದ್ದಾರೆ. ಆ ಕಾಮೆಂಟ್‌ನಲ್ಲಿ ಒಂದು ಕಾಮೆಂಟ್ ಹೀಗಿದೆ. 

ಕನ್ನಡ ಇಂಪು ಕೇಳಲು ಚೆಂದ 

‘ಹೌದು ನಿಜ. ಮಾತೃಭಾಷೆ ಗೊತ್ತಿಲ್ಲ ಎನ್ನುವುದನ್ನು ಅಷ್ಟೊಂದು ಹೆಮ್ಮೆಯಿಂದ ಹೇಳಿಕೊಳ್ಳುವವರನ್ನು ಕಂಡರೆ ಏನು ಹೇಳಬೇಕೋ ತಿಳಿಯುವುದಿಲ್ಲ. ತನ್ನ ತಂಗಿಯ ಮದುವೆ ಆಮಂತ್ರಣ ಕೊಡಲು ಬಂದ ಪರಿಚಿತರೊಬ್ಬರು "ನೆಕ್ಸ್ಟ್ ವೀಕ್ ನಂ ಸಿಸ್ಟರ್ದು ಮ್ಯಾರೇಜ್ ಇದೆ. ಅದಕ್ಕೆ ನಿಮ್ಮನ್ನು ಇನ್ವೈಟ್ ಮಾಡಿಹೋಗೋಣ ಅಂತ ಬಂದೆ. ನೀವು ತಪ್ಪದೇ ಬರ್ಬೇಕು. ಇಲ್ಲಿಂದಲೇ ವೆಹಿಕಲ್ ಅರೇಂಜ್ ಮಾಡಿದೀನಿ. ಮಾರ್ನಿಂಗ್ ಸಿಕ್ಸ್ ಓ ಕ್ಲಾಕ್ ಗೆ ರೆಡಿ ಆಗಿರಿ. ನಿಮ್ಮ ಮನೆಯಿಂದಲೇ ಪಿಕ್ ಮಾಡ್ತೀವಿ" ಎಂದ. ನಾನು ಬೇಗ ಎದ್ದು ರೆಡಿಯಾಗದಿದ್ದರೆ ಮಲಗಿದಲ್ಲಿಂದಲೇ ಎತ್ತಿಕೊಂಡು ಹೋಗುತ್ತಾರಾ ಅಂತ ಭಯವಾಗ್ತಿದೆ! ಅದರ ಬದಲು "ಮುಂದಿನ ವಾರ ನನ್ನ ತಂಗಿಯ ಮದುವೆ ಇದೆ. ಅದಕ್ಕೆ ನಿಮ್ಮನ್ನು ಕರೆದುಹೋಗೋಣ ಅಂತ ಬಂದೆ. ನೀವು ತಪ್ಪದೇ ಬರಬೇಕು. ಇಲ್ಲಿಂದಲೇ ವಾಹನದ ವ್ಯವಸ್ಥೆ ಮಾಡಿದ್ದೇನೆ‌. ಬೆಳಿಗ್ಗೆ ಆರು ಗಂಟೆಗೆ ನಿಮ್ಮ ಮನೆಯಿಂದಲೇ ಕರೆದೊಯ್ಯುವ ವ್ಯವಸ್ಥೆ ಮಾಡಿದ್ದೇವೆ" ಎಂದಿದ್ದರೆ ಕೇಳಲು ಎಷ್ಟು ಇಂಪಾಗಿರುತ್ತಿತ್ತು‘ ಎಂದು ಶ್ರೀನಿವಾಸ ಮೂರ್ತಿ ಎನ್ನುವವರು ಕಾಮೆಂಟ್ ಮಾಡಿದ್ದಾರೆ. 

Whats_app_banner