ಬೆಂಗಳೂರು ಚರ್ಚ್ ರಸ್ತೆ ದುರಸ್ತಿ ಕಾರ್ಯ ಆರಂಭ; ಸೋಮವಾರದಿಂದ ಒಂದು ವಾರ ವಾಹನ ಸಂಚಾರ ಬಂದ್, ಆತಂಕದಲ್ಲಿ ವ್ಯಾಪಾರಿಗಳು
Nov 20, 2024 03:52 PM IST
ದುರಸ್ತಿ ಕಾರ್ಯ ಹಿನ್ನೆಲೆ ಬೆಂಗಳೂರು ಚರ್ಚ್ ಸ್ಟ್ರೀಟ್ ಒಂದು ವಾರದ ಕಾಲ ಬಂದ್ ಆಗಿದೆ
ಬೆಂಗಳೂರು ಚರ್ಚ್ ಸ್ಟ್ರೀಟ್ ದುರಸ್ತಿ ಕಾರ್ಯ ಆರಂಭವಾಗಿದ್ದು ಒಂದು ವಾರದ ಕಾಲ ವಾಹನ ಸಂಚಾರ ಬಂದ್ ಮಾಡಲಾಗಿದೆ. ಖಾಸಗಿ ಸಂಸ್ಥೆಯೊಂದು 2 ವರ್ಷಗಳಿಂದ ಚರ್ಚ್ ರಸ್ತೆ ಅಭಿವೃದ್ಧಿ ಜವಾಬ್ದಾರಿ ವಹಿಸಿಕೊಂಡಿದ್ದು ಒಂದು ವಾರದ ಕಾಲ ಬಂದ್ ಮಾಡಿದರೆ ವ್ಯಾಪಾರಕ್ಕೆ ಸಮಸ್ಯೆಯಾಗುತ್ತದೆ ಎಂದು ವ್ಯಾಪಾರಿಗಳು ಆತಂಕ ಹೊರ ಹಾಕಿದ್ದಾರೆ.
ಬೆಂಗಳೂರು: ಪ್ರಮುಖ ರಸ್ತೆಯಾದ ಚರ್ಚ್ ಸ್ಟ್ರೀಟ್ ದುರಸ್ತಿ ಕಾರ್ಯ ಆರಂಭವಾಗಿದ್ದು ಸೋಮವಾರದಿಂದ ಒಂದು ವಾರದ ಕಾಲ ವಾಹನ ಸಂಚಾರವನ್ನು ಬಂದ್ ಮಾಡಲಾಗಿದೆ. ಸುಮಾರು 2 ವರ್ಷಗಳಿಂದ ಚರ್ಚ್ ರಸ್ತೆ ನಿರ್ವಹಣೆ ಮಾಡುತ್ತಿರುವ ಖಾಸಗಿ ಸಂಸ್ಥೆಯೊಂದು ರಿಪೇರಿ ಕಾರ್ಯ ಆರಂಭಿಸಿದೆ.
ರಸ್ತೆ ದುರಸ್ತಿ ಕಾರ್ಯದಿಂದ ವ್ಯಾಪಾರಿಗಳಿಗೆ ಆತಂಕ
ಬೆಂಗಳೂರಿನ ಪ್ರಮುಖ ಜನದಟ್ಟಣೆ ಸ್ಥಳಗಳಲ್ಲಿ ಒಂದಾದ ಚರ್ಚ್ ರಸ್ತೆ ಬಂದ್ ಆಗಿರುವುದು ವ್ಯಾಪಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಒಂದು ವಾರಗಳ ಕಾಲ ರಸ್ತೆ ಬಂದ್ ಮಾಡಿದರೆ ನಮ್ಮ ವ್ಯಾಪಾರಕ್ಕೆ ಹೊಡೆತ ಬೀಳಬಹುದು. ಈಗಾಗಲೇ ಸೋಮವಾರದಿಂದ ವ್ಯಾಪಾರ ಕಡಿಮೆ ಅಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 2 ವರ್ಷಗಳಿಂದ ಚರ್ಚ್ ರಸ್ತೆಯ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗೆ ವಹಿಸಿರುವುದಕ್ಕೆ ಸಾರ್ವಜನಿಕರು ಕೂಡಾ ಬೇಸರ ವ್ಯಕ್ತಪಡಿಸಿದ್ದಾರೆ. 2017 ರಲ್ಲಿ ಕೂಡಾ ಸುಮಾರು 6 ತಿಂಗಳ ಕಾಲ ಚರ್ಚ್ ಸ್ಟ್ರೀಟ್ ವಾಹನ ಸಂಚಾರಕ್ಕೆ ಬಂದ್ ಮಾಡಲಾಗಿತ್ತು. ಆಗಲೂ ಕೂಡಾ ಜನರು ಬಿಬಿಎಂಪಿ ವಿರುದ್ಧ ಬೇಸರ ಹೊರ ಹಾಕಿದ್ದರು. ಈಗ ಮತ್ತೆ ರಸ್ತೆ ದುರಸ್ತಿ ಕಾರ್ಯ ಆರಂಭಿಸಿ 1 ವಾರಗಳ ಕಾಲ ರಸ್ತೆ ಬಂದ್ ಮಾಡಲಾಗಿದೆ.
ಅನ್‌ಬಾಕ್ಸಿಂಗ್ ಬಿಎಲ್‌ಆರ್ ಫೌಂಡೇಶನ್ ಎಂಬ ಸಂಸ್ಥೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅನುಮತಿ ಪಡೆದು ನಮ್ಮ ಬೆಂಗಳೂರು, ನಮ್ಮ ಕೊಡುಗೆ ಯೋಜನೆಯಡಿ 2 ವರ್ಷಗಳ ಕಾಲ ಚರ್ಚ್ ಸ್ಟ್ರೀಟ್ ಅನ್ನು ದತ್ತು ತೆಗೆದುಕೊಂಡಿದೆ. ಈ ಒಪ್ಪಂದದ ಪ್ರಕಾರ ಸಂಸ್ಥೆಯು ಚರ್ಚ್ ಸ್ಟ್ರೀಟ್‌ನ ಮೂಲ ಸೌಕರ್ಯವನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ. ರಸ್ತೆ ಮತ್ತು ಫುಟ್‌ಪಾತ್ ದುರಸ್ತಿ, ಬೀದಿ ದೀಪಗಳನ್ನು ನವೀಕರಿಸುವುದು, ಕಸ ವಿಲೇವಾರಿ ಮತ್ತು ಒಳಚರಂಡಿಯನ್ನು ಸುಧಾರಿಸುವುದು, ಲಾನ್ ನಿರ್ಮಿಸುವುದು ಇದರಲ್ಲಿ ಒಳಗೊಂಡಿದೆ. ಸಂಸ್ಥೆ, ಚರ್ಚ್ ಸ್ಟ್ರೀಟ್ ಮಾತ್ರವಲ್ಲದೆ ರಿಚ್ಮಂಡ್ ರಸ್ತೆ ಮತ್ತು ವಿಠಲ್ ಮಲ್ಯ ರಸ್ತೆಯನ್ನು ಸಹ ದತ್ತು ತೆಗೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಈ ರಸ್ತೆಗಳ ಕಾಮಗಾರಿಯನ್ನೂ ಕೈಗೆತ್ತಿಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.
ಬಿಬಿಎಂಪಿ ವಿರುದ್ಧ, ಬೇಸರ ವ್ಯಕ್ತಪಡಿಸಿದ ವ್ಯಾಪಾರಿಗಳು ಸಾರ್ವಜನಿಕರು
ರಸ್ತೆ ನಿರ್ವಹಣೆಗೆ ಪೌರ ಸಂಸ್ಥೆ ಆಡಳಿತಾತ್ಮಕ ಅನುಮೋದನೆ ನೀಡಿದೆ ಅನ್‌ಬಾಕ್ಸಿಂಗ್ ಬಿಎಲ್‌ಆರ್‌ನ ಭಾಗವಾಗಿರುವ ಖಾಸಗಿ ಏಜೆನ್ಸಿಯು ದುರಸ್ತಿ ಕಾರ್ಯವನ್ನು ನಿರ್ವಸುವುದರಿಂದ ಬಿಬಿಎಂಪಿಗೆ ಸುಮಾರು 3 ಕೋಟಿ ರೂ ಹಣ ಉಳಿತಾಯವಾಗಲಿದೆ ಎಂದು ಬಿಬಿಎಂಪಿ ವಲಯ ಆಯುಕ್ತ ಸ್ನೇಹಲ್ ಆರ್ ಹೇಳಿದ್ದಾರೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಕರ್ನಾಟಕ ಪ್ರಗತಿಪರ ರಸ್ತೆ ವ್ಯಾಪಾರಿಗಳ ಸಂಘಟನೆಯ ಸದಸ್ಯ ವಿನಯ್ ಶ್ರೀನಿವಾಸ್, ನಗರದ ಎಲ್ಲಾ ಬೀದಿಗಳನ್ನು ನಿರ್ವಹಣೆ ಮಾಡುವುದು ನಾಗರಿಕ ಸಂಸ್ಥೆಯ ಜವಾಬ್ದಾರಿಯಾಗಿದೆ. ಈ ಜವಾಬ್ದಾರಿಯನ್ನು ಯಾವುದೇ ಖಾಸಗಿ ಸಂಸ್ಥೆಗೆ ಒಪ್ಪಿಸಲಾಗುವುದಿಲ್ಲ. ಬಿಬಿಎಂಪಿಯು ಯೋಜನೆಯ ಬಗ್ಗೆ ಸ್ಪಷ್ಟತೆ ನೀಡಬೇಕು ಎಂದಿದ್ದಾರೆ.
ದುರಸ್ತಿಗೆ ಒಂದು ವಾರ ಸಾಕು ಎಂದು ಸಂಸ್ಥೆ ಹೇಳಿದೆ. ಆದರೆ ಅದು ಒಂದು ವಾರದಲ್ಲಿ ಮುಗಿಯದೆ ಇರಬಹುದು. ಹೀಗೆ ಆದರೆ ವ್ಯಾಪಾರಕ್ಕೆ ಸಮಸ್ಯೆ ಆಗುತ್ತದೆ. ಕೆಲಸವನ್ನು ನಿಗದಿತ ಸಮಯಕ್ಕೆ ಮುಗಿಸಿ ಆದಷ್ಟು ಬೇಗ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ವ್ಯಾಪಾರಿಗಳು ಮನವಿ ಮಾಡಿದ್ದಾರೆ. ಚರ್ಚ್ ರಸ್ತೆಯಲ್ಲಿರುವ ರೆಸ್ಟೋರೆಂಟ್ ಒಂದರ ಮಾಲೀಕ ಗುರುರಾಜ್ ಮಾಧ್ಯಮಗಳೊಂದಿಗೆ ಮಾತನಾಡಿ, ಕಳೆದ ಒಂದೂವರೆ ತಿಂಗಳಿಂದ ವ್ಯಾಪಾರ ಕಡಿಮೆ ಆಗಿದೆ. ಈ ವಾರ ರಸ್ತೆ ರಿಪೇರಿ ಆಗುತ್ತಿರುವುದರಿಂದ ಇನ್ನಷ್ಟು ವ್ಯಾಪಾರ ಕುಸಿದಿದೆ. ವಾಹನ ನಿಲುಗಡೆಗೆ ಸ್ಥಳವಿಲ್ಲದ ಕಾರಣ ಜನರು ಇಲ್ಲಿಗೆ ಬರುತ್ತಿಲ್ಲ. ಆದರೆ ರಸ್ತೆ ಚೆನ್ನಾಗಿದೆ, ಅದರನ್ನು ನವೀಕರಿಸುವ ಅಗತ್ಯವಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.