ಬೆಂಗಳೂರು ಸುತ್ತಮುತ್ತ ಇಂದು ಮಳೆ ಬರುತ್ತಾ, ಕರ್ನಾಟಕದ ದಕ್ಷಿಣ ಒಳನಾಡಲ್ಲಿ ಸಾಧಾರಣ ಮಳೆ ಸಾಧ್ಯತೆ, ಉತ್ತರ ಒಳನಾಡಲ್ಲಿ ಹೇಗಿರಲಿದೆ ಹವಾಮಾನ
Oct 29, 2024 06:42 AM IST
ಬೆಂಗಳೂರು ಸುತ್ತಮುತ್ತ ಇಂದು ಮಳೆ ಬರುತ್ತಾ, ಕರ್ನಾಟಕದ ದಕ್ಷಿಣ ಒಳನಾಡಲ್ಲಿ ಸಾಧಾರಣ ಮಳೆ ಸಾಧ್ಯತೆ ಎಂದಿದೆ ಹವಾಮಾನ ಮುನ್ಸೂಚನೆ. (ಸಾಂಕೇತಿಕ ಚಿತ್ರ)
Karnataka Weather: ಬೆಂಗಳೂರು ಹವಾಮಾನ ಗಮನಿಸುವುದಾದರೆ ಇಂದು (ಅಕ್ಟೋಬರ್ 29) ಬೆಂಗಳೂರು ಸುತ್ತಮುತ್ತ ಇಂದು ಮಳೆ ಬರುತ್ತಾ ಎನ್ನುವಂತಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಸೇರಿ ಕರ್ನಾಟಕದ ದಕ್ಷಿಣ ಒಳನಾಡಲ್ಲಿ ಸಾಧಾರಣ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಮುನ್ಸೂಚನೆ ವರದಿ ಹೇಳಿದೆ. ಹಾಗಾದರೆ ಉತ್ತರ ಒಳನಾಡಲ್ಲಿ ಹೇಗಿರಲಿದೆ ಹವಾಮಾನ- ಇಲ್ಲಿದೆ ಆ ವಿವರ.
ಬೆಂಗಳೂರು: ಎರಡು ಮೂರು ದಿನಗಳ ಬಿಡುವಿನ ಬಳಿಕ ಮತ್ತೆ ಇಂದು (ಅಕ್ಟೋಬರ್ 29) ಸಾಧಾರಣ ಮಳೆಯ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಬೆಂಗಳೂರು ಹವಾಮಾನ ಕೂಡ ಇಂದು ಬದಲಾಗಲಿದ್ದು, ಮುಂಜಾನೆ ಮಂಜು ಮುಸುಕಿದಂತಿದ್ದರೂ, ಮೋಡ ಕವಿದ ವಾತಾವರಣ ಇರಲಿದೆ. ವಿವಿಧೆಡೆ ಹಗುರ ಅಥವಾ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರ ನೀಡಿದ ಹವಾಮಾನ ಮುನ್ಸೂಚನೆ ವರದಿ ವಿವರಿಸಿದೆ. ಇದಲ್ಲದೆ, ಕರಾವಳಿ ಕರ್ನಾಟಕದ ಮೂರೂ ಜಿಲ್ಲೆಗಳ ಹಲವೆಡೆ ಇಂದು ಮಳೆ ಸಾಧ್ಯತೆ ಇದೆ. ಉತ್ತರ ಒಳನಾಡಲ್ಲಿ ಇಂದು ಮಳೆ ಇಲ್ಲ. ಆದರೆ ಇನ್ನೆರಡು ದಿನದಲ್ಲಿ ಮಳೆ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ವಿವಿಧೆಡೆ ಇಂದು (ಅಕ್ಟೋಬರ್ 29) ಹನಿ ಮಳೆಯಿಂದ ಸಾಧಾರಣ ಮಳೆಯಾಗಬಹುದು ಎಂದು ಹವಾಮಾನ ಮುನ್ಸೂಚನೆ ವರದಿ ಹೇಳಿದೆ.
ಬೆಂಗಳೂರು ಹವಾಮಾನ; ಇಂದು ಮಳೆ ಬರುತ್ತಾ
ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರ ಸೋಮವಾರ (ಅಕ್ಟೋಬರ್ 28) ಅಪರಾಹ್ನ 1 ಗಂಟೆಗೆ ಪ್ರಕಟಿಸಿದ ವರದಿ ಪ್ರಕಾರ, ಇಂದು ಮತ್ತು ನಾಳೆ (ಅಕ್ಟೋಬರ್ 30) ರ ಬೆಳಗ್ಗೆ 8.30ರ ತನಕ ಬೆಂಗಳೂರು ಹವಾಮಾನ ಇಂದು ಸಹಜವಾಗಿ ಇರಲಿದ್ದು, ಮುಂಜಾನೆ ಮಂಜು, ನಂತರ ಮೋಡ ಕವಿದ ವಾತಾವರಣ ಇರಲಿದೆ. ವಿವಿಧೆಡೆ ಹನಿ ಮಳೆಯಿಂದ ಸಾಧಾರಣ ಮಳೆ ಸುರಿಯುವ ಸಾಧ್ಯತೆ ಇದೆ.
ನಿನ್ನೆ ಬೆಂಗಳೂರು ನಗರದಲ್ಲಿ ಸಹಜ ವಾತಾವರಣ ಇತ್ತು. ಗರಿಷ್ಠ ತಾಪಮಾನ 27.7 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 20.3 ಡಿಗ್ರಿ ಸೆಲ್ಶಿಯಸ್ ದಾಖಲಾಗಿತ್ತು. ಬೆಂಗಳೂರು ಗ್ರಾಮಾಂತರದಲ್ಲಿ ಕೂಡ ಬೆಳಗ್ಗೆ ಮಂಜು ಮುಸುಕಿದ ವಾತಾವರಣ, ಮೋಡ ಕವಿದ ವಾತಾವರಣ ಇತ್ತು. ಗರಿಷ್ಠ ತಾಪಮಾನ 28.6 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 19.5 ಡಿಗ್ರಿ ಸೆಲ್ಶಿಯಸ್ ದಾಖಲಾಗಿತ್ತು ಎಂದು ವರದಿ ಹೇಳಿದೆ.
ಕರ್ನಾಟಕ ಹವಾಮಾನ ಇಂದು (ಅಕ್ಟೋಬರ್ 29)
ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರವೂ ಸೇರಿ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳ ವಿವಿಧೆಡೆ ಇಂದು (ಅಕ್ಟೋಬರ್ 29) ಮಳೆಯಾಗುವ ಸಾಧ್ಯತೆ ಇದೆ. ಮಳೆಯ ಪ್ರಮಾಣ ಹನಿ ಮಳೆಯಿಂದ ಹಿಡಿದು ಸಾಧಾರಣ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆಯ ಹವಾಮಾನ ಮುನ್ಸೂಚನೆ ವರದಿ ಹೇಳಿದೆ. ಯಾವುದೇ ಜಿಲ್ಲೆಗೂ ಅಲರ್ಟ್ ಘೋಷಣೆ ಮಾಡಿಲ್ಲ.
ಕರಾವಳಿ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಅಂದರೆ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡಗಳಲ್ಲಿ ವಿವಿಧೆಡೆ ಸಾಧಾರಣ ಮಳೆಯಾಗಬಹುದು. ದಕ್ಷಿಣ ಒಳನಾಡಿನಲ್ಲಿ ಚಿಕ್ಕ ಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೋಲಾರ, ರಾಮನಗರ, ಮಂಡ್ಯ, ತುಮಕೂರು ಜಿಲ್ಲೆಗಳ ವಿವಿಧೆಡೆ ಇಂದು ಹನಿ ಮಳೆಯಿಂದ ಹಿಡಿದು ಸಾಧಾರಣ ಮಳೆಯಾಗಬಹುದು. ಬಹುತೇಕ ಮೋಡ ಕವಿದ ವಾತಾವರಣ ಇರಲಿದೆ. ಇನ್ನುಳಿದಂತೆ, ದಕ್ಷಿಣ ಒಳನಾಡಿನ ಜಿಲ್ಲೆಗಳಾದ ವಿಜಯನಗರ, ಶಿವಮೊಗ್ಗ,ಮೈಸೂರು, ಕೊಡಗು, ದಾವಣಗೆರೆ, ಚಿತ್ರದುರ್ಗ, ಚಾಮರಾಜನಗರ, ಬಳ್ಳಾರಿ ಜಿಲ್ಲೆಗಳಲ್ಲಿ ಮಳೆ ಇರಲ್ಲ.