ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್: ಇದು ಪೊಲೀಸರಿಂದ ಆದ ಹತ್ಯೆ ಎಂದ ಚಿಂತಕ ಬಂಜಗೆರೆ ಜಯಪ್ರಕಾಶ್, ನ್ಯಾಯಾಂಗ ತನಿಖೆಗೆ ಆಗ್ರಹ
ಹೆಬ್ರಿ ತಾಲೂಕು ಕಬ್ಬಿನಾಲೆ ಸಮೀಪ ವಿಕ್ರಂ ಗೌಡ ಹತನಾಗಿದ್ದು, ಆತನ ಸಾವಿನ ಸುತ್ತ ಹಲವು ಪ್ರಶ್ನೆಗಳು ಮೂಡಿವೆ. ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ರಾಜ್ಯಮಟ್ಟದ ಸಮಿತಿಯ ಸದಸ್ಯ ಬಂಜಗೆರೆ ಜಯಪ್ರಕಾಶ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಇದು ಎನ್‌ಕೌಂಟರ್ ಅಲ್ಲ, ಹತ್ಯೆ ಎಂದು ಹೇಳಿದ್ದು ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಬೆಂಗಳೂರು: ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕು ಕಬ್ಬಿನಾಲೆ ಸಮೀಪ ಸೋಮವಾರ (ನವೆಂಬರ್ 18) ರಾತ್ರಿ ನಕ್ಸಲ್ ನಿಗ್ರಹ ಪಡೆಯ ಜತೆಗಿನ ಗುಂಡಿನ ಚಕಮಕಿಯಲ್ಲಿ ವಿಕ್ರಂ ಗೌಡ ಹತನಾಗಿದ್ದಾನೆ ಎಂದು ಕರ್ನಾಟಕದ ಗೃಹ ಸಚಿವ ಡಾ ಜಿ ಪರಮೇಶ್ವರ್ ಮತ್ತು ಆಂತರಿಕ ಭದ್ರತಾ ವಿಭಾಗದ ಐಜಿಪಿ ಡಿ ರೂಪಾ ಅವರು ಹೇಳಿದ್ದರು. ವಿಕ್ರಂ ಗೌಡ ಸಾವಿಗೆ ಸಂಬಂಧಿಸಿ ಹಲವು ಪ್ರಶ್ನೆಗಳು ಮೂಡಿದ್ದು, ಇದು ಎನ್‌ಕೌಂಟರ್ ಅಲ್ಲ, ಹತ್ಯೆ ಎಂದು ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ರಾಜ್ಯಮಟ್ಟದ ಸಮಿತಿಯ ಸದಸ್ಯ ಬಂಜಗೆರೆ ಜಯಪ್ರಕಾಶ್ ಹೇಳಿದ್ದು, ನ್ಯಾಯಾಂಗ ತನಿಖೆಗೆ ಒತ್ತಾಯ ಮಾಡಿದ್ಧಾರೆ.
ಇದು ಎನ್‌ಕೌಂಟರ್ ಅಲ್ಲ, ಹತ್ಯೆ ಎಂದ ಬಂಜಗೆರೆ ಜಯಪ್ರಕಾಶ್
ಇದನ್ನು ಹತ್ಯೆ ಎಂದೇ ಕರೆಯುತ್ತೇವೆ. ಪೊಲೀಸರ ಹೇಳಿಕೆ ಮಾತ್ರ ಆಧರಿಸಿ ಇದು ಎನ್‌ಕೌಂಟರ್ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅದಕ್ಕೆ ನಾವು ತಯಾರಿಲ್ಲ. ಈ ಚಳವಳಿಗಾರರು ಇತರೆ ಅಪರಾಧಿಗಳಂತಲ್ಲ. ಇವರನ್ನು ರಾಜಕೀಯ ಹೋರಾಟಗಾರರು ಎಂದೇ ಪರಿಗಣಿಸಬೇಕು. ಆದರೆ ಹೋರಾಟಕ್ಕೆ ಅವರು ಆಯ್ಕೆ ಮಾಡಿಕೊಂಡ ದಾರಿ ಸರಿಯಾದುದಲ್ಲ. ಹಾಗೆಂದು ಅವರನ್ನು ಈ ರೀತಿ ಹತ್ಯೆ ಮಾಡುವ ಕ್ರಮವೂ ಸರಿಯಲ್ಲ. ಸರ್ಕಾರ ಕೂಡಲೇ ಈ ರೀತಿ ಕಾರ್ಯಾಚರಣೆಯನ್ನು ನಿಲ್ಲಿಸಬೇಕು ಎಂದು ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ನೀತಿಯ ಅನುಷ್ಠಾನದ ಮೇಲ್ವಿಚಾರಣೆಯ ಕರ್ನಾಟಕ ರಾಜ್ಯ ಸಮಿತಿಯ ಸದಸ್ಯ ಬಂಜಗೆರೆ ಜಯಪ್ರಕಾಶ್ ಆಗ್ರಹಿಸಿದ್ದಾಗಿ ಪ್ರಜಾವಾಣಿ ವರದಿ ಮಾಡಿದೆ.
ವಿಕ್ರಂ ಗೌಡ ಮತ್ತು ಅವರ ತಂಡಕ್ಕೆ ಶರಣಾಗಬೇಕು ಎಂದು ಹಲವು ತಿಂಗಳ ಹಿಂದೆಯೇ ಸಮಿತಿಯ ಕಡೆಯಿಂದ ಪತ್ರ ರವಾನೆಯಾಗಿತ್ತು. ಆದರೆ ಅವರು ಯಾರೂ ನಮ್ಮನ್ನು ಸಂಪರ್ಕ ಮಾಡಿಲ್ಲ. ನಮ್ಮ ಪತ್ರ ಅವರಿಗೆ ತಲುಪಿದೆಯೇ ಅಥವಾ ಇಲ್ಲವೇ ಎಂಬುದೂ ನಮಗೆ ಖಚಿತವಿಲ್ಲ. ಸಶಸ್ತ್ರ ಹೋರಾಟ ಸಂವಿಧಾನ ಬಾಹಿರ. ಅದನ್ನು ಬಿಟ್ಟು ಬಿಡಿ. ಶರಣಾದರೆ ನಿಮಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸುತ್ತೇವೆ. ಸಮಾಜದ ಮುಖ್ಯವಾಹಿನಿಗೆ ಸೇರಲು ಅವಕಾಶ ಮಾಡಿಕೊಡುತ್ತೇವೆ. ಮತ್ತು ಅಲ್ಲಿದ್ದುಕೊಂಡೇ ಹೋರಾಟ ಮುಂದುವರಿಸಿ ಎಂದು ವಿಕ್ರಂ ಗೌಡ ತಂಡದ ಉಳಿದವರಿಗೂ ತಿಳಿಹೇಳುತ್ತೇನೆ ಎಂದು ಜಯಪ್ರಕಾಶ್ ಹೇಳಿದ್ದಾಗಿ ವರದಿ ವಿವರಿಸಿದೆ.
ಮಾವೋವಾದಿಗಳು ಶರಣಾಗತಿಗೆ ಬಂದಿಲ್ಲ: ಬಂಜಗೆರೆ ಜಯಪ್ರಕಾಶ್
"ಯಾವುದೇ ಮಾವೋವಾದಿ ಕಾರ್ಯಕರ್ತರು ನಮ್ಮನ್ನು ಸಂಪರ್ಕಿಸಿ ಮುಖ್ಯವಾಹಿನಿಗೆ ಬರಲು ಆಸಕ್ತಿಯನ್ನು ವ್ಯಕ್ತಪಡಿಸಿದರೆ, ನಾವು ಈ ವಿಚಾರವನ್ನು ಪೊಲೀಸರಿಗೆ ತಿಳಿಸುತ್ತೇವೆ. ಆ ಕಾರ್ಯಕರ್ತರಿಗೆ ಸುರಕ್ಷಿತ ಬದುಕಿನ ಹಾದಿಗೆ ಅನುವು ಮಾಡಿಕೊಡುವ ಸಲುವಾಗಿ ಕೂಂಬಿಂಗ್ ಕಾರ್ಯಾಚರಣೆ ನಿಲ್ಲಿಸುವುದನ್ನು ಖಚಿತಪಡಿಸುವ ತಿಳಿವಳಿಕೆಯಾಗಿತ್ತು. ವಿಕ್ರಂ ಗೌಡ ಅಥವಾ ಕರ್ನಾಟಕದ ಯಾವುದೇ ಕಾರ್ಯಕರ್ತರು ಇದುವರೆಗೆ ನಮ್ಮನ್ನು ಸಂಪರ್ಕಿಸಿಲ್ಲ ಎಂದು ಬಂಜಗೆರೆ ಜಯಪ್ರಕಾಶ್ ಹೇಳಿದ್ಧಾಗಿ ದ ಹಿಂದೂ ವರದಿ ಮಾಡಿದೆ.
ಮುಖ್ಯವಾಹಿನಿಗೆ ಸೇರುವಂತೆ ಮಾವೋವಾದಿಗಳಿಗೆ ಸರ್ಕಾರ ಮಾಡಿದ ಮನವಿಗೆ ವ್ಯಾಪಕ ಪ್ರಚಾರ ನೀಡಿದರೂ, ಯಾರೂ ಸಂಪರ್ಕಕ್ಕೆ ಸಿಕ್ಕಿರಲಿಲ್ಲ ಮತ್ತು ಯಾರೂ ಶರಣಾಗತಿಗೆ ಎಂದು ಬಂದಿರಲಿಲ್ಲ ಎಂದು ಸ್ಪಷ್ಟಪಡಿಸಿರುವ ಬಂಜಗೆರೆ ಜಯಪ್ರಕಾಶ್, ಸಮಿತಿಯಲ್ಲಿರುವ ನಾಗರಿಕ ಸಮಾಜದ ಪ್ರತಿನಿಧಿಗಳು ಹತ್ಯೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇವೆ. ಈ ಹತ್ಯೆ ಬಗ್ಗೆ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾಗಿ ದ ಹಿಂದೂ ವರದಿ ಹೇಳಿದೆ.
ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ನೀತಿಯನ್ನು ಮೊದಲ ಬಾರಿಗೆ 2015 ರಲ್ಲಿ ಅಧಿಸೂಚನೆ ಮೂಲಕ ಕರ್ನಾಟಕ ಸರ್ಕಾರ ಪ್ರಕಟಿಸಿತ್ತು. ಇದಕ್ಕಾಗಿ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಎ.ಕೆ.ಸುಬ್ಬಯ್ಯ ಮತ್ತು ದಿವಂಗತ ಗೌರಿ ಲಂಕೇಶ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಯಿತು. ಇದರಂತೆ, ಒಟ್ಟು 14 ಮಾವೋವಾದಿ ಕಾರ್ಯಕರ್ತರು ಶರಣಾದರು ಅಥವಾ ಮುಖ್ಯವಾಹಿನಿಗೆ ಸೇರಿದರು.
ಕರ್ನಾಟಕ ಸರ್ಕಾರವು 2024 ರ ಮಾರ್ಚ್‌ನಲ್ಲಿ ಪುನರ್ವಸತಿ ನೀತಿಯನ್ನು ಪರಿಷ್ಕರಿಸಿತು. ಪುನರ್ವಸತಿ ಪ್ಯಾಕೇಜ್‌ನ ವಿತ್ತೀಯ ಅಂಶವನ್ನು ಹೆಚ್ಚಿಸಿದ್ದಲ್ಲದೆ, ಸಮಿತಿಯನ್ನು ಮರು ರಚಿಸಿತ್ತು. ಬಂಜಗೆರೆ ಜಯಪ್ರಕಾಶ್ ನೇತೃತ್ವದ ಸಮಿತಿಯಲ್ಲಿ ಪತ್ರಕರ್ತ ಪಾರ್ವತೀಶ್ ಮತ್ತು ವಕೀಲ ಕೆ.ಪಿ.ಶ್ರೀಪಾಲ್ ಅವರನ್ನು ಸೇರಿಸಿತ್ತು. ಈ ಸಮಿತಿಯು ಮೇ ತಿಂಗಳಲ್ಲಿ ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಹಿಂಸಾಚಾರದ ಹಾದಿಯಿಂದ ದೂರ ಸರಿದು ಮುಖ್ಯವಾಹಿನಿಗೆ ಸೇರಬೇಕು ಎಂದು ನಕ್ಸಲ್ ಕಾರ್ಯಕರ್ತರಿಗೆ ಮನವಿ ಮಾಡಿತ್ತು. ಮಾವೋವಾದಿಗಳು ಹಾಗೆ ಮಾಡಲು ಸಿದ್ಧರಿದ್ದರೆ, ಸಮಿತಿಯನ್ನು ಸಂಪರ್ಕಿಸಬೇಕು ಎಂದು ಮನವಿ ಮಾಡಿತ್ತು.
(Naxal Vikram Gowda Encounter Kannada activist Banjagere Jayapraksh rejects police claim calls for judicial enquiry)