ಎಐ ಪ್ರಶ್ನೆಪತ್ರಿಕೆ ವಿವಾದ: ಪೈಥಾನ್ ಪ್ರೋಗಾಮಿಂಗ್ ಬಗ್ಗೆ 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಶ್ನೆ, ಆಘಾತ ವ್ಯಕ್ತಪಡಿಸಿದ ಪ್ರೊಫೆಸರ್
Nov 21, 2024 05:14 PM IST
ಪೈಥಾನ್ ಪ್ರೋಗಾಮಿಂಗ್ ಬಗ್ಗೆ 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಶ್ನೆ, ಆಘಾತ ವ್ಯಕ್ತಪಡಿಸಿದ ಪ್ರೊಫೆಸರ್ (ಸಾಂದರ್ಭಿಕ ಚಿತ್ರ)
ಬೆಂಗಳೂರು: 10ನೇ ತರಗತಿ ವಿದ್ಯಾರ್ಥಿಗಳಿಗೆ ಸಿಲಿಕಾನ್ ಸಿಟಿಯ ಶಾಲೆಯೊಂದು ತಯಾರಿಸಿರುವ ಎಐ ಪ್ರಶ್ನೆ ಪತ್ರಿಕೆಯನ್ನು ನೋಡಿ ಪ್ರೊಫೆಸರ್ ಒಬ್ಬರು ಶಾಕ್ ಆಗಿದ್ದಾರೆ. ಇಷ್ಟು ಚಿಕ್ಕ ವಯಸ್ಸಿಗೆ ಆ ಮಕ್ಕಳಿಗೆ ಪೈಥಾನ್ ಪ್ರೋಗಾಮಿಂಗ್ ಬಗ್ಗೆ ಕಲಿಸುವುದು ಅಗತ್ಯವೇ ಎಂದು ಪ್ರಶ್ನಿಸಿದ್ದಾರೆ?
ಬೆಂಗಳೂರು: ಶಿಕ್ಷಣ ವ್ಯವಸ್ಥೆ ಸಾಕಷ್ಟು ಬದಲಾಗಿದೆ. ಸ್ಪರ್ಧೆಯೂ ಹೆಚ್ಚಾಗುತ್ತಿದೆ. ಜೊತೆಗೆ ವಿದ್ಯಾರ್ಥಿಗಳ ಮೇಲೆ ಹೊರೆ ಹೆಚ್ಚಾಗುತ್ತಿದೆ. ಎಲ್‌ಕೆಜಿ, ಯುಕೆಜಿಗೆ ಸ್ಲೇಟು ಬಳಪ ಹಿಡಿದು ಹೋಗುತ್ತಿದ್ದ ಕಾಲ ಬದಲಾಗಿದೆ. ಈಗ ಎಲ್‌ಕೆಜಿ ಮಟ್ಟದಿಂದಲೇ ಮಕ್ಕಳಿಗೆ ಶಾಲೆಯಲ್ಲಿ ಇಂಗ್ಲೀಷ್, ಹಿಂದಿ ಭಾಷೆಗಳನ್ನು ಕಲಿಸಲಾಗುತ್ತಿದೆ. ಮಕ್ಕಳ ಬೆನ್ನ ಮೇಲೆ ಕೆಜಿಗಟ್ಟಲೆ ಪುಸ್ತಕದ ಬ್ಯಾಗ್, ಸಿಲಬಸ್, ಪರೀಕ್ಷೆ ತಯಾರಿ, ಅಸೈನ್‌ಮೆಂಟ್ ಎಲ್ಲವೂ ಅನಿವಾರ್ಯ ಎನಿಸಿದೆ.
ಶಾಲೆಗಳಲ್ಲಿ ಎಐ ಅಳವಡಿಕೆ ಬಗ್ಗೆ ಪರ ವಿರೋಧ ಚರ್ಚೆ
ಈಗ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ (Artificial intelligence)ಮೊರೆ ಹೋಗಲಾಗಿದೆ. ಎಐ ಅಷ್ಟು ಅಗತ್ಯವೇ ಎಂಬುದರ ಬಗ್ಗೆ ಪರ ವಿರೋಧ ಚರ್ಚೆಯೂ ನಡೆಯುತ್ತಿದೆ. ಇದರ ನಡುವೆ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಶಾಲೆಯಿಂದ ಐಎ ಸಹಾಯದ ಬಗ್ಗೆ ರಚಿಸಿರುವ ಪ್ರಶ್ನೆ ಪತ್ರಿಕೆ ವಿವಾದ ಸೃಷ್ಟಿಸಿದೆ. ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರು ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ಅಸಿಸ್ಟೆಂಟ್ ಪ್ರೊಫೆಸರ್ ದೀಪಕ್ ಸುಬ್ರಮಣಿ ಎನ್ನುವವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಶಾಲೆ ಸಿದ್ದಪಡಿಸಿದ ಪ್ರಶ್ನೆ ಪತ್ರಿಕೆಯನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಈಗ ವೈರಲ್ ಆಗುತ್ತಿದೆ. ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪೈಥಾನ್ ಪ್ರೋಗಾಮಿಂಗ್ ಬಗ್ಗೆ ಉತ್ತರ ಬರೆಯುವಂತೆ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಲಾಗಿದೆ.
ಇತ್ತೀಚೆಗೆ ನಮ್ಮ ಸಂಬಂಧಿಯೊಬ್ಬರು ನನಗೆ ಕರೆ ಮಾಡಿ 10ನೇ ಕ್ಲಾಸ್‌ನಲ್ಲಿ ಓದುತ್ತಿರುವ ತಮ್ಮ ಮಗನ ಎಐ ಪರೀಕ್ಷೆಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದರು. ನಾನು ಪ್ರಶ್ನೆ ಪತ್ರಿಕೆಯನ್ನು ಕಳಿಸುವಂತೆ ಅವರಿಗೆ ಮನವಿ ಮಾಡಿದೆ, ಆದರೆ ಅದನ್ನು ನೋಡಿದ ನಂತರ ನನಗೆ ಬಹಳ ಶಾಕ್ ಆಯ್ತು. 4 ಅಂಕಗಳಿಗೆ ಪೈಥಾನ್ ಪ್ರೋಗಾಮಿಂಗ್ ಬಗ್ಗೆ ಉತ್ತರ ಬರೆಯುವಂತೆ ಪ್ರಶ್ನೆ ಕೇಳಲಾಗಿದೆ. ಅದನ್ನು ಹತ್ತನೇ ತರಗತಿ ಮಕ್ಕಳು ಹೇಗೆ ಬರೆಯಲು ಸಾಧ್ಯ? ಶಾಲೆ ನಿಜಕ್ಕೂ ಈ ವಿಚಾರದ ಬಗ್ಗೆ ಅಷ್ಟು ಗಂಭೀರವಾಗಿದೆಯೇ ಎಂದು ಪ್ರಶ್ನಿಸಿದ್ದಾರೆ. Write a Python Program for simple sentiment analysis, Write Python Program for simple spam detection ಸೇರಿದಂತೆ ಇನ್ನೂ ಅನೇಕ ಪ್ರಶ್ನೆಗಳನ್ನು ಪ್ರಶ್ನೆ ಪತ್ರಿಕೆಯಲ್ಲಿ ಕೇಳಲಾಗಿದೆ.
ಎಐ ಪ್ರಶ್ನೆ ಪತ್ರಿಕೆ ವಿದ್ಯಾರ್ಥಿಗಳ ದಾರಿ ತಪ್ಪಿಸಲು ಪ್ರೇರೇಪಿಸುತ್ತಿದೆ ಎಂದ ನೆಟಿಜನ್ಸ್
ಪ್ರಸ್ತುತ ಬೆಂಗಳೂರಿನ ಅನೇಕ ಶಾಲೆಗಳಲ್ಲಿ ಎಐ ಕುರಿತಾದ ವಿಷಯಗಳನ್ನು ತಮ್ಮ ಸಿಲಬಸ್‌ನಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ. ಮಕ್ಕಳಿಗೆ ಈ ಸಬ್ಜೆಕ್ಟ್‌ಗಳು ಬಹಳ ಅವಶ್ಯಕ ಎಂದು ಕೆಲವರು ವಾದ ಮಾಡಿದರೆ, ಕೆಲವರು ಮಕ್ಕಳಿಗೆ ಇದು ಬಹಳ ಹೊರೆಯಾಗುತ್ತದೆ ಎಂದು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪೈಥಾನ್ ಪ್ರೋಗಾಮಿಂಗ್ ಬಗ್ಗೆ ಒಂದೆರಡು ಲೈನ್‌ಗಳಲ್ಲಿ ಬರೆಯಬಹುದು. ಆದರೆ ಅದು ಮಕ್ಕಳು ಕಲಿಯವಂಥ ವಿಷಯವಲ್ಲ, ಮಕ್ಕಳು ವಿಜ್ಞಾನ, ಗಣಿತ, ಭೌತಶಾಸ್ತ್ರದ ಪ್ರಯೋಗದ ಬಗ್ಗೆ ಕಲಿಯಬೇಕೇ ಹೊರತು ಪೈಥಾನ್ ಪ್ರೋಗಾಮಿಂಗ್ ಬಗ್ಗೆ ಅಲ್ಲ ಎಂದು ಒಬ್ಬರು ಯೂಸರ್ ಕಾಮೆಂಟ್ ಮಾಡಿದರೆ, ಇಷ್ಟು ಚಿಕ್ಕ ವಯಸ್ಸಿಗೆ ಮಕ್ಕಳಿಗೆ ಎಐ ವಿಷಯದ ಬಗ್ಗೆ ಪಾಠ ಮಾಡುವುದು, ಅವರಿಗೆ ಈಗಲೇ ಅದರ ಬಗ್ಗೆ ಇರುವ ಕುತೂಹಲವನ್ನು ಕೊಂದತೆ ಆಗುತ್ತದೆ. ಇಂಥಹ ಪ್ರಶ್ನೆಗಳು ವಿದ್ಯಾರ್ಥಿಗಳಿಗೆ ಪಕೋಡಾ, ಚಹಾ ಉದ್ಯೋಗವನ್ನು ಪ್ರೇರೇಪಿಸುವಂತೆ ಮಾಡುತ್ತಿರುವ ತಂತ್ರ ಎಂದು ಮತ್ತೊಬ್ಬ ಯೂಸರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಏನಿದು ಪೈಥಾನ್ ಪ್ರೋಗಾಮಿಂಗ್?
ಪೈಥಾನ್, ವಿಶ್ವದ ಅಗ್ರ ಪ್ರೋಗ್ರಾಮಿಂಗ್ ಭಾಷೆಗಳಲ್ಲಿ ಒಂದಾಗಿದೆ, ಇದನ್ನು ಎಐ, ಮೆಷಿನ್ ಲರ್ನಿಂಗ್, ಡೇಟಾ ಸೈನ್ಸ್ ಮತ್ತು ವೆಬ್ ಡೆವಲಪ್‌ಮೆಂಟ್‌ನಂತಹ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಪೈಥಾನ್ ಭಾಷೆಯನ್ನು ಅನೇಕ ಕ್ಷೇತ್ರಗಳಲ್ಲಿ ಬಳಸುವುದರಿಂದ ಪೈಥಾನ್ ಡೆವಲಪರ್‌ಗಳಿಗೆ ಬಹಳ ಬೇಡಿಕೆ ಇದೆ.